ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದಲ್ಲಿ ಕಡಿಮೆಯಾಗುತ್ತಿರುವ ಸಹನೆ

ಸಭೆಯಲ್ಲಿ ಸಾಹಿತಿ ಕಮಲಾ ಹಂಪನಾ ಕಳವಳ
Last Updated 3 ಸೆಪ್ಟೆಂಬರ್ 2015, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಇನ್ನೊಬ್ಬರ ಅಭಿಪ್ರಾಯವನ್ನು ಸಹನೆಯಿಂದ ಕೇಳುವ ಮನೋಭಾವ ಸಮಾಜದಲ್ಲಿ ಕಡಿಮೆಯಾಗುತಿದೆ. ಮನುಷ್ಯ ರಾಕ್ಷಸನಾಗುತ್ತಿದ್ದಾನೆ ಎನ್ನುವುದಕ್ಕೆ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯೇ ಸಾಕ್ಷಿ’ ಎಂದು ಸಾಹಿತಿ ಕಮಲಾ ಹಂಪನಾ ವಿಷಾದಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಎಂ.ಎಂ.ಕಲಬುರ್ಗಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘ವೈಚಾರಿಕ  ಭಿನ್ನಾಭಿಪ್ರಾಯ ಗಳಿರುವುದು ಸಹಜ. ಅದನ್ನು ಚರ್ಚೆ, ಸಂವಾದಗಳ ಮೂಲಕ ಖಂಡಿಸಬೇಕೆ ವಿನಾ ಕೊಲೆ ಮಾಡುವ ಮೂಲಕ ಅಲ್ಲ. ಇದು ಕಲಬುರ್ಗಿ ಅವರ ಹತ್ಯೆ ಮಾತ್ರವಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ’ ಎಂದು ಹೇಳಿದರು.

‘ಕಲಬುರ್ಗಿ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ವೇಳೆ ಉತ್ಕೃಷ್ಟ ಗ್ರಂಥಗಳು ಮತ್ತು ಗಂಭೀರ ಸಾಹಿತ್ಯ ಕೃತಿಗಳು ಪ್ರಕಟವಾದವು. ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸುವಲ್ಲಿ ಅವರು ತುಂಬಾ ಆಸ್ಥೆ ವಹಿಸಿದ್ದರು. ಅವರ ಕೊಲೆಯಿಂದ ನಾಡು ಒಬ್ಬ ದೊಡ್ಡ ಸಂಶೋಧಕನನ್ನು ಕಳೆದುಕೊಂಡಿದೆ’ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ‘ಸೃಜನಶೀಲ ಮತ್ತು ವೈಚಾರಿಕ ಚಿಂತನೆಗಳನ್ನು ನಾಶಮಾಡುವವರ ವಿರುದ್ಧ ಎಲ್ಲ ಸಂಘಟನೆಗಳು ಒಂದಾಗಿ ಧ್ವನಿ ಎತ್ತಿ ಹೋರಾಟ ನಡೆಸಬೇಕಿದೆ’ ಎಂದರು.

ಕೃತಿಗಳನ್ನು ಭಾಷಾಂತರಿಸಿ: ಕಲಬುರ್ಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ವತಿಯಿಂದಲೂ ನಗರದಲ್ಲಿ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ,  ‘ಎಂ.ಎಂ.ಕಲಬುರ್ಗಿ ಅವರ ಸಾವಿನ ಕಾರಣಗಳನ್ನು ಸರ್ಕಾರ ಪತ್ತೆಮಾಡಬೇಕು. ಅವರ ಕೃತಿಗಳನ್ನು ಭಾಷಾಂತರ ಮಾಡಿಸಬೇಕು’ ಎಂದು ಆಗ್ರಹಿಸಿದರು.

ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ‘ವೀರಶೈವ ಮತ್ತು ಲಿಂಗಾಯತ ಎರಡು ಬೇರೆ ಧರ್ಮಗಳು ಎಂಬ ವಾದವನ್ನು ಕಲಬುರ್ಗಿ ಅವರು ಮಂಡಿಸುತ್ತಲೇ ಬಂದರು. ಅದನ್ನು ಬಹುತೇಕರು ಒಪ್ಪಿಕೊಳ್ಳಲಿಲ್ಲ. ಸತ್ಯಕ್ಕೆ ಬಹಳಷ್ಟು ವಿರೋಧವಿರುತ್ತದೆ. ಅದನ್ನು ಮೆಟ್ಟಿ ನಿಂತು ಸತ್ಯ ಹೇಳುವುದು ಸವಾಲಿನ ಕೆಲಸ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT