ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಮುಖಿ ‘ರಂಗ ತಿಲಕ’

ಅಂಕದ ಪರದೆ
Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಶಾಲಾ ದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರು ಪಿಯುಸಿ ಮುಗಿದ ತಕ್ಷಣ ಆಯ್ಕೆ ಮಾಡಿಕೊಂಡ ಕ್ಷೇತ್ರ ರಂಗಭೂಮಿ. ನಟನೆಗಷ್ಟೇ ಸೀಮಿತವಾಗದೆ ಹಲವಾರು ನಾಟಕಗಳನ್ನು ನಿರ್ದೇಶಿಸಿ, ‘ರಂಗಸಮಾಜ’ ಸಾಂಸ್ಕೃತಿಕ ಸಂಸ್ಥೆಯನ್ನೂ ಹುಟ್ಟು ಹಾಕಿದರು.
ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮದ ಎಸ್‌. ತಿಲಕ್‌ರಾಜ್‌ 2002ರಲ್ಲಿ ರಂಗಸಮಾಜ ಸಾಂಸ್ಕೃತಿಕ ಸಂಸ್ಥೆ ಹುಟ್ಟುಹಾಕಿದವರು.

ಸಂಸ್ಥೆಯು ನಾಟಕಗಳ ಪ್ರದರ್ಶನಕ್ಕಷ್ಟೇ ಸೀಮಿತವಾಗಿರದೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುವಲ್ಲಿ ಕ್ರಿಯಾಶೀಲವಾಗಿದೆ. ಬೆನಕ ತಂಡದಿಂದ ರಂಗಭೂಮಿಗೆ ಪದಾರ್ಪಣೆ ಮಾಡಿದ ತಿಲಕ್‌ರಾಜ್ ಅವರು ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ, ಅಸಂಗತ ಹಾಗೂ ಸಾಮಾಜಿಕ ನಾಟಕಗಳಲ್ಲಿ ಬಣ್ಣ ಹಚ್ಚಿದರು. ಇವರು ನಿರ್ದೇಶನ ಮಾಡಿದ ‘ಅನ್ವೇಷಕರು’, ‘ಸಿಂಧೂರ ಲಕ್ಷ್ಮಣ’, ‘ಬಂಜೆ ತೊಟ್ಟಿಲು’ ನಾಟಕಗಳು 25ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ.

ಆರ್‌.ನಾಗೇಶ್‌, ಎಸ್‌.ಕೆ. ಮಾಧವರಾವ್‌, ಎಸ್‌.ಕೆ. ಭೋಜನಗೌಡ, ಚಂದ್ರಕುಮಾರ್‌ ಸಿಂಗ್‌ ಹಾಗೂ ಹಲವಾರು ಗೆಳೆಯರು 2002ರಲ್ಲಿ ರಂಗಸಮಾಜ ಸಾಂಸ್ಕೃತಿಕ ಸಂಸ್ಥೆ ಹುಟ್ಟಿಗೆ ಸಹಕರಿಸಿದ್ದನ್ನು ತಿಲಕ್‌ ನೆನಪು ಮಾಡಿಕೊಳ್ಳುತ್ತಾರೆ. ಸಾಯಿಬಾಬಾ ಜೀವನ ಆಧರಿಸಿದ ‘ಸಾಯಿ ನಮನ’ ಮೂರು ಗಂಟೆ ಅವಧಿಯ ನಾಟಕವನ್ನು ತಿಲಕ್‌ರಾಜ್‌ ನಿರ್ದೇಶಿಸಿದ್ದಾರೆ. 64 ಮಂದಿ ಕಲಾವಿದರು ಇದರಲ್ಲಿ ಒಟ್ಟಿಗೆ ನಟಿಸಿರುವುದು ವಿಶೇಷ. ರಂಗಸಮಾಜ ಸಾಂಸ್ಕೃತಿಕ ಸಂಸ್ಥೆಯಲ್ಲಿ ಅಭಿನಯಿಸಿದ ಕಲ್ಯಾಣಿ, ಪ್ರದೀಪ್‌, ವೇಣುಗೋಪಾಲ್‌, ಲಿಖಿತಾ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

‘ನಮ್ಮ ತಂದೆ ಊರಿನ ಗೌಡರಾಗಿದ್ದರು. ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಹೆಸರಾಂತ ನಟ– ನಟಿಯರನ್ನು ಕರೆಸಿ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ಆಡಿಸುತ್ತಿದ್ದರು. ಅಂದು ನೋಡುತ್ತಿದ್ದ ನಾಟಕಗಳು ನನ್ನ ಮೇಲೆ ಅಪಾರ ಪ್ರಭಾವ ಬೀರಿದವು. ಕಲೆಯನ್ನೇ ಬದುಕಾಗಿಸಿಕೊಳ್ಳಲು ಸ್ಫೂರ್ತಿ ನೀಡಿದವು’ ಎಂದು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಕಾರಣವಾದ ಸಂಗತಿಯನ್ನು ಹಂಚಿಕೊಂಡರು.

‘ಪ್ರೌಢ ಶಿಕ್ಷಣ ಊರಿನಲ್ಲೇ ಮುಗಿಯಿತು. ನಂತರ ನನ್ನ ಪಯಣ ಬೆಂಗಳೂರಿನತ್ತ ಸಾಗಿತು. ಜೀವನವೆಂಬ  ಬಂಡಿ ಸಾಗಿಸಲು ಅನೇಕ ಕೆಲಸಗಳನ್ನು ಮಾಡಬೇಕಾಯಿತು. ಅದರಲ್ಲಿ ಪೇಂಟಿಂಗ್‌ ಗುತ್ತಿಗೆ ಕೆಲಸವೂ ಒಂದು. ಒಮ್ಮೆ ನಟ ಸುಂದರ್‌ರಾಜ್‌ ಅವರ ಮನೆಯ ಪೇಂಟಿಂಗ್‌ ಗುತ್ತಿಗೆ ಪಡೆದಿದ್ದೆ. ಆ ಸಂದರ್ಭದಲ್ಲಿ ಅವರ ಪರಿಚಯವಾಯಿತು. ಅವರಲ್ಲಿ ನನ್ನ ನಾಟಕದ ಅಭಿರುಚಿಯ ಬಗ್ಗೆ ಹೇಳಿಕೊಂಡೆ, ಅವರು ಬೆನಕ ತಂಡಕ್ಕೆ ಸೇರಿಸಿದರು. ಅಲ್ಲಿಂದ ರಂಗದ ನಂಟು ಬೆಳೆಯಿತು. ನಂತರ ಅಭಿನಯ ತರಂಗ ನಾಟಕ ಶಾಲೆ ಹಾಗೂ ಹಂಪಿ ವಿಶ್ವದ್ಯಾಲಯದಲ್ಲಿ ನಾಟಕ ಕಲೆಯ ಕುರಿತ ಡಿಪ್ಲೊಮಾ ಪದವಿ ಪಡೆದೆ’ ಎಂದು ವಿವರಿಸಿದರು.

‘ಇದುವರೆಗೂ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ್ದೇನೆ. ನಾಟಕಗಳಲ್ಲದೆ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ರಂಗ ಚಟುವಟಿಕೆ ಅಲ್ಲದೆ ಅನೇಕ ಸಾಮಾಜಿಕ ಕೆಲಸಗಳಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ. ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬ್ಯಾಗ್‌ಗಳನ್ನು ವಿತರಿಸಿದ್ದೇವೆ, ಅಂಗವಿಕಲರಿಗೆ ವ್ಹೀಲ್‌ ಚೇರ್ ನೀಡಿದ್ದೇವೆ. ಹೀಗೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದೇವೆ’ ಎನ್ನುತ್ತಾರೆ ತಿಲಕ್‌ರಾಜ್‌.

ತಿಲಕ್‌ರಾಜ್‌ ಅವರು ರಾಜ್ಯ ಸೇರಿದಂತೆ ಗುಜರಾತ್‌, ಮಹಾರಾಷ್ಟ್ರ, ದೆಹಲಿ ಇನ್ನಿತರ ಸ್ಥಳಗಳಲ್ಲಿ ನಾಟಕ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ನಾಟಕಗಳ ಜೊತೆಗೆ ರಂಗ ಕಮ್ಮಟ, ಜಾನಪದ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ತಂಡವು ಎ.ಎಸ್‌.ಮೂರ್ತಿ ಅವರೊಂದಿಗೆ ಸೇರಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಸಾಮಾಜಿಕ ಕಾಳಜಿಯ 500ಕ್ಕೂ ಹೆಚ್ಚು ಬೀದಿ ನಾಟಕಗಳ ಪ್ರದರ್ಶನ ಮಾಡಿದೆ. ಮಳೆ ನೀರು ಸಂಗ್ರಹ, ಏಡ್ಸ್‌ ಜಾಗೃತಿ, ಪರಿಸರ ಮಾಲಿನ್ಯದಂಥ ವಿಷಯಗಳನ್ನು ಆಧರಿಸಿದ ನಾಟಕಗಳು ಇದರಲ್ಲಿ ಸೇರಿವೆ.|

‘ಮುಂದಿನ ದಿನಗಳಲ್ಲಿ ನಿರಂತರವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಹೊಸ ಹೊಸ ನಾಟಕಗಳ ರಂಗಪ್ರಯೋಗ ಮಾಡಲು ಹಾಗೂ ಯುವಕರನ್ನು ರಂಗಭೂಮಿಗೆ ಕರೆತರಲು ಪ್ರಯತ್ನಿಸುತ್ತೇನೆ. ಪೋಷಕರು ಸಹ ಅಂಥ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ತಿಲಕ್‌ರಾಜ್‌ ತಮ್ಮ ಉದ್ದೇಶ, ನಿರೀಕ್ಷೆಯನ್ನು ಬಿಚ್ಚಿಟ್ಟರು.

ತಿಲಕ್‌ರಾಜ್ ನಿರ್ದೇಶನದ ನಾಟಕಗಳು
‘ಅನ್ವೇಷಕರು’, ‘ಗುಮ್ಮ’, ‘ಕನಸಿನ ಪಯಣಿಗರು’, ‘ದೃಷ್ಟಿ’, ‘ಬರ’, ‘ಸಿಂಧೂರ ಲಕ್ಷ್ಮಣ’, ‘36 ಅಲ್ಲ 63’, ‘ಹಳ್ಳಿ ಮಾಸ್ತರು’, ‘ಬುದ್ಧಿವಂತ ಗೌಡ’, ‘ಬಂಜೆ ತೊಟ್ಟಿಲು’, ‘ದಿವ್ಯ ದರ್ಶನ’, ‘ಸನ್ಮಾನ ಸುಖ’, ‘ಕಿವುಡು ಸಾರ್‌ ಕಿವುಡು’, ‘ಟಿಪ್ಪು ಸುಲ್ತಾನ್‌’, ‘ತೆರೆಗಳು’, ‘ಲಾಕೌಟ್‌ ಅಲ್ಲ ನಾಕೌಟ್‌’, ‘ಕಿವುಡು ಸಾರ್ ಕಿವುಡು’, ‘ಮಹಾ ಬೆಳಗು’ ತಿಲಕ್‌ರಾಜ್ ನಿರ್ದೇಶನದ ಮುಖ್ಯ ನಾಟಕಗಳು.

ತಂದೆಯೇ ಸ್ಫೂರ್ತಿ

* ರಂಗಭೂಮಿಯಲ್ಲಿ ಪೂರ್ಣಾವಧಿ ತೊಡಗಿಸಿಕೊಳ್ಳುವ ಧೈರ್ಯ ಹೇಗೆ ಬಂತು?
ಪಿ.ಯು.ಸಿ ನಂತರ ಬೇರೆ ಉದ್ಯೋಗ ಇರಲಿಲ್ಲ. ಅಲ್ಲದೇ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ತಂದೆ ಸ್ಫೂರ್ತಿ ಆದರು. ರಂಗಭೂಮಿಯಲ್ಲೇ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಇಲ್ಲಿ ಪೂರ್ಣಾವಧಿ ತೊಡಗಿಸಿಕೊಳ್ಳಲು ಧೈರ್ಯ ಮಾಡಿದೆ. ಯುವಜನರನ್ನು ಇಲ್ಲಿಗೆ ಕರೆತರುವ ಬಯಕೆ ಇದೆ.

* ನಿಮ್ಮ ನಾಟಕಗಳಿಗೆ ರಂಗಮಂದಿರಗಳ ಕೊರತೆಯಾಗುತ್ತಿಲ್ಲವೇ?
ಸಾಕಷ್ಟು ಕೊರೆತೆ ಇದೆ. ಇನ್ನೂ ಹೆಚ್ಚಿನ ರಂಗಮಂದಿರಗಳು ಬೇಕು. ನಾಟಕಕ್ಕೆ ಸೀಮಿತವಿರುವ ಮಂದಿರಗಳು ಬೇಕು. ಐದಾರು ಬಡಾವಣೆಗಳಿಗೊಂದರಂತೆ ರಂಗ ಮಂದಿರಗಳಾಗಬೇಕು. ಕೆಲವು ಸಂದರ್ಭಗಳಲ್ಲಿ ಕಲಾಕ್ಷೇತ್ರ ಸಿಗುವುದಿಲ್ಲ. ಎರಡು ತಿಂಗಳಿಗೆ ಮುಂಚೆಯೇ ಕಾಯ್ದಿರಿಸಬೇಕಾದ ಅನಿವಾರ್ಯವಿದೆ.

* ನೀವು ಕಟ್ಟಿಸುತ್ತಿರುವ ರಂಗಮಂದಿರದ ಬಗ್ಗೆ ಹೇಳಿ?
ಚಿಕ್ಕಬಾಣಾವರ, ಗಾಣಿಗೇರ ಹಳ್ಳಿಯಲ್ಲಿ ರಂಗ ಮಂದಿರ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಮುಂದಿನ ಮಾರ್ಚ್‌ ವೇಳೆಗೆ ಸಿದ್ಧಗೊಳ್ಳಲಿದೆ. ಸರ್ಕಾರದ ಐದು ಲಕ್ಷ ರೂಪಾಯಿ ನೆರವು ಮತ್ತು ಸಂಸ್ಥೆಯ ಹಣದಿಂದ ಮಂದಿರ ನಿರ್ಮಾಣವಾಗುತ್ತಿದೆ. ಈ ಪ್ರದೇಶದಲ್ಲಿ ಇಂಥ ರಂಗ ಮಂದಿರ ಇಲ್ಲ. ಹಾಗಾಗಿ ಗ್ರಾಮೀಣ ಪ್ರದೇಶಗಳಿಗೂ ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT