ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆ ಸಾಧನೆಗೆ ಸಮಾನ ನಾಗರಿಕ ಸಂಹಿತೆ

Last Updated 20 ಮೇ 2016, 19:41 IST
ಅಕ್ಷರ ಗಾತ್ರ

ಏಕರೂಪದ ನಾಗರಿಕ ಸಂಹಿತೆಯ ಅಗತ್ಯದ ಬಗೆಗಿನ ಚರ್ಚೆ ಸ್ವಾತಂತ್ರ್ಯಪೂರ್ವದಿಂದಲೂ ಭಾರತದಲ್ಲಿ ನಡೆಯುತ್ತಿದೆ. ಸಂವಿಧಾನವನ್ನು ಅಳವಡಿಸಿಕೊಳ್ಳುವುದರೊಂದಿಗೆ ಈ ಚರ್ಚೆ ಹೆಚ್ಚು ತೀವ್ರವಾಯಿತು. ಏಕರೂಪ ನಾಗರಿಕ ಸಂಹಿತೆಯ ಪರ ಮತ್ತು ವಿರುದ್ಧದ ಬಹುತೇಕ ಎಲ್ಲ ವಾದಗಳು ಎಲ್ಲರಿಗೂ ತಿಳಿದಿರುವಂತಹವೆ. ಹಾಗಾಗಿ ಅವೆಲ್ಲವನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಲು ನಾನು ಬಯಸುವುದಿಲ್ಲ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ಮಂಡಿಸಲಾಗುವ ಎರಡು ವಾದಗಳನ್ನು ಮಾತ್ರ ಇಲ್ಲಿ ನಾನು ವಿಶ್ಲೇಷಣೆಗೆ ಎತ್ತಿಕೊಳ್ಳುತ್ತೇನೆ- ಅವುಗಳೆಂದರೆ, ಏಕತೆ ಮತ್ತು ಸಮಗ್ರತೆ ಹಾಗೂ ಸಮಾನತೆಯ ಪ್ರಶ್ನೆಗಳು.

ದೇಶದ ಪ್ರತಿಯೊಬ್ಬರಿಗೂ ಏಕರೂಪದ ವೈಯಕ್ತಿಕ ಕಾನೂನು ಇದ್ದರೆ ಅದು ಧರ್ಮ ಅಥವಾ ಇತರ ಭಿನ್ನತೆಗಳನ್ನು ಬದಿಗೊತ್ತಿ ಎಲ್ಲರಲ್ಲಿಯೂ ಸಹೋದರತ್ವದ ಭಾವವನ್ನು ಮೂಡಿಸುತ್ತದೆ ಎಂಬುದನ್ನು ಏಕತೆ ಮತ್ತು ಸಮಗ್ರತೆಯ ವಾದ ಪ್ರತಿಪಾದಿಸುತ್ತದೆ. ಇದು ಭಿನ್ನ ಧರ್ಮವನ್ನು ಅನುಸರಿಸುವ ಜನರಿಗೆ ಮಾತ್ರ ಅನ್ವಯವಾಗುತ್ತದೆಯೇ ಹೊರತು ಒಂದೇ ಧರ್ಮವನ್ನು ಅನುಸರಿಸುವ ಜನರಿಗಲ್ಲ ಎಂದು ನೋಡುವಂತಿಲ್ಲ. ಉದಾಹರಣೆಗೆ, 1950ರ ದಶಕದಲ್ಲಿ ವಿವಿಧ ಹಿಂದೂ ವೈಯಕ್ತಿಕ ಕಾನೂನುಗಳ ಸುಧಾರಣೆ ಆರಂಭವಾಗುವ ಮೊದಲು ಎಲ್ಲ ಹಿಂದೂಗಳಿಗೆ ಒಂದೇ ವೈಯಕ್ತಿಕ ಕಾನೂನು ಇರಲಿಲ್ಲ.

ಏಕತೆ ಮತ್ತು ಸಮಗ್ರತೆಯ ವಾದ ಅತ್ಯಂತ ಪ್ರಬಲವಾದುದು; ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನವಾಗಿ ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾದ ಸಂದರ್ಭದಲ್ಲಿ ಇದು ಹೆಚ್ಚು ಮಹತ್ವ ಪಡೆದುಕೊಂಡಿತ್ತು. ಸಂವಿಧಾನ ರಚನಾ ಸಮಿತಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸಿದವರು ಇದು ದೇಶದ ಏಕತೆಯನ್ನು ಗಟ್ಟಿಗೊಳಿಸುತ್ತದೆ ಎಂದು ಭಾವಿಸಿದ್ದರು. ಸ್ವಾತಂತ್ರ್ಯ ದೊರೆತ ಆರಂಭದ ಆ ದಿನಗಳಲ್ಲಿ ಅದು ಅಗತ್ಯವೂ ಆಗಿತ್ತು. ಆದರೆ ದುರದೃಷ್ಟವಶಾತ್ ಇಂದು ವಿವಿಧ ಕಾರಣಗಳಿಂದಾಗಿ ಏಕತೆ ಮತ್ತು ಸಮಗ್ರತೆಯ ವಾದಕ್ಕೆ ಬಹುಸಂಖ್ಯಾತತೆಯ ಬಣ್ಣ ಬಂದಿದೆ.  ಹಾಗಾಗಿಯೇ ಏಕತೆ ಮತ್ತು ಸಮಗ್ರತೆಯ ಕಾರಣಕ್ಕಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುವುದು ಬಹುಸಂಖ್ಯಾತರ ಪರವಾದ ಕಾರ್ಯಸೂಚಿಯಾಗುತ್ತದೆ.

ಸ್ವಾತಂತ್ರ್ಯ ಬಂದ ದಿನಗಳಲ್ಲಿ ಏಕತೆ ಮತ್ತು ಸಮಗ್ರತೆಗೆ ಸಂಬಂಧಿಸಿ ಭಾರತ ಎದುರಿಸುತ್ತಿದ್ದ ಅದೇ ಅನಿಶ್ಚಿತತೆಯನ್ನು ಇಂದು ದೇಶ ಎದುರಿಸುತ್ತಿಲ್ಲ ಎಂಬ ಕಾರಣದಿಂದಾಗಿ ಈ ವಾದ ಬಲ ಕಳೆದುಕೊಳ್ಳುತ್ತದೆ. ಆದರೆ ರಾಜಕೀಯ ಕಾರಣಗಳಿಗಾಗಿ ಈಗ ಜೋರಾಗಿರುವ ಬಹುಸಂಖ್ಯಾತ ಪ್ರೇರಣೆಗಳು ಏಕತೆ ಮತ್ತು ಸಮಗ್ರತೆ ಪರವಾಗಿರುವ ವಾದವನ್ನು ಎತ್ತಬಹುದು. ಆದರೆ ಏಕರೂಪ ನಾಗರಿಕ ಸಂಹಿತೆಯನ್ನು ಕಾನೂನಾಗಿಸಲು ಮುಂದೊಡ್ಡಲಾಗುವ ಏಕತೆ ಮತ್ತು ಸಮಗ್ರತೆಯ ವಾದಕ್ಕೆ ಅದರ ಹಿಂದೆ ಇರುವ ರಾಜಕೀಯ ಉದ್ದೇಶದಿಂದಾಗಿ ವಿಶ್ವಾಸಾರ್ಹತೆ ಲಭಿಸುವುದಿಲ್ಲ. ಸ್ವಾತಂತ್ರ್ಯದ ನಂತರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿದ್ದರೆ ಭಾರತ ಹೆಚ್ಚು ಸಮನ್ವಯದ ದೇಶವಾಗಿ ಇರುತ್ತಿತ್ತು ಎಂದು ವಾದಿಸುವುದರಲ್ಲಿಯೂ ಹುರುಳಿಲ್ಲ.

ಯಾಕೆಂದರೆ, ಹಿಂದೂಗಳ ವೈಯಕ್ತಿಕ ಕಾನೂನು ಒಂದೇ ಆಗಿದ್ದರೂ ಇಲ್ಲಿನ ಜಾತಿ ಭಿನ್ನತೆ ಮತ್ತು ಅಂತರ್ಜಾತಿ ಮದುವೆಯ ಕಾರಣಕ್ಕೆ ಇಂದಿಗೂ ನಡೆಯುವ ಹತ್ಯೆ ಈ ವಾದವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಒಂದು ದೇಶದ ಏಕತೆ ಮತ್ತು ಸಮಗ್ರತೆ ಏಕರೂಪ ನಾಗರಿಕ ಸಂಹಿತೆಯ ಪರಿಕಲ್ಪನೆಗಿಂತ ಆಚೆಗಿನ ಪರಿಕಲ್ಪನೆಗಳನ್ನು ಅವಲಂಬಿಸಿದೆ. ಸಮಾನತೆಯ ವಾದ ಏಕರೂಪ ನಾಗರಿಕ ಸಂಹಿತೆಯ ಪರವಾಗಿ ಇರುವ ಅತ್ಯಂತ ಶಕ್ತಿಯುತವಾದ ವಾದ ಎಂದು ನಾನು ಭಾವಿಸಿದ್ದೇನೆ. ಸಮಾನತೆ ಎಂದರೆ ಧರ್ಮಗಳು, ಜಾತಿಗಳು ಅಥವಾ ಗುಂಪುಗಳ ನಡುವಣ ಸಮಾನತೆ ಎಂದು ನಾನು ಹೇಳುತ್ತಿಲ್ಲ.

ಬದಲಿಗೆ ಲಿಂಗ, ಜಾತಿ, ಧರ್ಮ ಅಥವಾ ಮನುಷ್ಯರಾಗಿರುವ ನಾವು ಅತ್ಯಂತ ಕಾತರದಿಂದ ಗುರುತಿಸುವ ಇತರ ಭಿನ್ನತೆಗಳು ಯಾವುವೂ ಇಲ್ಲದೆ ವ್ಯಕ್ತಿಗಳ ನಡುವಣ ಸಮಾನತೆ ಎಂದು ನಾನು ಭಾವಿಸಿದ್ದೇನೆ. ಎಲ್ಲ ವ್ಯಕ್ತಿಗಳ ನಡುವಣ ಸಮಾನತೆ ನಮ್ಮ ಸಮಾಜದ ಅಡಿಪಾಯವಾಗಿರುವ ಒಂದು ಅಂಶವಾಗಿದೆ. ಪ್ರತಿ ವ್ಯಕ್ತಿಗೂ ಸಮಾನ ಸ್ಥಾನ ಮತ್ತು ಅವಕಾಶಗಳ ಭರವಸೆಯನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ನೀಡಲಾಗಿದೆ. ಸಾರ್ವಜನಿಕ ಅಥವಾ ವೈಯಕ್ತಿಕವಾಗಿರುವ ಯಾವುದೇ ಕಾನೂನು ಸಮಾನತೆಯ ಈ ಮೂಲಭೂತ ತತ್ವವನ್ನು ಉಲ್ಲಂಘಿಸುವಂತಿಲ್ಲ. ದುರದೃಷ್ಟವೆಂದರೆ, ನಮ್ಮ ಹಲವು ವೈಯಕ್ತಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ಮುಖ್ಯವಾಗಿ ಲಿಂಗದ  ನೆಲೆಯಲ್ಲಿ ಸಮಾನತೆಯ ಮೂಲ ತತ್ವವನ್ನೇ ಉಲ್ಲಂಘಿಸುತ್ತವೆ.

ಒಂದು ಸಮಾಜವಾಗಿ ನಾವು ನಮ್ಮ ಅಸ್ತಿತ್ವದ ನೆಲೆಯೇ ಸಮಾನತೆ ಎಂಬುದನ್ನು ಒಪ್ಪಿಕೊಂಡಿದ್ದೇವೆ. ಅದನ್ನು ಸಾಧಿಸುವುದಕ್ಕಾಗಿ ಅಗತ್ಯವಿರುವ ಎಲ್ಲವನ್ನೂ ನಾವು ಮಾಡಬೇಕು. ಆದರೆ ಈ ನಿಟ್ಟಿನಲ್ಲಿ ನಾವು ಸಾಗುವಾಗ ಚಾರಿತ್ರಿಕವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪದ್ಧತಿಗಳ ಜತೆ ಸಂಘರ್ಷ ಏರ್ಪಡುವುದರಲ್ಲಿ ಅನುಮಾನವೇ ಇಲ್ಲ. ಅದರ ಬಗ್ಗೆ ಸಂವಿಧಾನ ಕರ್ತೃಗಳಿಗೆ ಅರಿವಿತ್ತು. ಆ ಕಾರಣಕ್ಕಾಗಿಯೇ ಸಮಾನತೆಯನ್ನು ನಮ್ಮ ಸಮಾಜದ ಮೂಲ ತತ್ವವಾಗಿ ಅವರು ಇರಿಸಿಕೊಂಡರು. ಮಾನವೀಯವಾದ ಸಮಾಜವೊಂದು ವ್ಯಕ್ತಿಗಳನ್ನು ಅಸಮಾನವಾಗಿ ಕಾಣುವ ಮತ್ತು ಅವರನ್ನು ಎರಡನೇ ದರ್ಜೆಗೆ ತಳ್ಳುವ ಪದ್ಧತಿಯನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ.

ತನ್ನ ಯಾವುದೇ ಪ್ರಜೆಯನ್ನು ಎರಡನೇ ದರ್ಜೆಗೆ ತಳ್ಳುವುದಕ್ಕೆ ಅವಕಾಶ ಇಲ್ಲ ಎಂಬುದನ್ನು ಭಾರತವು 1950ರಲ್ಲಿಯೇ ನಿರ್ಧರಿಸಿದೆ. ಆ ಆಯ್ಕೆಗೆ ನಾವು ಬದ್ಧವಾಗಿರಬೇಕಾದ ಅಗತ್ಯ ಇದೆ. ವೈಯಕ್ತಿಕ ಕಾನೂನು ಮತ್ತು ಉತ್ತರಾಧಿಕಾರದಲ್ಲಿ ಪುರುಷರು ಹಾಗೂ ಮಹಿಳೆಯರನ್ನು ಸಮಾನವಾಗಿ ಕಾಣುವ ಏಕರೂಪ ನಾಗರಿಕ ಸಂಹಿತೆ ಜಾರಿಯಾದ ತಕ್ಷಣ ಸಮಾನತೆ ದೊರೆಯುತ್ತದೆ ಎಂದು ನಾವು ಭಾವಿಸಬೇಕಿಲ್ಲ. ಇದೊಂದು ದೊಡ್ಡ ಪ್ರಕ್ರಿಯೆ ಮತ್ತು ಈ ಪ್ರಕ್ರಿಯೆಯಲ್ಲಿ ನೋವಿನಿಂದ ಕೂಡಿದ ಹಲವು ಅನುಭವಗಳನ್ನು ತಪ್ಪಿಸಿಕೊಳ್ಳುವುದು ಅಸಾಧ್ಯವೂ ಹೌದು.

ಕಾನೂನು ಸಮಾನತೆ ಸಾಧಿಸುವೆಡೆಗಿನ ಹೋರಾಟದ ಆರಂಭ ಮಾತ್ರವೇ ಹೊರತು ಅದೇ ಫಲಿತಾಂಶ ಅಲ್ಲ ಎಂಬುದನ್ನು ವರದಕ್ಷಿಣೆ ನಿಷೇಧ ಕಾನೂನು ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕಿನೆಡೆಗಿನ ಹೋರಾಟ ನಮಗೆ ತೋರಿಸಿಕೊಟ್ಟಿದೆ. ಏಕರೂಪ ನಾಗರಿಕ ಸಂಹಿತೆಯ ನಿಖರ ರೂಪ ಮತ್ತು ಸ್ವರೂಪ ಹೇಗಿರಬೇಕು ಎಂಬುದನ್ನು ಚರ್ಚಿಸಬೇಕಿದೆ. ಆದರೆ ಸಮಾನತೆಯನ್ನು ಸಾಧಿಸಲು, ನಾವು 1950ರಲ್ಲಿ ಒಪ್ಪಿಕೊಂಡ ಮೂಲಭೂತ ತತ್ವಗಳಿಗೆ ಬದ್ಧವಾಗಿರುವ ಏಕರೂಪ ನಾಗರಿಕ ಸಂಹಿತೆ ಅಗತ್ಯ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಪರಂಪರಾಗತ ನಂಬಿಕೆ ಮತ್ತು ಪದ್ಧತಿಗಳು ಸಾಂವಿಧಾನಿಕ ಮೌಲ್ಯಗಳನ್ನು ಕಡೆಗಣಿಸಿ ಸಮಾಜವನ್ನು ಶಿಥಿಲಗೊಳಿಸುವುದಕ್ಕೆ ನಾವು ಅವಕಾಶ ನೀಡಬಾರದು.

ಹಾಗೆ ನೋಡಿದರೆ ಸತಿ ಪದ್ಧತಿ, ಬಾಲ್ಯ ವಿವಾಹ ಮತ್ತು ವರದಕ್ಷಿಣೆಯಂತಹ ಹಲವು ಅಮಾನವೀಯ ಪದ್ಧತಿಗಳು ಕೂಡ ಇಂತಹ ಪರಂಪರಾಗತ ನಂಬಿಕೆಯ ಭಾಗವೇ ಆಗಿದ್ದವು. ಹಿಂದೂ, ಮುಸ್ಲಿಂ ಅಥವಾ ಕ್ರೈಸ್ತ ಎಂಬ ಭಿನ್ನ ನಂಬಿಕೆಗಳ ಹೊರತಾಗಿಯೂ ಒಂದು ಸಮಾಜವಾಗಿ ನಮಗಾಗಿ ನಾವು ಆಯ್ಕೆ ಮಾಡಿಕೊಂಡಿರುವ ಸಮಾನತೆ ಮತ್ತು ಸ್ವಾತಂತ್ರ್ಯದ ಗುರಿಯನ್ನು ಸಾಧಿಸಲು ಯತ್ನಿಸಲೇಬೇಕು. ಯಾಕೆಂದರೆ, ಸಮಾನತೆ ಮತ್ತು ಸ್ವಾತಂತ್ರ್ಯ ಎಂಬುದು ಕೆಲವೇ ಪುರುಷರು ಹಾಗೂ ಮಹಿಳೆಯರಿಗಾಗಿ  ಇರುವುದಲ್ಲ. ಹೌದು, ಸಂವಿಧಾನವು ಪ್ರತಿಯೊಬ್ಬನಿಗೂ ಆತನ ಧಾರ್ಮಿಕ ನಂಬಿಕೆಗಳನ್ನು ಇರಿಸಿಕೊಳ್ಳುವ ಅವಕಾಶ ನೀಡುತ್ತದೆ. ಆದರೆ ಈ ಅವಕಾಶವು ವೈಯಕ್ತಿಕ ಸ್ವಾತಂತ್ರ್ಯ ಅಥವಾ ಸಮಾನತೆಯನ್ನು ಬಲಿಕೊಡಬಾರದು.

ವರವಾಯ್ತು ತಂತ್ರಜ್ಞಾನ!
ತಲಾಖ್‌ ನೀಡುವುದನ್ನು ಅತ್ಯಂತ ಸುಲಲಿತಗೊಳಿಸಿದೆ ಆಧುನಿಕ ತಂತ್ರಜ್ಞಾನ. ಈ ಮೇಲಿನ ಸಾಧನಗಳ ಮೂಲಕ ಮೂರು ಬಾರಿ ತಲಾಖ್‌ ಎಂಬ ಸಂದೇಶ ಕಳುಹಿಸಿದರೂ ಸಾಕು ಅದು ಊರ್ಜಿತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT