ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನ ಮನಸ್ಕರ ‘ಕಲಾಸಾಗರ’

ಅಂಕದ ಪರದೆ
Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಬೇರೆಬೇರೆ ವೃತ್ತಿ ಮಾಡುತ್ತಾ ನಟನೆಯನ್ನು ಪ್ರವೃತ್ತಿ ಮಾಡಿಕೊಂಡವರು ರೂಪಿಸಿಕೊಂಡಿರುವ ತಂಡ ಕಲಾ ಸಾಗರ.

ಈ ತಂಡದ ಸದಸ್ಯರು ತಮ್ಮ ತಂಡವಷ್ಟೇ ಅಲ್ಲದೇ, ಬೇರೆಬೇರೆ ಹವ್ಯಾಸಿ ರಂಗತಂಡಗಳಲ್ಲಿಯೂ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರು.
ರಂಗಭೂಮಿಯ ಸಮಾನ ಮನಸ್ಕರ ತಂಡವಾಗಿ ಕಲಾಸಾಗರ ರೂಪುಗೊಂಡಿದೆ. ಹೆಚ್ಚಾಗಿ ಸಾಹಿತ್ಯ ಕೃತಿಗಳನ್ನು ಆಧರಿಸಿ ನಾಟಕಗಳನ್ನು ಪ್ರದರ್ಶಿಸುವುದು ಈ ತಂಡದ ವಿಶಿಷ್ಟ ಗುಣ.

ತಂಡದ ಸಂಸ್ಥಾಪಕ ಮಹೇಶ್‌ ಸಾಗರ ಅವರ ನೇತೃತ್ವದಲ್ಲಿ  ಕಲಾಸಾಗರ ಕಳೆದ ಎರಡು ವರ್ಷಗಳಿಂದ ಸಕ್ರಿಯವಾಗಿ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.

ಹೆಚ್ಚು ಬಜೆಟ್ ಬೇಡುವ ಪೌರಾಣಿಕ, ಐತಿಹಾಸಿಕ ನಾಟಕಗಳ ಪ್ರದರ್ಶನಕ್ಕಿಂತ, ಕಡಿಮೆ ಬಜೆಟ್‌ನ  ಸಾಮಾಜಿಕ ನಾಟಕಗಳ ಪ್ರದರ್ಶನಕ್ಕೆ ಈ ತಂಡ ಆದ್ಯತೆ ನೀಡುತ್ತದೆ.

‘‘ನಮ್ಮ ತಂಡ ಪ್ರದರ್ಶಿಸಿರುವ ನಾಗತಿಹಳ್ಳಿ ಚಂದ್ರಶೇಖರ ಅವರ ‘ವಲಸೆ ಹಕ್ಕಿಯ ಹಾಡು’ ನಾಟಕದಲ್ಲಿ ಹದಿನೈದು ಕಲಾವಿದರಿದ್ದರೆ, ರಂಗಕರ್ಮಿ ಬಿ. ಸುರೇಶ್ ಅವರ ‘ಅರ್ಥವಿಲ್ಲದ ಬದುಕು’ ನಾಟಕದಲ್ಲಿ ಕೇವಲ ನಾಲ್ವರು ಕಲಾವಿದರನ್ನು ಮಾತ್ರ ಬಳಸಿಕೊಂಡಿದ್ದೇವೆ.

ಅತ್ಯಂತ ಕಡಿಮೆ ವೆಚ್ಚದಲ್ಲಿ ನಾಟಕಗಳನ್ನು ಪ್ರದರ್ಶಿಸಿರುವುದು ನಮ್ಮ ತಂಡದ  ಹೆಗ್ಗಳಿಕೆ’’ ಎನ್ನುತ್ತಾರೆ ತಂಡದ ಸದಸ್ಯರು. ‘ನಮ್ಮದು ಹೆಚ್ಚು ಆರ್ಥಿಕ ಚೈತನ್ಯ ಹೊಂದಿಲ್ಲದ ತಂಡ. ಹಾಗಾಗಿ, ಕಡಿಮೆ ವೆಚ್ಚದ ನಾಟಕಗಳನ್ನೇ ಹೆಚ್ಚಾಗಿ ಪ್ರಯೋಗಿಸುತ್ತೇವೆ’ ಎನ್ನುತ್ತಾರೆ ಮಹೇಶ್‌.

ಸದಸ್ಯರಾದ ರಾಘವೇಂದ್ರ ನಾಯಕ್‌, ಕಿರಣ್‌ ಬಗಾಡೆ, ಕೆ.ಬಾಲಚಂದ್ರ, ಅಭಿನೇತ್ರಿ, ಹೇಮಾವತಿ, ಕೃಷ್ಣ, ಲಕ್ಷ್ಮಣ್‌ ಪೂಜಾರಿ, ಪ್ರಸಾದ್ ಇವೆರೆಲ್ಲರ ರಂಗಪರಿಶ್ರಮದ ಫಲವಾಗಿ ಕಲಾಸಾಗರ ಯಶಸ್ವಿಯಾಗಿ ನಾಟಕ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ. ಹತ್ತು ಹೊಸ ಕಲಾವಿದರನ್ನು ರಂಗಕ್ಕೆ ಪರಿಚಯಿಸಿದ ಕೀರ್ತಿಯೂ ಕಲಾಸಾಗರಕ್ಕಿದೆ.

ಕಲಾಸಾಗರ ತಂಡವನ್ನು ಬೇರೆಬೇರೆ ರಂಗ ತಂಡಗಳೂ ಆಹ್ವಾನಿಸಿ ನಾಟಕ ಪ್ರದರ್ಶನಕ್ಕೆ ಪ್ರಾಯೋಜಕತ್ವ ವಹಿಸಿವೆ. ಮುಖ್ಯವಾಗಿ ರಂಗಕಳಸ ತಂಡದ ಆನಂದ್‌ ಡಿ. ಕಳಸ, ‘ಪದ’ ಸಂಘಟನೆಯ ಚಿತ್ರಬಿಂಬ ದೇವರಾಜ್‌, ನಾಗರಾಜ್‌ ಕಾಡುಶಿವನಹಳ್ಳಿ, ರಂಗನಾಥ್ ಮಾವಿನಕೆರೆ, ಭೈರೇಗೌಡ,

ರಂಗಚೇತನದ ತೋ. ನಂಜುಂಡಸ್ವಾಮಿ, ಶಿವು ಹೊನ್ನಿಗಾನಹಳ್ಳಿ, ಸಂಸ ರಂಗಪತ್ರಿಕೆಯ ಸಂಸ ಸುರೇಶ್, ರಂಗಕರ್ಮಿ ಡಾ.ಬಿ.ವಿ. ರಾಜಾರಾಂ ಅವರ ಸಹಾಯ ಮತ್ತು ಸಹಕಾರದಿಂದ ತಂಡ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಸ್ಮರಿಸುತ್ತಾರೆ ಮಹೇಶ್‌. ಕಲಾಸಾಗರ ನಾಟಕ ಪ್ರದರ್ಶನಗಳಷ್ಟೇ ಅಲ್ಲದೇ, ಅನೇಕ ನಾಟಕ ಸ್ಪರ್ಧೆಗಳಲ್ಲೂ ಭಾಗವಹಿಸಿ ರಂಗಪ್ರಿಯರ ಗಮನ ಸೆಳೆದಿದೆ.

‘ರಂಗಶ್ರೀ’ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ವಲಸೆ ಹಕ್ಕಿಯ ಹಾಡು’ ನಾಟಕ ಪ್ರದರ್ಶಿಸಿ ಉತ್ತಮ ನಟಿ, ಪೋಷಕ ನಟ, ಖಳನಟ ಪ್ರಶಸ್ತಿಗೆ ತಂಡ ಭಾಜನವಾಗಿದೆ. ತಂಡದ ರಾಘವೇಂದ್ರ ನಾಯಕ್‌, ಅಭಿನೇತ್ರಿ, ಕಿರಣ್‌ ಬಗಾಡೆ, ಲಕ್ಷ್ಮಣ್‌ ಪೂಜಾರಿ, ಪ್ರಸಾದ್‌, ನಾಗರಾಜ್‌ ಭಂಡಾಡಿ, ಮಿಲಿಂದ್‌ ಶರ್ಮ, ನಾರಾಯಣ ಭಟ್‌, ಬಾಲಚಂದ್ರ ಅವರು ಧಾರಾವಾಹಿ ಮತ್ತು ಸಿನಿಮಾಗಳಲ್ಲೂ ಅಭಿನಯಿಸಿ ತಂಡಕ್ಕೆ ಹೆಸರು ತಂದಿದ್ದಾರೆ.

ಮುಖ್ಯವಾಗಿ ಕಥೆ, ಕಾದಂಬರಿಗಳನ್ನು ನಾಟಕವನ್ನಾಗಿ ಪ್ರದರ್ಶಿಸಬೇಕೆನ್ನುವ ಉದ್ದೇಶ ತಂಡದ್ದು. ಈಗಾಗಲೇ ನಾಗತಿಹಳ್ಳಿ ಚಂದ್ರಶೇಖರ ಮತ್ತು ಬಿ. ಸುರೇಶ್‌ ಅವರ ಕೃತಿಗಳನ್ನು ರಂಗರೂಪಕ್ಕೆ ತಂದಿರುವ ತಂಡ ಮುಂಬರುವ ದಿನಗಳಲ್ಲಿ ನಾ. ಡಿಸೋಜಾ ಅವರ ‘ಕೊಳಗ’  ಕಾದಂಬರಿಯನ್ನು ರಂಗಕ್ಕೆ ತರಲು ಸಿದ್ಧತೆ ನಡೆಸುತ್ತಿದೆ.

‘ಕಾಗೋಡು ರೈತ ಚಳವಳಿಗೆ ನಾಂದಿ ಹಾಡಿದ ಹೋರಾಟದ ಕತೆಯುಳ್ಳ ಈ ಕಾದಂಬರಿಯನ್ನು ರಂಗಕ್ಕೆ ತರುವುದು ಸವಾಲಿನ ಕೆಲಸ’ ಎನ್ನುತ್ತಾರೆ ಮಹೇಶ್‌.  

ಮಹೇಶ್‌ ಸಾಗರ ಪರಿಚಯ
ಮೂಲತಃ ಸಾಗರ ತಾಲ್ಲೂಕಿನ ಸುಳ್ಳೂರು ಗ್ರಾಮದವರಾದ ಮಹೇಶ್‌ ಸಾಗರ ವೃತ್ತಿನಿಮಿತ್ತ ಬೆಂಗಳೂರಿಗೆ ಬಂದವರು. ಹೋಟೆಲ್‌ ವೃತ್ತಿಯಲ್ಲಿ ತೊಡಗಿಕೊಂಡಿರುವ ಅವರು, ರಂಗಭೂಮಿ ಮೇಲಿನ ವ್ಯಾಮೋಹಕ್ಕಾಗಿ ಆರಂಭದಲ್ಲಿ ಹತ್ತು–ಹಲವು ರಂಗ ತಂಡಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ನಾಟಕವೊಂದರಲ್ಲಿ ಮಹೇಶ್‌ ಅವರ ಅಭಿನಯವನ್ನು ಗಮನಿಸಿ ನಿರ್ದೇಶಕ ಬ.ಲ. ಸುರೇಶ್ ಅವರು ‘ರಾಘವೇಂದ್ರ ವೈಭವ’ ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಯಿಸಿದರು. ಬಿ. ಸುರೇಶ್‌ ಅವರ ಅಳಗುಳಿ ಮನೆ, ಆದರ್ಶ್‌ ಹೆಗಡೆ ನಿರ್ದೇಶನದ ವಸುದೈವ ಕುಟುಂಬ, ಮಹಾಭಾರತ ಧಾರಾವಾಹಿಗಳಲ್ಲೂ ಮಹೇಶ್ ಅಭಿಯಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT