ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನ ವೇತನ ಕುರಿತು ಸೂಕ್ತ ನಿರ್ಣಯ

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
Last Updated 29 ಜನವರಿ 2015, 6:02 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ
ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ಆಗಿರುವುದು ಗಮನದಲ್ಲಿದೆ. ಚರ್ಚೆ ಮಾಡಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಪ್ರತಿನಿಧಿಗಳಾದ ನಾವು ಹಾಗೂ ನೀವು ಸಾರ್ವಜನಿಕರ ಸೇವಕರು. ಪ್ರಾಮಾಣಿಕವಾಗಿ ಅವರ ಕೆಲಸ ಮಾಡಿಕೊಡಬೇಕು. ಆಗ ಮಾಡಿದಾಗ ಮಾತ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಿ ಆಗುತ್ತದೆ ಎಂದರು.

ಜನರ ಪ್ರೀತಿ, ವಿಶ್ವಾಸ ಗಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸರ್ಕಾರಿ ನೌಕರರ ಆರೋಗ್ಯ ಚೆನ್ನಾಗಿದ್ದರೆ, ಸರ್ಕಾರದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಹೇಳಿದರು.

ಮನಸ್ಸು ಹಾಗೂ ದೈಹಿಕ ಆರೋಗ್ಯ ಚೆನ್ನಾಗಿರಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸಬೇಕು ಹಾಗೂ ಯೋಗಾಭ್ಯಾಸ ಮಾಡಬೇಕು. ಮಾನಸಿಕ ಒತ್ತಡದಿಂದಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಅವುಗಳ ನಿವಾರಣೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು.

ನೌಕರರ ಹಾಗೂ ಅವರ ಕುಟುಂಬದ ಸದಸ್ಯರ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌ ಮಾತನಾಡಿ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಜಿಲ್ಲೆಯ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸ ಲಾಗುವುದು. ನೌಕರರ ಆರೋಗ್ಯಕ್ಕೆ ಸಂಬಂಧಿಸಿದ 2 ಕೋಟಿ ರೂಪಾಯಿ ಬಾಕಿ ಇದ್ದು, ಅದನ್ನು ಬಿಡುಗಡೆ ಮಾಡಬೇಕು ಹಾಗೂ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಬೇಕು ಎಂದರು.

ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ, ರಾಜ್ಯಮಟ್ಟದ ಕ್ರೀಡಾ ವಸತಿ ಶಾಲೆ, ಕಬ್ಬಡ್ಡಿ ಅಂಕಣ ನಿರ್ಮಾಣ, ಈಜುಗೊಳ ನಿರ್ಮಾಣಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕು. ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ₨ 500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಮನವಿ ಮಾಡಿದರು.

‘ಸಕ್ಕರೆ ಸೀಮೆ’ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮಾತನಾಡಿ, ಸರ್ಕಾರವು ಸದಾ ನೌಕರರ ಜತೆಗೆ ಇದೆ. ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಯಲ್ಲಿ ವ್ಯತ್ಯಾಸವಿದೆ. ಅದನ್ನು ಸಮಾನಗೊಳಿಸಬೇಕು ಎಂದು ಮುಖ್ಯಮಂತ್ರಿಗೆ ಅವರು ಮನವಿ ಮಾಡಿದರು.

ಸಮಾನ ವೇತನವನ್ನು ಈಗಾಗಲೇ 27 ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿಯೂ ಜಾರಿಗೊಳಿಸಬೇಕು. ರಾಜ್ಯದಲ್ಲಿ 6.40 ಲಕ್ಷ ನೌಕರರು ಕೆಲಸ ಮಾಡಬೇಕಿತ್ತು. 5.25 ಲಕ್ಷ ನೌಕರರು ಕೆಲಸ ಮಾಡುತ್ತಿದ್ದೇವೆ. ಇದರಿಂದ ₨ 5 ಸಾವಿರ ಕೋಟಿ ಉಳಿತಾಯವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳ ಅನುದಾನವನ್ನೂ ಹೆಚ್ಚಿಸಬೇಕು. ರಾಷ್ಟ್ರಮಟ್ಟದಲ್ಲಿ ವಿಜೇತರಾಗುವವರಿಗೆ ಒಂದು ವಿಶೇಷ ವಾರ್ಷಿಕ ಬಡ್ತಿ ನೀಡಬೇಕು ಎಂದು ಮನವಿ ಮಾಡಿದರು.

ಸಚಿವ ಮಹದೇವಪ್ರಸಾದ್‌, ಸಂಸದ ಸಿ.ಎಸ್‌. ಪುಟ್ಟರಾಜು, ಶಾಸಕರಾದ ಎಂ.ಪಿ. ನರೇಂದ್ರ ಸ್ವಾಮಿ, ಎನ್‌. ಚಲುವರಾಯಸ್ವಾಮಿ,
ಕೆ.ಎಸ್‌. ಪುಟ್ಟಣ್ಣಯ್ಯ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಡಿ.ಸಿ. ತಮ್ಮಣ್ಣ, ಮಾಜಿ ಸಚಿವ ಎಂ.ಎಸ್‌. ಆತ್ಮಾನಂದ, ಮಾಜಿ ಶಾಸಕ ಎಚ್‌.ಡಿ. ಚೌಡಯ್ಯ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್‌, ಜಿ.ಪಂ. ಅಧ್ಯಕ್ಷೆ ಲಲಿತಾ ಪ್ರಕಾಶ್‌, ಜಿಲ್ಲಾ ಘಟಕದ ಅಧ್ಯಕ್ಷ ಕೆ. ನಾಗೇಶ್‌, ಸಂಘದ ಪದಾಧಿಕಾರಿಗಳಾದ ಪಟೇಲ್‌ ಪಾಂಡು, ರಾಮು, ಶ್ರೀನಿವಾಸ್‌, ಪುಟ್ಟಸ್ವಾಮಿ, ಎಲ್‌. ಬೈರಪ್ಪ, ಯೋಗಾನಂದ, ಬಸವರಾಜ ಗುರಿಕಾರ, ರಾಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮೌಂಟ್‌ ಎವರೆಸ್ಟ್‌ ಪರ್ವತಾರೋಹಿಣಿ ಅರುಣಿಮಾ ಸಿನ್ಹ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT