ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನ ಸಮಾಜದ ಕನಸು ನನಸಾಗಲಿ

ಡಾ.ಜಚನಿ ಜಯಂತ್ಯುತ್ಸವ ಆಚರಣೆ
Last Updated 21 ಅಕ್ಟೋಬರ್ 2014, 8:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಾತಿ–ಧರ್ಮ ಕುರಿತ ಕೀಳಿರಿಮೆ, ತಾರತಮ್ಯ ಕೊನೆಗಾಣಿಸಿ ಎಲ್ಲ­ರನ್ನೂ ಸಮಾನರನ್ನಾಗಿ ಕಾಣು­ವುದು ಡಾ.ಜಚನಿಯವರ ಆಶಯ­ವಾಗಿತ್ತು. ಅಸ್ಪೃಶ್ಯತೆ ಮತ್ತು ಅಪನಂಬಿಕೆ­ಯಿರದ ಸಮಾಜ ನಿರ್ಮಾಣ ಅವರ ಕನಸಾಗಿತ್ತು ಎಂದು ನಿಡುಮಾಮಿಡಿ ಮಠದ ವೀರ­ಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ನಿಡುಮಾಮಿಡಿ ಪೀಠಾಧೀಶರಾಗಿದ್ದ ಡಾ.ಜಚನಿಯವರ 106ನೇ ಜಯಂತ್ಯು­ತ್ಸವದ ಅಂಗವಾಗಿ ನಗರದ ಡಾ.ಬಿ.­ಆರ್‌.ಅಂಬೇಡ್ಕರ್‌ ಭವನದಲ್ಲಿ ಸೋಮ­­­ವಾರ ಆಯೋಜಿಸಿದ್ದ ಕಾರ್ಯ­ಕ್ರಮ­ದಲ್ಲಿ ಮಾತನಾಡಿ, ಜಚನಿಯವರ ತತ್ವ, ಸಿದ್ಧಾಂತ,  ವಿಚಾರಗಳನ್ನು ಅಳ­ವಡಿಸಿಕೊಂಡಲ್ಲಿ ನವಸಮಾಜ ನಿರ್ಮಿಸ­ಬಹುದು. ಎಲ್ಲರನ್ನೂ ಪ್ರೀತಿ ಮತ್ತು ಕರುಣೆಯಿಂದ ಕಾಣುವ ಮನೋ­­ಭಾವ ರೂಢಿಸಿಕೊಳ್ಳಬಹುದು. ಪರಿವರ್ತನೆಗೆ ಪ್ರಯತ್ನಿಸಬಹುದು ಎಂದರು.

ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕವಾಗಿಯೂ ಡಾ.ಜಚನಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ದಲಿ­ತರಿಗೆ ದೇವಾಲಯ ಪ್ರವೇಶಿಸಲು ಅವ­ಕಾಶ ಮಾಡಿಕೊಟ್ಟ ಅವರು, 1945­ರಲ್ಲಿ ಅಂತರ್ಜಾತಿ ವಿವಾಹ ಸಹ ನೆರ­ವೇರಿಸಿದರು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಅವರು ಹಲವಾರು ಕೃತಿ­ಗಳನ್ನು ರಚಿಸಿದರು. ಜೀವನದ ಕೊನೆಯ­ವರೆಗೂ ಕನ್ನಡ ಅಂಕಿಗಳನ್ನು ಬಳಸಿದರು ಎಂದು ಅವರು ತಿಳಿಸಿದರು.

ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಮಾತ­­­­ನಾಡಿ, ಡಾ.ಜಚನಿಯವರು ಅತ್ಯಂತ ಕಡಿಮೆ ಅವಧಿಯಲ್ಲೇ ಅಪಾರ ಸಾಮಾಜಿಕ ಪರಿವರ್ತನೆ ಕೆಲಸ ಮಾಡಿ­ದರು. ಕೃತಿಗಳ ಮೂಲಕ ಅಲ್ಲದೇ ಪ್ರವ­ಚನ ಮತ್ತು ಸಂದೇಶಗಳ ಮೂಲಕವೂ ಜಾಗೃತಿ ಮೂಡಿಸಿದರು. ಅವರು ಸಾರಿದ ಸಂದೇಶಗಳಲ್ಲಿ ಶೇ 50ರಷ್ಟು ಪಾಲಿಸಿ­ದರೂ ನಾವು ಪರಿಪೂರ್ಣ ವ್ಯಕ್ತಿಗಳಾ­ಗುತ್ತೇವೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡ­ಬೇಕಿದೆ ಎಂದರು.

ಶಾಸಕ ಡಾ.ಕೆ.ಸುಧಾಕರ್‌ ಮಾತ­ನಾಡಿ, ಡಾ.ಜಚನಿಯವರ ಕುರಿತು ಎಲ್ಲರೂ ಅಧ್ಯಯನ ಮಾಡಬೇಕು. ಸಾಮಾ­ಜಿಕ ಪರಿವರ್ತನೆ ಕುರಿತು ಅವರು ಹೊಂದಿದ್ದ ಆಶಯ ಮತ್ತು ಕನಸು­ಗಳನ್ನು ನನಸು ಮಾಡುವ ನಿಟ್ಟಿ­ನಲ್ಲಿ ನಾವು ಶ್ರಮಿಸಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಕೆ.­ಎಂ.­ನಯಾಜ್‌ ಅಹಮದ್‌  ವಿಶೇಷ ಉಪ­ನ್ಯಾಸ ನೀಡಿದರು. ಅಂಧ ಗಾಯಕ ಮಹಾಲಿಂಗಯ್ಯ ಮಠದ್‌ ಮತ್ತು ತಂಡದ ಸದಸ್ಯರು ಗೀತೆಗಳನ್ನು ಹಾಡಿ­ದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್‌, ಕರ್ನಾ­ಟಕ ರಕ್ಷಣಾ ವೇದಿಕೆ ಮುಖಂಡ ಚಂದ್­ರಶೇಖರ್‌, ಕಾಂಗ್ರೆಸ್ ಮುಖಂಡ ಕೃಷ್ಣ­ಮೂರ್ತಿ ಮತ್ತಿತರರು ಈ ಸಂದರ್ಭ­ದಲ್ಲಿ ಉಪಸ್ಥಿತರಿದ್ದರು.

ಮೂಢ ನಂಬಿಕೆ ವಿರೋಧಿ ಕಾಯ್ದೆ ಜಾರಿಯಾಗಲಿ
ಚಿಕ್ಕಬಳ್ಳಾಪುರ:
ವೇಶ್ಯಾವಾಟಿಕೆ ಕಾನೂನುಬದ್ಧ­ಗೊಳ್ಳು­ವುದರಿಂದ ಸಮಾಜ­ದಲ್ಲಿ ಅಪಾಯಕಾರಿ ಬೆಳವಣಿಗೆಗಳು ತಲೆದೋರುವ ಸಾಧ್ಯತೆಯಿದ್ದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಪೂರಕವಾದ ಕ್ರಮ ತೆಗೆದು­ಕೊಳ್ಳಬಾರದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸೋಮವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿ­ಗಾರರೊಂದಿಗೆ ಮಾತನಾಡಿದ ಅವರು, ವೇಶ್ಯಾವಾಟಿಕೆ ಕಾನೂನು­ಬದ್ಧ­ಗೊಳಿ­ಸಲು ಕೆಲ ಚಿಂತ­ಕರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಅವರ ಒತ್ತಾ­ಯಕ್ಕೆ ಸರ್ಕಾರಕ್ಕೆ ಮಣಿಯಬಾರದು. ಈ ವಿಷಯ­ದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

ಆಧುನಿಕ ಜೀವನ­ಶೈಲಿಯಿಂದ ಈಗಾಗಲೇ ಕೌಟಂಬಿಕ ವ್ಯವಸ್ಥೆ ದುರ್ಬಲ­ಗೊಳ್ಳುತ್ತಿದ್ದು, ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿದರೆ ನರಕಮಯ ಪರಿ­ಸ್ಥಿತಿ ನಿರ್ಮಾಣಗೊಳ್ಳಲಿದೆ. ವೇಶ್ಯಾ­ವಾಟಿಕೆಯಿಂದ ಮಹಿಳೆಯರು ಇನ್ನಷ್ಟು ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗಲಿದ್ದಾರೆ. ದೇವದಾಸಿ ಮತ್ತು ಇನ್ನಿತರ ಅಮಾನ­ವೀಯ ಪದ್ಧತಿ ನಿರ್ಮೂಲನೆ ಮಾಡುತ್ತಿರುವ ಸಂದರ್ಭದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ­ಗೊಳಿ­ಸುವುದು ಸರಿಯಲ್ಲ ಎಂದರು.

ಉಪವಾಸ ಸತ್ಯಾಗ್ರಹ: ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿ­ಗೊಳಿ­ಸವುದು ಸೇರಿದಂತೆ ಇತರೆ 11 ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ವಿವಿಧ ಮಠಾ­ಧೀಶರು ಮತ್ತು ಮಾತೆಯರ ಸಮ್ಮುಖದಲ್ಲಿ ಚಳಿಗಾಲ ಅಧಿವೇಶನದ ಸಂದರ್ಭ­ದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದ ಎಂದರು.

ನಯಾಜ್ ಅವರನ್ನು ಸ್ವಾಮೀಜಿ ಮಾಡುತ್ತಿದ್ದೆ
ಚಿಕ್ಕಬಳ್ಳಾಪುರ:
ಪ್ರಾಧ್ಯಾಪಕ ಡಾ.ಕೆ.­ಎಂ.ನಯಾಜ್‌ ಅಹಮದ್‌ ಅವರು ಒಂದು ವೇಳೆ ಮದುವೆಯಾ­ಗಿರ­ದಿದ್ದರೆ, ಅವರನ್ನು ನಿಡುಮಾಮಿಡಿ ಮಠದ ಪೀಠಾಧೀಶ ಮಾಡುತ್ತಿದ್ದೆ. ಸ್ವಾಮೀ­ಜಿ­ಯಾಗಲು ಅವರು ಅರ್ಹರಾ­ಗಿದ್ದರು ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಿಳಿಸಿದರು.

ಹಲ ವಿಚಾರ ಅರಿತಿರುವ ನಯಾಜ್‌ ಅಹಮದ್‌ ಸ್ವಾಮೀಜಿ­ಯಾಗಲು ಅರ್ಹ ವ್ಯಕ್ತಿ. ಮದುವೆ­ಯಾಗಲು ಅವರು ಕೊಂಚ ತಡ ಮಾಡಿ­ದ್ದರೆ, ಖಂಡಿತ ಅವರನ್ನು ಸ್ವಾಮೀಜಿಯಾಗಿಸುತ್ತಿದ್ದೆ. ಮನ­ದಲ್ಲಿ ಹಲ ದಿನಗಳಿಂದ ಕಾಡುತ್ತಿದ್ದ ಈ ಅನಿಸಿಕೆಯನ್ನು ಇಂದು ಹಂಚಿ­ಕೊಂಡಿ­ದ್ದೇನೆ ಎಂದು ಅವರು ತಿಳಿ­ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT