ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧ ಜೀವನಕ್ಕೆ ಹಲವು ಯೋಜನೆ

Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಅಗ್ರಸ್ಥಾನವಿದೆ. ಇಂದಿನ ರಾಜಕೀಯ, ಸಾಮಾಜಿಕ, ವೈಜ್ಞಾನಿಕ, ಆಡಳಿತಾತ್ಮಕ, ತಾಂತ್ರಿಕ, ಮಾಹಿತಿ ತಂತ್ರಜ್ಞಾನ ಹಾಗೂ ಹತ್ತು ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ.

ನಮ್ಮ ದೇಶದ ಮಾನವ ಸಂಪನ್ಮೂಲದಲ್ಲಿ 58 ಕೋಟಿ ಮಹಿಳೆಯರಿದ್ದು, ಇವರಲ್ಲಿ ಶೇ 65 ರಷ್ಟು ಅಂದರೆ 37.7 ಕೋಟಿ ಮಹಿಳೆಯರು 35–40 ವರ್ಷಗಳ ಮಿತಿಯಲ್ಲಿದ್ದಾರೆ. ಆರ್ಥಿಕ ಸಬಲರಾಗಲು ಪ್ರತೀ ಕುಟುಂಬದ ಬೆನ್ನೆಲುಬಿನಂತಿರುವ ಗೃಹಿಣಿಯರ ಪಾತ್ರ ಬಹು ಮುಖ್ಯ. ಆದರೆ ಕೌಟುಂಬಿಕ ಪರಿಹಾರ, ನೈಸರ್ಗಿಕ ವಾತಾವರಣ ಹಾಗೂ ಆರ್ಥಿಕ ಪರಿಸ್ಥಿತಿ ಇವುಗಳ ಹಿನ್ನೆಲೆಯಿಂದಾಗಿ ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಅವಕಾಶ ವಂಚಿತರಾಗಿರುತ್ತಾರೆ. ಈ ವಿಚಾರ ಮನಗಂಡ ಕರ್ನಾಟಕ ಸರ್ಕಾರ ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ ಹಲವಾರು ಉಪಯುಕ್ತ ಯೋಜನೆಗಳನ್ನು  ಹಮ್ಮಿಕೊಂಡಿದೆ.

ಸ್ತ್ರೀ ಶಕ್ತಿ ಗುಂಪು ಹಾಗೂ ಸಂಘಟನೆ
ಈ ಯೋಜನೆಯಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಲು ಸಮಾನ, ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯುಳ್ಳ, ಸಮಾನ ವಯಸ್ಸಿನ, ಬಡತನ ರೇಖೆಯಿಂದ ಕಡಿಮೆ ಆದಾಯ ಇರುವ ಕುಟಂಬದ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಮಹಿಳೆಯರು ಹಾಗೂ ಭೂರಹಿತ ಕೃಷಿ ಕಾರ್ಮಿಕರು ಒಂದುಗೂಡಿ ಕೆಲಸ ಮಾಡಬಹುದು. ಈ ಗುಂಪಿನಲ್ಲಿ 15–20 ಜನ ಮಹಿಳೆಯರಿರಬೇಕು. ಸರ್ಕಾರದಿಂದ ಈ ಎಲ್ಲಾ ಗುಂಪುಗಳಿಗೆ ತಲಾ ರೂ. 5,000 ‘ಸತ್ತು ನಿಧಿ’ ಕೊಡಲಾಗುತ್ತದೆ. ಹಾಗೂ ಪತ್ರ, ರಿಜಿಸ್ಟರ್‌ ಪುಸ್ತಕ ಹಾಗೂ ಒಂದು ಟ್ರಂಕ್‌ ಕೊಳ್ಳಲು ರೂ. 600 ಸಹಾಯ ಧನ ನೀಡಲಾಗುವುದು. ಇವರಲ್ಲಿ ಉಳಿತಾಯ ಮನೋಭಾವನೆ ಬೆಳೆಸಲು ಕ್ರಮವಾಗಿ ರೂ. 75,000 ದಿಂದ 1 ಲಕ್ಷ ಉಳಿತಾಯ ಮಾಡಿದ ಗುಂಪಿಗೆ ರೂ. 15000 ಹಾಗೂ ರೂ. 1 ಲಕ್ಷಕ್ಕೂ ಮೇಲ್ಪಟ್ಟು ಉಳಿತಾಯ ಮಾಡಿದ ಗುಂಪಿಗೆ ರೂ. 20,000 ಪ್ರೋತ್ಸಾಹ ಧನ ನೀಡಲಾಗುವುದು. ಈ ಗುಂಪುಗಳು ಹಮ್ಮಿಕೊಂಡಿರುವ ಚಟುವಟಿಕೆಗಳಿಗನುಗುಣವಾಗಿ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಇಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ನಾಯಕತ್ವ, ಸಂಪರ್ಕ ವಿಕಾಸನ ಶಕ್ತಿ, ಲೆಕ್ಕಪತ್ರ ಇಡುವ ವಿಚಾರದಲ್ಲಿ, ಸಾಲ ನಿರ್ವಹಣೆಗೆ ಹಾಗೂ ಸಾಮಾಜಿಕ ವಿಚಾರಗಳಲ್ಲಿ ಅಂಗನವಾಡಿ ಮಹಿಳೆಯರಿಂದ ಕಾಲಕಾಲಕ್ಕೆ ತರಬೇತಿ ನೀಡಲಾಗುವುದು.

ಈ ಗುಂಪುಗಳು ತಯಾರಿಸಿದ ವಸ್ತುಗಳು ಮಾರಾಟ ಮಾಡಲು ಕ್ರಮವಾಗಿ ಜಿಲ್ಲೆಯ  ಮಟ್ಟದಲ್ಲಿ 28, ತಾಲ್ಲೂಕು ಮಟ್ಟದಲ್ಲಿ 158, ಡಿವಿಜನ್‌ ಮಟ್ಟದಲ್ಲಿ 4, ವಾಣಿಜ್ಯ ಸಂಕೀರ್ಣಗಳನ್ನು ಸರ್ಕಾರದ ವತಿಯಿಂದ ನಿರ್ಮಿಸಲಾಗಿದೆ. ಪ್ರತೀ ವರ್ಷ ರೂ. 75000 ಪ್ರತೀ ವರ್ಷ ಜಿಲ್ಲೆಗೆ ಸಂದರ್ಶನ ಹಾಗೂ ಮಾರಾಟ ಏರ್ಪಡಿಸಲು ಹಣ ಬಿಡುಗಡೆ ಮಾಡಲಾಗುವುದು. ಅಂತರರಾಷ್ಟ್ರೀಯ ಮಹಿಳೆಯರ ದಿನಾಚರಣೆಯಂದು ಉತ್ತಮ ಕೆಲಸ ಮಾಡಿರುವ ಪ್ರಥಮ ಮೂರು ಗುಂಪುಗಳಿಗೆ ಕ್ರಮವಾಗಿ, ರೂ. 50,000, ರೂ. 30,000, ಹಾಗೂ ರೂ. 20,000 ನಗದು ಬಹುಮಾನ ನೀಡಲಾಗುವುದು. ಇವು ಹೊರತುಪಡಿಸಿ ಯಶೋಧರಮ್ಮ ದಾಸಪ್ಪ ಇವರ ಹೆಸರಿನಲ್ಲಿ ಪ್ರತಿಯೊಂದು ಕಂದಾಯ ವಿಭಾಗದ ಒಂದು ಉತ್ತಮ ಗುಂಪಿಗೆ ರೂ. 25,000 ಬಹುಮಾನ ನೀಡಲಾಗವುದು.

ಸ್ತ್ರೀ ಶಕ್ತಿ ಕಾರ್ಯಕ್ರಮದಲ್ಲಿ ಸುಮಾರು 1.40 ಲಕ್ಷ ಗುಂಪುಗಳು, ಹಾಗೂ 20 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಕರ್ನಾಟಕದಲ್ಲಿ ಭಾಗವಹಿಸುತ್ತಾರೆ. ಹಳ್ಳಿಯಲ್ಲಿ ವಾಸಿಸುವ ಮಹಿಳೆಯರ ಆರ್ಥಿಕ ನಿರ್ಹಣೆಗೆ ಹಾಗೂ ಬೆಳವಣಿಗೆ, ಸ್ವಸಹಾಯ ಪದ್ಧತಿಯಿಂದ ಸ್ವಾವಲಂಬನೆ ಹೊಂದಲು ಹೆಚ್ಚಿನ ಉತ್ಪಾದನೆ ಹಾಗೂ ಹಣಗಳಿಸಿ ಆರ್ಥಿಕವಾಗಿ ಸದೃಢತೆಯಿಂದ ಜೀವಿಸಲು ಸರ್ಕಾರ ಸಾದರಪಡಿಸಿದ್ದ ಇಂತಹ ಹಲವು ಯೋಜನೆಗಳು ಬಡ ಮತ್ತು ಮಧ್ಯಮ ಕುಟುಂಬದಲ್ಲಿ ಜನಿಸಿದ ಮಹಿಳೆಯರಿಗೆ ವರದಾನವಾಗಿದೆ.

ಉದ್ಯೋಗಿನಿ ಯೋಜನೆ
18–45 ವರ್ಷ ಪ್ರಾಯದಲ್ಲಿರುವ ಮಹಿಳೆಯರು ಈ ಯೋಜನೆಯ ಪ್ರಯೋಜನ

ಕರ್ನಾಟಕ ಸರ್ಕಾರ ಮಹಿಳೆಯರ ಕ್ಷೇಮಾಭಿವೃದ್ಧಿ ನಿಗಮ
ನೀಡುವ ಸೌಕರ್ಯಗಳು:

*ಮಹಿಳಾ ಅಭಿವೃದ್ಧಿ ಯೋಜನೆ
*ಉದ್ಯೋಗಸ್ಥ ಮಹಿಳೆಯರ ವಸತಿ ನಿರ್ಮಾಣ
*ಸಾಮಾಜಿಕ ಪಿಡಗು ನಿವಾರಣಾ ಘಟಕ
*ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವ ಕಾಯ್ದೆ
*ಕಾನೂನು ಸಾಕ್ಷರತಾ ಶಿಬಿರ
*ಕುಟುಂಬದ ಗಂಡಸರು ಮಾದಕ ಪದಾರ್ಥ ಸೇವನೆಯನ್ನು ತಡೆಗಟ್ಟುವ ಪ್ರಯತ್ನ
*ಬಾನಂಗಳದತ್ತ ಬಾಲೆ (child tracking)
*ರಾಷ್ಟ್ರೀಯ ಹೆಣ್ಣು ಮಕ್ಕಳ ಯೋಜನೆ
*ಉದ್ಯೋಗಸ್ತ ಮಹಿಳೆಯರ ಶಿಶು ಪಾಲನಾ ಕೇಂದ್ರ
*ಬಾಲ್ಯ ವಿವಾಹ ರದ್ಧತಿ ಕಾಯ್ದೆ
*ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳು
*ರಾಜ್ಯ ಮಹಿಳಾ ನಿಲಯಗಳು
*ವಿಧವಾ ವೇತನ

ಪಡೆಯಬಹುದಾಗಿದೆ. ಇಂತಹ ಕುಟುಂಬದ ಒಟ್ಟು ಆದಾಯ ರೂ. 40,000 ದೊಳಗಿರಬೇಕು. ಇಲ್ಲಿ ಆರಿಸಿಕೊಂಡ ಉದ್ಯೋಗದ ಗರಿಷ್ಠ ವೆಚ್ಚ ರೂ. 1 ಲಕ್ಷ ದೊಳಗಿರಬೇಕು. ಈ ಯೋಜನೆಗೆ ವಾಣಿಜ್ಯ ಬ್ಯಾಂಕುಗಳು ಹಾಗೂ ಗ್ರಾಮೀಣ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಹೀಗೆ ಸಾಲ ಪಡೆದಾಗ ಕರ್ನಾಟಕ ಸರ್ಕಾರ ಮಹಿಳೆಯರ ಕ್ಷೇಮಾಭಿವೃದ್ಧಿ ನಿಗಮ (KSWDC) ವಿಧವೆಯರಿಗೆ, ಅಂಗವಿಕಲ ಹಾಗೂ ಅಸಹಾಯತೆಕಗೆ ಒಳಗಾದ ಮಹಿಳೆಯರಿಗೆ, ಜೀವನಾಧಾರವಿಲ್ಲದ ಮಹಿಳೆಯರಿಗೆ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ, ಅವರು ಪಡೆಯುವ ಸಾಲದ ಶೇ 30 ರಷ್ಟು ಅಥವಾ ರೂ. 10000, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಅನುದಾನಿತವಾಗಿ ವಿತರಿಸುತ್ತಾರೆ. ಇದೇ ವೇಳೆ ಈ ಹಿಂದೆ ವಿವರಿಸಿದ ಪಂಗಡಗಳನ್ನು ಹೊರತುಪಡಿಸಿ ಉಳಿದವರಿಗೆ ಸಾಲದ ಶೇ 20 ರಷ್ಟು ಅಥವಾ ರೂ. 7500 ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಅನುದಾನಿತ ರೂಪದಲ್ಲಿ ನೀಡಲಾಗುವುದು. ಈ ಯೋಜನೆಯಲ್ಲಿ ಜನಸಾಮಾನ್ಯರು ನಿಭಾಯಿಸುವಂತಹ 89 ಸಣ್ಣ ಉದ್ಯಮಗಳು ಒಳಗೊಂಡಿವೆ.

ಈ ಯೋಜನೆಯನ್ವಯ ಮಹಿಳೆಯರು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸರ್ಕಾರ ವ್ಯವಸ್ಥೆ ಮಾಡುತ್ತದೆ.

ಮಹಿಳೆಯರ ಕ್ಷೇಮಾಭಿವೃದ್ಧಿ ನಿಗಮ ಪ್ರತಿ ಜಿಲ್ಲಾ ಸಹಾಯಕ ನಿರ್ದೇಶಕರುಗಳಿಗೆ ರೂ. 25000–30000 ದಂತೆ ಹಣ ಬಿಡುಗಡೆ ಮಾಡುವುದಲ್ಲದೆ, ಭಾಗವಹಿಸುವ ಮಹಿಳಾ ಉದ್ಯಮಿಗಳಿಗೆ 10’x10’ ಗಾತ್ರದ ಮಳಿಗೆ, 3 ಮೇಜುಗಳು, 2 ಕುರ್ಚಿಗಳು, ಟೇಬಲ್‌ ಕ್ಲಾತ್‌, ಬೆಳಕಿನ ವ್ಯವಸ್ಥೆ ಹಾಗೂ ನಾಮಫಲಕ ಧರ್ಮಾರ್ಥವಾಗಿ ಒದಗಿಸಲಾಗುವುದು. ಇದೇ ವೇಳೆ 24 ಗಂಟೆಗಳ ಕಾಲವೂ ಪೊಲೀಸ್‌ ರಕ್ಷಣೆ ಒದಗಿಸಲಾಗುವುದು.

ಸ್ವಂತ ಉದ್ಯೋಗ ಅಥವಾ ವಸ್ತುಗಳ ತಯಾರಿಕೆಯಲ್ಲಿ, 18–45 ವರ್ಷದ ಮಹಿಳಾ ಅಭ್ಯರ್ಥಿಗಳಿಗೆ 1–6 ತಿಂಗಳ ಅವಧಿಯ ತರಬೇತಿ ನೀಡಲಾಗುವುದು. ತಜ್ಞರಿಂದ ಮಹಿಳಾ ಕಾನೂನು, ಆರೋಗ್ಯ, ವಸ್ತುಗಳ ಮಾರಾಟ ಇವುಗಳನ್ನು ತಿಳಿಯಪಡಿಸಲಾಗುತ್ತದೆ. ತರಬೇತಿ ವೇಳೆ ತಿಂಗಳಿಗೆ ರೂ. 800 ಸ್ಟೈಫಂಡ್‌ ಕೊಡಲಾಗುತ್ತದೆ.

ಭಾಗ್ಯಲಕ್ಷ್ಮಿ ಯೋಜನೆ
ಈ ಯೋಜನೆ 2006–2007 ರಲ್ಲಿ ಪ್ರಾರಂಭವಾದರೂ 2008 ರಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ದಿನಾಂಕ 1–8–2008 ರ ನಂತರ ಬಡತನದ ರೇಖೆಯಿಂದ ಕೆಳಗಿರುವ ಕುಟುಂಬದಲ್ಲಿ  ಜನಿಸಿದ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಕ್ರಮವಾಗಿ ರೂ. 19,300 ಹಾಗೂ ರೂ. 18,350, 18 ವರ್ಷಗಳ ಅವಧಿಗೆ ಸರ್ಕಾರ ಠೇವಣಿ ಇರಿಸಿ, 18 ವರ್ಷ ಮುಗಿಯುತ್ತಲೇ ಕ್ರಮವಾಗಿ 1,00097 ಹಾಗೂ 1,00052 ಹೆಣ್ಣು ಮಕ್ಕಳು ಪಡೆಯಬಹುದಾಗಿದೆ. ಇಂತಹ ಹೆಣ್ಣು ಮಕ್ಕಳು ಎಸ್‌.ಎಸ್‌.ಎಲ್‌.ಸಿ. ಮುಗಿಸಿ ಹೆಚ್ಚಿನ ವ್ಯಾಸಂಗ ಮಾಡುವಲ್ಲಿ ಠೇವಣಿ ಬಾಂಡಿನ ಆಧಾರದ ಮೇಲೆ ಗರಿಷ್ಠ ರೂ. 50,000 ಸಾಲ ಪಡೆಯಬಹುದು.

ಸಾಂತ್ವನ
ಸಮಾಜದಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಅತ್ಯಾಚಾರ, ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ರೂ. 2000–10000 ತನಕ ಆರ್ಥಿಕ ನೆರವು ಹಾಗೂ ಸ್ವಾವಲಂಬನೆಯಿಂದ ಜೀವಿಸಲು ಉದ್ಯೋಗದಲ್ಲಿ ತರಬೇತಿ ನೀಡಲಾಗುವುದು. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಶಕ್ತರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯಗುರಿಯಾಗಿರುತ್ತದೆ.

ಸ್ವಾಧಾರ
ವಿಧವೆಯರು, ಪರಿತ್ಯಕ್ತೆಯರು, ಜೈಲಿನಿಂದ ಬಿಡುಗಡೆ ಹೊಂದಿದ ಮಹಿಳಾ ಕೈದಿಗಳು, ಕುಟುಂಬದ ಸಹಾಯವಿಲ್ಲದೆ ಮಹಿಳೆಯರು, ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಒಬ್ಬಂಟಿಗರಾದ ಮಹಿಳೆಯರು, ಅನೈತಿಕ ಸಾಗಾಣಿಗೆ ಒಳಗಾದ ವೇಶ್ಯಾಗೃಹದಿಂದ ರಕ್ಷಿಸಿದ ಮಹಿಳೆಯರು, ಲೈಂಗಿಕ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳು, ಹಾಗೂ ಯಾವುದೇ ಸಹಾಯವಿಲ್ಲದೆ ಮಾನಸಿಕ ರೋಗದ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಇವರಿಗೆ ಆಶ್ರಯ, ಆಹಾರ ಬಟ್ಟೆ, ಆರೋಗ್ಯ ಸೇವೆ, ಸಲಹೆ ಹಾಗೂ ಮಾರ್ಗದರ್ಶನ, ನ್ಯಾಯ ಒದಗಿಸುವುದು ಕೌಶಲ ತರಬೇತಿ ಹಾಗೂ ಶಿಕ್ಷಣ ನೀಡುವುದರ ಮೂಲಕ, ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗಿ ಬಾಳಲು ಅನುವು ಮಾಡಿಕೊಡಲಾಗುವುದು. ರಾಜ್ಯದಲ್ಲಿ ಪ್ರಸ್ತುತ 34 ಸ್ವಾಧಾರ  ಕೇಂದ್ರಗಳಿವೆ.

ಜನ್‌ಧನ್‌ ಯೋಜನೆಯಲ್ಲಿ ದೊರೆಯುವ ರೂ. 5000 ಓವರ್‌ ಡ್ರಾಫ್ಟ್ ಸೌಲತ್ತು ನಮ್ಮ ಪ್ರಧಾನಿ, ಕುಟುಂಬದ ಮಹಿಳೆಯರಿಗೆ ಮೀಸಲಾಗಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಸಂತುಷ್ಟ ಗೃಹಿಣಿಯಿಂದ ಕುಟುಂಬದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಹಾಗೂ ತನ್ಮೂಲಕ ದೇಶ ಪ್ರಗತಿ ಹೊಂದುವುದು ಎನ್ನುವುದೇ ಸರ್ಕಾರದ ನಂಬಿಕೆ. ಮಹಿಳೆಯರು ಸರ್ಕಾರ ಕಾಲಕಾಲಕ್ಕೆ ಸಾದರಪಡಿಸುವ ಯೋಜನೆಗಳ ಲಾಭ ಪಡೆದು ದೇಶದ ಪ್ರಗತಿಯಲ್ಲಿ ಪಾಲ್ಗೊಂಡಲ್ಲಿ ಪ್ರತಿಯೊಂದು ಕುಟುಂಬ ಸುಖ, ಶಾಂತಿ, ಸಮೃದ್ಧಿಯಿಂದ ಸದಾಕಾಲ ಬಾಳಿ ಬದುಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT