ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಜಯದ ಮೇಲೆ ಇಂಗ್ಲೆಂಡ್‌ ಕಣ್ಣು

ಕ್ರಿಕೆಟ್‌: ತಿರುಗೇಟು ನೀಡಲು ಕಾದಿರುವ ಶ್ರೀಲಂಕಾ
Last Updated 26 ಮೇ 2016, 19:41 IST
ಅಕ್ಷರ ಗಾತ್ರ

ಚೆಸ್ಟರ್‌ ಲೆ ಸ್ಟ್ರೀಟ್‌, ಇಂಗ್ಲೆಂಡ್‌ (ಎಎಫ್ಪಿ):  ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ಗಳಿಸಿ ವಿಶ್ವಾಸದ ಉತ್ತುಂಗ ದಲ್ಲಿರುವ ಇಂಗ್ಲೆಂಡ್‌ ತಂಡ ಈಗ ಸರಣಿ ಗೆಲುವಿನ ಮೇಲೆ ಕಣ್ಣು ನೆಟ್ಟಿದೆ.

ಶುಕ್ರವಾರದಿಂದ ಆರಂಭವಾಗ ಲಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಂಗ್ಲರ ನಾಡಿನ ಬಳಗ ಗೆಲ್ಲುವ ನೆಚ್ಚಿನ ತಂಡ ಎಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿಯಲಿದೆ.

ಹೆಡಿಂಗ್ಲೆಯಲ್ಲಿ ಹೋದ ವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಆತಿ ಥೇಯ ಇಂಗ್ಲೆಂಡ್‌ ತಂಡ ಇನಿಂಗ್ಸ್‌ ಮತ್ತು 88 ರನ್‌ಗಳಿಂದ ಪ್ರವಾಸಿ ತಂಡ ವನ್ನು ಮಣಿಸಿತ್ತು.

ಆಂಗ್ಲರ ನಾಡಿನ ತಂಡದ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಎರಡೂ ಇನಿಂಗ್ಸ್‌ಗಳಲ್ಲಿ ಮಿಂಚಿನ ದಾಳಿ ನಡೆಸಿ ಇಂಗ್ಲೆಂಡ್‌ಗೆ ಗೆಲುವು ತಂದು ಕೊಟ್ಟಿದ್ದರು. ಹೀಗಾಗಿ ಬಲಗೈ ವೇಗಿ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಅಲಸ್ಟೇರ್‌ ಕುಕ್‌ ಸಾರಥ್ಯದ ತಂಡ ಬ್ಯಾಟಿಂಗ್‌ನಲ್ಲಿ ಶಕ್ತಿಶಾಲಿಯಾಗಿದೆ. ಅಲೆಕ್ಸ್‌ ಹೇಲ್ಸ್‌ ಮತ್ತು ಜೋ ರೂಟ್‌  ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಹೇಲ್ಸ್‌ ಮತ್ತು ಸ್ಟೋಕ್ಸ್‌ ಕ್ರಮವಾಗಿ 86 ಮತ್ತು 140ರನ್‌ ಗಳಿಸಿ ಮಿಂಚಿದ್ದರು. ಸ್ಟೋಕ್ಸ್‌ ಗಾಯ ಗೊಂಡಿದ್ದು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇದು ತಂಡಕ್ಕೆ ಅಲ್ಪ ಹಿನ್ನಡೆ ಯಾಗಿ ಪರಿಣಮಿ ಸಿದೆ. ಆದರೆ ಉತ್ತಮ ಲಯದಲ್ಲಿರುವ ಹೇಲ್ಸ್‌ ಎರಡನೇ ಪಂದ್ಯದಲ್ಲಿಯೂ ಸಿಂಹಳೀಯ ನಾಡಿನ ಬೌಲರ್‌ಗಳನ್ನು ಕಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

ನಾಯಕ  ಕುಕ್‌, ನಿಕ್‌ ಕಾಂಪ್ಟನ್‌ ಮತ್ತು ಜೇಮ್ಸ್‌ ವಿನ್ಸ್‌ ಅವರು ಆರಂಭಿಕ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಲು ವಿಫಲರಾಗಿದ್ದರು. ಎರಡನೇ ಪಂದ್ಯಕ್ಕೂ ಮುನ್ನ ಕಠಿಣ ತಾಲೀಮು ನಡೆಸಿರುವ ಇವರು ಮಿಂಚುವ ವಿಶ್ವಾಸದಲ್ಲಿದ್ದಾರೆ.

ಬೌಲಿಂಗ್‌ನಲ್ಲಿ ಸ್ಟುವರ್ಟ್‌ ಬ್ರಾಡ್, ಮೊಯೀನ್‌ ಅಲಿ ಮತ್ತು ಸ್ಟೀವನ್‌ ಫಿನ್‌ ಅವರ ಬಲ ಆಂಗ್ಲರ ನಾಡಿನ ತಂಡಕ್ಕಿದೆ.

ತಿರುಗೇಟು ನೀಡುವ ಕಾತರ:  ಆರಂಭಿಕ ಸೋಲಿನಿಂದ ಮೈ ಕೊಡವಿ ನಿಂತಿರುವ ಶ್ರೀಲಂಕಾ ತಂಡ ತಿರುಗೇಟು ನೀಡಲು ಹವಣಿಸುತ್ತಿದೆ. ಈ ತಂಡ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗ ಗಳಲ್ಲಿ ನೀರಸ ಆಟ ಆಡಿತ್ತು.

ದಿಮುತ್‌ ಕರುಣಾರತ್ನೆ,  ಕೌಶಲ್‌ ಸಿಲ್ವ, ಕುಶಾಲ್‌ ಮೆಂಡಿಸ್‌, ದಿನೇಶ್‌ ಚಾಂಡಿಮಲ್‌ ಮತ್ತು ನಾಯಕ ಏಂಜೆಲೊ ಮ್ಯಾಥ್ಯೂಸ್‌ ಬ್ಯಾಟಿಂಗ್‌ನಲ್ಲಿ ಕೈಕೊಟ್ಟಿದ್ದರು.

ಬೌಲರ್‌ಗಳು ಕೂಡಾ ಪರಿಣಾಮ ಕಾರಿ ದಾಳಿ ನಡೆಸಲು ವಿಫಲರಾಗಿದ್ದರು. ಈ ಎರಡೂ ವಿಭಾಗಗಳಲ್ಲಿ ಗುಣಮಟ್ಟದ ಆಟ ಆಡಿದರೆ ಮಾತ್ರ ಲಂಕಾ ತಂಡ ಗೆಲುವಿನ ಕನಸು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT