ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರದಿ ಬೆಳೆ ಫಲಭರಿತ ಇಳೆ

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನರ್ಸರಿ ಮಕ್ಕಳು ಪ್ರಾರ್ಥನೆಗೆ ನಿಂತಂತೆ ಕಾಣುವ ಶೇಂಗಾ ಹೊಲ, ಟೊಮೆಟೊ ಹೊಲವನ್ನು ದಾಟಿ ತೇರಿನಾಕಾರದ ಫಲಭರಿತ ಚಿಕ್ಕು ತೋಟ ಸೇರಿದಾಗ ಅದರ ತಂಪಿಗೆ ಮನಸೋತು ಒಂದೆಡೆ ಕುಳಿತು ಆ ಹೊಲದೊಡೆಯರ ಮಾತಿಗೆ ನಾವು ಕಿವಿಯಾದೆವು.

ಇದು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಿಂದ ಹತ್ತು ಕಿಲೋಮೀಟರ್ ದೂರದ ಗಿರಿಯಾಲ ಎಂಬ ಹಳ್ಳಿಯ ಹನುಮಂತರಾವ್ ಪ್ರಹ್ಲಾದರಾವ್ ಕಾಟಕರ್ ಅವರ ತೋಟ. ಏಳನೇ ತರಗತಿಯ ಓದಿಗೆ ತಿಲಾಂಜಲಿ ಇತ್ತು ಕೃಷಿಭೂಮಿಗಿಳಿದವರು ಹನುಮಂತ. ತಂದೆ- ದೊಡ್ಡಪ್ಪನ ಮಾರ್ಗದರ್ಶನದಲ್ಲಿ ಐದಾರು ವರ್ಷ ಒಕ್ಕಲುತನದ ಕಲಿಕೆ. ಆಗ ಮಳೆ ಆಶ್ರಿತವಾಗಿ ಜೋಳ, ಭತ್ತ, ಶೇಂಗಾ ಕಡಲೆಗಳನ್ನು ಮಾತ್ರ ಬೆಳೆಯುತ್ತಿದ್ದರು. ಊರಿನ ಕೆಲವು ರೈತರು ಹುಬ್ಬಳ್ಳಿಯ ಕರಿನೀರು (ಚರಂಡಿ ನೀರನ್ನು) ತರಕಾರಿ ಬೆಳೆಸುತ್ತಿದ್ದಾರೆ. ಆದರೆ ಇವರಿಗೆ ಉಣ್ಣುವ ಧಾನ್ಯಕ್ಕೆ ಮಲಿನ ನೀರನ್ನು ಬಳಸುವ ಮನಸ್ಸು ಬರಲಿಲ್ಲ. ಬೋರ್‌ವೆಲ್ ತೆಗೆಸಿದರು.

ಚಿಕ್ಕು ತೋಟ ನಿರ್ಮಾಣ
ಧಾರವಾಡದ ನಡಕಟ್ಟಿ ಫಾರ್ಮ್‌ನಿಂದ ಒಂದು ವರ್ಷದ ಚಿಕ್ಕು ಗಿಡಗಳನ್ನು (ಕ್ರಿಕೆಟ್ ಬಾಲ್) ಖರೀದಿಸಿದರು. ಮೇ ತಿಂಗಳಲ್ಲಿ ಎರಡೂವರೆ ಅಡಿ ಚೌಕಾಕಾರದ ತಗ್ಗು ತೆಗೆದು ಹುಲಗುಲ ಸೊಪ್ಪು ಸೆಗಣಿ ಗೊಬ್ಬರ ತುಂಬಿ ಕಳಿಯಲು ಬಿಟ್ಟು ಒಂದು ತಿಂಗಳ ಬಳಿಕ ಅಂದರೆ ಜೂನ್ ತಿಂಗಳಲ್ಲಿ ಗಿಡಗಳನ್ನು ನಾಟಿ ಮಾಡಿದರು. ಸಾಲಿನಿಂದ ಸಾಲಿಗೆ ಮೂವತ್ತು ಅಡಿ ಅಂತರವಿಟ್ಟರು. ಇದರಿಂದಾಗಿ ಚಿಕ್ಕು ಗಿಡಗಳನ್ನು ನೆಟ್ಟ ಮೇಲೆ ನಡುವಿನ ಜಾಗವನ್ನು ಉಳುಮೆ ಮಾಡಿ ಗೋವಿನ ಜೋಳವನ್ನು ಬೆಳೆದುಕೊಳ್ಳಲು ಅನುಕೂಲ ವಾಯಿತು. ಮೂರನೆಯ ವರ್ಷ ಚಿಕ್ಕು ಗಿಡಗಳು ಒಳ್ಳೆ ಇಳುವರಿ ಕೊಡಲಾರಂಭಿಸಿದವು. ಪ್ರತಿ ವರ್ಷ ಮಳೆ ಗಾಲ ಮುಗಿದಾಗ ಗಿಡದ ಸುತ್ತಲೂ ಐದು ಅಡಿ ಅಗಲದ ಆಲಿ ಮಾಡಿ ನೀರು ತುಂಬಿಸುತ್ತಾರೆ. ವರ್ಷ ಕ್ಕೊಮ್ಮೆ 50 ಕೆ.ಜಿ.ಯಷ್ಟು ಸೆಗಣಿಗೊಬ್ಬರ ಹಾಕುತ್ತಾರೆ.

ಏಳು ವರ್ಷಗಳಿಂದ ಒಳ್ಳೆಯ ಇಳುವರಿ ನೀಡುತ್ತಿರುವ ಎರಡೆಕರೆಯ ಚಿಕ್ಕು ತೋಟ ಇವರಿಗೆ ಒಳ್ಳೆಯ ಆದಾಯ ನೀಡಿದೆ. ವಾರಕ್ಕೊಮ್ಮೆ ಇಡಿ ತೋಟಕ್ಕೆ ನೀರು ಹಾಯಿಸುತ್ತಾರೆ. ಈಗ ಗಿಡಗಳು ದೊಡ್ಡದಾಗಿ ಬೆಳೆದಿರುವುದರಿಂದ ಇನ್ಯಾವುದೇ ಮಿಶ್ರ ಬೆಳೆ ಬೆಳೆಯುವುದಿಲ್ಲ. ಕಳೆ ಬೆಳೆಯದಂತೆ ವರ್ಷಕ್ಕೆರಡು ಬಾರಿ ಉಳುಮೆ ಮಾಡಿಸುತ್ತಾರೆ. ಬೆಳೆದ ಕಾಯನ್ನು ಕೊಯ್ದು ಗೋಣಿಚೀಲದ ಮೇಲೆ ಹಾಕಿ ತಿಕ್ಕಿ ಶುಭ್ರಗೊಳಿಸಿ ದೊಡ್ಡ, ಮಧ್ಯಮ, ಸಣ್ಣ ಗಾತ್ರದ ಕಾಯಿಗಳನ್ನು ಬೇರ್ಪಡಿಸುತ್ತಾರೆ. 25 ಕೆ.ಜಿ ತೂಕದ ಚಿಕ್ಕುಕಾಯಿ ಚೀಲಗಳನ್ನು ಮಾಡುತ್ತಾರೆ. ಬೆಳಗಾವಿ, ಸಾಂಗ್ಲಿ ನಿಪ್ಪಾಣಿ, ಕೊಲ್ಲಾಪುರ ಶಹರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಾರೆ.

(ಸಗಟು) ಊರಿನ ಹತ್ತಿರವಿರುವ ಎನ್. ಎಚ್. 4 ಹೆದ್ದಾರಿಯಿಂದಾಗಿ ಇವರಿಗೆ ಮಾರುಕಟ್ಟೆಗೆ ಚಿಕ್ಕು ಕಾಯಿ ತಲುಪಿಸಲು ಅನುಕೂಲವಾಗಿದೆ. ಚಿಕ್ಕು ತೋಟ ದಿಂದ ವರ್ಷಕ್ಕೆ ಎಕರೆಗೆ 40ರಿಂದ 50ಸಾವಿರ ರೂಪಾಯಿ ಆದಾಯ ಗಳಿಸಬಹುದು ಎನ್ನುತ್ತಾರೆ.

ಶೇಂಗಾ ಹೊಲ       
ಇವರು ಮುಂಗಾರಿನಲ್ಲಿ ಭತ್ತ ಬೆಳೆದ ಎರಡೆಕರೆ ಹೊಲದಲ್ಲಿ ಹಿಂಗಾರಿನಲ್ಲಿ ಶೇಂಗಾ ಬಿತ್ತುತ್ತಾರೆ. ಈ ಬೆಳೆ ಬೆಳೆಯಲು ನವೆಂಬರ್ ತಿಂಗಳಿನಲ್ಲಿ ಉಳುಮೆ ಮಾಡಬೇಕು. ಒಮ್ಮೆ ರೆಂಟೆ ಹೊಡೆದು ಒಮ್ಮೆ ಕುಂಟೆ ಹೊಡೆದು ಭೂಮಿಯನ್ನು ಹದಗೊಳಿಸಬೇಕು. ಎಂಟು ದಿನಕ್ಕೊಮ್ಮೆ ಹೊಲಕ್ಕೆ ನೀರು ಹಾಯಿಸಿ ಕಸಕಡ್ಡಿಗಳೆಲ್ಲ ಕಳಿತ ಮೇಲೆ ಡಿಸೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಬೇಕು. (ಈ ಸಮಯದಲ್ಲಿ ಎಕರೆಗೆ ಒಂದು ಚೀಲ ರಾಸಾಯನಿಕ ಗೊಬ್ಬರ, ಒಂದು ಟ್ರಾಕ್ಟರ್ ದಡ್ಡಿಗೊಬ್ಬರ ಹಾಕುತ್ತಾರೆ) ಹನ್ನೆರಡು ದಿನಕ್ಕೆ ಹುಟ್ಟುತ್ತದೆ. ಎಂಟು ದಿನಕ್ಕೊಮ್ಮೆ ನೀರು ಹಾಯಿಸಬೇಕು. ಹದಿನೈದು ದಿನಕ್ಕೊಮ್ಮೆ ಎಡೆಕುಂಟೆ ಹೊಡೆಯಬೇಕು.

ಏಪ್ರಿಲ್ ಕೊನೆಯ ವಾರ ಕೊಯ್ಲಿಗೆ ಬರುತ್ತದೆ. ಕೀಳುವ ಹಿಂದಿನ ದಿನ ಹೊಲಕ್ಕೆ ಚೆನ್ನಾಗಿ ನೀರು ಹಾಯಿಸಬೇಕು. ಕಿತ್ತ ನಂತರ ಎಂಟು ದಿನ ಒಣಹಾಕಿ ಮಾರುತ್ತಾರೆ. ಅಲ್ಪಾವಧಿಯಲ್ಲೇ ಆದಾಯ ತರುವ ಶೇಂಗಾ ಎಕರೆಗೆ ಚೀಲ ಹದಿನೈದರಿಂದ ಹದಿನೇಳು ಕ್ವಿಂಟಾಲ್‌ನಷ್ಟು ಸಿಗುತ್ತದೆ. ಈಗ ಒಂದು ಕ್ವಿಂಟಾಲ್‌ಗೆ 2500ರಿಂದ ನಾಲ್ಕು ಸಾವಿರ ರೂಪಾಯಿಯವರೆಗೆ ಬೆಲೆ ಸಿಗುತ್ತದೆ. ಸದ್ಯಕ್ಕೆ ನೀರಾವರಿ ಹೊಲದಲ್ಲಿ ಶೇಂಗಾದಂತಹ ಬೆಳೆ ಬೆಳೆಯೋದು ತೋಟಕ್ಕಿಂತಲೂ ಹೆಚ್ಚು ಲಾಭ. ಈ ಬೆಳವಣಿಗೆ ಈಗ ಮೂರು ನಾಲ್ಕು ವರ್ಷಗಳಿಂದೀಚಿಗಿನದು ಎನ್ನುವುದು ಹನುಮಂತ ಅವರು ಹೇಳಿದ ಬದಲಾಗುತ್ತಿರುವ ಕೃಷಿ ವರ್ತಮಾನ.      
   
‘ಮುಂಗಾರಿನಲ್ಲಿ ಭತ್ತ, ಗೋವಿನಜೋಳ, ಸೋಯಾ, ಮುಂಗಾರಿನಲ್ಲಿ ತರಕಾರಿ, ಶೇಂಗಾ ಬೆಳೆಯುತ್ತಾರೆ. ವರ್ಷವಿಡೀ ನಮಗೂ ಪುರುಸೊತ್ತಿರಂ ಗಿಲ್ಲ, ನಮ್ಮ ಭೂಮಿಗೂ ಬಿಡುವಿರಂಗಿಲ್ಲ’ ಎನ್ನುವ ಹನುಮಂತ ಅವರು ಹಗಲಿಡೀ ಹೊಲದಲ್ಲಿ ಕೆಲಸ ಮಾಡಿ ಸಂಜೆ ಆರರಿಂದ ಒಂಬತ್ತು ಗಂಟೆಯವರೆಗೆ ಅದೇ ಊರಿನಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಾರೆ. ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಮೂರು ಗಂಟೆಯವರೆಗೆ ನೀರು ಹಾಯಿಸುತ್ತಾರೆ! (ಆ ಸಮಯದಲ್ಲಿ ಮಾತ್ರ ತ್ರೀಫೇಸ್ ಕರೆಂಟು ಆ ಊರಿಗೆ ಲಭ್ಯ).

‘ಸಾಲಾ ಮಾಡದೇ ಜೀವನಾ ಮಾಡತೇವ್ರೀ’ ಎನ್ನುವ ಹನುಮಂತ ಅವರ ಕಾಯಕಕ್ಕೆ ಜೊತೆಯಾಗಿ ದುಡಿಯಲು ಪತ್ನಿ ಲಕ್ಷ್ಮಿಬಾಯಿ, ತಮ್ಮ ಅಶೋಕ ಮತ್ತವನ ಪತ್ನಿ ಅನಸೂಯಾ ಇದ್ದಾರೆ. ಹೊಟ್ಟೆ ತುಂಬಾ ಊಟ ಹಾಕಿದ್ರೆ ಸಾಕ್ರೀ ಮುಂಜಾನೆ ಅಡುಗೆ ಮಾಡಿ ಬುತ್ತಿ ಕಟ್ಟಕೊಂಡು ಬಂದ್ರೆ ಸಂಜಿ ಮಟಾ ದುಡಿತೇವ್ರೀ ಎನ್ನುವ ಲಕ್ಷ್ಮೀಬಾಯಿ, ಅನಸೂಯಾರ ಸಹಕಾರ ಮನೋಭಾವವೂ ಹನುಮಂತ ಅವರ ಕೃಷಿಗೆ ಬೆಂಬಲ. ಕೃಷಿ ಎಂದರೆ ಸೋಲು, ಕೃಷಿಕರೆಂದರೆ ಸಾಲದಲ್ಲಿ ಮುಳುಗಿದ ನಿರಾಶಾವಾದಿಗಳು ಎನ್ನುವ ಸಾಮಾನ್ಯ ವಿಮರ್ಶೆಯನ್ನು ಹನುಮಂತನಂತಹ ಕೃಷಿಕರು ಮೀರಿ ನಿಲ್ಲುತ್ತಾರೆ. ಆಶಾವಾದದ ಪುಟ್ಟ ಜ್ಯೋತಿ ಎನಿಸುತ್ತಾರೆ. ಹನುಮಂತ ದೂರವಾಣಿ ಸಂಖ್ಯೆ: 97434 32230.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT