ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ವರ್ಷ: ಸಾಧನೆ...?

Last Updated 20 ಮೇ 2014, 19:30 IST
ಅಕ್ಷರ ಗಾತ್ರ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ವರ್ಷ ತುಂಬಿದೆ. ‘ಈ ವರ್ಷದ ಅವಧಿಯಲ್ಲಿ ನುಡಿದಂತೆ ನಡೆದಿದ್ದೇವೆ ಎಂಬ ಹೆಮ್ಮೆ ಇದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಸರ್ಕಾರದ ಕಾರ್ಯಶೈಲಿ ಹಾಗೂ ಸಾಧನೆ­ಯನ್ನು ಅವಲೋಕಿಸಿದರೆ ಹೆಮ್ಮೆಪಡುವಂತಹುದೇನೂ ಆಗಿಲ್ಲ ಅಂತ ಅನಿಸುತ್ತದೆ.

ಈ ಸರ್ಕಾರದ ಯೋಜನೆಗಳು ಏನು ಎಂದು ಎಷ್ಟೇ ತಲೆಕೆದರಿ­ಕೊಂಡರೂ ಎರಡೇ ನೆನಪಾಗುತ್ತವೆ. ಒಂದು ‘ಅನ್ನಭಾಗ್ಯ’, ಇನ್ನೊಂದು ‘ಕ್ಷೀರಭಾಗ್ಯ’! ಈ ‘ಜನಪ್ರಿಯ’ ಯೋಜನೆಗಳಿಗೆ ಹೊರತಾದ ದೂರದೃಷ್ಟಿ­ಯುಳ್ಳ ಚಿಂತನೆ ಮತ್ತು ಕಾರ್ಯಕ್ರಮಗಳೇ ಕಾಣಸಿಗುವುದಿಲ್ಲ. ಜನಪ್ರಿಯ ಯೋಜನೆಗಳು ಬೇಕು. ಆದರೆ, ಅವಷ್ಟೇ ಸಾಲದು.

ಕೃಷಿ ಬೆಳವಣಿಗೆಗೆ ಪೂರಕ­ವಾದ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿಗೆ ಮೂಲ ಸೌಕರ್ಯಗಳು ಅಗತ್ಯ. ಕೈಗಾರಿಕಾ ಅಭಿವೃದ್ಧಿ, ಉದ್ಯೋಗ ಅವಕಾಶಗಳ ಸೃಷ್ಟಿಗೆ ಸಂಬಂಧಿಸಿದಂತೆ ಸರ್ಕಾರದ ಚಿಂತನೆ ಏನು? ಈ ಯಾವುದಕ್ಕೂ ನೀಲನಕಾಶೆಯೇ ಸಿದ್ಧಗೊಂಡಂತಿಲ್ಲ. 

ಸರ್ಕಾರ, ಕಾಲ ದೂಡಿಕೊಂಡು ಹೋಗುತ್ತಿದೆಯೇನೊ ಎಂಬ ಅನುಮಾನ ಮೂಡುತ್ತದೆ. ಸಂಪುಟದಲ್ಲಿ ಹೆಚ್ಚಿನವರು ಮಂತ್ರಿಪದವಿಯ ಸುಖ ಲೋಲು­ಪತೆಯಲ್ಲಿ ಮೈಮರೆತಂತಿದೆ. ಅವರು ಕ್ರಿಯಾಶೀಲರಾಗಿ ಕೆಲಸ ಮಾಡು­ವುದು ಕಾಣಿಸುತ್ತಲೂ ಇಲ್ಲ, ಅನುಭವಕ್ಕೂ ಬರುತ್ತಿಲ್ಲ. ಸಚಿವರೇ  ಅದಕ್ಷ­ರಾದರೆ ಅಧಿಕಾರಿಗಳು ಆರಾಮ ಕುರ್ಚಿಯಲ್ಲೇ ತೂಕಡಿಸುತ್ತಾರೆ. ‘ತೂಕಡಿಕೆ’, ಯಾವುದೇ ಸರ್ಕಾರದ ಆಡಳಿತ ವೈಖರಿಗೆ ಸಂಕೇತ ಆಗಬಾರದು. ಅಲ್ಲವೆ?

ರಾಜ್ಯದಲ್ಲಿ ಹಿಂದಿದ್ದ ಬಿಜೆಪಿ ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ಜನತೆ ಕಾಂಗ್ರೆಸ್ಸಿಗೆ ಅವಕಾಶ ನೀಡಿದ್ದಾರೆ. ಈ ಸರ್ಕಾರದ ಬಗ್ಗೆ ಹೆಚ್ಚಿನ ಅಪೇಕ್ಷೆಗಳನ್ನೂ ಇಟ್ಟುಕೊಂಡಿದ್ದಾರೆ. ಆದರೆ ಜನರ ನಿರೀಕ್ಷೆಗೆ ತಕ್ಕಂತೆ ನಡೆಯುವಲ್ಲಿ ಸರ್ಕಾರ ಎಡವಿದೆ. ಲೋಕಸಭಾ ಚುನಾವಣೆಯ ಫಲಿತಾಂಶ­ದಲ್ಲಿ ಅದು ಪ್ರತಿಫಲಿಸಿದೆ ಕೂಡ.

ದೂರದೃಷ್ಟಿಯುಳ್ಳ ಯೋಜನೆಗಳ ಬಗ್ಗೆ ಕಿಂಚಿತ್ತು ಕಾಳಜಿಯೂ ಇಲ್ಲ ಎಂಬಂತಿದೆ ಸರ್ಕಾರದ ನಡೆ. ಭ್ರಷ್ಟಾಚಾರ­ವನ್ನು ಮಟ್ಟ ಹಾಕುವ ದಿಸೆಯಲ್ಲಿ ಒಂದು ಸಣ್ಣ ಪ್ರಯತ್ನ ಕೂಡ ಆಗಿಲ್ಲ. ಇನ್ನು, ತೆರಿಗೆ ಸಂಗ್ರಹ ಮತ್ತು ಅಭಿವೃದ್ಧಿಯಲ್ಲೂ ಎದ್ದು ಕಾಣುವಂಥ ಸಾಧನೆ­ಯೇನೂ ಗೋಚರಿಸುತ್ತಿಲ್ಲ.

ಉಮೇದಿನಲ್ಲಿ ಏನೋ ಒಂದು ಹೇಳುವುದು, ಅದಕ್ಕೆ ವಿರೋಧ ವ್ಯಕ್ತವಾದಾಗ ಹಿಂದಕ್ಕೆ ಸರಿಯುವುದಂತೂ ಈ ಸರ್ಕಾರಕ್ಕೆ ಚಾಳಿಯಂತೆ ಅಂಟಿಕೊಂಡಿದೆ. ದಕ್ಷತೆಗೆ ಹೆಸರಾದವರು ಸಿದ್ದರಾಮಯ್ಯ. ಆದರೆ ಆಡಳಿತದಲ್ಲಿ ಅವರ ಛಾಪು ಕಾಣಿಸುವುದಿಲ್ಲ. ಸರ್ಕಾರಕ್ಕೆ ಒಂದು ಗೊತ್ತು–ಗುರಿ ಇದ್ದಂತೆಯೂ ಅನಿಸುವುದಿಲ್ಲ.
ರಾಜ್ಯವನ್ನು ಅಭಿವೃದ್ಧಿ ಪಥ­ದಲ್ಲಿ ಕೊಂಡೊಯ್ಯಲು ಮುಖ್ಯಮಂತ್ರಿ ಈಗಲಾದರೂ ದೃಢ ಸಂಕಲ್ಪ ಮಾಡಬೇಕು. ಅವರು ಇಚ್ಛಾಶಕ್ತಿ ತೋರಿದರೆ ಆಡಳಿತ ತಾನಾಗಿಯೇ ಚುರುಕು ಪಡೆಯುತ್ತದೆ. ಕಾಲ ತಳ್ಳಿಕೊಂಡು ಹೋಗುವುದೇ ಆದ್ಯತೆ­ಯಾಗು­ವುದು ಬೇಡ. ಅಪ್ರಸ್ತುತ ಮತ್ತು ಕ್ಷುಲ್ಲಕ ವಿಚಾರಗಳ ಕುರಿತು ಹೆಚ್ಚು ಗಮನ ಕೊಡುವುದು ಬಿಟ್ಟು ಅಭಿವೃದ್ಧಿ ಕಾರ್ಯಗಳ ಕಡೆ ದೃಷ್ಟಿ ನೆಡಬೇಕು.

ಆಡಳಿತ­ದಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ತರಲು ದೃಢವಾದ ಹೆಜ್ಜೆ ಇಡ­ಬೇಕು. ಶಿಕ್ಷಣ ಕ್ಷೇತ್ರ ಒಳಗೊಂಡಂತೆ ವಿವಿಧ ರಂಗಗಳಲ್ಲಿ ಗೊಂದಲಗಳು ಇವೆ. ಅವುಗಳನ್ನು ನಿವಾರಿಸಬೇಕು. ನಮ್ಮ ಯೋಗಕ್ಷೇಮ ನೋಡುವ ಸರ್ಕಾರ­ವೊಂದು ಇದೆ ಎನ್ನುವ ಭರವಸೆ ಜನಸಾಮಾನ್ಯರಲ್ಲಿ ಮೂಡುವಂತೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT