ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಹಲ್ಲು ಇರಬೇಕು

ಅಕ್ಷರ ಗಾತ್ರ

ಅದೇನು ಆಗುತ್ತಿದೆಯೋ ಅರ್ಥವಾಗುತ್ತಿಲ್ಲ. ರೈತರು  ಆತ್ಮಹತ್ಯೆ ಮಾಡಿಕೊಂಡ ಸುದ್ದಿ ದಿನವೂ ಬರುತ್ತಿದೆ. ರಾಜಕಾರಣಿಗಳು ಚೆಲ್ಲಾಟ ಆಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು, ‘ಬಾಕಿ ಸಂದಾಯ ಮಾಡಲು ಇನ್ನೂ ಸಮಯ ಬೇಕು’ ಎನ್ನುತ್ತಿದ್ದಾರೆ. ಕೆಲವರಂತೂ ‘ನಾವು ಕಾರ್ಖಾನೆ ನಡೆಸುತ್ತಿರುವುದು ನಷ್ಟ ಮಾಡಿಕೊಳ್ಳಲಿಕ್ಕಲ್ಲ’ ಎನ್ನುತ್ತಿದ್ದಾರೆ. ಅದು ವ್ಯಾಪಾರವೆಂದಾದ ಮೇಲೆ ಲಾಭ– ನಷ್ಟಗಳೆರಡಕ್ಕೂ ಸಿದ್ಧರಿರಬೇಕಲ್ಲವೆ?

ಇಷ್ಟಕ್ಕೂ ಯಾವ ಕಾರ್ಖಾನೆಯು ಆಡಳಿತ– ದುರಾಡಳಿತ ಕಾರಣದ ಹೊರತು ದಿವಾಳಿ ಎದ್ದಿದೆ? ರೈತರದ್ದೇ 2013ರ ಬಾಕಿಯನ್ನು ಉಳಿಸಿಕೊಂಡು ಈಗ ಸಕ್ಕರೆಯ ಬೆಲೆ ಬಿದ್ದಿದೆ ಅಂತ ಬೊಬ್ಬಿಟ್ಟರೆ ಹೇಗೆ? ಬೆಲೆ ಜಾಸ್ತಿ ಇದ್ದಾಗಲೇ ಬಾಕಿ ಕೊಡಬೇಕಿತ್ತು. ಆ ಹಣವನ್ನೇ ದುಡಿಸಿಕೊಂಡು ಸಕ್ಕರೆ ದಾಸ್ತಾನು ಮಾಡಿ, ಇದುವರೆಗೂ ಲಾಭ ಮಾಡಿಕೊಂಡಿಲ್ಲವೇ? ಇದೂ ಸಾಲದೆಂಬಂತೆ ಉಪ ಉತ್ಪನ್ನಗಳೂ ಲಾಭ ತಂದುಕೊಡುತ್ತಿವೆ.

ಇನ್ನೂ ಸಮಯಾವಕಾಶ ಕೊಟ್ಟರೆ ಸರ್ಕಾರದ ನಡೆಯ ಬಗ್ಗೆ, ಅದರ ತಾಕತ್ತಿನ ಬಗ್ಗೆ ಸಂಶಯ ಮೂಡುತ್ತದೆ.  ಸರ್ಕಾರಕ್ಕೆ ಹಲ್ಲು, ಉಗುರು ಇರಬೇಕು. ಸಮಯ ಬಂದಾಗ ಅದನ್ನು ಬಳಸಲೂಬೇಕು. ಈಗ ನಿಜಕ್ಕೂ ಅಂತಹ ಸಮಯ ಬಂದಿದೆ. ಹೊಸ ಬಾಕಿ ಕಥೆ ಇರಲಿ, ಹಳೇ ಬಾಕಿಯನ್ನೂ ಕೊಡಲು ಹಿಂದೇಟು ಹಾಕುತ್ತಿರುವ ಕಾರ್ಖಾನೆ ಮಾಲೀಕರನ್ನು ಬಿಟ್ಟುಬಿಡಬೇಕೇ?

ಬರೀ ಸಕ್ಕರೆ ಜಪ್ತಿ ಮಾಡಿ, ಕಣ್ಣು ಮುಚ್ಚಿ ಕುಳಿತರೆ ರೈತರಿಗೆ ಅದರಿಂದ ಏನೂ ಕೊಟ್ಟಂತಾಗುವುದಿಲ್ಲ. ಅಲ್ಲದೇ ಬೇಲೆಕೇರಿ ಬಂದರಿನಿಂದ ಅದಿರು ಮಾಯವಾದಂತೆ ಈ ಸಕ್ಕರೆಯೂ ಮಾಯವಾಗಬಹುದು. ಒಟ್ಟಿನಲ್ಲಿ ಜನ ಗಮನಿಸುತ್ತಿದ್ದಾರೆ. ಸರ್ಕಾರದ ಪ್ರಾಮಾಣಿಕತೆ ಈಗ ಪರೀಕ್ಷೆಗೊಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT