ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದಲೇ ತರಬೇತಿ ವ್ಯವಸ್ಥೆ: ತನ್ವೀರ್‌

Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಖಾಸಗಿ ಟ್ಯೂಷನ್‌ಗಳ ಹಾವಳಿ ತಪ್ಪಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪೂರೈಸಲು  ಅದೇ  ಮಾದರಿಯಲ್ಲಿ ಸರ್ಕಾರಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಬುಧವಾರ ಹಮ್ಮಿಕೊಂಡಿದ್ದ ‘ರಾಜ್ಯ ಮಟ್ಟದ ಶೈಕ್ಷಣಿಕ ಚಿಂತನೆ ಹಾಗೂ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮಲ್ಲಿನ ಶಿಕ್ಷಕರನ್ನು ಬಳಕೆ ಮಾಡಿಕೊಂಡು, ಅವರಿಗೆ ಗೌರವಧನ ನೀಡಿ ತರಬೇತಿ ಕೇಂದ್ರಗಳನ್ನು ತೆರೆಯುವ ಆಲೋಚನೆ ಇದೆ. ಮೊದಲ ಹಂತವಾಗಿ ಹತ್ತನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ಈ ವ್ಯವಸ್ಥೆ ಮಾಡಲಾಗುತ್ತದೆ. ನಂತರದಲ್ಲಿ ಪ್ರತಿ ವರ್ಷ ಒಂದೊಂದು ವರ್ಗವನ್ನು ಅದಕ್ಕೆ ಸೇರಿಸಲಾಗುವುದು’ ಎಂದು ಅವರು ಹೇಳಿದರು.

‘ಶಿಕ್ಷಣ ಕ್ಷೇತ್ರಕ್ಕೆ 21ನೇ ಶತಮಾನದ ಪರಿಚಯ ಮಾಡಿಕೊಡಲು ಏನೆಲ್ಲಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಿದೆ ಎಲ್ಲವನ್ನೂ ಮಾಡಲು ಸಿದ್ಧನಿದ್ದೇನೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಸುಮಾರು 4,790 ಸರ್ಕಾರಿ ಅನುದಾನಿತ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳಿವೆ. ಹತ್ತು ವರ್ಷಗಳಿಂದ ಸರ್ಕಾರದಿಂದ ಯಾವುದೇ ಹೊಸ ಕಾಲೇಜು ಪ್ರಾರಂಭಿಸಿಲ್ಲ.

ಆದರೂ 9 ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. 50 ಕಾಲೇಜುಗಳಲ್ಲಿ 10 ರಿಂದ 15 ವಿದ್ಯಾರ್ಥಿಗಳಷ್ಟೆ ದಾಖಲಾಗಿದ್ದಾರೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ  ತಿಳಿಯಲು ಸಮೀಕ್ಷೆಗೆ ಆದೇಶಿಸಲಾಗಿದೆ’ ಎಂದು ಅವರು ಹೇಳಿದರು.

‘ಪರೀಕ್ಷಾ ಮಂಡಳಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಏನು ಪ್ರಯೋಜವಾಗುತ್ತಿಲ್ಲ. ರಾಜ್ಯ ಎಲ್ಲಾ ಇಲಾಖೆಗಳ ನೇಮಕಾತಿಗಾಗಿಯೇ 9 ತಿಂಗಳು ಮಂಡಳಿ ಕಾರ್ಯನಿರ್ವಹಿ ಸುತ್ತದೆ. ಅದನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದರು.

‘ಪ್ರಾಚಾರ್ಯ ಸಂಘದ ಬೇಡಿಕೆಯಂತೆ ಡಿಸಿಆರ್‌ಟಿ ಮತ್ತು ಎನ್‌ಸಿಆರ್‌ಟಿ ರೀತಿಯಲ್ಲಿ ‘ಪಿಯು ಶಿಕ್ಷಣ ಮತ್ತು ಸಂಶೋಧನ ಕೇಂದ್ರ’ ಪ್ರಾರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಕಲಾ ವಿಭಾಗದಲ್ಲಿ ದಾಖಲಾತಿ ಮತ್ತು ಫಲಿತಾಂಶ ಕಡಿಮೆಯಾಗುತ್ತಿರುವುದಕ್ಕೆ ಶಿಕ್ಷಣ ಪದ್ಧತಿಯಲ್ಲಿನ ತಾರತಮ್ಯವೇ ಕಾರಣ. ಮೂಲ ವಿಜ್ಞಾನವನ್ನು ಓದುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಎಲ್ಲರೂ ವೃತ್ತಿಪರ ಶಿಕ್ಷಣದತ್ತ ಮುಖ ಮಾಡುತ್ತಿದ್ದಾರೆ.

ವಾಣಿಜ್ಯಮುಖಿಯಾಗುತ್ತಿರುವ ಶಿಕ್ಷಣ ಕ್ಷೇತ್ರವನ್ನು ಜ್ಞಾನಮುಖಿಯಾಗಿಯೂ ಮತ್ತು ಉದ್ಯೋಗಮುಖಿಯಾಗಿಯೂ ರೂಪಿಸಬೇಕಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಗುರುಗಳ ಕರ್ತವ್ಯ. ಹದಿಹರೆಯದ ಮಕ್ಕಳ ಮನಸ್ಸುಗಳನ್ನು ಅರ್ಥ ಮಾಡಿಕೊಂಡು. ಆ ಹಂತದಲ್ಲಿ ಅವರ ಮನಸ್ಸಿನಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಬೇಕು’ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ ಅವರು  ಸಂಘದ ಪರವಾದ ಬೇಡಿಕೆಗಳನ್ನು ಮಂಡಿಸಿದರು.

ಹುದ್ದೆಗಳ ಭರ್ತಿ
ಖಾಲಿಯಿರುವ 392 ಪ್ರಿನ್ಸಿಪಾಲ್‌ ಹುದ್ದೆಗಳಲ್ಲಿ, ಬಡ್ತಿ ನೀಡುವ ಮೂಲಕ 375 ಮತ್ತು 17 ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಹಾಗೆಯೇ ಕಾಲೇಜುಗಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಚಿವ ತನ್ವೀರ್‌ ಸೇಠ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT