ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಗಡುವು ಹತ್ತಿರ, ಮೆಟ್ರೊ ಕೆಲಸ ದೂರ

42 ಕಿ.ಮೀ. ಉದ್ದದ ಮೊದಲನೇ ಹಂತ: ಕನ್ನಡ ರಾಜ್ಯೋತ್ಸವದ ಕೊಡುಗೆ ಅನುಮಾನ
Last Updated 24 ಜೂನ್ 2016, 20:36 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ದ ಮೊದಲನೇ ಹಂತದ 42.3 ಕಿ.ಮೀ. ಉದ್ದದ ಮಾರ್ಗದಲ್ಲಿ ನವೆಂಬರ್‌ 1ರಿಂದ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಹತ್ತಾರು ಬಾರಿ ಹೇಳಿದ್ದಾರೆ. ಈ ಗಡುವಿನ ಒಳಗೆ ಕಾರ್ಯಾಚರಣೆ ಆರಂಭವಾಗುವುದು ಬಹುತೇಕ ಅನುಮಾನ.

ಮೊದಲನೇ ಹಂತವನ್ನು 2013ರಲ್ಲಿ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರ ಗಡುವು ನೀಡಿತ್ತು. ಸುರಂಗ ಕಾಮಗಾರಿಗಳಲ್ಲಿನ ವಿಳಂಬದಿಂದಾಗಿ ಗಡುವು ಪದೇ ಪದೇ ವಿಸ್ತರಣೆಯಾಗುತ್ತಾ ಬಂದಿತ್ತು. 2015ರ ಸೆಪ್ಟೆಂಬರ್‌ನಲ್ಲಿ ಮೊದಲನೇ ಹಂತ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ  ರಾಮಲಿಂಗಾ ರೆಡ್ಡಿ 2015ರ ಆರಂಭದಲ್ಲಿ ಪ್ರಕಟಿಸಿದ್ದರು. ಆ ಗಡುವಿಗೆ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆಯ ಪ್ರವೇಶದ್ವಾರದವರೆಗಿನಸುರಂಗ ಕಾಮಗಾರಿ ಪೂರ್ಣಗೊಂಡಿತ್ತು ಅಷ್ಟೇ. 

ಸುರಂಗ ಮಾರ್ಗದಲ್ಲಿ 2016ರ ಜನವರಿಯಲ್ಲಿ ಸಂಚಾರ  ಶುರುವಾಗಲಿದೆ ಎಂದು ನಿಗಮ ಘೋಷಿಸಿತ್ತು. ಗಡುವು ಮಾರ್ಚ್‌ಗೆ ವಿಸ್ತರಣೆಯಾಗಿತ್ತು. ಕೊನೆಗೆ ಸಂಚಾರ ಆರಂಭವಾಗಿದ್ದು ಏಪ್ರಿಲ್‌ ಅಂತ್ಯದಲ್ಲಿ. ‘ಮೊದಲನೇ ಹಂತವನ್ನು ರಾಜ್ಯೋತ್ಸವದ ಉಡುಗೊರೆಯಾಗಿ ನಗರದ ಜನತೆಗೆ ನೀಡಲಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಜೆ.ಜಾರ್ಜ್‌ ಸುರಂಗ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಕಟಿಸಿದ್ದರು. ಆ ಬಳಿಕ ಜಾರ್ಜ್‌ ಅವರು ಈ ವಿಷಯವನ್ನು ಪದೇ ಪದೇ ಹೇಳುತ್ತಲೇ ಇದ್ದಾರೆ. ಈಗಿನ ಕಾಮಗಾರಿ ವೇಗಗಳನ್ನು ಗಮನಿಸಿದರೆ ನವೆಂಬರ್‌ 1ರೊಳಗೆ ಪೂರ್ಣ ಸಂಚಾರ ಕಷ್ಟ. ಇದನ್ನು ಮೆಟ್ರೊ ನಿಗಮದ ಅಧಿಕಾರಿಗಳೇ ಒಪ್ಪುತ್ತಾರೆ.

ವಿಳಂಬ ಏಕೆ: ಪೂರ್ವ–ಪಶ್ಚಿಮ ಕಾರಿಡಾರ್‌ನ (ಬೈಯಪ್ಪನಹಳ್ಳಿ–ನಾಯಂಡಹಳ್ಳಿ) 18.10 ಕಿ.ಮೀ. ಉದ್ದದ ಮಾರ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭವಾಗಿದೆ. ಸಮಸ್ಯೆ ಇರುವುದು ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ. ಈ ಕಾರಿಡಾರ್‌ನ ಸಂಪಿಗೆ ರಸ್ತೆ–ನಾಗಸಂದ್ರ ನಡುವಿನ ಮಾರ್ಗದಲ್ಲಿ ಒಂದೂವರೆ ವರ್ಷದಿಂದ ರೈಲು ಓಡಾಡುತ್ತಿದೆ.

ಸುರಂಗ ಕೊರೆಯುವ ಯಂತ್ರದಲ್ಲಿನ  (ಟಿಬಿಎಂ) ದೋಷದಿಂದಾಗಿ ಸಂಪಿಗೆ ರಸ್ತೆ– ಮೆಜೆಸ್ಟಿಕ್‌ ನಡುವಿನ ಸುರಂಗ ಕಾಮಗಾರಿ ವಿಳಂಬವಾಗಿತ್ತು. 4 ತಿಂಗಳ ಹಿಂದೆ ‘ಮಾರ್ಗರೀಟಾ’ ಟಿಬಿಎಂ  ಸುರಂಗದಿಂದ ಹೊರಬಂದಿತ್ತು. ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ ನಡುವೆ ಸಮಾನಾಂತರವಾಗಿ ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಗೋದಾವರಿ ಯಂತ್ರ ಏಪ್ರಿಲ್‌ನಲ್ಲಿ ಕಾರ್ಯ ಪೂರ್ಣಗೊಳಿಸಿತ್ತು.

ಸಂಪಿಗೆ ರಸ್ತೆ–ಮೆಜೆಸ್ಟಿಕ್‌ ಜೋಡಣೆ: 1 ಕಿ.ಮೀ. ಉದ್ದದ ಸುರಂಗ ಮಾರ್ಗದಲ್ಲಿ ಕಾಂಕ್ರೀಟ್‌ ಹಾಸು ನಿರ್ಮಾಣ, ಹಳಿಗಳನ್ನು ಅಳವಡಿಕೆ, ಕೇಬಲ್್ ಜೋಡಣೆ ಹಾಗೂ  ಇತರ ಕಾಮಗಾರಿಗಳು ಈಗಾಗಲೇ ಶುರುವಾಗಿವೆ. ಈ ಕೆಲಸಗಳು ಪೂರ್ಣಗೊಳ್ಳಲು ಎರಡು ತಿಂಗಳು ಬೇಕು. ಬಳಿಕ ಎರಡು ತಿಂಗಳು ಪ್ರಾಯೋಗಿಕ ಸಂಚಾರ ನಡೆಯಲಿದೆ. ಅದಾದ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಬೇಕಿದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಣಿಜ್ಯ ಸಂಚಾರಕ್ಕೆ ದಿನ ನಿಗದಿಯಾಗುವುದು. ಗಣ್ಯರ ಲಭ್ಯತೆ, ಉದ್ಘಾಟನೆಗೆ ಸಿದ್ಧತಾ ಕಾರ್ಯಕ್ಕೆ ಮತ್ತೆ ಕನಿಷ್ಠ 15–20 ದಿನ ಬೇಕಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಭಾಗದಲ್ಲಿ ಅಕ್ಟೋಬರ್‌ನಲ್ಲಿ ಸಂಚಾರ ಆರಂಭವಾಗಬಹುದು.

ಸೆಪ್ಟೆಂಬರ್‌ಗೆ ಪ್ರಾಯೋಗಿಕ ಸಂಚಾರ: ಪುಟ್ಟೇನಹಳ್ಳಿ– ನ್ಯಾಷನಲ್‌ ಕಾಲೇಜು ನಡುವೆ ಸೆಪ್ಟೆಂಬರ್‌ 15ರಂದು ಪ್ರಾಯೋಗಿಕ ಸಂಚಾರ ಆರಂಭಿಸಲು ನಿಗಮ ಸಿದ್ಧತೆ ಮಾಡಿಕೊಂಡಿದೆ. ‘ಇಲ್ಲಿ ಸಂಚಾರ ಆರಂಭಿಸಲು ಪೀಣ್ಯ ಡಿಪೋದಿಂದ ರೈಲು ಬೋಗಿಗಳನ್ನು ಸಾಗಿಸಬೇಕಾಗುತ್ತದೆ. ಸಂಪಿಗೆ ರಸ್ತೆಯಿಂದ   ಚಿಕ್ಕಪೇಟೆ, ಕೆ.ಆರ್‌.ಮಾರುಕಟ್ಟೆ–ನ್ಯಾಷನಲ್‌ ಕಾಲೇಜಿನವರೆಗಿನ ಹಳಿ ನಿರ್ಮಾಣವಾಗದೆ ಬೋಗಿಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಹಾಗಾಗಿ ಪ್ರಾಯೋಗಿಕ ಸಂಚಾರ ಆರಂಭಿಸುವುದಕ್ಕೆ ಸೆಪ್ಟೆಂಬರ್‌ವರೆಗೆ ಕಾಯುವುದು ಅನಿವಾರ್ಯ’ ಎಂದು ನಿಗಮದ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.


ಕೃಷ್ಣ ಇನ್ನಷ್ಟೇ ಹೊರಬರಬೇಕಿದೆ: ಚಿಕ್ಕಪೇಟೆ–ಮೆಜೆಸ್ಟಿಕ್‌ ನಡುವೆ ಮೂರುವರೆ ವರ್ಷಗಳ ಹಿಂದೆ ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ‘ಕಾವೇರಿ’ ಟಿಬಿಎಂ 10 ದಿನಗಳ ಹಿಂದೆ ಕೆಲಸ ಪೂರ್ಣಗೊಳಿಸಿತ್ತು. ಅದೇ ಮಾರ್ಗದಲ್ಲಿ ಸಮಾನಾಂತರವಾಗಿ ಕೆಲಸ ಮಾಡುತ್ತಿರುವ ‘ಕೃಷ್ಣ’ ಟಿಬಿಎಂ ಇನ್ನೂ ಕೆಲಸ ಪೂರ್ಣಗೊಳಿಸಿಲ್ಲ. ಅದು ಆಗಸ್ಟ್‌ನಲ್ಲಿ ಸುರಂಗದಿಂದ ಹೊರ ಬರಲಿದೆ ಎಂದು ಅಂದಾಜಿಸಲಾಗಿದೆ. ಬಳಿಕ ವಾಣಿಜ್ಯ ಸಂಚಾರ ಆರಂಭವಾಗಲು ಕನಿಷ್ಠ 4–5 ತಿಂಗಳಾದರೂ ಬೇಕು. ಅಂದರೆ 2017ರ  ವರೆಗೂ ಪ್ರಯಾಣಿಕರು ಕಾಯಬೇಕು.

‘ನಗರದಲ್ಲಿ ಗರಿಷ್ಠ ದಾಖಲೆ ಎಂದರೆ ದಿನಕ್ಕೆ 18 ಮೀಟರ್‌ ಸುರಂಗ ಕೊರೆ­ದಿ­ರು­ವುದು. ನಗರದ ನೆಲದೊಳಗೆ ಕಲ್ಲು, ಮಣ್ಣು ಮಿಶ್ರಿತ ಸಂರಚನೆಯೇ ಹೆಚ್ಚಾ­ಗಿದೆ. ಕಲ್ಲು ಅಥವಾ ಮಣ್ಣು–ಎರಡರಲ್ಲಿ ಯಾವುದೇ ಒಂದು ಮಾತ್ರ ಇದ್ದರೆ ಯಂತ್ರಕ್ಕೆ ಕೊರೆ­ಯುವ ಕಾರ್ಯ ಸುಲಭ. ಕಲ್ಲು ಮಾತ್ರ ಇದ್ದರೆ ಅದಕ್ಕೆ ತಕ್ಕಂತೆ ಯಂತ್ರ­ವನ್ನು ಸಿದ್ಧಗೊಳಿಸಿ ಚಾಲೂ ಮಾಡಿ­ದರೆ ನಿರೀಕ್ಷಿತ ವೇಗ­ದಲ್ಲಿ ಕೊರೆ­ಯುತ್ತಾ ಸಾಗು­ತ್ತದೆ. ಅನಿ­­ರೀ­ಕ್ಷಿತವಾಗಿ ಮಣ್ಣು ಸಿಕ್ಕರೆ ಯಂತ್ರ ತನ್ನ ಕಾರ್ಯ­ವನ್ನು ಸ್ಥಗಿತ­ಗೊಳಿ­ಸುತ್ತದೆ. ಹೀಗಾಗಿ ಸುರಂಗ ಕೊರೆಯುವ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿಲ್ಲ’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

‘ಯುಎಇಯಲ್ಲಿ 44 ಕಿ.ಮೀ. ಉದ್ದದ ಮೆಟ್ರೊ ಮಾರ್ಗವನ್ನು ಒಂದೂವರೆ ವರ್ಷಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಬೆಂಗಳೂರಿನಲ್ಲಿ ಸುರಂಗ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇಲ್ಲಿ ದಿನಕ್ಕೆ 3–4 ಮೀಟರ್‌ ಸುರಂಗವನ್ನೂ ಕೊರೆಯುವುದಿಲ್ಲ. ಮೆಟ್ರೊ ನಿಗಮಕ್ಕೆ ರಾಜ್ಯ ಸರ್ಕಾರ ಪದೇ ಪದೇ ಗಡುವುಗಳನ್ನು ನೀಡುತ್ತಿದೆ. ಯಾವ ಕಾಮಗಾರಿಯೂ ಗಡುವಿನ ಒಳಗೆ ಪೂರ್ಣಗೊಂಡಿಲ್ಲ. ನಿಗಮ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ’ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ಮಾರ್ಚ್‌ ಅಂತ್ಯಕ್ಕೆ ಮೊದಲ ಹಂತ ಪೂರ್ಣಗೊಳ್ಳಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.
*
ಗಡುವು ಮುಟ್ಟಲು ಹರಸಾಹಸ
ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ನವೆಂಬರ್‌ ಗಡುವನ್ನು ಮುಟ್ಟಲು ನಿಗಮ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದೆ. ಮೆಜೆಸ್ಟಿಕ್‌ ಇಂಟರ್‌ಚೇಂಜ್‌ ನಿಲ್ದಾಣಕ್ಕೆ ಸಂಪರ್ಕಿಸುವ ನಾಲ್ಕು ಸುರಂಗಗಳ ಸಿವಿಲ್‌ ಕಾಮಗಾರಿಗಳು ಬಾಕಿ ಇವೆ. ಇದಕ್ಕಾಗಿ ಸಾವಿರ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆರು ತಿಂಗಳಲ್ಲಿ ಮೊದಲ ಹಂತದಲ್ಲಿ ಪೂರ್ಣ ಸಂಚಾರ ಆರಂಭವಾಗಲಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಕೃಷ್ಣ ಮೆಜೆಸ್ಟಿಕ್‌ನಿಂದ 140 ಮೀಟರ್‌ನಷ್ಟು ಹಿಂದೆ ಇದೆ. ಇದು ಕಳೆದ ತಿಂಗಳು 85 ಮೀಟರ್‌ನಷ್ಟು ಸುರಂಗವನ್ನು ಕೊರೆದಿದೆ. ಟಿಬಿಎಂ ಯಂತ್ರ ಜಾಗರೂಕತೆಯಿಂದ ಕೆಲಸ ಮಾಡುತ್ತಿದೆ. ಗಟ್ಟಿ ಕಲ್ಲುಗಳು ಸಿಗುತ್ತಿವೆ. ಇನ್ನೂ 20 ಮೀಟರ್‌ ಕೊರೆದ ಬಳಿಕ ಮೆದು ಮಣ್ಣು ಸಿಗಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT