ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ನಿಯಮಗಳಲ್ಲಿ ಸೇರಿಲ್ಲ ಮಾಹಿತಿ ಹಕ್ಕು ಕಾಯ್ದೆ

Last Updated 29 ಏಪ್ರಿಲ್ 2016, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಗೆ ಬಂದು 11 ವರ್ಷಗಳೇ ಕಳೆದಿವೆ. ಅಚ್ಚರಿ ಎಂದರೇ, ಈಗಲೂ ಈ ಕಾಯ್ದೆಯಾಗಲಿ,  ಕರ್ನಾಟಕ ಮಾಹಿತಿ ಆಯೋಗದ ಚಟುವಟಿಕೆಯಾಗಲಿ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು– 1977ರ ಅನುಸೂಚಿ (ಶೆಡ್ಯೂಲ್‌)–2ರ ಅಡಿ ಸೇರ್ಪಡೆಯೇ ಆಗಿಲ್ಲ.

ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು– 1977ರ ಅನುಸೂಚಿ 2– ಬಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಜನಸ್ಪಂದನ)   ಅಡಿ ಕರ್ನಾಟಕ ಮಾಹಿತಿ ಹಕ್ಕು ಕಾಯ್ದೆ  2005ರ ಬದಲು ಈಗಲೂ ರದ್ದುಗೊಂಡಿರುವ ‘ಕರ್ನಾಟಕ ಮಾಹಿತಿ ಹಕ್ಕು ಕಾಯ್ದೆ-2000’ ಹೆಸರು ಇದೆ.

ಈ ಲೋಪವನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರೈಟ್‌ ಟು ಇನ್‌ಫರ್ಮೇಷನ್‌ ಫೆಡರೇಷನ್‌ನ ಕಾರ್ಯದರ್ಶಿ ಜಿ.ವಿನ್ಸೆಂಟ್‌ ಅವರು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎಲ್‌. ಕೃಷ್ಣಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ.

ಕಾಯ್ದೆ ಅಧಿಕೃತವಾಗಿ ಅಸ್ತಿತ್ವದಲ್ಲಿಲ್ಲ:  ‘ಹೊಸ ಕಾಯ್ದೆ ಬಂದಾಗ ಡಿಪಿಎಆರ್‌ನ ಸೇವಾನಿಯಮಗಳ ವಿಭಾಗ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮ ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕಿತ್ತು. ಇದು ಗಂಭೀರ ಲೋಪ. 2005ರ ಮಾಹಿತಿ ಹಕ್ಕು ಕಾಯ್ದೆ, ಕರ್ನಾಟಕ ಮಾಹಿತಿ ಆಯೋಗ ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದೂ ಅರ್ಥೈಸಬಹುದು’ ಎಂದು ವಿನ್ಸೆಂಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಕಾಲದಲ್ಲಿ ಮಾಹಿತಿ ನೀಡದ ಕಾರಣಕ್ಕೆ ದಂಡನೆಗೆ ಗುರಿಯಾದ ಅಧಿಕಾರಿಗಳು ಈ ಲೋಪ ಬಳಸಿ ಕಾನೂನು ಸಮರ ನಡೆಸಲು ಅವಕಾಶವಿದೆ. ಈ  ಬಗ್ಗೆ 2014ರಲ್ಲೂ  ಡಿಪಿಎಆರ್‌ (ಜನಸ್ಪಂದನ) ವಿಭಾಗಕ್ಕೆ  ಪತ್ರ ಬರೆದಿದ್ದೆ. ಇನ್ನೂ ಲೋಪವನ್ನು ಸರಿಪಡಿಸಿಲ್ಲ.

ಹಾಗಾಗಿ ಮುಖ್ಯ ಮಾಹಿತಿ ಆಯುಕ್ತರಿಗೆ ಪತ್ರ ಬರೆದಿದ್ದೇನೆ’ ಎಂದರು. ವಿನ್ಸೆಂಟ್‌ ಅವರ ಪತ್ರವನ್ನು ಉಲ್ಲೇಖಿಸಿ ಮುಖ್ಯ ಮಾಹಿತಿ ಆಯುಕ್ತರು ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರಿಗೆ ಏಪ್ರಿಲ್‌ 26ರಂದು ವಿವರವಾದ ಪತ್ರ ಬರೆದಿದ್ದಾರೆ.

ತಿದ್ದುಪಡಿಯಿಂದ ಆಯೋಗಕ್ಕೆ ಇನ್ನಷ್ಟು ಬಲ: ಕೃಷ್ಣಮೂರ್ತಿ
‘ಹೊಸ ಕಾಯ್ದೆ ಜಾರಿಯಾದ ಬಳಿಕ ಸರ್ಕಾರದ ಕೆಲಸಗಳ ಹಂಚಿಕೆ  ನಿಯಮಗಳಲ್ಲಿ ತಿದ್ದುಪಡಿ ಮಾಡದೇ ಇರುವುದು  ಸರಿಯಲ್ಲ. ಆದರೆ, ಇದರಿಂದ ಆಯೋಗದ  ಕಾರ್ಯ ನಿರ್ವಹಣೆಗೆ ಅಡ್ಡಿ ಇಲ್ಲ. ಸೂಕ್ತ ತಿದ್ದುಪಡಿ ಮಾಡಿದರೆ,  ಕಾಯ್ದೆಗೆ ಹಾಗೂ ಆಯೋಗಕ್ಕೆ ಇನ್ನಷ್ಟು

ಶಕ್ತಿ ಬರುತ್ತದೆ. ವಿಧಾನ ಮಂಡಲದಲ್ಲಿ ಮಾಹಿತಿ ಹಕ್ಕು ಕುರಿತು ಚರ್ಚೆಗಳು ನಡೆಯುವುದಕ್ಕೂ ಇದು ಪೂರಕ’ ಎಂದು ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT