ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ನಿರ್ಧಾರಕ್ಕೆ ಹೊರಟ್ಟಿ ತೀವ್ರ ಆಕ್ಷೇಪ

ನಕಲಿ ಸಿ.ಡಿ. ಪ್ರಕರಣ ಹಿಂಪಡೆದ ಕ್ರಮ: ಪೊಲೀಸರನ್ನು ಅಧೀರರನ್ನಾಗಿಸುವಿರಾ?
Last Updated 25 ನವೆಂಬರ್ 2015, 20:29 IST
ಅಕ್ಷರ ಗಾತ್ರ

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ಹೋಲುವ ವ್ಯಕ್ತಿಯೊಬ್ಬರನ್ನು ಬಳಸಿ ಅಶ್ಲೀಲ ದೃಶ್ಯಗಳಿರುವ ಸಿ.ಡಿ ಸಿದ್ಧಪಡಿಸಿದವರ ವಿರುದ್ಧ ಪ್ರಕರಣ ಕೈಬಿಡಲು ಸರ್ಕಾರ ತೀರ್ಮಾನಿಸಿದ್ದು ಏಕೆ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ವಿಧಾನ ಪರಿಷತ್ತಿನಲ್ಲಿ ಬುಧವಾರ ಪ್ರಶ್ನಿಸಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಕುಸಿದಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ‘ನಕಲಿ ಸಿ.ಡಿ. ಸಿದ್ಧಪಡಿಸಿದವರ ವಿರುದ್ಧದ ಪ್ರಕರಣ ಹಿಂಪಡೆಯುವುದರಿಂದ ಪೊಲೀಸರನ್ನು ಅಧೀರರನ್ನಾಗಿಸಿದಂತೆ ಆಗುವುದಿಲ್ಲವೇ? ಪ್ರಕರಣ ಹಿಂಪಡೆಯಲು ಸರ್ಕಾರಕ್ಕೆ ಏಕೆ ಆಸಕ್ತಿ?’ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ನ್ಯಾಯಾಲಯದ ಆದೇಶ ಬರುವವರೆಗೆ ಸರ್ಕಾರ ಕಾಯಬೇಕಿತ್ತು ಎಂದು ಹೊರಟ್ಟಿ ಹೇಳಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ‘ಅಶ್ಲೀಲ ದೃಶ್ಯಾವಳಿ ಇರುವ ಸಿ.ಡಿ ಸಿದ್ಧಪಡಿಸಿದವರ ಪರವಾಗಿ ಈ ಸರ್ಕಾರ ಇದೆಯೇ? ಯಾರನ್ನು ರಕ್ಷಿಸಲು ಪ್ರಕರಣ ವಾಪಸ್‌ ಪಡೆಯಲಾಗಿದೆ. ಈ ಸಿ.ಡಿ ಸಾಚಾ ಎಂದು ಮುಂದೊಂದು ದಿನ ಹೇಳುವ ಇರಾದೆ ಸರ್ಕಾರಕ್ಕಿದೆಯೇ?’ ಎಂದು ಪ್ರಶ್ನಿಸಿದರು.

‘ಈ ಸಿ.ಡಿಯಲ್ಲಿ ಇರುವ ದೃಶ್ಯಾವಳಿ ನಕಲಿಯಲ್ಲ ಎಂದು ಹೇಳಿ ರಾಘವೇಶ್ವರ ಶ್ರೀಗಳ ವಿರುದ್ಧ ಇನ್ನೊಂದು ಪ್ರಕರಣ ದಾಖಲಿಸುವ ಪಾಪದ ಕೆಲಸವನ್ನು ಸರ್ಕಾರ ಮಾಡಬಾರದು’ ಎಂದು ಈಶ್ವರಪ್ಪ ಎಚ್ಚರಿಸಿದರು.
*
ಪ್ರಕರಣ ಹಿಂಪಡೆದಿರುವುದರ  ಹಿಂದೆ ಯಾವುದೋ ಪ್ರಭಾವ ಕೆಲಸ ಮಾಡಿರುವಂತಿದೆ. ತಪ್ಪೆಸಗಿದವರಿಗೆ ನ್ಯಾಯಾಲಯವೇ ಛೀಮಾರಿ ಹಾಕಬೇಕು.
- ಬಸವರಾಜ ಹೊರಟ್ಟಿ

*
ಶ್ರೀಗಳ ವಿರುದ್ಧ ಷಡ್ಯಂತ್ರದಲ್ಲಿ ಸರ್ಕಾರ ನೇರ ಭಾಗಿ: ಆರೋಪ
ಬೆಂಗಳೂರು:
‘ನಕಲಿ ಅಶ್ಲೀಲ ಸಿ.ಡಿ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಮೂಲಕ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದಲ್ಲಿ ಸರ್ಕಾರ ನೇರವಾಗಿ ಭಾಗಿಯಾಗಿದೆ’ ಎಂದು ಸಮಾಜ ಸಮಷ್ಟಿ ವೇದಿಕೆ ಮುಖಂಡರು ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಸಂಚಾಲಕ ಲಕ್ಷ್ಮೀನಾರಾಯಣ, ‘ಗೋಕರ್ಣ ಪೊಲೀಸ್ ಠಾಣೆಯಲ್ಲಿ 2010ರಲ್ಲಿ ದಾಖಲಾಗಿದ್ದ ಶ್ರೀಗಳ ವಿರುದ್ಧದ ಸಂಚಿನ ಪ್ರಕರಣವನ್ನು ಸರ್ಕಾರ ಏಕಾಏಕಿ ಹಿಂತೆಗೆದುಕೊಂಡಿದ್ದರ ಉದ್ದೇಶ ಏನೆಂಬುದು ಬಹಿರಂಗವಾಗಬೇಕು’ ಎಂದು ಆಗ್ರಹಿಸಿದರು.

‘ದೋಷಾರೋಪ ಪಟ್ಟಿ ಮತ್ತು ಸರ್ಕಾರಿ ಅಭಿಯೋಜಕರ ನೇಮಕ ರದ್ದು ಮಾಡಲು ನ್ಯಾಯಾಲಯ ನಿರಾಕರಿಸಿದ್ದರೂ ಸರ್ಕಾರ ಮಾತ್ರ ಇಡೀ ಪ್ರಕರಣವನ್ನೇ ವಾಪಸ್ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. ಇದರ ಹಿಂದೆ ಯಾವ ಶಕ್ತಿ ಕೆಲಸ ಮಾಡುತ್ತಿದೆ’ ಎಂದು ಪ್ರಶ್ನಿಸಿದರು.

ನಿವೃತ್ತ ನ್ಯಾಯಾಧೀಶ ಕುಕ್ಕಜ ರಾಮಕೃಷ್ಣ ಭಟ್ ಮಾತನಾಡಿ, ‘ಶ್ರೀಗಳ ಮಾನಹಾನಿಗೆ ಸಂಚು ನಡೆಸಿದ ಆರೋಪಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವಲ್ಲಿ ಗೋಕರ್ಣ ಪೊಲೀಸರು ಶ್ರಮ ವಹಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಸರಿಯಾಗಿಯೇ ನಡೆದಿತ್ತು. ಆದರೆ ಸರ್ಕಾರ ಇಡೀ ಪ್ರಕರಣವನ್ನು ವಾಪಸ್ ಪಡೆದುಕೊಂಡಿರುವುದು ಸಮಂಜಸವಲ್ಲ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT