ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಬಸ್ ಮತ್ತು ಸಿದ್ದರಾಮಯ್ಯ ಸರ್ಕಾರ

Last Updated 14 ಮೇ 2016, 19:37 IST
ಅಕ್ಷರ ಗಾತ್ರ

ಸರ್ಕಾರ ಎನ್ನುವುದು ಒಂದು ಬಸ್ ಇದ್ದ ಹಾಗೆ. ಮುಖ್ಯಮಂತ್ರಿ ಆ ಬಸ್ಸಿನ ಚಾಲಕನ ಸ್ಥಾನದಲ್ಲಿ ಕುಳಿತುಕೊಂಡಿರುತ್ತಾನೆ. ಬಸ್ ದಿನ ಕಳೆದಂತೆ ಹಳೆಯದಾಗುತ್ತದೆ. ಅದರ ಗೇರ್‌ಗಳು ಜಾಮ್ ಆಗುತ್ತವೆ. ಬ್ರೇಕ್ ಸರಿ ಇರಲ್ಲ. ಕ್ಲಚ್ ಕೆಲಸ ಮಾಡಲ್ಲ. ಎಂಜಿನ್ ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ.

ಚುನಾವಣೆ ಪ್ರಕ್ರಿಯೆಯಲ್ಲಿ ಜನರು ಚಾಲಕನನ್ನು ಬದಲಾಯಿಸುತ್ತಾರೆಯೇ ವಿನಾ ಬಸ್ಸನ್ನು ಅಲ್ಲ. ಅದೇ ಹಳೆ ಬಸ್. ಅದರ ಎಲ್ಲ ನ್ಯೂನತೆಗಳೂ ಹಾಗೆಯೇ ಇರುತ್ತವೆ. ಆದರೆ ಹೊಸ ಚಾಲಕ ಬಂದು ಕುಳಿತುಕೊಂಡಿರುತ್ತಾನೆ.

ಚಾಲಕ ಎಷ್ಟೇ ಚಾಲಾಕಿಯಾಗಿದ್ದರೂ ಬಸ್ ಡಕೋಟಾ ಎಕ್ಸ್‌ಪ್ರೆಸ್ ಆಗಿರುವುದರಿಂದ ಅದನ್ನು ನಿರೀಕ್ಷಿತ ವೇಗದಲ್ಲಿ ಓಡಿಸುವುದು ಕಷ್ಟ. ಎಲ್ಲೋ ಒಮ್ಮೊಮ್ಮೆ ಮಾತ್ರ ಚಾಲಕ ಮೆಕ್ಯಾನಿಕ್ ಕೂಡ ಆಗಿರುವುದರಿಂದ ಆತ ಹಾಳಾಗಿರುವ ಬಸ್‌ನ ಭಾಗಗಳನ್ನು ದುರಸ್ತಿ ಮಾಡಿಕೊಂಡು ನಿರೀಕ್ಷಿತ ವೇಗದಲ್ಲಿ ಓಡಿಸಬಲ್ಲ. ಇಲ್ಲವಾದರೆ ಯಾವುದೇ ಚಾಲಕ ಬಂದರೂ ಬಸ್‌ನ ವೇಗ ಒಂದೇ ರೀತಿ ಇರುತ್ತದೆ.

ಇನ್ನು ಕೆಲವು ಚಾಲಕರಿರುತ್ತಾರೆ. ಅವರಿಗೆ ಪ್ರಯಾಣಿಕರ ಬಗ್ಗೆ ಸಹಾನುಭೂತಿ ಇರುತ್ತದೆ. ಅದಕ್ಕೆ ಬಸ್ಸಿನಲ್ಲಿ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಾರೆ. ಕುಡಿಯುವ ನೀರು, ಪೇಪರ್ ಮುಂತಾದ ಸೌಕರ್ಯ ನೀಡುತ್ತಾರೆ.

ಚಾಲಕನೊಬ್ಬ ಇಂತಹ ಸೌಕರ್ಯ ನೀಡಿದ್ದಕ್ಕೆ ಆತನನ್ನು ಮೆಚ್ಚಬಹುದು. ಆದರೆ ಚಾಲಕನ ಮೂಲ ಕರ್ತವ್ಯ ಏನು ಎಂದರೆ ನಿಗದಿತ ವೇಗದಲ್ಲಿ ಬಸ್‌ ಓಡಿಸುವುದೇ ಆಗಿರುತ್ತದೆ. ಬಸ್ ನಿಗದಿತ ವೇಗದಲ್ಲಿ ಓಡದೇ ಇದ್ದರೆ ಗುರಿ ಮುಟ್ಟುವುದು ಅಸಾಧ್ಯ. ಓಡದ ಬಸ್ಸಿನಲ್ಲಿ ಎಷ್ಟೇ ಸೌಲಭ್ಯ ನೀಡಿದರೂ ಅದು ನಿಷ್ಫಲವೇ ಆಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನೂ ಇದಕ್ಕೆ ಹೋಲಿಸಬಹುದು. ಆಡಳಿತದಲ್ಲಿ ಮೂರು ವರ್ಷ ಕಳೆದ ನಂತರ ಈ ಬಸ್ ಚಾಲಕನ ಕೌಶಲ್ಯಗಳನ್ನೂ ಒರೆಗೆ ಹಚ್ಚುವುದು ಅನಿವಾರ್ಯ. ಬಿಜೆಪಿ ಚಾಲಕರು ಸರಿ ಇಲ್ಲ ಎಂದು 2013ರಲ್ಲಿ ರಾಜ್ಯದ ಜನ ಕಾಂಗ್ರೆಸ್ ಚಾಲಕನನ್ನು ಆಯ್ಕೆ ಮಾಡಿಕೊಂಡರು.

ಸಿದ್ದರಾಮಯ್ಯ ಬಸ್ಸಿನ ಚಾಲಕನ ಸ್ಥಾನದಲ್ಲಿ ಕುಳಿತುಕೊಂಡರು. ಈ ಹಿಂದೆ ಹಲವಾರು ಬಜೆಟ್‌ಗಳನ್ನು ಮಂಡಿಸಿ ಅತ್ಯುತ್ತಮ ಆಡಳಿತಗಾರ ಎನ್ನುವ ಬಿರುದನ್ನು ಪಡೆದುಕೊಂಡಿದ್ದ ಸಿದ್ದರಾಮಯ್ಯ ಚಾಲಕನ ಸ್ಥಾನದಲ್ಲಿ ಕುಳಿತ ದಿನವೇ ಪ್ರಯಾಣಿಕರಿಗೆ ಸಾಕಷ್ಟು ಅತ್ಯುತ್ತಮ ಎನ್ನಬಹುದಾದ ಸೌಲಭ್ಯಗಳನ್ನು ಪ್ರಕಟಿಸಿದರು.

ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ವಿದ್ಯಾಸಿರಿ ಹೀಗೆ ಹಲವಾರು ಉತ್ತಮ ಯೋಜನೆಗಳು ಮುಂದಿನ ದಿನಗಳಲ್ಲಿ ಪ್ರಕಟವಾದವು. ಆದರೆ ಬಸ್‌ ನಿಂತಲ್ಲೇ ನಿಂತಿದೆ ಎಂಬ ಆರೋಪದಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸಿದ್ದರಾಮಯ್ಯ ಒಳ್ಳೆಯ ಚಾಲಕ ಎಂದುಕೊಂಡಿದ್ದೆವು. ಆದರೆ ಅವರು ಎಷ್ಟೇ ಪ್ರಯತ್ನಿಸಿದರೂ ಬಸ್ ನಿಂತ ಜಾಗವನ್ನು ಬಿಟ್ಟು ಕದಲುತ್ತಿಲ್ಲ ಎಂದು ದೂರುವವರಿಗೆ ಕಡಿಮೆ ಏನಿಲ್ಲ.

ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲಿ ದೇವರಾಜ ಅರಸು ಒಬ್ಬರು. ಕಳೆದ ವರ್ಷ ಅವರ ಜನ್ಮ ಶತಮಾನೋತ್ಸವ ಕೂಡ ನಡೆದಿದೆ. ಅವರ ಬಗ್ಗೆಯೂ ಸಾಕಷ್ಟು ದೂರುಗಳು ಇದ್ದವು. ಆದರೂ ಅವರು ‘ನನ್ನ ಬಗ್ಗೆ ಏನೇ ದೂರುಗಳಿರಲಿ. ನಾನೊಬ್ಬ ಭ್ರಷ್ಟ ಎಂಬ ಟೀಕೆಯೇ ಇರಲಿ.

ಆದರೆ ಹಿಂದುಳಿದ ವರ್ಗಗಳಿಗೆ ರಾಜಕೀಯ ದನಿಯನ್ನು ನೀಡಿದ ತೃಪ್ತಿ ನನಗೆ ಇದೆ’ ಎಂದು ಹೇಳುತ್ತಿದ್ದರು. ಹಾಗೆಯೇ ಈಗ ಸಿದ್ದರಾಮಯ್ಯ ಕೂಡ ‘ನನ್ನ ಮೇಲಿನ ಆಪಾದನೆಗಳು ಏನೇ ಇರಲಿ.

ಹಸಿದ ಹೊಟ್ಟೆಗಳಿಗೆ ಅನ್ನಭಾಗ್ಯದ ಮೂಲಕ ಅನ್ನ ನೀಡಿದ, ಅಪೌಷ್ಟಿಕತೆಯಿಂದ ನರಳುತ್ತಿದ್ದ ಮಕ್ಕಳಿಗೆ ಕ್ಷೀರಭಾಗ್ಯದ ಮೂಲಕ ಶಕ್ತಿ ನೀಡಿದ ತೃಪ್ತಿ ಇದೆ’ ಎಂದು ಹೇಳಿಕೊಳ್ಳಬಹುದು. ಇವೆಲ್ಲ ನಿಂತೇ ಇದ್ದ ಅಥವಾ ನಿಧಾನವಾಗಿ ಸಾಗುವ ಬಸ್‌ನಲ್ಲಿ ಚಾಲಕನೊಬ್ಬ ಪ್ರಯಾಣಿಕರಿಗೆ ನೀಡಿದ ಹೆಚ್ಚುವರಿ ಸೌಲಭ್ಯಗಳಾಗುತ್ತವೆಯೇ ವಿನಾ ಬಸ್ ವೇಗ ಹೆಚ್ಚಿದಂತಾಗುವುದಿಲ್ಲ.

ಸರ್ಕಾರಿ ವ್ಯವಸ್ಥೆ ಇರುವುದೇ ಹಾಗೆ. ಉದಾಹರಣೆಗೆ ಕರ್ನಾಟಕ ಲೋಕಸೇವಾ ಆಯೋಗದ ವಿದ್ಯಮಾನವನ್ನೇ ತೆಗೆದುಕೊಳ್ಳಬಹುದು. 2011ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿಬಂತು. ಈ ಬಗ್ಗೆ ಸಿಐಡಿ ತನಿಖೆಯನ್ನೂ ನಡೆಸಲಾಯಿತು. ಆರೋಪ ಸಾಬೀತಾಯಿತು.

ಸಿದ್ದರಾಮಯ್ಯ ಸರ್ಕಾರ 2011ರ ಆಯ್ಕೆ ಪಟ್ಟಿಯನ್ನೂ ರದ್ದು ಮಾಡಿತು. ಲೋಕಸೇವಾ ಆಯೋಗದ ಸುಧಾರಣೆಗೆ ಪಿ.ಸಿ.ಹೋಟಾ ಸಮಿತಿಯನ್ನೂ ನೇಮಕ ಮಾಡಲಾಯಿತು.

ಸಮಿತಿಯ ಶಿಫಾರಸಿನಂತೆ ಆಯೋಗದ ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆಯನ್ನೂ ತರಲಾಯಿತು. ಆಯೋಗದ ಕಾರ್ಯದರ್ಶಿಯನ್ನೂ ಬದಲಾಯಿಸಲಾಯಿತು. ಆಯೋಗದ ಚಾಲಕನ ಸ್ಥಾನದಲ್ಲಿರುವ ಕಾರ್ಯದರ್ಶಿಯನ್ನು ಬದಲಾಯಿಸಲಾಯಿತೇ ವಿನಾ ಆಯೋಗದಲ್ಲಿ ಹತ್ತಾರು ವರ್ಷಗಳಿಂದ ಬೀಡುಬಿಟ್ಟಿರುವ ಶಕ್ತಿಗಳನ್ನು ಹೊರಕ್ಕೆ ಹಾಕುವ ಕೆಲಸವಾಗಲಿಲ್ಲ.

ಇದರಿಂದ ಹೆಗ್ಗಣಗಳನ್ನು ಒಳಕ್ಕೇ ಬಿಟ್ಟು ಬಿಲವನ್ನು ಮುಚ್ಚಿದಂತೆ ಆಯಿತು. ಇದರಿಂದಾಗಿ 2014ರ ಸಾಲಿನ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಲೋಪವಾಗಿದೆ ಎಂಬ ದೂರುಗಳು ಬರತೊಡಗಿದವು.

ಲೋಕಸೇವಾ ಆಯೋಗದಲ್ಲಿರುವ ಸಿಬ್ಬಂದಿಯನ್ನೂ ಕನಿಷ್ಠ ಮೂರು ವರ್ಷಕ್ಕೆ ಬದಲಾಯಿಸುತ್ತಿರಬೇಕು ಎಂದು ಹೋಟಾ ಸಮಿತಿ ವರದಿ ನೀಡಿದೆ. ಆದರೆ ಅದನ್ನು ಪಾಲಿಸಲಾಗಿಲ್ಲ. ಆಯೋಗವನ್ನು ಕೊಳೆತು ನಾರುವಂತೆ ಮಾಡುತ್ತಿದ್ದ ಶಕ್ತಿಗಳು ಅಲ್ಲಿಯೇ ಉಳಿದುಕೊಂಡವು. ಕಾರ್ಯದರ್ಶಿ ಮಾತ್ರ ಬದಲಾದರು. ಅವರು ಈಗ ಎಷ್ಟೇ ವೇಗದಲ್ಲಿ ಬಸ್ ಓಡಿಸಲು ಯತ್ನಿಸಿದರೂ ಈ ಹಿಂದೆ ಹಲವಾರು ವರ್ಷಗಳಿಂದ ಅಳವಡಿಸಲಾಗಿರುವ ವೇಗ ನಿಯಂತ್ರಕಗಳು ಕೆಲಸ ಮಾಡುತ್ತಲೇ ಇವೆ.

ಹೀಗೆ ಚಾಲಕನನ್ನು ಮಾತ್ರ ಬದಲಾಯಿಸುವುದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಪದವಿ ಪೂರ್ವ ಶಿಕ್ಷಣ ಮಂಡಳಿ. ಈ ಬಾರಿ ದ್ವಿತೀಯ ಪಿಯುಸಿಯ ರಾಸಾಯನಿಕ ವಿಜ್ಞಾನ ಪ್ರಶ್ನೆ ಪತ್ರಿಕೆ ಎರಡು ಬಾರಿ ಸೋರಿಕೆಯಾಯಿತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ತಕ್ಷಣವೇ ಪರೀಕ್ಷಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 40 ಸಿಬ್ಬಂದಿಯನ್ನು ಅಮಾನತುಗೊಳಿಸಲಾಯಿತು. ಇಡೀ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ.

ಇದರ ನಡುವೆ ಮಂಡಳಿಯ ನಿರ್ದೇಶಕರನ್ನು ಬದಲಾಯಿಸಲಾಯಿತು. ಮತ್ತೆ ಅದೇ ಕ್ರಮ. ಚಾಲಕನನ್ನು ಬದಲಾಯಿಸುವುದು. ಮಂಡಳಿಯಲ್ಲಿ ಬೇರೂರಿರುವ ಸಿಬ್ಬಂದಿಯನ್ನು ಬದಲಾಯಿಸುವ ಗೋಜಿಗೇ ಹೋಗಲಿಲ್ಲ. ಅಲ್ಲದೆ ಅಮಾನತಾದ 40 ಸಿಬ್ಬಂದಿಗಳಲ್ಲಿ ಯಾರ್‍ಯಾರ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲವೋ ಅವರ ಅಮಾನತನ್ನು ರದ್ದು ಮಾಡಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದರು.

ಅಮಾಯಕರನ್ನು ಅಮಾನತು ಮಾಡಿದ್ದರೆ ಅದನ್ನು ರದ್ದು ಮಾಡಬೇಕಾಗಿದ್ದು ಸರ್ಕಾರದ ಕರ್ತವ್ಯ, ತಕ್ಷಣವೇ ಅದನ್ನು ಮಾಡಬೇಕು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್‌ಪಿನ್‌ಗಳನ್ನು ಹುಡುಕಿದಂತೆಯೇ ಮಂಡಳಿಯಲ್ಲಿ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಸಿಬ್ಬಂದಿಯನ್ನೂ ಹುಡುಕಿ ಕಠಿಣ ಕ್ರಮ ಕೈಗೊಳ್ಳಬೇಕು. ಇಡೀ ಮಂಡಳಿಗೆ ಹೊಸ ಚೈತನ್ಯವನ್ನು ತುಂಬಬೇಕು.

ಕರ್ನಾಟಕ ಲೋಕಸೇವಾ ಆಯೋಗದ ವ್ಯವಸ್ಥೆ ಸರಿ ಇಲ್ಲ ಎಂದು ಪದವಿ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ಜವಾಬ್ದಾರಿಯನ್ನು ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಯಿತು. ಆದರೆ ಇಲ್ಲಿಯೂ ಲೋಕಸೇವಾ ಆಯೋಗ ಮಾಡುವ ಬಹುತೇಕ ತಪ್ಪುಗಳನ್ನು ಪರೀಕ್ಷಾ ಪ್ರಾಧಿಕಾರ ಕೂಡ ಮಾಡಿತು. ಈ ನಡುವೆ ಇನ್ನೊಂದು ಪ್ರಹಸನ ನಡೆಯಿತು. ಕರ್ನಾಟಕ ಲೋಕಾಯುಕ್ತ ಎಂಬ ಸರ್ಕಾರಿ ಬಸ್ ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಆದರೆ ಅದರ ಚಾಲಕ ಮಾತ್ರ ಸರಿ ಇರಲಿಲ್ಲ.

ಚಾಲಕ ಸರಿ ಇಲ್ಲದೇ ಇದ್ದರೆ ಚಾಲಕನನ್ನು ಬದಲಾಯಿಸಬೇಕೇ ವಿನಾ ಬಸ್ಸನ್ನೇ ಬದಲಾಯಿಸುವುದು ಬುದ್ಧಿವಂತರ ನಡೆಯಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಅತ್ಯುತ್ತಮ ಸ್ಥಿತಿಯಲ್ಲಿದ್ದ ಲೋಕಾಯುಕ್ತ ಎಂಬ ಬಸ್ಸನ್ನು ಚಾಲಕ ಸರಿ ಇಲ್ಲ ಎಂಬ ಕಾರಣಕ್ಕೆ ಗುಜರಿಗೆ ಹಾಕಿ ಭ್ರಷ್ಟಾಚಾರ ನಿಗ್ರಹ ದಳ ಎಂಬ ಹೊಸ ಬಸ್ ನಿರ್ಮಾಣ ಮಾಡಿಬಿಟ್ಟಿತು.

ಲೋಕಾಯಕ್ತದ ಬಗ್ಗೆ ಜನರಿಗೆ ನಂಬಿಕೆ ಇತ್ತು. ಆದರೆ ಈಗ ಸರ್ಕಾರಿ ಪ್ರಾಯೋಜಿತ ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ ಅದೇ ನಂಬಿಕೆಯನ್ನು ಜನರಲ್ಲಿ ಮೂಡಿಸುವುದು ಕಷ್ಟವಾಗುತ್ತಿದೆ. ಇದರಿಂದಾಗಿ ಸಾಂವಿಧಾನಿಕ ಸಂಸ್ಥೆಯೊಂದು ಉಸಿರು ಕಳೆದುಕೊಂಡಿತು. ಅದೇ ರೀತಿ ಮಾನವ ಹಕ್ಕು ಆಯೋಗ ಕೂಡ ಚಾಲಕನೇ ಇಲ್ಲದೆ ನಿಂತಲ್ಲಿಯೇ ನಿಂತು ಬಿಟ್ಟಿದೆ.

ಯಾವುದೇ ಬಸ್ ಆಗಲಿ. ಅದು ಚಲಿಸುತ್ತಿರಬೇಕು. ಅದು ಹವಾನಿಯಂತ್ರಿತ ಬಸ್ ಆಗಿದ್ದರೂ, ಬಸ್ಸಿನಲ್ಲಿ ಊಟ, ತಿಂಡಿ, ಕಾಫಿ, ಟೀ ಒದಗಿಸುತ್ತಿದ್ದರೂ, ಬೇಸರ ಕಳೆಯಲು ಬಸ್ಸಿನಲ್ಲಿ ಟಿ.ವಿ ಜೋಡಿಸಲಾಗಿದ್ದರೂ ಬಸ್ ಚಲಿಸುತ್ತಿಲ್ಲ ಎಂದರೆ ಪ್ರಯಾಣಿಕರು ಸಿಟ್ಟಾಗುತ್ತಾರೆ.

ಕೆಲವು ಸಮಯದವರೆಗೆ ಬಸ್ಸಿನಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಸುಮ್ಮನೆ ಇರುತ್ತಾರೆಯೇ ವಿನಾ ಬಹಳ ಕಾಲ ಬಸ್ ನಿಂತಲ್ಲಿಯೇ ನಿಂತಿದ್ದರೆ ಅಸಹನೆ ವ್ಯಕ್ತಪಡಿಸುತ್ತಾರೆ. ಕೊನೆ ಕೊನೆಗೆ ಇದು ಪ್ರತಿಭಟನೆಯ ರೂಪ ತಾಳುತ್ತದೆ. ಚಾಲಕನ ವಿರುದ್ಧ ದೋಷಾರೋಪಣೆಗೂ ಸಿದ್ಧರಾಗುತ್ತಾರೆ. ಸಿದ್ದರಾಮಯ್ಯ ಸರ್ಕಾರವನ್ನು ಹೀಗೆ ನೋಡಿದರೆ ಮೂರು ವರ್ಷದ ಅವರ ಆಡಳಿತದ ಬಗ್ಗೆ ಜನಾಭಿಪ್ರಾಯ ಏನಿದೆ ಎನ್ನುವುದು ತಿಳಿಯುತ್ತದೆ.

‘ಏನ್‌ ಸ್ವಾಮಿ, ನಿಮ್ಮ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲವಲ್ಲ’ ಎಂದು ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಟೇಕ್ ಆಫ್ ಆಗಲು ಅದೇನು ವಿಮಾನವೇ? ಹಸಿದ ಹೊಟ್ಟೆಗೆ ಅನ್ನಭಾಗ್ಯ ಕೊಟ್ಟಿದ್ದೇವೆ. ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಕೊಟ್ಟಿದ್ದೇವೆ. ಕೃಷಿ ಭಾಗ್ಯವಿದೆ. ಮನಸ್ವಿನಿ ಯೋಜನೆ ಇದೆ. ಪರಿಶಿಷ್ಟರು, ಅಲ್ಪಸಂಖ್ಯಾತರ ಸಾಲ ಮನ್ನಾ ಮಾಡಿದ್ದೇವೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಕೊಟ್ಟಿದ್ದೇವೆ.

ಪರಿಶಿಷ್ಟರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುವುದಕ್ಕೆ ಇಡೀ ದೇಶದಲ್ಲಿಯೇ ಮಾದರಿ ಎನ್ನುವಂತಹ ಕಾಯ್ದೆ ಜಾರಿಗೆ ತಂದಿದ್ದೇವೆ. ಈವರೆಗೆ ಯಾರೂ ಮಾಡದಂತಹ ಜಾತಿ ಸಮೀಕ್ಷೆ ಮಾಡಿದ್ದೇವೆ. ಸದ್ಯದಲ್ಲಿಯೇ ಅದರ ವರದಿ ಬರುತ್ತದೆ. ನೀರಾವರಿಗೆ ನಾವು ಭರವಸೆ ನೀಡಿದ್ದಕ್ಕಿಂತಲೂ ಹೆಚ್ಚು ಹಣ ವ್ಯಯ ಮಾಡಿದ್ದೇವೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾವು ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ.

ಇವೆಲ್ಲ ಸರ್ಕಾರ ಜೀವಂತ ಇರುವ ಲಕ್ಷಣವಲ್ಲವೇ? ಸರ್ಕಾರ ನಡೆಯುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಆಧಾರ ಏನು ಬೇಕು?’ ಎಂದು ಪ್ರಶ್ನೆ ಮಾಡುತ್ತಾರೆ.ಆದರೆ ಜನರು ಈ ಎಲ್ಲ ಸೌಲಭ್ಯ ನಿಂತ ಬಸ್ಸಿನಲ್ಲಿ ಸಿಗುವ ಸೌಕರ್ಯ ಎಂದೇ ಭಾವಿಸಿದ್ದಾರೆ. ಬಸ್ಸು ಚಲಿಸುತ್ತಿದೆ ಎಂದುಕೊಂಡಿಲ್ಲ. ಬಸ್ ಚಲಿಸುತ್ತಿದೆ ಎನ್ನುವುದನ್ನು ಜನರ ಮನಸ್ಸಿನಲ್ಲಿ ತುಂಬಲು ಇನ್ನೂ ಕಾಲ ಮಿಂಚಿಲ್ಲ.

ಮಾಸಾಂತ್ಯದ ವೇಳೆಗೆ ಜಾತಿ ಸಮೀಕ್ಷೆಯ ವರದಿ ಬಹಿರಂಗವಾಗಬಹುದು. ಆಗ ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗಬಹುದು. ರಾಜ್ಯದ ಜನಸಂಖ್ಯೆಯ ಶೇ 40ಕ್ಕೂ ಹೆಚ್ಚು ಲಿಂಗಾಯತರು ಮತ್ತು ಒಕ್ಕಲಿಗರೇ ಇದ್ದಾರೆ ಎಂಬ ಭ್ರಮೆ ಕಳಚಿ ಬೀಳಬಹುದು. ದಲಿತರು, ಮುಸ್ಲಿಮರು, ಹಿಂದುಳಿದ ವರ್ಗದವರಿಗೆ ಹೊಸ ರಾಜಕೀಯ ಚೈತನ್ಯ ಬರಬಹುದು.

ಅದು ತಮ್ಮ ಚಾಲಕನ ಸ್ಥಾನವನ್ನು ಗಟ್ಟಿ ಮಾಡಬಹುದು ಎಂಬ ನಿರೀಕ್ಷೆ ಸಿದ್ದರಾಮಯ್ಯ ಅವರಿಗೆ ಇರಬಹುದು. ಇರಬೇಕು ಕೂಡ. ಜಾತಿ ಸಮೀಕ್ಷೆಯ ವರದಿ ಹೊರಕ್ಕೆ ಬಂದ ನಂತರ ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ...?

ದೇವರಾಜ ಅರಸು ಅವರು ಅಧಿಕಾರವನ್ನು ಕಳೆದುಕೊಂಡ ಕಾಲದಲ್ಲಿ ‘ನಮ್ಮ ಶಾಸಕರಿಗೆ ರೊಟ್ಟಿಯ ಯಾವ ಭಾಗದಲ್ಲಿ ಬೆಣ್ಣೆ ಹೆಚ್ಚಿದೆ ಎನ್ನುವುದು ಗೊತ್ತಿದೆ. ಅವರು ಆ ಭಾಗವನ್ನೇ ನೆಕ್ಕುತ್ತಾರೆ’ ಎಂದು ಹೇಳಿದ್ದರು.

ದಲಿತ ಮುಖ್ಯಮಂತ್ರಿ, ಸಂಪುಟ ಪುನರ್ ರಚನೆ ಮುಂತಾದ ಗೋಜಲುಗಳ ನಡುವೆ ಇರುವ ಮತ್ತು ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವರಾಜ ಅರಸು ಅವರು ಬಹಳ ಕಾಲದ ಹಿಂದೆ ಹೇಳಿದ ಈ ಮಾತಿನ ಅರ್ಥ ಗೊತ್ತಿರಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT