ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಲ್ಲೂ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ

ರಾಜ್ಯ ಮಕ್ಕಳ ಸುರಕ್ಷತಾ ನೀತಿ: ಸಾರ್ವಜನಿಕ ಸಭೆಯಲ್ಲಿ ಕೇಳಿಬಂದ ಸಲಹೆ
Last Updated 27 ನವೆಂಬರ್ 2015, 19:54 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿಯೂ ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು.  ಮಕ್ಕಳ ಸುರಕ್ಷತಾ ನೀತಿ ಎಲ್ಲ ಶಾಲೆಗಳಿಗೂ ಅನ್ವಯವಾಗಬೇಕು. ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು...

ಈ ಸಲಹೆಗಳು ಕೇಳಿ ಬಂದಿದ್ದು ‘ರಾಜ್ಯ ಮಕ್ಕಳ ಸುರಕ್ಷತಾ ನೀತಿ–2015’ ರೂಪಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು  ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ.

ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಶಿಕ್ಷಕರು, ಪೋಷಕರು, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು ತಮ್ಮ ಅಭಿಪ್ರಾಯ, ಸಲಹೆಗಳನ್ನು ಹಂಚಿಕೊಂಡರು.

ಸಂವಾದಲ್ಲಿ ಭಾಗವಹಿಸಿದ್ದ ಅರಸಿಕೆರೆಯ ಎಚ್.ಡಿ.ಸೀತಾರಾಮ್‌, ‘ಖಾಸಗಿ ಶಾಲೆಗಳಲ್ಲಿ ಮಾತ್ರ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿಯೂ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಸಲಹೆ ನೀಡಿದರು.

ಶಿಕ್ಷಣ ತಜ್ಞ ವಾಸುದೇವ ಶರ್ಮಾ, ‘ಕೇಂದ್ರೀಯ ವಿದ್ಯಾಲಯಗಳು, ಮಿಲಿಟರಿ ಶಾಲೆ ಮತ್ತು ಅಂತರರಾಷ್ಟ್ರೀಯ ಶಾಲೆಗಳಲ್ಲಿ ಅಳವಡಿಸಲಾಗುವ ಸುರಕ್ಷತಾ ಕ್ರಮಗಳನ್ನು ಪ್ರಮಾಣೀಕರಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

‘ಮಕ್ಕಳ ಸುರಕ್ಷತೆ ಕಾಪಾಡುವಲ್ಲಿ ಪೋಷಕರಿಗೂ ನಿಯಮ ರೂಪಿಸಬೇಕು. ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಆಥವಾ ಮುಖ್ಯ ಶಿಕ್ಷಕರ ಮೇಲೆ ನೇರವಾಗಿ ದೂರು ದಾಖಲಿಸಿ, ಬಂಧಿಸುವ ನಿಯಮ ಕೈಬಿಡಬೇಕು’ ಎಂಬ ಸಲಹೆ ನೀಡಿದವರು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್.

ಶಾಲೆಗಳ ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಮಾಗಡಿ  ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ  ಶಿಕ್ಷಕಿ ಶೈಲಜಾ, ‘ಶಾಲೆಗಳಲ್ಲಿ ಆಗುವ ದೌರ್ಜನ್ಯಗಳು ಮಾತ್ರ ಬೆಳಕಿಗೆ ಬರುತ್ತಿವೆ. ಆದರೆ, ಮನೆಗಳಲ್ಲಿ ಮತ್ತು ನೆರೆಹೊರೆಯವರಿಂದ ಆಗುವ ಕಿರುಕುಳಗಳು ಹೊರಗೆ ಬರುವುದಿಲ್ಲ. ಇವುಗಳನ್ನು ತಡೆಯಲು ಕಟ್ಟುನಿಟ್ಟಿನ ನಿಯಮ ರೂಪಿಸಬೇಕು’ ಎಂದರು.

ಬಹುತೇಕ ಬಾಲಕಿಯರ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲ.  ಬಹುತೇಕ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೊಠಡಿಗಳು ಇಲ್ಲದಿರುವುದರಿಂದ ಮರದ ಕೆಳಗೆ ಕೂರಿಸಿ ಪಾಠ ಮಾಡಬೇಕಾದ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಸುರಕ್ಷತೆ ಕಲ್ಪಿಸಲು ಸಾಧ್ಯವಿಲ್ಲ ಎಂದರು. 

ಶಾಲೆಗಳಲ್ಲಿ ಕರಾಟೆ ಕಲಿಕೆ ಕಡ್ಡಾಯಗೊಳಿಸಬೇಕು. ಇದರಿಂದ ಹೆಣ್ಣುಮಕ್ಕಳಿಗೆ ಅನುಕೂಲವಾಗುತ್ತದೆ ಎಂಬ ಸಲಹೆಯನ್ನು ಸಮರ್ಥನಂ ಶಾಲೆಯ ವಿದ್ಯಾರ್ಥಿಯೊಬ್ಬರು ನೀಡಿದರು.

ಬೀದರ್‌ ಜಿಲ್ಲೆಯ ಶಿವಶರಣಪ್ಪ ಪಟ್ಟಣಶೆಟ್ಟಿ, ಶಾಲೆಗಳಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಕರಡಿನಲ್ಲಿ ಉಲ್ಲೇಖಿಸಲಾಗಿದೆ. ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅಂಶವನ್ನು ಕರಡಿನಲ್ಲಿ ಸೇರಿಸಬೇಕು’ ಎಂದರು.

‘ಅತ್ಯಾಚಾರಿಗಳಿಗೆ ಕೆಲವು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ನಂತರ ಅವರು ರಾಜಾರೋಷದಿಂದ ಸಮಾಜದಲ್ಲಿ ಓಡಾಡಿಕೊಂಡಿರುತ್ತಾರೆ. ಹೀಗಾಗಿ ಅತ್ಯಾಚಾರ ಮಾಡದಂತೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು’ ಎಂದು ಮಹಿಳೆಯೊಬ್ಬರು ಸೂಚನೆ ನೀಡಿದರು.

ಬಾಲಕಿಯರ ಪ್ರೌಢಶಾಲೆಗಳಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಪೊಲೀಸರನ್ನು ನಿಯೋಜಿಸಬೇಕು. ಶಾಲೆಗಳಲ್ಲಿ ಕೈಗೊಳ್ಳಲಾಗಿರುವ ಸುರಕ್ಷತಾ ಕ್ರಮಗಳ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಹಾಕಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಸಮವಸ್ತ್ರ ವಿತರಿಸಬೇಕು ಎಂಬ ಸಲಹೆಗಳು ಪೋಷಕರು, ಶಿಕ್ಷಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಂದ ಕೇಳಿ ಬಂದವು.
*
ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಸ್ಯಾನಿಟರಿ ಪ್ಯಾಡ್‌ಗಳು ಕಳಪೆ ಗುಣಮಟ್ಟದ್ದಾಗಿದೆ. ಸರ್ಕಾರ ಗುಣಮಟ್ಟದ ಸ್ಯಾನಿಟರಿ ಪ್ಯಾಡ್‌ ನೀಡಬೇಕು. ಇಲ್ಲವೇ, ನಿಲ್ಲಿಸಬೇಕು
–ಶೈಲಜಾ,
ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT