ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಉಳಿಸಲು ಹೋರಾಟ

Last Updated 30 ಜೂನ್ 2015, 11:13 IST
ಅಕ್ಷರ ಗಾತ್ರ

ರಾಮನಗರ: ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಹಾಗೂ ನೆರೆ–ಹೊರೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಸಮನ್ವಯ ವೇದಿಕೆಯನ್ನು ಕಟ್ಟಿಕೊಳ್ಳಲಾಗಿದ್ದು, ಅದರಡಿ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು ಸ್ಥಾಪನೆಯಾಗಿವೆ ಎಂದು ವೇದಿಕೆಯ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಗೋಪಾಲ್‌ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳ ವಶದಲ್ಲಿದ್ದು, ಅವರು ತಮ್ಮ ಸಂಸ್ಥೆಗಳ ಬೆಳವಣಿಗೆಗೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದ್ದಾರೆ. ಇದನ್ನು ತಡೆದು, ಸರ್ಕಾರಿ ಶಾಲೆಗಳನ್ನು ಉಳಿಸುವ ಉದ್ದೇಶವನ್ನು ಈ ವೇದಿಕೆ ಹೊಂದಿದೆ ಎಂದು ತಿಳಿಸಿದರು.

‘ಬಡವರಿಗೆ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳು, ಆರೋಗ್ಯ ಕಾಪಾಡುವ ಸರ್ಕಾರಿ ಆಸ್ಪತ್ರೆಗಳನ್ನು ಹಂತ ಹಂತವಾಗಿ ಮಚ್ಚಿಸುವ ಏಕೈಕ ಕಾರ್ಯಸೂಚಿಯನ್ನು ಈ ರಾಜಕಾರಣಿಗಳು ಹೊಂದಿದ್ದಾರೆ. ಈ ಮೂಲಕ ಅವರು ಬಡವರನ್ನು ಶಿಕ್ಷಣ ಮತ್ತು ಆರೋಗ್ಯದಿಂದ ದೂರ ಇಡುವ ಹೊಂಚು ಹಾಕಿದ್ದಾರೆ’ ಎಂದು ಅವರು ಕಿಡಿಕಾರಿದರು.

ಶಿಕ್ಷಣದ ವ್ಯಾಪಾರೀಕರಣ: ವೇದಿಕೆಯ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಚಿನ್ನಗಿರಿಗೌಡ ಮಾತನಾಡಿ, ವ್ಯಾಪಾರೀಕರಣ ನೀತಿಗೆ ಬಲಿಯಾಗುತ್ತಿರುವ ಸರ್ಕಾರಿ ಶಾಲೆ ಉಳಿಸುವ ಮೂಲಕ ಎಲ್ಲ ಬಡವರಿಗೆ ಉಚಿತ ಶಿಕ್ಷಣ ದೊರೆಯುವಂತೆ ಮಾಡುವ ಉದ್ದೇಶವನ್ನು ವೇದಿಕೆ ಹೊಂದಿದೆ ಎಂದರು.

ಕ್ಷೀರಭಾಗ್ಯ, ಅನ್ನಭಾಗ್ಯ ಒದಗಿಸಿರುವ ಸರ್ಕಾರ ಬಡವರಿಗೆ ವಿದ್ಯಾಭಾಗ್ಯ ಒದಗಿಸುವಲ್ಲಿ ವಿಫಲವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಮೂಲ ಸೌಕರ್ಯ ಕಲ್ಪಿಸಿಲ್ಲ. ಅಗತ್ಯ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಂಡಿಲ್ಲ. ಇದರಿಂದ ಶೈಕ್ಷಣಿಕ ಚಟುವಟಕೆಗಳು ಕುಂಠಿತಗೊಂಡಿವೆ. ಹಲವೆಡೆ ಈಗಲೂ ಏಕೋಪಾಧ್ಯಾಯ ಶಾಲೆಗಳು ನಡೆಯುತ್ತಿವೆ. ಇದರಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪಂಚಾಯಿತಿಗೊಂದು ಮಾದರಿ ಶಾಲೆ ಸ್ಥಾಪಿಸಬೇಕು, ಸರ್ಕಾರಿ ಪ್ರಾಥಮಕ ಶಾಲೆಗಳಲ್ಲಿ ಅಥವಾ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಮಾದರಿ ಶಿಕ್ಷಣ ಆರಂಭಿಸಲು ಸರ್ಕಾರ ಕ್ರಮಕೈಗೊಳ್ಳಬೇಕು  ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಹಳ್ಳಿಗಳಲ್ಲಿ ಸರ್ಕಾರವೇ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ನೀಡಲು ಮುಂದಾಗಬೇಕು, ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಎಲ್ಲ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂಬ ಉದ್ದೇಶದಿಂದ ವೇದಿಕೆ ಹೋರಾಟಗಳನ್ನು ಮಾಡಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪದಾಧಿಕಾರಿಗಳ ವಿವರ: ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ– ಬಿ. ಗೋಪಾಲ್‌, ಉಪಾಧ್ಯಕ್ಷರು–ಸೋಮರಾಜ್‌, ಕಾರ್ಯದರ್ಶಿ–  ಯಶೋಧಮ್ಮ, ಸಹ ಕಾರ್ಯದರ್ಶಿ– ಬಾಬುರಾವ್‌, ಖಜಾಂಚಿ– ಹೇಮಾ, ಸಂಘಟನಾ ಕಾರ್ಯದರ್ಶಿಗಳು– ಮೂರ್ತಿ (ಚನ್ನಪಟ್ಟಣ), ಮಹದೇಶ್‌ (ರಾಮನಗರ), ಅಶೋಕ್‌ (ಮಾಗಡಿ), ಜೈಕುಮಾರ್‌ (ಕನಕಪುರ)  ಆಯ್ಕೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಮೂಲ ಸೌಕರ್ಯ ಕಲ್ಪಿಸಿಲ್ಲ. ಅಗತ್ಯ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ
ಚಿನ್ನಗಿರಿಗೌಡ,
ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT