ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮತ್ತು ಸಾಮಾಜಿಕ ಪರಿವರ್ತನೆ

Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳ ಉನ್ನತೀಕರಣವೆಂದರೆ ಅದು ಸಾಮಾಜಿಕ ನ್ಯಾಯದ ಅನುಷ್ಠಾನ, ಸಾಮಾಜಿಕ ಪರಿವರ್ತನೆಯ ಚಲನಶೀಲತೆ ಎನ್ನುವ ಸತ್ಯ ಸರ್ಕಾರಕ್ಕೆ ಗೊತ್ತಿಲ್ಲ ಅಥವಾ ಬೇಕಾಗಿಲ್ಲ

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಎಚ್.ಬಿ. ಚಂದ್ರಶೇಖರ್ ಅವರು ನೀಡಿರುವ  ಸಲಹೆಗಳು (ಪ್ರ.ವಾ., ಸಂಗತ, ಜುಲೈ 23) ಸ್ವಾಗತಾರ್ಹ. ಇದಕ್ಕೆ ಸಂಬಂಧಿಸಿದಂತೆ  ಕೆಲವು ಸಂಗತಿಗಳನ್ನು ನಾವು ತುರ್ತಾಗಿ ಚರ್ಚಿಸಬೇಕಾಗಿದೆ.

ಮೊದಲನೆಯದಾಗಿ ಕೆಲವು ಮಾಹಿತಿಗಳನ್ನು ಗಮನಿಸೋಣ. 2012- 13ರ ಸಾಲಿನಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ ಕ್ರಮವಾಗಿ 22,000  ಮತ್ತು 22,567. ಆದರೆ 2013-14ರ ಸಾಲಿನಲ್ಲಿ ಇದು ಕ್ರಮವಾಗಿ 21,996  ಮತ್ತು 22,517ಕ್ಕೆ ಇಳಿದಿದೆ. ಒಂದು ವರ್ಷದಲ್ಲಿ ಒಟ್ಟು 54 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿವೆ.

ಇದೇ ಸಂದರ್ಭದಲ್ಲಿ 2012-13ನೇ ಸಾಲಿನಲ್ಲಿದ್ದ ಖಾಸಗಿ ಅನುದಾನರಹಿತ  ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ ಕ್ರಮವಾಗಿ 3,486 ಮತ್ತು 8,259. ಈ ಸಂಖ್ಯೆ 2013-14ನೇ ಸಾಲಿನಲ್ಲಿ ಕ್ರಮವಾಗಿ 3,702 ಮತ್ತು 8,557ಕ್ಕೆ ಏರಿದೆ. 

ಒಂದೇ ವರ್ಷದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ 11,745ರಿಂದ 12,259ಕ್ಕೆ ಏರಿದೆ. ಅಂದರೆ, ಒಂದು ವರ್ಷದಲ್ಲಿ ಮುಚ್ಚಿದ 54 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಜಾಗದಲ್ಲಿ 514 ಖಾಸಗಿ ಶಾಲೆಗಳು ತಲೆಯೆತ್ತಿ ನಿಂತಿವೆ.

2014-15ರಲ್ಲಿ  9,503 ಶಾಲೆಗಳಲ್ಲಿ 1-7ನೇ ತರಗತಿಯವರೆಗೆ ಪ್ರತಿ ತರಗತಿಯಲ್ಲಿ ಸರಾಸರಿ 20ಕ್ಕೂ ಕಡಿಮೆ ಮಕ್ಕಳಿದ್ದರು. 2013-14ರಲ್ಲಿ 49,055 ಸರ್ಕಾರಿ ಶಾಲೆಗಳಿದ್ದರೆ, 2014-15 ರಲ್ಲಿ ಅದು 48,900ಕ್ಕೆ ಇಳಿದಿದೆ.

2006-07ರಲ್ಲಿ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಸುಮಾರು 7.69 ಲಕ್ಷ ವಿದ್ಯಾರ್ಥಿಗಳು ಸೇರಿದ್ದರು. ಅದರ ಪ್ರಮಾಣ 2014-15ರಲ್ಲಿ 5.42 ಲಕ್ಷಕ್ಕೆ ಕುಸಿದಿದೆ. 2006-07ರಲ್ಲಿ 8ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಪ್ರಮಾಣ 18.73 ಲಕ್ಷದಷ್ಟಿದ್ದರೆ ಅದು 2014– 15ರಲ್ಲಿ 14.86 ಲಕ್ಷಕ್ಕೆ ಕುಸಿದಿದೆ.

ಇದೇ ಸಂದರ್ಭದಲ್ಲಿ 2006-07ರಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 1ನೇ ತರಗತಿಗೆ ಸುಮಾರು 3.15 ಲಕ್ಷ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದರೆ, ಅದರ ಪ್ರಮಾಣ 2014-15ರಲ್ಲಿ 4.93 ಲಕ್ಷಕ್ಕೆ ಏರಿದೆ.

2006-07ರಲ್ಲಿ 8ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಪ್ರಮಾಣ 6.01 ಲಕ್ಷದಷ್ಟಿದ್ದರೆ ಅದು 2014-15ರಲ್ಲಿ 9.11 ಲಕ್ಷಕ್ಕೆ ಏರಿದೆ. ಆದರೂ ಇಂದಿಗೂ ಶೇಕಡ 60ಕ್ಕೂ ಹೆಚ್ಚು ದಲಿತ, ಆದಿವಾಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ (8ನೇ ತರಗತಿವರೆಗೆ). ಶೇಕಡ 90ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹೆಣ್ಣು ಮಕ್ಕಳು ಹತ್ತನೇ ತರಗತಿಯವರೆಗೆ ತಲುಪುವುದೂ ಇಲ್ಲ. ಇದು ಮುಸ್ಲಿಂ ಹೆಣ್ಣು ಮಕ್ಕಳ ವಿಷಯದಲ್ಲಿಯೂ ನಿಜ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಯು  ಕೇವಲ ಭೌಗೋಳಿಕ ಅಥವಾ  ಮೂಲ ಸೌಕರ್ಯಗಳ ಕೊರತೆ ಕಾರಣಕ್ಕಾಗಿ ಮಾತ್ರವಲ್ಲ. ಇಲ್ಲಿನ ಮೂಲಭೂತ ದುರಂತವೆಂದರೆ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಯವರಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕೆನ್ನುವ ನೈಜ ಕಳಕಳಿ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇರುವುದು.

ಸರ್ಕಾರಿ ಶಾಲೆಗಳ ಉನ್ನತೀಕರಣವೆಂದರೆ ಅದು ಸಾಮಾಜಿಕ ನ್ಯಾಯದ ಅನುಷ್ಠಾನ, ಸಾಮಾಜಿಕ ಪರಿವರ್ತನೆಯ ಚಲನಶೀಲತೆ ಎನ್ನುವ ಸರಳ ಸತ್ಯವೂ ಇವರಿಗೆ ಗೊತ್ತಿಲ್ಲ ಅಥವಾ ಬೇಕಾಗಿಲ್ಲ. ಏಕೆಂದರೆ ಸರ್ಕಾರವು ಸಂಪೂರ್ಣವಾಗಿ ಖಾಸಗಿಯವರ ಪರವಾಗಿ ತನ್ನ ಶಿಕ್ಷಣ ನೀತಿಯನ್ನು ರೂಪಿಸುತ್ತಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಂಚೂಣಿಯಲ್ಲಿ ನಿಂತು ಸಮಾನ ಶಿಕ್ಷಣದ ನೇತೃತ್ವವನ್ನು ವಹಿಸಿಕೊಳ್ಳಬೇಕಾದಂತಹ ಸಂದರ್ಭದಲ್ಲಿ, ಸರ್ಕಾರವೇ ಸುಳ್ಳು ನೆಪಗಳನ್ನು ಹೇಳಿ ತನ್ನ ಶಾಲೆಗಳನ್ನು ಮುಚ್ಚುತ್ತಿದೆ. ಇದಕ್ಕೆ ಸಮರ್ಪಕವಾದ, ವೈಜ್ಞಾನಿಕವಾದ, ಸಾಮಾಜಿಕವಾದ ಕಾರಣಗಳನ್ನು ನೀಡಿ ಉತ್ತರಿಸುವ ನೈತಿಕತೆ ಅದಕ್ಕೆ ಇಲ್ಲವೇ ಇಲ್ಲ.

ಯಾಕೆ ನೈತಿಕತೆ ಇಲ್ಲವೆಂದರೆ ಅಸಮಾನತೆಯನ್ನು ಒಳಗೊಂಡ ಶ್ರೇಣೀಕೃತ ಶಿಕ್ಷಣ ವ್ಯವಸ್ಥೆಯನ್ನು ಸ್ವತಃ ಸರ್ಕಾರವೇ ಪೋಷಿಸುತ್ತಿದೆ.  ಸರ್ಕಾರ ಯಾಕೆ ತನ್ನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಈ ಶ್ರೇಣೀಕೃತ ಶಿಕ್ಷಣ ವ್ಯವಸ್ಥೆಯನ್ನು ಪೋಷಿಸುತ್ತಿದೆ ಎಂದರೆ ಅನೇಕ ವೃತ್ತಿಪರ ರಾಜಕಾರಣಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಒಡೆಯರಾಗಿರುವುದು ಮತ್ತು ಖಾಸಗಿಯವರ ಹಿತಾಸಕ್ತಿಯೇ ಸರ್ಕಾರದ ಆದ್ಯತೆಯಾಗಿರುವುದು.

ಇಂತಹ ಬಲವಾದ ಖಾಸಗಿ ಲಾಬಿಯನ್ನು ಎದುರಿಸಲು ಯಾವುದೇ ಬಗೆಯ ರಾಜಕೀಯ, ಸಾಮಾಜಿಕ ಇಚ್ಛಾಶಕ್ತಿ ಇಲ್ಲದ ಸರ್ಕಾರವು ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಿದೆ.

ಎರಡನೆಯದಾಗಿ ಇಲ್ಲಿ ಮಾಧ್ಯಮಕ್ಕಿಂತಲೂ ಮಿಗಿಲಾಗಿ ಒಂದು ಬಗೆಯ ವರ್ಗ ಶ್ರೇಷ್ಠತೆಯ ಕಾರಣಕ್ಕಾಗಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿಲ್ಲ.

ಸರ್ಕಾರಿ ಶಾಲೆಗಳನ್ನು ಕೇವಲ ಬಡವರ, ತಳ ಸಮುದಾಯಗಳ ಮಕ್ಕಳಿಗಾಗಿಯೇ ಇರುವ ಶಾಲೆಗಳೆನ್ನುವ ಪ್ರತ್ಯೇಕತೆಯ ವಾತಾವರಣ ಸೃಷ್ಟಿಸಲಾಗಿದೆ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿರುವ ಶಿಕ್ಷಣ ಕ್ಷೇತ್ರದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರು ಮೊದಲು ಈ ದುರಂತದ ಹೊಣೆ ಹೊರಬೇಕಾಗುತ್ತದೆ.

ಏಕೆಂದರೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಡ್ಡಾಯವಾಗಿ ವಿದ್ಯಾಭ್ಯಾಸ ಮಾಡದೇ ಹೋದರೆ ಅದು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿದಂತೆ ಎನ್ನುವ ಭಾವನೆ ಮೂಡುವುದು ಸಹಜವೆ.

ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್‌, ಸರ್ಕಾರಿ ಉದ್ಯೋಗದಲ್ಲಿರುವ ಎಲ್ಲ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಐತಿಹಾಸಿಕ ತೀರ್ಪು ನೀಡಿದೆ. ಆದರೆ ಇದರ ಕುರಿತಾಗಿ ಸಂಬಂಧಪಟ್ಟವರು ಗಮನ ಹರಿಸಿಲ್ಲ.

ಮೊದಲನೆಯದಾಗಿ ರಾಜ್ಯ ಸರ್ಕಾರ ಈ ತೀರ್ಪನ್ನು ಬಳಸಿಕೊಂಡು ರಾಜ್ಯ ಶಿಕ್ಷಣ ನೀತಿಯನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಬೇಕಾಗಿದೆ. ನಂತರ ಪಠ್ಯಪುಸ್ತಕ, ಪಠ್ಯಕ್ರಮ, ಬೋಧನಾ ಕ್ರಮಗಳನ್ನು ಪರಿಷ್ಕರಿಸಬೇಕಾಗುತ್ತದೆ.

ಒಂದು ಉದಾಹರಣೆ ಕೊಡುತ್ತೇನೆ. ಮಂಡ್ಯ, ತುಮಕೂರು, ರಾಯಚೂರು, ಹಾಸನ ಜಿಲ್ಲೆಗಳಲ್ಲಿ ಸುಮಾರು ನೂರು ಶಾಲೆಗಳಲ್ಲಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯ ‘ನಮ್ಮ ಊರು ನಮ್ಮ ಶಾಲೆ’ ಚಳವಳಿ, ಹಳೆಯ ವಿದ್ಯಾರ್ಥಿಗಳ ಒಕ್ಕೂಟಗಳು ತಾವೇ ಮುಂದಾಗಿ ಸರ್ಕಾರಿ ಶಾಲೆಗಳನ್ನು ಬಲಪಡಿಸಿವೆ.

ಅಲ್ಲಿ ಮಕ್ಕಳ ನೋಂದಣಿ ನಿರೀಕ್ಷೆಗೆ ಮೀರಿ ತನ್ನ ಗುರಿಯನ್ನು ಮುಟ್ಟಿದೆ. ಒಂದು ಉತ್ತಮ ಉದಾಹರಣೆ ಕೆ.ಆರ್.ಪೇಟೆಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಅಲ್ಲಿ 2014 – 15ರಲ್ಲಿ  ಕೇವಲ 130 ಇದ್ದ ಮಕ್ಕಳ ಸಂಖ್ಯೆ ಇಂದು 2016-17ರಲ್ಲಿ 750ಕ್ಕೆ ಏರಿದೆ. ಅಲ್ಲಿನ ಪ್ರಗತಿಪರ ಪ್ರಾಧ್ಯಾಪಕರು, ಶಿಕ್ಷಕರು ಮತ್ತು ಶಿಕ್ಷಣ ಅಧಿಕಾರಿಗಳು ಒಟ್ಟಾಗಿ ಕೈ ಜೋಡಿಸಿ ಸರ್ಕಾರಿ ಶಾಲೆ ಉಳಿಸಬೇಕೆನ್ನುವ ಅಪಾರ ಇಚ್ಛಾಶಕ್ತಿ ಹೊಂದಿದ್ದ ಕಾರಣಕ್ಕಾಗಿ ಇದು ಸಾಧ್ಯವಾಯಿತು.

ಯಾವುದೇ ಬಗೆಯ ಸವಲತ್ತು, ಸೌಕರ್ಯಗಳಿಲ್ಲದ ಸರ್ಕಾರೇತರ ಪ್ರಗತಿಪರ ಸಂಘಟನೆಗಳಿಗೆ ಇದು ಸಾಧ್ಯವಾದರೆ ಎಲ್ಲ ಸವಲತ್ತು, ಸೌಕರ್ಯಗಳನ್ನೊಳಗೊಂಡ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಯಾಕೆ ಇದು ಸಾಧ್ಯವಾಗುವುದಿಲ್ಲ? ಇದು ತುಂಬಾ ಸರಳ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT