ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರೀಕರಣ ಮಾಡಿ!

Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯ, ಗುಣಮಟ್ಟದ ಶಿಕ್ಷಣ ಲಭಿಸಿದರೆ ಪೋಷಕರೇಕೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕರೆತರುತ್ತಾರೆ? ಮನೆ ಪಕ್ಕ ಸರ್ಕಾರಿ ಶಾಲೆ ಇಟ್ಟುಕೊಂಡು ದೂರದಲ್ಲೆಲ್ಲೊ ಇರುವ ಖಾಸಗಿ ಶಾಲೆಗೇಕೆ ಸೇರಿಸುತ್ತಾರೆ?

ಅಷ್ಟಿದ್ದರೆ ಮೊದಲು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ ಖಾಸಗಿ ಶಾಲೆಗಳ ಬೇಡಿಕೆ ತಗ್ಗಿಸಿ. ಇಲ್ಲ ಸರ್ಕಾರೀಕರಣ ಮಾಡಿ ಖಾಸಗಿ ಶಾಲೆಗಳನ್ನು ಮುಚ್ಚಿಸಿಬಿಡಿ. ‘ಖಾಸಗಿ ಶಿಕ್ಷಣ ಸಂಸ್ಥೆಗಳು ವೇಶ್ಯಾವಾಟಿಕೆ ಕೇಂದ್ರಗಳು, ದೇಶದ್ರೋಹಿಗಳು’ ಎನ್ನುವವರಿಗೆ ನನ್ನ ಬಹಿರಂಗ ಸವಾಲಿದು.

ಅಷ್ಟಕ್ಕೂ ಸರ್ಕಾರ ನಮ್ಮ ಅಭಿಪ್ರಾಯ ಕೇಳಿ ನೀತಿ ನಿಯಮ ರೂಪಿಸಿದೆಯೇ? ಶುಲ್ಕ ತೆಗೆದುಕೊಳ್ಳಬಾರದು ಎಂದು ಕಡಿವಾಣ ಹಾಕಲು ಸರ್ಕಾರಕ್ಕೇನು ನೈತಿಕ ಹಕ್ಕಿದೆ? ಸರ್ಕಾರದಿಂದ ಯಾವುದೇ ರಕ್ಷಣೆ ಇಲ್ಲ, ಸವಲತ್ತು ಲಭಿಸುತ್ತಿಲ್ಲ. ಖಾಸಗಿ ಶಾಲೆಗಳು ಬಳಸುವ ನೀರು, ವಿದ್ಯುತ್‌ಗೂ ರಿಯಾಯಿತಿ ಇಲ್ಲ. ಸಂಸ್ಥೆ ಅಭಿವೃದ್ಧಿಗೆ ಸಾಲ ಪಡೆಯಬೇಕಾದರೂ ವಾಣಿಜ್ಯ ಉದ್ದೇಶವೆಂದೇ ಪರಿಗಣಿಸಿ ಗರಿಷ್ಠ ಮಟ್ಟದ ಬಡ್ಡಿದರ ವಿಧಿಸಲಾಗುತ್ತದೆ.

ದಯವಿಟ್ಟು ಹಳದಿ ಕಣ್ಣಿನಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನೋಡಬೇಡಿ. ಯಾವುದೇ ಕಾರಣಕ್ಕೂ ನಮ್ಮನ್ನು ಅನುದಾನಿತ ಶಾಲೆಗಳ ಜೊತೆ ಹೋಲಿಸಬೇಡಿ. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳೂ ಸರಿಯಾಗಿವೆ ಎಂದು ನಾನು ಹೇಳುವುದಿಲ್ಲ.

ಅಂಥ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಆದರೆ, ಬೆರಳೆಣಿಕೆಯಷ್ಟು ಮಂದಿ ಮಾಡುವ ಅನಾಚಾರಕ್ಕೆ ಎಲ್ಲರನ್ನೂ ಶಿಕ್ಷಿಸಬೇಡಿ. ಹೆಚ್ಚಿನವರು ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.

ಒಂದೊಂದು ಶಿಕ್ಷಣ ಸಂಸ್ಥೆಯ ಆಶಯ, ಗುರಿ ವಿಭಿನ್ನವಾಗಿರಬಹುದು, ಅದಕ್ಕೆ ತಕ್ಕಂತೆ ನಿಯಮ ರೂಪಿಸಿಕೊಂಡಿರಬಹುದು. ಆದರೆ, ಎಲ್ಲವೂ ಕಾನೂನಿನಡಿ ಕೆಲಸ ಮಾಡುತ್ತಿವೆ. ಸದ್ಯ ನೆಲೆಸಿರುವ ಪೈಪೋಟಿಯಿಂದ ಮತ್ತಷ್ಟು ಗುಣಮಟ್ಟದ ಸಂಸ್ಥೆಗಳು ತಲೆಎತ್ತುತ್ತವೆ ಎಂಬುದನ್ನು ಮರೆಯಬಾರದು.

ಶಿಕ್ಷಣದ ಬಗ್ಗೆ ಕಾಳಜಿ ಇದ್ದವರು ಸರ್ಕಾರಿ ಶಾಲೆಗಳ ಕಳಪೆ ಗುಣಮಟ್ಟದ ಬಗ್ಗೆ ದನಿ ಎತ್ತಲಿ. ಸಿಬಿಎಸ್‌ಇ, ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರಗಳನ್ನು ರಾಜ್ಯ ಸರ್ಕಾರವೂ ಆರಂಭಿಸಬೇಕೆಂದು ಒತ್ತಾಯಿಸಲಿ.

ಸರ್ಕಾರಿ ಅಧಿಕಾರಿಗಳು, ನೌಕರರು ಸರ್ಕಾರಿ ಶಾಲೆಯಲ್ಲೇ ಓದಬೇಕೆಂಬ ನಿಯಮ ರೂಪಿಸುವಂತೆ ಆಗ್ರಹಿಸಲಿ. ಅದನ್ನು ಬಿಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ‘ವಿಲನ್’ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸಬಾರದು.

ಸರ್ಕಾರಿ ಶಿಕ್ಷಕರಿಗಿಂತ ಹೆಚ್ಚು ಪಗಾರವನ್ನು ಖಾಸಗಿ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ನೀಡುತ್ತಿವೆ. ಸರ್ಕಾರ ನೀಡುವ ಎಲ್ಲಾ ಸವಲತ್ತುಗಳನ್ನು ಶಿಕ್ಷಕರಿಗೆ ನೀಡಬೇಕು. ಇಲ್ಲದಿದ್ದರೆ ಶಾಲೆಗೆ ಮಾನ್ಯತೆಯೇ ಸಿಗುವುದಿಲ್ಲ. ಅಷ್ಟೇ ಅಲ್ಲ; ಮಕ್ಕಳು ನೀಡುವ ಹಣಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಂಗ್ರಹಿಸುವ ಹಣ ಅಭಿವೃದ್ಧಿ ಕಾರ್ಯಗಳಿಗೆ ಹೋಗುತ್ತದೆ. ಇಲ್ಲವೇ ಮತ್ತೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಬಳಸಲಾಗುತ್ತದೆ.

ಮಕ್ಕಳು ಕೈತೊಳೆದುಕೊಳ್ಳಲು ಶೌಚಾಲಯದಲ್ಲಿ ಸೋಪಿನ ನೀರು ಇಟ್ಟಿಲ್ಲವೆಂದರೆ ಪೋಷಕರು ಗಲಾಟೆ ಮಾಡುತ್ತಾರೆ. ಶಾಲೆಯಿಂದ ಮಗು ಬರುವುದು ಐದು ನಿಮಿಷ ತಡವಾದರೆ ನಿಮಿಷಕ್ಕೊಂದು ಫೋನ್‌ ಕರೆ ಬರುತ್ತದೆ. ನಮಗೂ ಜವಾಬ್ದಾರಿ ಇದೆ.

ಅದನ್ನು ಸಮರ್ಥವಾಗಿ ನಿಭಾಯಿಸಲು ಅವಕಾಶ ನೀಡಿ. ದುರದೃಷ್ಟವೆಂದರೆ ಖಾಸಗಿ ಸಂಸ್ಥೆಗಳಿಗೆ ಶಿಕ್ಷಣ ಇಲಾಖೆಯಿಂದ ದಿನಕ್ಕೊಂದು ಸುತ್ತೋಲೆಬರುತ್ತಿರುತ್ತದೆ. ಅಧಿಕಾರಿಗಳು ದಿನಕ್ಕೊಂದು ಕಾನೂನು ರೂಪಿಸುತ್ತಿರುತ್ತಾರೆ. ಒಬ್ಬೊಬ್ಬರು ಆಯುಕ್ತರು ಬಂದಾಗ ಒಂದೊಂದು ನೀತಿ, ನಿಯಮ!

ಒತ್ತಡ, ಕಿರುಕುಳ ನೀಡಿ ಆತ್ಮಸ್ಥೈರ್ಯ ಕುಂದಿಸಿದರೆ ಯಾವ ಶಿಕ್ಷಣ ಸಂಸ್ಥೆಯ ವಾತಾವರಣವೂ ಚೆನ್ನಾಗಿರಲು ಸಾಧ್ಯವಿಲ್ಲ. ಈಗ ಕ್ಷುಲ್ಲಕ ಕಾರಣಗಳಿಗೂ ದೂರು ನೀಡಲಾಗುತ್ತಿದೆ, ಬೆದರಿಕೆಯೊಡ್ಡಲಾಗುತ್ತಿದೆ. ಮೊದಲೇ ಉತ್ತಮ ಶಿಕ್ಷಕರ ಕೊರತೆಯಿದೆ,

ಈಗಿರುವವರೂ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಖಾಸಗಿ ಶಾಲೆ ನಡೆಸುವ ಬಗ್ಗೆ ಸ್ಪಷ್ಟ ನೀತಿ ನಿಯಮ ರೂಪಿಸಿ. ಹಾಗೆಯೇ, ಶಾಲೆಗಳ ಮುಂದೆ ಪ್ರತಿಭಟನೆ ಮಾಡುವುದರ ವಿರುದ್ಧ ನಿಯಂತ್ರಣ ಹೇರಿ. ಇಲ್ಲದಿದ್ದರೆ ಮಕ್ಕಳ ಮನಸ್ಸಿಗೆ ಗಾಸಿಯಾಗಬಹುದು.

ಜಾಗತಿಕ ಪೈಪೋಟಿಗೆ ತಕ್ಕಂತೆ ನಮ್ಮ ಮಕ್ಕಳನ್ನು ರೂಪಿಸಲು ಸರ್ಕಾರದ ಜೊತೆಗೆ ಖಾಸಗಿ ಸಹಭಾಗಿತ್ವವೂ ಇರಬೇಕು. ಆರ್ಥಿಕ ವಲಯದಲ್ಲಿ ವಿದೇಶಿ ಕಂಪೆನಿಗಳಿಗೆ ಮಣೆ ಹಾಕಿದಂತೆ ಉತ್ತಮ ಶಿಕ್ಷಣ ನೀಡಲೂ ಖಾಸಗಿಯವರನ್ನೂ ಪ್ರೋತ್ಸಾಹಿಸಬೇಕು. ಇಲ್ಲ ಖಾಸಗಿ ಶಾಲೆ ತೆರೆಯದಂತೆ ಕಾನೂನು ರೂಪಿಸಿ ಸರ್ಕಾರವೇ ಎಲ್ಲಾ ಶಾಲೆಗಳನ್ನು ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT