ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಕೊಟ್ಟ ಮಾತು ತಪ್ಪಿದ್ದರಿಂದ ಬಿಕ್ಕಟ್ಟು

ವಾರದ ಸಂದರ್ಶನ-ಡಿ.ಎಚ್.ಶಂಕರಮೂರ್ತಿ ವಿಧಾನಪರಿಷತ್ ಸಭಾಪತಿ
Last Updated 2 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು, ವಕ್ಫ್ ಆಸ್ತಿ ಕಬಳಿಕೆ ಕುರಿತು ನೀಡಿದ್ದ ವರದಿಯನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸುವ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ವರದಿಯನ್ನು ಸದನದಲ್ಲಿ ಮಂಡಿಸಲೇಬೇಕು ಎಂದು ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರು ರೂಲಿಂಗ್ ನೀಡಿದ್ದಾರೆ.

ರೂಲಿಂಗ್‌ ನೀಡಿದ ಬಳಿಕವೂ ಸರ್ಕಾರ ವರದಿಯನ್ನು ಮಂಡಿಸಲು ಹಿಂದೇಟು ಹಾಕಿದ್ದರಿಂದ ಅಸಮಾಧಾನಗೊಂಡಿರುವ ಸಭಾಪತಿ ಈ ವಿಚಾರವನ್ನು ರಾಜ್ಯಪಾಲರ ಬಳಿಗೆ ಕೊಂಡೊಯ್ದಿದ್ದಾರೆ.  ಈ ಗೊಂದಲಗಳು ಏಕೆ ಸೃಷ್ಟಿಯಾದವು, ಬಿಕ್ಕಟ್ಟು ಬಗೆಹರಿಸಲು ಪರ್ಯಾಯ ಮಾರ್ಗೋಪಾಯಗಳೇನಾದರೂ ಇವೆಯೇ ಎಂಬ ಬಗ್ಗೆ ಶಂಕರಮೂರ್ತಿ ಅವರು ಇಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ವಿಧಾನ ಪರಿಷತ್ತಿನಲ್ಲಿ ಈ ಬಾರಿ ಕಲಾಪ ಸರಿಯಾಗಿ ನಡೆಯಲೇ ಇಲ್ಲ. ಯಾಕೆ ಈ ಗೊಂದಲ?
ಕಲಾಪ ಸರಿಯಾಗಿ ನಡೆಯದ ಬಗ್ಗೆ ನನಗೂ ನೋವಿದೆ. ಅನ್ವರ್‌ ಮಾಣಿಪ್ಪಾಡಿ ಅವರ ವರದಿ ಮಂಡನೆಗೆ ಸಂಬಂಧಿಸಿದಂತೆ ನಾನು ನೀಡಿದ ರೂಲಿಂಗ್‌ ಪಾಲಿಸಲು ಸರ್ಕಾರ ಹಿಂದೇಟು ಹಾಕಿತು. ವಿರೋಧ ಪಕ್ಷದವರು ಇದನ್ನೇ ದೊಡ್ಡ ವಿವಾದ ಮಾಡಿದರು. ಸದನ ನಡೆಸಲಿಕ್ಕೇ ಬಿಡುತ್ತಿಲ್ಲ. ವಿರೋಧ ಪಕ್ಷದವರ ಸಂಖ್ಯೆ ಜಾಸ್ತಿ, ಸದನ ನಡೆಸುವುದಕ್ಕೆ ಅವಕಾಶ ಕೊಡಲೇ ಬಾರದು ಎಂದು ಅವರು ನಿರ್ಧಾರ ತೆಗೆದುಕೊಂಡಂತಿದೆ. ದಿನವೂ ಪೀಠದ ಎದುರು ಗಲಾಟೆ ಮಾಡಿದರೆ ನಾನೇನು ಮಾಡಲಿ? ಸಂದಿಗ್ಧ ಪರಿಸ್ಥಿತಿ ಇದೆ. ಹಾಗಾಗಿ ನಾನು ಈ ವಿಚಾರವನ್ನು ಅನಿವಾರ್ಯವಾಗಿ ರಾಜ್ಯಪಾಲರ ಬಳಿ ತೆಗೆದುಕೊಂಡು ಹೋಗಬೇಕಾಯಿತು.

* ಈ ಹಿಂದೆ ಎಂದಾದರೂ ಇಂತಹ ಬಿಕ್ಕಟ್ಟು ಸೃಷ್ಟಿ ಆಗಿತ್ತೇ?
ನನಗೆ ತಿಳಿದಂತೆ ಭಾರತದ ಇತಿಹಾಸದಲ್ಲೇ ಯಾವುದೇ ವಿಧಾನ ಮಂಡಲದಲ್ಲಿ ಇಂತಹ ಪರಿಸ್ಥಿತಿ ಇದುವರೆಗೆ ನಿರ್ಮಾಣ ಆಗಿಲ್ಲ. ಇದೊಂದು ಅಪರೂಪದ ಪ್ರಕರಣ. ವರದಿಯನ್ನು ಸದನದಲ್ಲಿ ಮಂಡಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಫೆಬ್ರುವರಿ ಅಧಿವೇಶನದಲ್ಲಿ ವರದಿ ಮಂಡಿಸುವುದಾಗಿ ಹೈಕೋರ್ಟ್‌ಗೂ ಮಾತು ಕೊಟ್ಟಿದ್ದೇವೆ. ಅದರಂತೆ ವರದಿಯನ್ನು ಮಂಡಿಸಲೇಬೇಕಾಗುತ್ತದೆ ಎಂದು ಸಭಾನಾಯಕರೇ ತಿಳಿಸಿದ್ದರು. ಹಾಗಾದರೆ ಮಂಡಿಸಿ ಎಂದಷ್ಟೇ ನಾನು  ಹೇಳಿದ್ದೇನೆ.

* ವಿಧಾನ ಪರಿಷತ್ತಿನಲ್ಲಿ ಸೃಷ್ಟಿಯಾದ ಬಿಕ್ಕಟ್ಟನ್ನು ಬಗೆಹರಿಸಲು ಮೊತ್ತಮೊದಲ ಬಾರಿಗೆ ರಾಜ್ಯಪಾಲರ ಮಧ್ಯಪ್ರವೇಶವನ್ನು ಅಪೇಕ್ಷಿಸಲಾಗಿದೆ. ಪರಿಷತ್ತಿನಲ್ಲೇ ಬಗೆಹರಿಸಬಹುದಾದ ವಿಚಾರವನ್ನು ರಾಜಪಾಲರ ಅಂಗಳಕ್ಕೆ ಕೊಂಡೊಯ್ದದ್ದು ಸರಿಯೇ?
ನಾನು ವಕೀಲ ಅಲ್ಲ. ಸಾರ್ವಜನಿಕ ಜೀವನದ ಅನುಭವದ ಹಿನ್ನೆಲೆಯಲ್ಲಿ  ನನ್ನ ಶಕ್ತ್ಯಾನುಸಾರ ನಿರ್ಣಯ  ತೆಗೆದುಕೊಂಡಿದ್ದೇನೆ. ನನ್ನಲ್ಲಿ ಈಗಲೂ ಯಾವುದೇ ಗೊಂದಲ ಇಲ್ಲ. ನನ್ನ ನಿರ್ಣಯ ಸರಿಯಾಗಿಯೇ ಇದೆ. 

* ನಿಮ್ಮ ಮುಂದೆ ಬೇರೆ ಆಯ್ಕೆಗಳೇ ಇರಲಿಲ್ಲವೇ?
ಮಾಣಿಪ್ಪಾಡಿ ವರದಿ ಮಂಡನೆ ವಿಚಾರದಲ್ಲಿ ಸರ್ಕಾರ ಪದೇಪದೇ  ರಾಗ ಬದಲಾಯಿಸಿತು.  ಸಭಾಪತಿಯಾಗಿ ನನಗೆ ಆಯ್ಕೆಗಳು ಕಡಿಮೆ ಇರುತ್ತವೆ. ನಾನು ಜನರ ಬಳಿ ಹೋಗುವುದಕ್ಕೆ ಆಗುವುದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವಾಗಿ ಕಾನೂನು ತಜ್ಞರನ್ನು ಸಂಪರ್ಕಿಸಿದ್ದೆ. ಎರಡು ಬಾರಿ ಅಡ್ವೊಕೇಟ್‌ ಜನರಲ್‌ ಅವರ ಬಳಿಯೂ ಸಲಹೆ ಪಡೆದಿದ್ದೇನೆ. ಸಂಸದೀಯ ವ್ಯವಹಾರ ಕುರಿತ ವಿಚಾರಗಳನ್ನು ಚೆನ್ನಾಗಿ ತಿಳಿದುಕೊಂಡಿರುವ  ಹಿರಿಯರ ಬಳಿಯೂ ಸಮಾಲೋಚಿಸಿ ನಿರ್ಣಯ ಕೈಗೊಂಡಿದ್ದೇನೆ. ಇಷ್ಟೆಲ್ಲ ಆದ ಬಳಿಕವೇ ನಾನು ರೂಲಿಂಗ್‌ ನೀಡಿದ್ದು. ಅದನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಸರ್ಕಾರ ಹೇಳಿತೇ ಹೊರತು ಅದನ್ನು ಪಾಲಿಸಲಿಲ್ಲ. ಅಡ್ವೊಕೇಟ್‌ ಜನರಲ್‌ ಬಳಿ ಮಾತಾಡಿ ಆಗಿದೆ. ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳು ಪಟ್ಟು ಬಿಡದಿದ್ದರೆ ನಾನು ಏನು ಮಾಡಬೇಕು?

ಶಿಷ್ಟಾಚಾರದ ಪ್ರಕಾರ ನನಗಿಂತ ಹಿರಿಯರೆಂದರೆ ರಾಜ್ಯಪಾಲರು.  ಅವರಲ್ಲದೆ ಮತ್ತೆ ಯಾರ ಬಳಿಗೆ ಹೋಗಲಿ? ಸದನವನ್ನು ಸುಸೂತ್ರವಾಗಿ ನಡೆಸಲು ಆಗುತ್ತಿಲ್ಲ, ನೀವೇ ದಾರಿ ತೋರಬೇಕು ಎಂದು ಅವರ ಬಳಿ ಸಲಹೆ ಕೇಳಿದ್ದೇನೆಯೇ ಹೊರತು ದೂರು ನೀಡಿಲ್ಲ. ಅವರು ಏನು ಸಲಹೆ ನೀಡುತ್ತಾರೆ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.

* ಆಯೋಗದ ವರದಿಯನ್ನು ತಿರಸ್ಕರಿಸಲಾಗಿದೆ. ಕ್ರಮ ಕೈಗೊಂಡ ವರದಿಯನ್ನು ಮಂಡಿಸಿದ ಬಳಿಕ ಮೂಲ ವರದಿಯನ್ನು ಮಂಡಿಸಬೇಕಾಗಿಲ್ಲ ಎಂದು ಸರ್ಕಾರ ವಾದಿಸುತ್ತಿದೆಯಲ್ಲಾ?
ಸರ್ಕಾರ ಏನು ಬೇಕಾದರೂ ಹೇಳಬಹುದು. ಮಾತಿಗೆ ತಪ್ಪಿ, ಈಗ ಅವರ ವಾದವೇ ಸರಿ ಎನ್ನುತ್ತಿದ್ದಾರೆ. ನಾನು ಪ್ರಾಜ್ಞ ಅಲ್ಲ. ಆದರೆ, ನನಗೂ ಸ್ವಲ್ಪ ಕಾನೂನು ಗೊತ್ತಿದೆ. ಅಲ್ಪಸಂಖ್ಯಾತರ ಕಾಯ್ದೆ ಸೆಕ್ಷನ್‌ 10 (2)  ಪ್ರಕಾರ ನಡೆದುಕೊಂಡಿರುವುದಾಗಿ ಅವರು ಹೇಳುತ್ತಿದ್ದಾರೆ.  ಸದನದಲ್ಲಿ ಚರ್ಚೆ ನಡೆದದ್ದು ಆ ಕಾಯ್ದೆ ಪ್ರಕಾರ ಅಲ್ಲ. ಅಲ್ಪಸಂಖ್ಯಾತರ ಕಾಯ್ದೆಯ  ಬಗ್ಗೆಯೂ ಕಾನೂನು ತಜ್ಞರಿಂದ ಲಿಖಿತವಾಗಿ ವಿವರಣೆ ಪಡೆದಿದ್ದೇನೆ.  ಇಡೀ ವರದಿಯನ್ನು ಮಂಡಿಸಬಾರದು ಎಂದು ಅದರಲ್ಲೇನೂ ಹೇಳಿಲ್ಲ. ವರದಿಯನ್ನು ಮಂಡಿಸುವುದಿಲ್ಲ ಎಂದು ಮೊದಲೇ ಸಭಾನಾಯಕರು ಹೇಳುತ್ತಿದ್ದರೆ ಇಷ್ಟೆಲ್ಲ ವಿವಾದ ಆಗುತ್ತಲೇ ಇರಲಿಲ್ಲ.  ವರದಿ ಮಂಡಿಸಲು ಒಪ್ಪಿಕೊಂಡು, ನಂತರ ಆಗುವುದಿಲ್ಲ ಎಂದರೆ ಹೇಗೆ? ನಾನು ಎಲ್ಲಾ ಆಯಾಮಗಳನ್ನೂ ನೋಡಿಕೊಂಡು, ಬಹಳ ಯೋಚಿಸಿ, ಹುಷಾರಾಗಿ ಪದಪ್ರಯೋಗಿಸಿ ರೂಲಿಂಗ್‌ ನೀಡಿದ್ದೇನೆ. 

* ಬಿಕ್ಕಟ್ಟು ಸೃಷ್ಟಿ ಆದಾಗ ಸಾಮಾನ್ಯವಾಗಿ ಸಭಾಪತಿ ಸಂಧಾನಕ್ಕೆ ಯತ್ನಿಸುತ್ತಾರೆ. ಈ ಬಾರಿ ಹಾಗೆ ಆಗಿಲ್ಲ ಎಂಬ ಆರೋಪ ಇದೆಯಲ್ಲ?
ಯಾರಾದರೂ ಈ ರೀತಿ ಆರೋಪ ಮಾಡಿದರೆ ಅದು ಅಪರಾಧ. ಸಭಾಪತಿಯಾಗಿ ಏನೇನು ಮಾಡಲು ಸಾಧ್ಯವೋ ಅಷ್ಟನ್ನೂ ಮಾಡಿದ್ದೇನೆ. ಸದನದ ಒಳಗೆ ವಿರೋಧ ಪಕ್ಷದ ಸದಸ್ಯರ ಮನವೊಲಿಸಿದ್ದೇನೆ. ಸದನ ಮುಂದೂಡಿ ಎರಡೂ ಕಡೆಯ ನಾಯಕರನ್ನು ಸಂಧಾನಕ್ಕೆ ಕರೆದಿದ್ದೇನೆ. ಕೆಲವು ಬಾರಿ ಬಂದಿದ್ದಾರೆ. ಕೆಲವು ಬಾರಿ ಬರಲಿಲ್ಲ. ಬೇರೆ ವಿಷಯಗಳ ಬಗ್ಗೆ ಮಾತುಕತೆ ಚೆನ್ನಾಗಿ ಆಗಿದೆ. ಆದರೆ, ಈ ವಿಷಯದಲ್ಲಿ ಮಾತುಕತೆ ಸರಿಯಾಗಿ ಆಗಿಲ್ಲ.  

* ಈ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಹೇಗೆ?
ಸದ್ಯಕ್ಕೆ ಅಧಿವೇಶನವನ್ನು ಮುಂದೂಡಲಾಗಿದೆ. ಮುಂದಿನ ಅಧಿವೇಶನದವರೆಗೆ ಏನೂ ಆಗದು. ಆ ನಂತರ ಏನಾಗುತ್ತದೆ ಎಂದು ಈಗಲೇ ಹೇಳಲಾಗದು. ನಾಳೆ ಯಾವ ಪರಿಸ್ಥಿತಿ ಬರುತ್ತದೋ ನೋಡೋಣ. ಸದ್ಯಕ್ಕೆ ತಾರ್ಕಿಕ ಅಂತ್ಯ ಅಸಾಧ್ಯ.

* ಬಿಕ್ಕಟು ಬಗೆಹರಿಯುತ್ತದೆ ಎಂಬ ಆಶಾವಾದವೂ ಉಳಿದಿಲ್ಲವೇ? 
ಹಾಗೇನೂ ಇಲ್ಲ. ಸಂಸದೀಯ ವ್ಯವಹಾರ ಸಚಿವರು ಇಂತಹ ಕಾರಣಕ್ಕೆ ವರದಿ ಮಂಡಿಸಲು ಸಾಧ್ಯವಿಲ್ಲ ಎಂದು ಒಂದು ಪತ್ರ ಕೊಟ್ಟಿದ್ದಾರೆ. ಅವರು ನನ್ನ ಬಳಿ ಬಂದು ಅದನ್ನು ಮನವರಿಕೆ ಮಾಡಿದರೆ ನಾನು ಒಪ್ಪಿಕೊಳ್ಳಬಹುದು. ನನ್ನ ವಾದ ಸರಿ ಇದೆ ಎಂದು ಅನ್ನಿಸಿ ಅವರೂ ಒಪ್ಪಬಹುದು. ಆದರೆ, ನನ್ನ ನಿರ್ಣಯದ ಬಗ್ಗೆ ಈಗಲೂ ಸ್ಪಷ್ಟತೆ ಇದೆ. ವಿರೋಧ ಪಕ್ಷದವರು ಏನು ಮಾಡುತ್ತಾರೋ ಹೇಳಲಾಗದು.

* ಸದನದಲ್ಲಿ ಗಲಾಟೆ ಹೆಚ್ಚಾಗಿದ್ದರಿಂದ ಸಿಟ್ಟಿನಿಂದ ವಿಚಲಿತರಾಗಿ ಪೀಠದಿಂದ ಎದ್ದು ಹೋಗಿದ್ದು ಏಕೆ?
ನಾನು ಸಿಟ್ಟಿನಿಂದ ಎದ್ದು ಹೋಗಿದ್ದಲ್ಲ. ನಮ್ಮ ತಂದೆಯವರ ವೈದಿಕ ಇತ್ತು. ಯೋಗಾಯೋಗ ಅದು ಗುರುವಾರ ಬಂದಿತ್ತು. ಹಾಗಾಗಿ ನಾನು ಬುಧವಾರ ಮಧ್ಯಾಹ್ನದ ತನಕ ಸದನ ನಡೆಸಿ ನಂತರ ಹೊರಟೆ. ವಿರೋಧ ಪಕ್ಷದ ನಾಯಕರಿಗೆ, ಸಭಾನಾಯಕರಿಗೆ, ಕಚೇರಿ ಸಿಬ್ಬಂದಿಗೆ ತಿಳಿಸಿಯೇ ಹೋಗಿದ್ದೆ. ಉಪ ಸಭಾಪತಿಯವರಿಗೂ ಹೇಗೆ ಸದನ ನಡೆಸಬೇಕು ಎಂದು ಸಲಹೆ ನೀಡಿದ್ದೆ. ಧನ ವಿನಿಯೋಗ ಮಸೂದೆ ಮಂಜೂರಾತಿ ಕೊಡಿಸುವುದು ನಮ್ಮ ಧರ್ಮ ಎಂದಿದ್ದೆ. ಅವರು ಚೆನ್ನಾಗಿ ನಡೆಸಿದರು.

* ಪರಿಷತ್ತನ್ನು ರದ್ದು ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ವಿಧಾನಸಭೆಯಲ್ಲೂ ಇದು ಪ್ರಸ್ತಾಪ ಆಗಿದೆ. ಈ ಬಗ್ಗೆ ಏನು ಹೇಳುತ್ತೀರಿ?
ವಿಧಾನಸಭೆಗೆ ಪರಿಷತ್ತನ್ನು ಬರ್ಕಾಸ್ತುಗೊಳಿಸುವ ಶಕ್ತಿ ಇದೆ ನಿಜ. ಆದರೆ ವಿಧಾನ ಪರಿಷತ್ತಿಗೆ ಉತ್ತರ ಕೊಡಲಿಕ್ಕೆ ಆಗುತ್ತಿಲ್ಲ ಎಂಬ ಕಾರಣಕ್ಕೆ ಪರಿಷತ್ತು ಬೇಡ ಎನ್ನುವುದು ಸರಿಯಲ್ಲ. ಪರಿಷತ್ತಿನ ವಿಸರ್ಜನೆಗೆ ಸೂಕ್ತ ಕಾರಣಗಳಿದ್ದರೆ ನೀಡಲಿ. ಪರಿಷತ್ತನ್ನು ವಿಸರ್ಜನೆ ಮಾಡುವ ನಿರ್ಣಯ ಕೈಗೊಳ್ಳಬೇಕಾದರೆ ವಿಧಾನಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಇರಬೇಕು. ಈ ನಿರ್ಣಯ ಮಂಡಿಸುವಾಗ ಶೇ 50ಕ್ಕೂ ಹೆಚ್ಚು ಸದಸ್ಯರು ಹಾಜರಿರಬೇಕು.  ಹಾಜರಿದ್ದವರ ಪೈಕಿ ಮೂರನೇ ಎರಡರಷ್ಟು  ಮಂದಿ ಈ ನಿರ್ಣಯವನ್ನು ಒಪ್ಪಬೇಕು. ಇಷ್ಟೆಲ್ಲಾ ಆಗಿಯೂ ಅದು ಲೋಕಸಭೆಯಲ್ಲೂ ಅಂಗೀಕಾರಗೊಳ್ಳಬೇಕು. ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಇವೆಲ್ಲ ಸಾಧ್ಯವೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದನ್ನು ಬೆಂಬಲಿಸಿಲ್ಲ. ಹಾಗಾಗಿ  ಆ ಬಗ್ಗೆ ಸುಮ್ಮನೆ ಚರ್ಚೆ ಏಕೆ?

* ಸಭಾಪತಿಯಾಗಿ ನಿಮ್ಮ ಕಾರ್ಯವೈಖರಿ ತೃಪ್ತಿ ತಂದಿದೆಯೇ?
ಸಭಾಪತಿಯಾಗಿ 6 ವರ್ಷದ ಅವಧಿ ಸಮಾಧಾನ ತಂದಿದೆ. ಸಭಾಪತಿಯವರ ಕೊಠಡಿ, ಖಾಸಗಿ ಕೊಠಡಿ ಸಹಿತ ಅನೇಕ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದೇನೆ.  ಪರಿಷತ್ತಿನ   ಒಳಾಂಗಣವನ್ನೂ ನವೀಕರಿಸಲಾಗಿದೆ. ಬೆಳಕಿನ ಸಮಸ್ಯೆ ನಿವಾರಿಸಿದ್ದೇನೆ. ಕಲಾಪ ಆರಂಭಕ್ಕೆ ಮುನ್ನ ವಂದೇ ಮಾತರಂ, ಅಂತ್ಯದಲ್ಲಿ ಜನಗಣಮನ ಹಾಡುವ ಪದ್ಧತಿ ಆರಂಭಿಸಿದೆ. ಅದನ್ನು ಕೆಳಮನೆಯಲ್ಲೂ ಈಗ ಅನುಸರಿಸುತ್ತಿದ್ದಾರೆ. ಸದನದಲ್ಲಿ  ಗಣ್ಯರ ಭಾವಚಿತ್ರ ಅಳವಡಿಸಿದ್ದೇನೆ. ಸದನ ಸರಿಯಾದ ಸಮಯಕ್ಕೆ ಪ್ರಾರಂಭ ಮಾಡುವುದನ್ನು ಅಭ್ಯಾಸ ಮಾಡಿಸಿದ್ದೇನೆ. ಶಾಸಕರ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಿಸಿದ್ದೇನೆ. 

* ಹೊಸ ಆಲೋಚನೆಗಳೇನಾದರೂ ಇವೆಯೇ?
ಸದನವನ್ನು ಕಾಗದರಹಿತ (ಪೇಪರ್‌ಲೆಸ್‌) ಮಾಡುವ ಚಿಂತನೆ ಇದೆ. ಆರು ತಿಂಗಳಲ್ಲಿ ಇದನ್ನು ಮಾಡುತ್ತೇನೆ. ಹಿಮಾಚಲ ಪ್ರದೇಶ ಮತ್ತು ರಾಜಸ್ತಾನದಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಾಗಿದೆ. ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ಅಲ್ಲಿನ ವ್ಯವಸ್ಥೆ ಅಧ್ಯಯನ ಮಾಡಿ ಬಂದ ನಂತರ ಇಲ್ಲೂ ಅದನ್ನು ಜಾರಿಗೊಳಿಸಲಾಗುವುದು.

* ನಿಮ್ಮ ಕೊಠಡಿಯಲ್ಲಿ ಆರ್‌ಎಸ್‌ಎಸ್‌ ನಾಯಕರ ಭಾವಚಿತ್ರ ಹಾಕಿರುವ ಬಗ್ಗೆ ಆಡಳಿತ ಪಕ್ಷದ ಸದಸ್ಯರು ತಗಾದೆ ತೆಗೆದಿದ್ದಾರಲ್ಲಾ?
ಸಭಾಪತಿಯವರ ಅಧಿಕೃತ ಕಚೇರಿಯಲ್ಲಿ ಆರ್‌ಎಸ್‌ಎಸ್‌ ನಾಯಕರ ಭಾವಚಿತ್ರ ಇಟ್ಟುಕೊಂಡಿಲ್ಲ. ನನ್ನ ಖಾಸಗಿ ಕೊಠಡಿಯಲ್ಲಿ ಅವರ ಭಾವಚಿತ್ರ ಇಟ್ಟುಕೊಂಡಿರುವುದರಲ್ಲಿ ತಪ್ಪೇನಿದೆ? ಒಂದು ವೇಳೆ ಸಭಾಪತಿಯವರ ಕಚೇರಿಯಲ್ಲಿ ಅವರ ಭಾವಚಿತ್ರ ಇಟ್ಟುಕೊಂಡರೂ ಅದು ತಪ್ಪಲ್ಲ. ನನಗೆ ಬೇಕಾದವರ ಭಾವಚಿತ್ರವನ್ನು ಇಟ್ಟುಕೊಳ್ಳುವ ಅಧಿಕಾರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT