ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಬದಲಾಗುತ್ತಲೇ ಯುಜಿಸಿ ‘ಬಣ್ಣ’ವೂ ಬದಲಾಯಿತೆ?

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ದೆಹಲಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳ ಪದವಿ ಶಿಕ್ಷಣ  (ಎಫ್‌ವೈಯುಪಿ) ಮುಂದುವರಿಸುವುದಕ್ಕೆ ಸಂಬಂಧಿಸಿದ ವಿವಾದದ ಬಗ್ಗೆ ಕೇಳಿದಾಗ ನಾನು ವಿಶ್ವವಿದ್ಯಾಲಯಗಳ ಅನುದಾನ ಆಯೋಗದಲ್ಲಿ (ಯುಜಿಸಿ) ಇದ್ದ ದಿನಗಳು ನೆನಪಾದವು. ದೇಶದ ಶಿಕ್ಷಣ ವಲಯದ ಅತ್ಯುನ್ನತ ಹುದ್ದೆಗಳನ್ನು ಹೊಂದಿದ್ದ ವಿದ್ವಾಂಸರು, ತಮ್ಮ ಎದುರು ಒಬ್ಬ ಅಧಿಕಾರಿ ಬಂದು ನಿಂತ ತಕ್ಷಣ ವಿಧೇಯರಾಗಿ ನಿಂತುಕೊಳ್ಳುತ್ತಿದ್ದ ಪ್ರಸಂಗಗಳೂ ಕಣ್ಣ ಮುಂದೆ ಹಾದು ಹೋದವು. ಉಪಚಾರಕ್ಕೆ ಎಂಬಂತೆ ಸಚಿವರು ನಡೆಸುತ್ತಿದ್ದ ಸಭೆಗಳು, ಕಹಿ ಸತ್ಯವನ್ನು ಯಾರಾದರೂ ಅರುಹಿದಾಗ ಅವರ ಮುಖ ಕೆಂಪಾಗುತ್ತಿದ್ದ ದೃಶ್ಯಗಳು ಸ್ಮೃತಿಪಟಲದಲ್ಲಿ ಮೂಡಿದವು.

ಎಫ್‌ವೈಯುಪಿ ಪದ್ಧತಿ ಜಾರಿಗೆ ತರಲು ಯುಪಿಎ ಸರ್ಕಾರ ಯಾವ ಹಾದಿ ಹಿಡಿದಿತ್ತೋ, ಅದೇ ಹಾದಿ ಅನುಸರಿಸಿ ಎನ್‌ಡಿಎ ಸರ್ಕಾರ ಈ ಪದ್ಧತಿಯನ್ನು ಹಿಂಪಡೆದಿದೆ. ದೇಶದ ಕೋಟ್ಯಂತರ ಯುವಕರ ಭವಿಷ್ಯದ ಮೇಲೆ ಪರಿಣಾಮ ಬೀರುವ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಹೇಗೆ ಕೈಗೊಳ್ಳುತ್ತೇವೆ ಎಂಬುದು ನಾವು ಚಿಂತಿಸ ಬೇಕಾದ ವಿಚಾರ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಲ್ಲಿ ತೆಗೆದುಕೊಂಡಿರುವ ನಿರ್ಣಯ­ಗಳನ್ನು ಗಮನಿಸಿ ನಾನು ಕೆಲವು ವಿಚಾರ ಅರಿತಿದ್ದೇನೆ. ಆಡಳಿತ ಎಂದರೆ ಪ್ರಕ್ರಿಯೆ, ಸಮಿತಿ, ನಿಯಮ ಮತ್ತು ನಿಯಂತ್ರಣ ಕ್ರಮ. ಸರ್ಕಾರಿ ಇಲಾಖೆಗಳಿಗೆ, ಸಾರ್ವಜನಿಕ ರಂಗದ ಉದ್ದಿಮೆ­ಗಳಿಗೆ ಅನ್ವಯ ಆಗುವ ಈ ಪ್ರಮೇಯಗಳು, ‘ಸ್ವಾಯತ್ತ ಸಂಸ್ಥೆ’ ಎಂಬ ಹಣೆಪಟ್ಟಿ ಹೊತ್ತಿರುವ ಯುಜಿಸಿಗೂ ಅನ್ವಯವಾಗುತ್ತವೆ. ಈ ಮಾತು ಯುಪಿಎ ಸರ್ಕಾರದಲ್ಲಿ ಎಷ್ಟು ಸತ್ಯವಾಗಿತ್ತೋ, ಎನ್‌ಡಿಎ ಸರ್ಕಾರದಲ್ಲೂ ಅಷ್ಟೇ ಸತ್ಯ.

ಅಧಿಕಾರ ಚಲಾವಣೆ ಹೇಗೆ ನಡೆಯುತ್ತದೆ ಎಂಬುದನ್ನು ಎಫ್‌ವೈಯುಪಿಯನ್ನು ಜಾರಿಗೆ ತಂದ ಮತ್ತು ಅದನ್ನು ಹಿಂಪಡೆದ ಪ್ರಕ್ರಿಯೆಗಳು ವಿವರಿಸುತ್ತವೆ. ಸಾಂಪ್ರದಾಯಿಕವಾದ ಮೂರು ವರ್ಷಗಳ ಪದವಿ ಕೋರ್ಸ್‌ನಿಂದ ಎಫ್‌ವೈಯುಪಿ ಪದ್ಧತಿಯ ಕಡೆ ಹೆಜ್ಜೆ ಹಾಕುವ ಪ್ರಕ್ರಿಯೆ ಆರಂಭ­ವಾಗಿದ್ದು 2012ರ ಅಂತ್ಯದಲ್ಲಿ. ಪಠ್ಯಕ್ರಮ­ದಲ್ಲಿ  ಬದಲಾವಣೆ ತರುವ ಮುನ್ನ ವಿಶ್ವವಿದ್ಯಾಲಯ­ಗಳು ಚರ್ಚಿಸಿ, ತೀರ್ಮಾನ ಕೈಗೊಳ್ಳಲು ಎರಡು ವರ್ಷ ಕಾಲಾವಕಾಶ ತೆಗೆದು­ಕೊಳ್ಳುತ್ತವೆ. ಎಫ್‌ವೈಯುಪಿ ಪದ್ಧತಿ­ಯನ್ನು ಆರು ತಿಂಗಳಲ್ಲಿ ಅಥವಾ ಇನ್ನೂ ಕಡಿಮೆ ಅವಧಿಯಲ್ಲಿ ಜಾರಿಗೆ ತರಬೇಕು ಎಂಬುದು ದೆಹಲಿ ವಿ.ವಿ. ಕುಲಪತಿಯ ಅಭಿಲಾಷೆ ಆಗಿತ್ತು. ಇದು ಶೈಕ್ಷಣಿಕ ವಲಯದ ಹಿರಿಯರನ್ನು ಆಘಾತಕ್ಕೆ ಈಡು­ಮಾಡಿತು. ಎಫ್‌ವೈಯುಪಿ ಕುರಿತು ಒಲವು ಹೊಂದಿದ್ದ ಅಧ್ಯಾಪಕರೂ, ಇಷ್ಟು ತ್ವರಿತವಾಗಿ ಪದ್ಧತಿ ಜಾರಿ ಮಾಡುವುದು ಸರಿಯಲ್ಲ ಎಂದರು.

ಆದರೆ ಕುಲಪತಿ ತಮ್ಮ ನಿರ್ಧಾರಕ್ಕೆ ಅಂಟಿ­ಕೊಂಡರು. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಹಿಂದಿನ ಮಂತ್ರಿಗಳ ಆಪ್ತರಲ್ಲಿ ಕುಲಪತಿಯವರು ಒಬ್ಬರು, ಎಫ್‌ವೈಯುಪಿಗೆ ಮಂತ್ರಿಗಳ ಸಮ್ಮತಿ ಇತ್ತು ಎಂಬ ಮಾತುಗಳೂ ಇವೆ. ಎಫ್‌ವೈಯುಪಿ ಪದ್ಧತಿ ಜಾರಿಗೆ  ಎಲ್ಲ ಪ್ರಕ್ರಿಯೆ­ಗಳು ಮಿಂಚಿನ ವೇಗದಲ್ಲಿ ಪೂರ್ಣ­ಗೊಂ­ಡವು. ಪ್ರಾಧ್ಯಾಪಕರ  ಪ್ರತಿಭಟನೆಗಳು ಲೆಕ್ಕಕ್ಕಿಲ್ಲ­ದಂತೆ ಆದವು.    ಇಷ್ಟೆಲ್ಲ ವಿವಾದಗಳ ನಡುವೆಯೂ, ‘ವಿ.ವಿ.ಯ ಸ್ವಾಯತ್ತ ಸ್ಥಾನಮಾನ­ವನ್ನು ಗೌರವಿಸಲಾಗುವುದು’ ಎಂಬ ಹಾಸ್ಯಾಸ್ಪದ ನೆಪವನ್ನು ಸಚಿವರಾದಿಯಾಗಿ ಎಲ್ಲರೂ ಹೇಳಿದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ವಲಯದ ಹಿರಿಯರು ಯುಜಿಸಿ ಮೊರೆ ಹೋದರು. ಎಫ್‌ವೈಯುಪಿ ಜಾರಿಗೆ ತರಬಾರದು ಎಂದು ಕೋರಿದರು. ನಾನು ಆ ಸಂದರ್ಭದಲ್ಲಿ ಯುಜಿಸಿ ಸದಸ್ಯನಾಗಿದ್ದೆ. ಶಿಕ್ಷಣ ತಜ್ಞರು ಮತ್ತು ಯುಜಿಸಿ ಅಧ್ಯಕ್ಷರ ನಡುವೆ ಒಂದು ಸಭೆ ಏರ್ಪಡಿಸಿದೆ. ತಜ್ಞರು ಮುಂದಿಡುವ ತಾಂತ್ರಿಕ ಸಮಸ್ಯೆಗಳನ್ನು ದೆಹಲಿ ವಿ.ವಿ. ಕುಲಪತಿಗಳ ಗಮನಕ್ಕೆ ತರುವುದು, ಅದನ್ನು ಪರಿಹರಿಸುವುದು ನನ್ನ ಉದ್ದೇಶ­ವಾಗಿತ್ತು. ಈ ಕುರಿತು ಯುಜಿಸಿ ಸಭೆಯಲ್ಲಿ ಮಾತನಾಡಬೇಕು ಎಂದು ನಿರ್ಧರಿಸಿ, ಅಧಿಕೃತ ಪತ್ರ ರವಾನಿಸಿದೆ. ಇದೇ ರೀತಿ ಇನ್ನೊಬ್ಬರು ಸದಸ್ಯರಾದ ಪ್ರೊ.ಎಂ.ಎಂ. ಅನ್ಸಾರಿ ಅವರೂ ಪತ್ರ ಬರೆದರು. ಆಯೋಗದ ಸಭೆ ನಡೆದಾಗ ನಾನು ವಿದೇಶದಲ್ಲಿದ್ದೆ. ಆದರೆ ನಾವು ಪತ್ರದಲ್ಲಿ ಬರೆದ ವಿಚಾರ ಸಭೆಯಲ್ಲಿ ಚರ್ಚೆಗೇ ಬರಲಿಲ್ಲ. ವಿ.ವಿ.ಯ ಸ್ವಾಯತ್ತತೆ ವಿಚಾರದಲ್ಲಿ ಯುಜಿಸಿ ಮಧ್ಯಪ್ರವೇಶಿ­ಸಲು ಆಗದು ಎಂದು ಕೆಲವರು ನನಗೆ ನಂತರ ಹೇಳಿದರು.

ಆದರೆ ಹತ್ತು ದಿನಗಳ ನಂತರ, ಎಫ್‌ವೈಯುಪಿ ವಿಚಾರ ಕಾವು ಪಡೆದುಕೊಂಡು, ಸಚಿವರ ಮನೆಯ ಹೊಸಿಲಿನವರೆಗೆ ಬಂದಾಗ, ಈ ಪದ್ಧತಿಯ ಮೇಲ್ವಿಚಾರಣೆಗೆಂದು ಯುಜಿಸಿ ಸಮಿತಿ ರಚಿಸಿತು. ಖಂಡಿತವಾಗಿಯೂ ಈ ವಿಚಾರ­ದಲ್ಲಿ ಪ್ರಭಾವಿಗಳು ಯಾರೋ ಕಣ್ಸನ್ನೆ ಮಾಡಿದ್ದರು!

2013ರ ಜುಲೈ 31ರಂದು ನಡೆದ ಯುಜಿಸಿ ಸಭೆಯಲ್ಲಿ ಎಫ್‌ವೈಯುಪಿ ಬಗ್ಗೆ ಚರ್ಚೆಯಾಗ­ಬೇಕು ಎಂದು ನಮ್ಮಲ್ಲಿ ಒಬ್ಬರು ಒತ್ತಡ ತಂದರು. ಆ ಸಂದರ್ಭದಲ್ಲಿ ಎಫ್‌ವೈಯುಪಿ ವ್ಯವಸ್ಥೆಯ ಎಲ್ಲ ಸಮಸ್ಯೆಗಳ ಕುರಿತು ದಾಖಲೆಗಳನ್ನು ಸಭೆಯ ಮುಂದಿಡಲಾಯಿತು. ಯುಜಿಸಿಯಿಂದ ಮಾನ್ಯತೆ ಪಡೆದಿಲ್ಲದ ಪದವಿಯನ್ನು ಈ ಪದ್ಧತಿ ಮೂಲಕ ನೀಡಲಾಗುತ್ತದೆ. ಹೊಸ ಪದ್ಧತಿಯ ಅಡಿ, ಕೋರ್ಸ್‌ ಆರಂಭಿಸುವ ಆರು ತಿಂಗಳ ಮೊದಲೇ ದೆಹಲಿ ವಿ.ವಿ., ಯುಜಿಸಿಯ ಅನುಮತಿ ಪಡೆಯ­ಬೇಕಿತ್ತು. ಆದರೆ ವಿ.ವಿ. ಹಾಗೆ ಮಾಡಿರಲಿಲ್ಲ. ಹೊಸ ಪದ್ಧತಿ, ರಾಷ್ಟ್ರೀಯ ಶೈಕ್ಷಣಿಕ ನೀತಿಯ ಚೌಕಟ್ಟನ್ನು ಮೀರುವಂಥದ್ದು. ಹಾಗಾಗಿ, ಹೊಸ ಪದ್ಧತಿ ಕುರಿತು ಸಾಕಷ್ಟು ಚರ್ಚೆ ಆಗಬೇಕಿತ್ತು. ಹೊಸ ಪದ್ಧತಿಗೆ ಹೆಚ್ಚಿನ ಹಣ ಬೇಕು. ಇದಕ್ಕೆ ಯುಜಿಸಿಯ ಅನುಮೋದನೆ ಬೇಕು.

ಆಶ್ಚರ್ಯದ ಸಂಗತಿಯೆಂದರೆ, ಇದೇ ಅಂಶ­ಗಳನ್ನು ಮುಂದಿಟ್ಟುಕೊಂಡು ಎಫ್‌ವೈಯುಪಿ ಪದ್ಧತಿಯನ್ನು ಕಳೆದ ತಿಂಗಳು ಯುಜಿಸಿ ರದ್ದು ಮಾಡಿದೆ. ಆದರೆ ಕಳೆದ ವರ್ಷ, ಯುಜಿಸಿ ಅಧ್ಯಕ್ಷರು ಮತ್ತು ಇಲಾಖೆಯ ಅಧಿಕಾರಿಗಳು ಈ ಎಲ್ಲ ತಕರಾರುಗಳನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ‘ನಾವು ವಿ.ವಿ.ಯ ಸ್ವಾಯತ್ತತೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೇವೆ, ಸಲ್ಲದ ಗದ್ದಲ ಎಬ್ಬಿಸುತ್ತಿದ್ದೇವೆ’ ಎಂದು ಆಗ ನಮ್ಮ ವಿರುದ್ಧ ಗೂಬೆ ಕೂರಿಸಿದ್ದರು.

‘ನೀವು ತಡವಾಗಿ ವಿಷಯ ಪ್ರಸ್ತಾಪಿಸು­ತ್ತಿದ್ದೀರಿ, ಈ ಪದ್ಧತಿಯ ಅಡಿ ಆರಂಭವಾಗಿರುವ ಕೋರ್ಸ್‌­ಗಳಿಗೆ ಪ್ರವೇಶ ಪಡೆದುಕೊಂಡಿರುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡ­ಲಾಗದು’ ಎಂದು ಆಗ ನಮಗೆ ಹೇಳಲಾಯಿತು. ಆದರೂ, ಎಫ್‌ವೈಯುಪಿ ಕುರಿತು ಮೇಲ್ವಿಚಾರಣೆ ಇರಬೇಕು ಎಂಬುದನ್ನು ನಾವು ಅವರಿಗೆ ಮನದಟ್ಟು ಮಾಡಿಸಿದೆವು. ಆದರೆ ಈ ಎಲ್ಲ ಅಂಶ­ಗಳನ್ನು ಸಭೆಯ ನಡಾವಳಿ­ಗಳಿಂದ ಅಳಿಸಿಹಾಕ­ಲಾಯಿತು. ನಡಾವಳಿಗಳನ್ನು ಪುನಃ ಬರೆಯಬೇಕು ಎಂದು ನಾನು ಒತ್ತಾಯಿಸಿ­ದಾಗ, ನನಗೆ ಷೋಕಾಸ್‌ ನೋಟಿಸ್‌ ನೀಡಿ, ಯುಜಿಸಿ ಸದಸ್ಯ ಸ್ಥಾನದಿಂದ ಹೊರಹಾಕ­ಲಾಯಿತು. ಹಾಗೆ ಮಾಡಲು ನೀಡಿದ ಅಧಿಕೃತ ಕಾರಣ, ನಾನು ‘ಆಮ್‌ ಆದ್ಮಿ’ ಪಕ್ಷದ ಸದಸ್ಯ­ನಾಗಿರುವುದು. ಯುಜಿಸಿಯಲ್ಲಿ ಈ ಹಿಂದೆಯೂ ಆಳುವ ಪಕ್ಷದ ಸದಸ್ಯರು ಇದ್ದರು.

ಈಗ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರ ಬೇರೊಂದು ರೀತಿಯಲ್ಲಿ ಆಲೋಚಿಸಿದೆ. ಹಾಗಾಗಿಯೇ ಯುಜಿಸಿ ಕೂಡ ಬೇರೊಂದು ಬಗೆಯಲ್ಲಿ ಚಿಂತನೆ ನಡೆಸಿದೆ. ಯುಜಿಸಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿ (ಉನ್ನತ ಶಿಕ್ಷಣ) ಸ್ಥಾನದಲ್ಲಿ ಹಿಂದೆ ಯಾರಿದ್ದರೋ, ಈಗಲೂ ಅವರೇ ಇದ್ದಾರೆ. ಆದರೆ ‘ಎಫ್‌ವೈಯುಪಿ ಬೇಡ’ ಎಂದು ಒಂದು ವರ್ಷದ ಹಿಂದೆ ನಾವು ಮಂಡಿ­ಸಿದ ವಾದವನ್ನು ಅವರು ತಿರಸ್ಕರಿಸಿದ್ದರು. ಈಗ ಅದನ್ನು ಒಪ್ಪುತ್ತಿದ್ದಾರೆ! ವಿ.ವಿ.ಯ ಸ್ವಾಯತ್ತತೆ­ಯಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ಹೇಳುತ್ತಿ­ದ್ದವರು ಈಗ ವಿ.ವಿ.ಗೆ ಗಡುವು ನೀಡುತ್ತಿ­ದ್ದಾರೆ. ನಿನ್ನೆಯವರೆಗೆ ಪ್ರೀತಿ ಪಾತ್ರ ವ್ಯಕ್ತಿಗಳಾ­ಗಿದ್ದವರು, ಈಗ ಬೇಡವಾದವರಾಗಿ­ದ್ದಾರೆ. ಒಬ್ಬರಲ್ಲಾ ಒಬ್ಬರನ್ನು ಹೊಗಳುವವರ ನಡುವೆ ಉನ್ನತ ಶಿಕ್ಷಣ ಲೋಕ ಒಡೆದುಹೋಗಿದೆ.

ಮುಂದಿನ ದಿನಗಳಲ್ಲಿ ಈ ಕತೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಒಂದಾದ ನಂತರ ಒಂದು ಸಂಸ್ಥೆಯನ್ನು ಬಿಜೆಪಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಈಗ ಯುಜಿಸಿ, ನಂತರ ಐಸಿಎಚ್‌ಆರ್‌ ಮತ್ತು ಎಸಿಎಸ್‌ಎಸ್‌ಆರ್‌. ಮುಂದೊಂದು ದಿನ ಎನ್‌ಸಿಇಆರ್‌ಟಿ ಕೂಡ ಖಂಡಿತ ಅದರ ಹಿಡಿತಕ್ಕೆ ಸಿಲುಕುತ್ತದೆ.

ಸಂಸ್ಥೆಗಳ ಸ್ವಾಯತ್ತತೆ ಕಸಿಯುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಯೋಜನೆಯ ವಿರುದ್ಧ ಜಾತ್ಯತೀತ ಮನೋಭಾವದ ಶಿಕ್ಷಣ ತಜ್ಞರು ದನಿ ಎತ್ತುತ್ತಾರೆ. ಆದರೆ ಇಲ್ಲೊಂದು ಪ್ರಶ್ನೆ ಇದೆ: ಸಂಸ್ಥೆಗಳ ಸ್ವಾಯತ್ತೆ ಕಾಪಾಡುವ ಪರಂಪರೆ­ಯನ್ನು ನಾವು ಕಟ್ಟಿದ್ದೇವಾ? ಶಿಕ್ಷಣ ವಲಯದ ಹಿರಿಯರು ಅಂಥದ್ದೊಂದು ಎದೆಗಾರಿಕೆ ತೋರಿದ್ದಾರಾ? ಶೈಕ್ಷಣಿಕ ವಲಯದ ಸ್ವಾಯತ್ತತೆ ಕಾಪಾಡುವ ವಿಚಾರದಲ್ಲಿ ನಮಗಿರುವ ಅರ್ಹತೆ ಏನು?

(ಲೇಖಕರು ಆಮ್‌ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT