ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಮಣಿಸಿದ ಮಹಾಲೇಖಪಾಲ ವಿನೋದ್‌ ರಾಯ್‌

Last Updated 21 ಸೆಪ್ಟೆಂಬರ್ 2014, 16:03 IST
ಅಕ್ಷರ ಗಾತ್ರ

ಬಹುಶಃ ಮಹಾಲೇಖಪಾಲರ ಆಯ್ಕೆ ವಿಧಾನದ ಬಗ್ಗೆ ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ ಅವರ ಬೇಡಿಕೆಗೆ ಮಣಿಯದೇ ಇದ್ದುದು, ಅಧಿಕಾರಾವಧಿಯಲ್ಲಿ ತಾವು ಮಾಡಿದ ಅತಿ ದೊಡ್ಡ ತಪ್ಪು ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಈಗ ಪರಿತಪಿಸುತ್ತಿರಬಹುದು. ಪ್ರಧಾನಿ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಅವರಿಂದ ಆಯ್ಕೆಯಾಗುವ ಈ ಸಾಂವಿಧಾನಿಕ ಹುದ್ದೆಯನ್ನು ‘ಬಹುಸದಸ್ಯರ ಸಂಸ್ಥೆಯನ್ನಾಗಿ ಮಾಡಿ’ ಎಂಬ ಅಡ್ವಾಣಿ ಅವರ ಇನ್ನಿಲ್ಲದ ಬೇಡಿಕೆಗೆ ಸಿಂಗ್‌ ಹ್ಞೂಂಗುಟ್ಟಿದ್ದೇ ಆಗಿದ್ದರೆ, ದೇಶ ಕಂಡ 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ, ಕಾಮನ್‌ವೆಲ್‌್ತ ಕ್ರೀಡಾಕೂಟದಂತಹ ಮಹಾನ್‌ ಹಗರಣಗಳು ಬೆಳಕಿಗೆ ಬರುತ್ತಿರಲೇ ಇಲ್ಲವೇನೊ.

ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ಯುಪಿಎ ನೇತೃತ್ವದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಈ ಎಲ್ಲ ಹಗರಣಗಳನ್ನೂ ತಮ್ಮ ಆಘಾತಕಾರಿ ವರದಿಗಳ ಮೂಲಕ ಬಯಲು ಮಾಡಿದ್ದ ಮಾಜಿ ಮಹಾಲೇಖಪಾಲ ವಿನೋದ್‌ ರಾಯ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ‘ನಾಟ್‌ ಜಸ್‌್ಟ ಆ್ಯನ್‌ ಅಕೌಂಟೆಂಟ್‌’ ಎಂಬ ಅವರ ಪುಸ್ತಕ ಹಿಂದಿನ ಸರ್ಕಾರದ ರಾಜಕಾರಣಿಗಳ ಒಳಸುಳಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

‘ಹಗರಣಗಳ ಪ್ರತಿಯೊಂದು ಆಗುಹೋಗೂ ಪ್ರಧಾನಿಗೆ ತಿಳಿದಿತ್ತು; ಅಲ್ಲದೆ ವರದಿಯಲ್ಲಿ ಪ್ರಮುಖರ ಹೆಸರುಗಳನ್ನು ಕೈಬಿಡುವಂತೆ ನನ್ನ ಮೇಲೆ ಸಾಕಷ್ಟು ಒತ್ತಡ ಹೇರಲಾಗಿತ್ತು. ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ತಮ್ಮ ಪ್ರತಿ ನಿರ್ಧಾರದ ಬಗ್ಗೆಯೂ ಪ್ರಧಾನಿಗೆ ಪತ್ರ ಬರೆಯುತ್ತಿದ್ದರು. ಆದರೂ 2ಜಿ ಅಂತಹ ದೇಶದ ಅತ್ಯಮೂಲ್ಯ ಸಂಪನ್ಮೂಲ ಪೋಲಾಗದಂತೆ ತಡೆಯದೆ ಮೌನ ಪ್ರೇಕ್ಷಕರಾಗಿಯೇ ಉಳಿದ ಪ್ರಧಾನಿ ‘ಮೈತ್ರಿ ರಾಜಕಾರಣ’ದ ಬಲಿಪೀಠಕ್ಕೆ ಆಡಳಿತದ ತಲೆಯನ್ನೇ ಒಪ್ಪಿಸಿದರು. ಇದನ್ನೆಲ್ಲ ನಾನು ನನ್ನ ಪುಸ್ತಕದಲ್ಲಿ ಚರ್ಚಿಸಿ ದ್ದೇನೆ’ ಎನ್ನುತ್ತಾರೆ ರಾಯ್‌. ಅವರ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆ ಕಾವೇರುವಂತೆ ಮಾಡಿವೆ. ಅದಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ಎದುರು ರಾಜಕಾರಣಿಗಳ ಅಮಾನವೀಯ ಮುಖವನ್ನು ಬಯಲು ಮಾಡಿವೆ.

ರಾಯ್‌ ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಈ ಆರೋಪಗಳು ಕೇವಲ ಪ್ರಚಾರ ಗಿಟ್ಟಿಸುವ ತಂತ್ರವಾಗಿ ಕಾಣುತ್ತಿಲ್ಲ. ಆಗ, 2ಜಿ ಸ್ಪೆಕ್ಟ್ರಂನ ಅಸಮರ್ಪಕ ಹಂಚಿಕೆಯಿಂದ ಸರ್ಕಾರಕ್ಕೆ ರೂ 1.76 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಅಂಕಿ ಸಂಖ್ಯೆಯನ್ನು ರಾಯ್‌ ತಮ್ಮ ಮುಂದಿಟ್ಟಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್‌ ಅದನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ‘ನೀವು ಸರಿಯಾಗಿ ಲೆಕ್ಕ ಹಾಕಿಲ್ಲ ಎನಿಸುತ್ತದೆ ಇನ್ನೊಮ್ಮೆ ನೋಡಿ’ ಎಂದು ತಣ್ಣಗೆ ಹೇಳಿದ್ದರು. ಆದರೆ ‘ಆರ್ಥಿಕ ತಜ್ಞರಾಗಿ ನೀವು ನಮಗೆ ಹೇಳಿಕೊಟ್ಟ ಪಾಠವನ್ನೇ ಆಧಾರವಾಗಿಟ್ಟು ಲೆಕ್ಕ ಹಾಕಿದ್ದೇನೆ.

ಹಾಗಾಗಿ ಆ ಲೆಕ್ಕ ತಪ್ಪಲು ಸಾಧ್ಯವೇ ಇಲ್ಲ’ ಎಂದು ಅವರಿಗೆ ರಾಯ್‌ ಎದುರೇಟು ಕೊಟ್ಟಿದ್ದರು. ಈಗ, ‘ಸಿಎಜಿ ವರದಿ ಆಧರಿಸಿ 2ಜಿ ಸ್ಪೆಕ್ಟ್ರಂ ಹಂಚಿಕೆಯನ್ನು ಸುಪ್ರೀಂಕೋರ್ಟ್‌ ರದ್ದು ಮಾಡಿರುವುದರಿಂದ ನಿಮ್ಮ ಆರೋಪಗಳಿಗೆ ಸಮರ್ಥನೆ ಸಿಕ್ಕಂತಾಗಿದೆಯೇ’ ಎಂಬ ಮಾಧ್ಯಮಗಳ ಪ್ರಶ್ನೆಗೆ, ‘ಅಂತಹ ಯಾವ ಸಮರ್ಥನೆಯನ್ನೂ ನಾನು ಎದುರು ನೋಡುತ್ತಿರಲಿಲ್ಲ. ಏಕೆಂದರೆ ವರದಿಯಲ್ಲಿ ನಾವು ಬರೆದಿರುವ ಪ್ರತಿ ಪದವೂ ದಾಖಲೆಯನ್ನು ಆಧರಿಸಿದ್ದು’ ಎಂದಿರುವ ರಾಯ್‌, ನಾನಾ ಆರೋಪಗಳ ಮೂಲಕ ತಮ್ಮ ವೃತ್ತಿಪರತೆಗೇ ಸವಾಲು ಹಾಕಲು ಹೊರಟಿರುವ ರಾಜಕಾರಣಿಗಳಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.

ನೇರ ಹಾಗೂ ಪ್ರಾಮಾಣಿಕ ನಿಲುವಿಗೆ ಹೆಸರಾದ ರಾಯ್‌ ಅವರಿಗೆ ರಾಜಕಾರಣಿಗಳ ಒಡನಾಟ ಹೊಸದೇನಲ್ಲ. ವಿನೋದ್‌ ರಾಯ್‌ ಅವರು ಭಾರತದ 11ನೇ ಮಹಾಲೇಖಪಾಲರಾಗಿದ್ದವರು. ರಾಯ್‌, ದೆಹಲಿ ವಿ.ವಿ.ಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದವರು. ಇವರು ಹಾರ್ವರ್ಡ್‌ ವಿ.ವಿ.ಯಿಂದ ಸಾರ್ವಜನಿಕ ಆಡಳಿತದಲ್ಲಿ ಪದವೀಧರ. ಉತ್ತರ ಪ್ರದೇಶ ಮೂಲದವರಾದ ಅವರು (ಜನನ : 1948) ಕೇರಳ ಕೇಡರ್‌ನ 1972ನೇ ತಂಡದ ಐಎಸ್‌ಎಸ್‌ ಅಧಿಕಾರಿ.

ತ್ರಿಶೂರ್‌ ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ಆರಂಭಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2008ರ ಜನವರಿಯಲ್ಲಿ ಮಹಾಲೇಖಪಾಲರಾಗಿ ಅಧಿಕಾರ ಸ್ವೀಕರಿಸಿ 2013ರ ಮೇ 22ರಂದು ಆ ಹುದ್ದೆಯಿಂದ ರಾಯ್‌ ನಿವೃತ್ತರಾದಾಗ 65 ವರ್ಷದ ಅವರ ಹುಟ್ಟುಹಬ್ಬಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿತ್ತು. 1990ರಲ್ಲಿ ಅಸ್ತಮಾದಿಂದ ಪತ್ನಿ ನಿಧನರಾದಾಗ ತಮ್ಮ ಸಹೋದ್ಯೋಗಿಯ ವಿಧವಾ ಪತ್ನಿಯನ್ನು ರಾಯ್‌ ಮದುವೆಯಾಗಿದ್ದರು. ಆದರೆ ಅಕಾಲಿಕವಾಗಿ ಅವರನ್ನೂ ಕಳೆದುಕೊಂಡ ರಾಯ್‌ ಅವರಿಗೆ ಮೂವರು ಮಕ್ಕಳಿದ್ದಾರೆ.


‘ನಮ್ಮಂತಹ ಅಧಿಕಾರಿಗಳು ಸರ್ಕಾರಕ್ಕೆ ಬಾಧ್ಯಸ್ಥರಲ್ಲ, ನಾವೇನಿದ್ದರೂ ಜನಸೇವಕರು. ಸರ್ಕಾರದ ಕಾರ್ಯವೈಖರಿ ಯನ್ನು ಜನರ ಮುಂದೆ ನೇರವಾಗಿ ವರದಿ ಮಾಡಲು ಸಿಕ್ಕ ಅವಕಾಶವನ್ನು ನಾನು ಬಳಸಿಕೊಂಡಿದ್ದೇನೆ’ ಎಂದಿರುವ ಅವರ ಮಾತುಗಳು ಮಹಾಲೇಖಪಾಲರ ಹುದ್ದೆಗಿರುವ ಮಹತ್ವವನ್ನು ಸಾರಿ ಹೇಳಿವೆ. ಅವರ ವರದಿಗಳ ಪ್ರಭಾವ ನಮ್ಮ ದೇಶಕ್ಕಷ್ಟೇ ಸೀಮಿತಗೊಂಡಿಲ್ಲ. ಇದರಿಂದ ಪ್ರೇರಣೆ ಗೊಳಗಾಗಿರುವ ಆಫ್ರಿಕಾದ ತೈಲ ಸಂಪದ್ಭರಿತ ರಾಷ್ಟ್ರಗಳು ಸಹ, ಹತ್ತಾರು ವರ್ಷಗಳಿಂದ ಬಾಕಿ ಇರುವ ಲೆಕ್ಕ ಕೊಡುವಂತೆ ತಮ್ಮ ತೈಲ ಕಂಪೆನಿಗಳಿಗೆ ತಾಕೀತು ಮಾಡಿವೆ. ಆದರೂ ಸಿಎಜಿ ಹುದ್ದೆಗಿರುವ ಅಧಿಕಾರದ ಮಿತಿಯ ಅರಿವು ಸಹ ರಾಯ್‌ ಅವರಿಗಿದೆ.

ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಯೋಜನೆಗಳು, ಪಂಚಾಯತ್‌ ರಾಜ್‌ ಸಂಸ್ಥೆಗಳು ಮತ್ತು ಸರ್ಕಾರದಿಂದ ಹಣಕಾಸು ನೆರವು ಪಡೆಯುವ ಸೊಸೈಟಿಗಳನ್ನೂ ಸಿಎಜಿ ವ್ಯಾಪ್ತಿಗೆ ಒಳಪಡಿಸುವಂತೆ 1971ರ ಲೆಕ್ಕಪತ್ರ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಅವರ ಬೇಡಿಕೆಯನ್ನು ಸರ್ಕಾರ ಮನ್ನಿಸಿಲ್ಲ. ವಿಮಾನ ನಿಲ್ದಾಣ, ಹೆದ್ದಾರಿ, ಬಂದರುಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳುವ ಬೃಹತ್‌ ಯೋಜನೆಗಳು ಮಹಾಲೇಖಪಾಲರ ಪರಿಧಿಗೆ ಒಳಪಡದೇ ಇರುವುದರಿಂದ, ಸರ್ಕಾರದಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಕೊರಗು. ಜೊತೆಗೆ ವಿವಿಧ ಇಲಾಖೆಗಳಿಗೆ ಸಿಎಜಿ ಕೇಳುವ ಮಾಹಿತಿಯನ್ನು ಒದಗಿಸುವುದಕ್ಕೆ ಸಹ ಯಾವ ಸಮಯದ ನಿರ್ಬಂಧವೂ ಇಲ್ಲ.

ಮಾಹಿತಿ ಹಕ್ಕು ಕಾಯ್ದೆಯಡಿ ಒಬ್ಬ ಸಾಮಾನ್ಯ ಅರ್ಜಿದಾರ ಕೇಳುವ ಪ್ರಶ್ನೆಗೂ 30 ದಿನಗಳೊಳಗೆ ಉತ್ತರ ಕೊಡಬೇಕೆಂಬ ನಿಯಮವಿದೆ; ಆದರೆ ಒಬ್ಬ ಮಹಾಲೇಖಪಾಲರಿಗೆ ಮಾಹಿತಿ ಒದಗಿಸುವುದಕ್ಕೆ ಸಮಯದ ಮಿತಿಯೇ ಇಲ್ಲ ಎಂದು ಅವರು ವಿಷಾದಿಸುತ್ತಾರೆ.ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಶಾಹಿ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ರಾಯ್‌ ಅವರು ಕೊಡುವ ಉತ್ತರ ವ್ಯವಸ್ಥೆಯ ವಸ್ತುಸ್ಥಿತಿಯನ್ನು ತೆರೆದಿಡುತ್ತದೆ.‘35 ವರ್ಷಗಳ ಅವಿಶ್ರಾಂತ ದುಡಿಮೆಯ ನಂತರ ಕೇಂದ್ರ ಸರ್ಕಾರದ ಕಾರ್ಯದರ್ಶಿಯಾಗಿ ನಾನು ಆಯ್ಕೆಯಾದೆ. ನನ್ನ ತಂಡದ ಕೇವಲ ಶೇ 20ರಷ್ಟು ಮಂದಿಗೆ ಮಾತ್ರ ಅಂತಹ ಅವಕಾಶ ಸಿಕ್ಕಿತು. ಹೀಗಾಗಿ ಕಾರ್ಯತತ್ಪರತೆ ಮತ್ತು ಪ್ರಾಮಾಣಿಕತೆಯಲ್ಲಿ ನಾನು ಸಹ ಮೇಲಿದ್ದೆ ಎಂತಲೇ ಅರ್ಥ. ಇಷ್ಟಾದರೂ 6 ಮಂದಿಯನ್ನು ಒಳಗೊಂಡ ಸಚಿವರ ತಂಡವೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಿತ್ತು.

ಅಧಿಕಾರಶಾಹಿಯನ್ನು ಬದಿಗೊತ್ತಿ ಸಚಿವರ ಸಮಿತಿಯೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುವಂತಾದರೆ ಸರ್ಕಾರದ ನೀತಿಗಳಿಗೆ ಲಕ್ವ ಹೊಡೆದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಹುದರಲ್ಲಿ ಯುಪಿಎ ಸರ್ಕಾರದಲ್ಲಿ 82 ಸಚಿವರ ಸಮಿತಿಗಳಿದ್ದವು. ಅಲ್ಲಿಗೆ ಸರ್ಕಾರದ ಕಾರ್ಯವೈಖರಿ ಹೇಗಿದ್ದಿರಬಹುದು ಲೆಕ್ಕಹಾಕಿ’- ಎನ್ನುತ್ತಾರೆ ಅವರು.ಭ್ರಷ್ಟಾಚಾರವನ್ನು ಎದುರಿಸುವುದು ಅವರ ಜೀವನದ ಒಂದು ಭಾಗವೇ ಆಗಿದೆ. ಸರ್ಕಾರದ ಉನ್ನತ ಹಂತದ ಹುದ್ದೆ ಮತ್ತು ವ್ಯವಹಾರಗಳಲ್ಲಿ ಪಾರದರ್ಶಕತೆ ತರಬೇಕು ಎಂಬುದೇ ಅವರ ಎಲ್ಲ ಪ್ರಮುಖ ನಡೆಗಳ ಹಿಂದಿನ ತತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT