ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ರಚನೆಯಲ್ಲಿ ಆರೆಸ್ಸೆಸ್‌ ಕೈವಾಡ?

ಬಿರುಸಿನ ಚಟುವಟಿಕೆ: ಅಡ್ವಾಣಿಗೆ ಸ್ಪೀಕರ್‌ ಹುದ್ದೆ ಪ್ರಸ್ತಾಪ
Last Updated 18 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೊಸ ಸರ್ಕಾರ ರಚನೆಯ ನಿಟ್ಟಿನಲ್ಲಿ ಬಿರುಸಿನ ಚಟುವಟಿಕೆಗಳು ನಡೆ­ಯುತ್ತಿದ್ದು, ಬಿಜೆಪಿ ನಾಯಕರ ದಂಡು ಇಲ್ಲಿನ ಆರೆಸ್ಸೆಸ್‌ ಕೇಂದ್ರ ಕಚೇರಿಯನ್ನು ಎಡತಾಕುತ್ತಿದೆ. ಹೀಗಾಗಿ, ಸರ್ಕಾರ ರಚನೆಯಲ್ಲಿ ಆರೆಸ್ಸೆಸ್‌ ‘ದೂರ ನಿಯಂತ್ರಕ’ನ (ರಿಮೋಟ್‌ ಕಂಟ್ರೋಲ್‌) ಪಾತ್ರ ವಹಿಸಬಹುದೆಂಬ ಅನುಮಾನ­ಗಳು ಮೂಡಿವೆ.

ಭಾನುವಾರ  ಈ ಬಗ್ಗೆ ಸ್ಪಷ್ಟನೆ ನೀಡಿ­ರುವ ಆರೆಸ್ಸೆಸ್‌ (ರಾಷ್ಟ್ರೀಯ ಸ್ವಯಂ ಸೇವಕ ಸಂಘ), ‘ಬಿಜೆಪಿ ಸರ್ಕಾರದ ಸಂಪುಟ ರಚನೆಯಲ್ಲಾಗಲೀ ಅಥವಾ ಪಕ್ಷದ ಕಾರ್ಯದಲ್ಲಾಗಲೀ ತಾನು ತಲೆಹಾಕುವುದಿಲ್ಲ; ರಿಮೋಟ್‌ ಕಂಟ್ರೋಲ್‌ನಂತೆ ವರ್ತಿಸುವುದಿಲ್ಲ. ಅಗತ್ಯಬಿದ್ದರೆ, ಸಲಹೆಗಳನ್ನಷ್ಟೇ ನೀಡಲಾ­ಗುವುದು’ ಎಂದು ಹೇಳಿಕೆ ನೀಡಿದೆ. ಆದರೂ, ದಿನನಿತ್ಯದ ಬೆಳವಣಿಗೆಗಳು ಮಾತ್ರ ಸರ್ಕಾರ ರಚನೆಯಲ್ಲಿ ಆರೆಸ್ಸೆಸ್‌ ಪಾತ್ರ ಇರುತ್ತದೆಂಬುದನ್ನು ಪುಷ್ಟೀಕರಿಸುವ ರೀತಿಯಲ್ಲೇ ನಡೆದಿವೆ.

ಬಿರುಸಿನ ಚಟುವಟಿಕೆ: ಚುನಾವಣಾ ಆಯೋಗವು ಹೊಸದಾಗಿ ಆಯ್ಕೆಯಾದ ಸಂಸದರ ಪಟ್ಟಿಯನ್ನು ರಾಷ್ಟ್ರಪತಿ ಅವರಿಗೆ ತಲುಪಿಸುತ್ತಿದ್ದಂತೆಯೇ ರಾಜಕೀಯ ಬೆಳವಣಿಗೆಗಳು ಬಿರುಸು ಪಡೆದಿವೆ. ನರೇಂದ್ರ ಮೋದಿ ಅವರು ತಂಗಿರುವ ಗುಜರಾತ್‌ ಭವನ, ಆರೆಸ್ಸೆಸ್‌ ಕೇಂದ್ರ ಕಚೇರಿ ‘ಕೇಶವ್‌ ಕುಂಜ್‌’ ಮತ್ತು ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರ ನಿವಾಸಗಳು ಬಿರುಸಿನ ರಾಜಕೀಯ ಚಟುವಟಿಕೆಗಳ ತಾಣಗಳಾಗಿದ್ದವು.

ಭಾವಿ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರ ಮನೆಗಳಿಗೆ ಹೋಗಿ ಹೊಸ ಸರ್ಕಾರ ರಚನೆ ಕುರಿತು ಚರ್ಚಿಸಿದರು. ಸರ್ಕಾರ ರಚನೆಯಂತಹ ಪ್ರಮುಖ ವಿಷಯಗಳಲ್ಲಿ 86 ವರ್ಷದ ಹಿರಿಯ­ರಾದ ಅಡ್ವಾಣಿ ಅವರ ಸಲಹೆಗಳನ್ನು ಪರಿಗಣಿಸಿಯೇ ನಿರ್ಧಾರ ತೆಗೆದುಕೊಳ್ಳ­ಲಾಗುವುದು ಎಂಬ ಸಂದೇಶವನ್ನೂ ಮೋದಿ ಈ ಮೂಲಕ ರವಾನಿಸಿದರು. ಮಧ್ಯಾಹ್ನ ಅಡ್ವಾಣಿ ನಿವಾಸದಲ್ಲಿ 40 ನಿಮಿಷ ಚರ್ಚೆ ನಡೆಸಿದ ಮೋದಿ ಅವರು ಸಂಜೆ ಮುರಳಿ ಮನೋಹರ ಜೋಷಿ ನಿವಾಸಕ್ಕೆ ಹೋಗಿದ್ದರು. ತಮಗೆ ಒಲ್ಲದ ಮನಸ್ಸಿನಿಂದಲೇ ವಾರಾಣಸಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ಜೋಷಿ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

ಮತ್ತೊಂದೆಡೆ, ಬಿಜೆಪಿ ಪ್ರಮುಖ­ರಾದ ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಕಲ್‌ರಾಜ್‌ ಮಿಶ್ರಾ, ಗೋಪಿನಾಥ್‌ ಮುಂಡೆ ಮತ್ತು ಹರ್ಷವರ್ಧನ್‌ ಅವರು ಆರೆಸ್ಸೆಸ್‌ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಹಾಗೂ ಎರಡನೇ ಅತ್ಯುನ್ನತ ವರಿಷ್ಠ ಭಯ್ಯಾಜಿ ಜೋಷಿ ಅವರನ್ನು ಭೇಟಿಯಾಗಿದ್ದರು.

ಬಿಜೆಪಿ ಪ್ರಮುಖರು ಹಾಗೂ ಆರೆಸ್ಸೆಸ್‌ ವರಿಷ್ಠರ ನಡುವಣ ಮಾತುಕತೆಯಲ್ಲಿ, ಪಕ್ಷದ ಹಿರಿಯರಿಗೆ ಅವರ ಅನುಭವ ಹಾಗೂ ಘನತೆಯನ್ನು ಗಮನದಲ್ಲಿರಿಸಿಕೊಂಡು ಯಾವ ಸ್ಥಾನ ನೀಡಬಹುದೆಂಬ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಿತು. ಹಿರಿಯರಾದ ಅಡ್ವಾಣಿ ಅವರಿಗೆ ಲೋಕಸಭಾ ಸ್ಪೀಕರ್‌ ಹುದ್ದೆ ನೀಡುವ  ಬಗ್ಗೆಯೂ ಪ್ರಸ್ತಾಪ­ವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೋದಿ ಅವರು ಅಡ್ವಾಣಿ ಅವರನ್ನು ಭೇಟಿಯಾಗುವ ಮುನ್ನ ಬಿಜೆಪಿಯ ಇಬ್ಬರು ಪ್ರಧಾನ ಕಾರ್ಯ­ದರ್ಶಿಗಳಾದ ಅಮಿತ್‌ ಷಾ ಮತ್ತು ಜೆ.ಪಿ.ನಡ್ಡಾ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.­ಯಡಿ­ಯೂರಪ್ಪ, ಬಿಹಾರದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್‌ ಅವರ ಜತೆ ಗುಜರಾತ್‌ ಭವನದಲ್ಲಿ ಮಾತುಕತೆ ನಡೆಸಿದರು.

ಮೋದಿ ಅವರ ಆಪ್ತ ಅಮಿತ್‌ ಷಾ ಅವರೂ ಶನಿವಾರ ‘ಕೇಶವ್‌ ಕುಂಜ್‌’ದಲ್ಲಿ ಸುಮಾರು ಎರಡು ಗಂಟೆ ಕಾಲ ಮಾತುಕತೆ ನಡೆಸಿದ್ದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದೆ ಉಮಾ ಭಾರತಿ, ಯಡಿಯೂರಪ್ಪ, ಮುರಳಿ ಮನೋಹರ ಜೋಷಿ ಮತ್ತು ಸ್ಮೃತಿ ಇರಾನಿ ಅವರೂ ಆರೆಸ್ಸೆಸ್‌  ಕೇಂದ್ರ ಕಚೇರಿಗೆ ಶನಿವಾರ ಭೇಟಿ ನೀಡಿದ್ದರು.
ಮತ್ತೊಂದೆಡೆ, ನಾಗಾಲ್ಯಾಂಡ್‌ನ ಏಕೈಕ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಮುಖ್ಯಮಂತ್ರಿ ನಿಫಿಯು ರಿಯೊ ಅವರೂ ಮೋದಿ ಅವರನ್ನು ಗುಜರಾತ್‌ ಭವನದಲ್ಲಿ ಭೇಟಿಯಾಗಿದ್ದರು.

ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಎಲ್‌ಜೆಪಿ ಮುಖ್ಯಸ್ಥ ರಾಮ್‌ ವಿಲಾಸ್‌ ಪಾಸ್ವಾನ್‌ ಹಾಗೂ ಅವರ ಮಗ ಚಿರಾಗ್‌ ಪಾಸ್ವಾನ್‌ ಅವರೂ ಮೋದಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT