ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಪ್ರಿಯ ಶವಾಸನ ಬಲು ಕಷ್ಟ!

Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ವ್ಯಾಯಾಮ, ಕ್ರೀಡೆ, ಇತರ ದೈಹಿಕ ಕಸರತ್ತುಗಳ ಹಾಗೂ ಒತ್ತಡ, ಶ್ರಮದಿಂದ ಕೂಡಿದ ಕೆಲಸಗಳನ್ನು ಮಾಡಿದಾಗ ದಣಿಯುವ ದೇಹಕ್ಕೆ ವಿಶ್ರಾಂತಿ ಬೇಕೇ ಬೇಕು. ಈ ವಿಶ್ರಾಂತಿಯು ಶವಾಸನ ಅಭ್ಯಾಸದಿಂದ ಲಭ್ಯವಾಗುತ್ತದೆ.

ಪ್ರಾಪಂಚಿಕ ಜಂಜಡಗಳ ಗೊಡವೆಯಿಲ್ಲದ, ಚಿಂತೆ ರಹಿತವಾದ ಪುಟ್ಟ ಮಗುವು ತಾಯಿ ಮಡಿಲು ಹಾಗೂ ತೊಟ್ಟಿಲಲ್ಲಿ ನೆಮ್ಮದಿಯಾಗಿ ನಿದ್ರಿಸುತ್ತದೆ. ನಿದ್ರೆಯಲ್ಲಿದ್ದಾಗಲೂ ಮಗುವಿನ ಮುಖದ ಲ್ಲೊಂದು ಮಂದಹಾಸವಿರುತ್ತದೆ. ಇದು ಮಗುವು ಪಡೆಯುತ್ತಿರುವ ಅವರ್ಣನೀಯ ವಿಶ್ರಾಂತಿ.

ದೈಹಿಕ ವಯಸ್ಸು ಹೆಚ್ಚುತ್ತಾ ಬಂದಂತೆ ದೈಹಿಕ ಚಟುವಟಿಕೆಗಳಿಂದ ಶರೀರವು ಶ್ರಮಕ್ಕೊಳಪಡು ತ್ತದೆ. ದಂಡನೆಯಾದ ದೇಹಕ್ಕೆ ವಿಶ್ರಾಂತಿ ಅವಶ್ಯ. ವ್ಯಾಯಾಮ, ಕ್ರೀಡೆ, ಇತರ ದೈಹಿಕ ಕಸರತ್ತುಗಳ ಹಾಗೂ ಒತ್ತಡ, ಶ್ರಮದಿಂದ ಕೂಡಿದ ಕೆಲಸಗಳನ್ನು ಮಾಡಿದಾಗ ದಣಿಯುವ ದೇಹಕ್ಕೆ ವಿಶ್ರಾಂತಿ ಬೇಕೇ ಬೇಕು. ಈ ವಿಶ್ರಾಂತಿಯು ಶವಾಸನ ಅಭ್ಯಾಸದಿಂದ ಲಭ್ಯವಾಗುತ್ತದೆ.

‘ಶವ’ ಅಥವಾ ‘ಮೃತ’ ಎಂದರೆ ಹೆಣ, ಜೀವ ರಹಿತ ವಸ್ತು ಎಂದರ್ಥ. ಹೆಣದ ಸ್ಥಿತಿಯನ್ನು ಅನುಸರಿಸುವ ಮೂಲಕ ಉದ್ದೇಶ ಸಾಧನೆಗೆ ತೊಡಗುವುದು. ಮಾನವನ ಅಂತಿಮ ಯಾತ್ರೆಯ ಶವಾಸನದಿಂದ ಯಾವುದೇ ಚೈತನ್ಯ ಲಭ್ಯ ವಾಗುವುದಿಲ್ಲ; ಹೆಣದಲ್ಲಿ ಚಲನೆಯಿಲ್ಲ. ಕ್ರಮಬದ್ಧ ಶವಾಸನದಲ್ಲಿ ಜಾಗೃತಾವಸ್ಥೆ ಇದ್ದು, ಚೈತನ್ಯ ಸಂಚಯನವಾಗುತ್ತದೆ. ಶವಾಸನದಲ್ಲಿ ಮನಸ್ಸು ಜಾಗೃತವಾಗಿರುತ್ತದೆ. ಆದರೂ ಮನಸ್ಸು ಒಂದೇ ಕಡೆ ನಿಲ್ಲುವುದರಿಂದ ವಿಶ್ರಾಂತಿ ದೊರೆಯುತ್ತದೆ. ಇದನ್ನು ಕರಗತ ಮಾಡಿಕೊಳ್ಳಬೇಕಷ್ಟೆ.

ದೇಹವನ್ನು ಅತ್ತಿತ್ತ ಚಲಿಸದಂತೆ ಸ್ಥಿರವಾಗಿಡುವುದು ಸಾಧ್ಯವಾದರೂ ಮನಸ್ಸನ್ನು ಸುತ್ತಿ ಸುಳಿಯದಂತೆ ನಿಲ್ಲಿಸುವುದು ಬಲು ಕಷ್ಟದ ಕೆಲಸ. ಹೀಗಾಗಿ, ಎಲ್ಲರಿಗೂ ಅಚ್ಚುಮೆಚ್ಚಿನ ಹಾಗೂ ಸರ್ವಪ್ರಿಯವಾದ ಶವಾಸನ ನೋಡಲು ಬಲು ಸುಲಭ ಎಂಬಂತೆ ಕಂಡರೂ ಇದರಲ್ಲಿ ನೈಪುಣ್ಯ ಗಳಿಸುವುದು ಕಷ್ಟದ ಕೆಲಸ.

ಅಭ್ಯಾಸ ಕ್ರಮ
ನೆಲಕ್ಕೆ ಅಗತ್ಯ ನೆಲಹಾಸು ಹಾಕಿ ನೆಲದ ಮೇಲೆ ಉದ್ದಕ್ಕೂ ಬೆನ್ನಿನ ಮೇಲೆ ಚಪ್ಪಟೆಯಾಗಿ ಅಲುಗಾಡದಂತೆ ಶವದಂತೆ ಸ್ಥಿರವಾಗಿ ಮಲಗಬೇಕು. ಕೈಗಳನ್ನು ದೇಹದಿಂದ ಬಿಡಿಸಿ ಸ್ಪಲ್ಪ ದೂರವಾಗಿ ಅಂಗೈ ಮೇಲ್ಮುಖವಾಗಿ ಇರಿಸಿಕೊಳ್ಳಿ. ಹಿಮ್ಮಡಿಗಳನ್ನು ಜತೆಗೂಡಿಸಿ ಕಾಲ್ಬೆರಳುಗಳನ್ನು ಬಿಡಿಸಿ ಕಾಲುಗಳನ್ನು ಸ್ವಲ್ಪ ಅಂತರದಲ್ಲಿ(ಎರಡು ಅಥವಾ ನಾಲ್ಕು ಇಂಚು) ಇರಿಸಿ. ಬಳಿಕ ಕಣ್ಣುಗಳನ್ನು ಮುಚ್ಚಿ. ಸಾಧ್ಯವಾದರೆ ನಾಲ್ಕಾರು ಮಡಿಕೆ ಮಾಡಿದ ಹಗುರವಾದ ಕಪ್ಪು ಬಟ್ಟೆಯನ್ನು ಕಣ್ಣಿನ ಮೇಲೆ ಹೊದಿಸಿಕೊಳ್ಳಬೇಕು.

ಪ್ರಾರಂಭದಲ್ಲಿ ದೀರ್ಘವಾದ ಉಸಿರಾಟ ನಡೆಸಿ. ಬಳಿಕ ಸರಳ ಮತ್ತು ಸೂಕ್ಷ್ಮವಾಗಿ ಉಸಿರಾಟ ನಡೆಸುತ್ತಾ ಬೆನ್ನುಮೂಳೆ ಹಾಗೂ ದೇಹದ ಇತರ ಭಾಗ ಅಲುಗಾಡದಂತೆ ನೋಡಿ ಕೊಳ್ಳಬೇಕು. ಈ ಸ್ಥಿತಿಯಲ್ಲಿ ಮನಸ್ಸು ಉಸಿರಾಟದ ಮೇಲೆ ಕೇಂದ್ರೀಕೃತವಾಗಿದ್ದು, ಮೂಗಿನ ಹೊರಳೆ ಯಲ್ಲಿ ಉಸಿರಿನ ಬಿಸಿಯ ಅನುಭವವಾಗಬೇಕು.

ಹಲ್ಲುಗಳನ್ನು ಕಚ್ಚಿಹಿಡಿಯುವುದಾಗಲಿ, ಮುಖ ಬಿಗಿ ಮಾಡುವುದಾಗಲಿ ಮಾಡಬಾರದು. ಗದ್ದವನ್ನು ಸಡಿಲವಾಗಿ ಕೆಳಕ್ಕೆ ಬಿಡಬೇಕು. ನಾಲಗೆ, ಮತ್ತು ಕಣ್ಣಿನ ಗುಡ್ಡೆಗಳು ಅಲುಗಾಡದಂತೆ ನೋಡಿಕೊಳ್ಳಿ. ಇಡೀ ದೇಹವನ್ನು ಸಡಿಲವಾಗಿ ಬಿಡಿ. ಹೀಗೆ ಸ್ಥಿರವಾದ ದೇಹದಲ್ಲಿ ಸೂಕ್ಷ್ಮ ಉಸಿರಾಟ ನಡೆಸುತ್ತಾ ಸ್ಥಬ್ಧವಾಗಿರಿ.

ಹೀಗೆ ಶವಾಸನ ಅಭ್ಯಾಸ ಮಾಡುವಾಗ ಆರಂಭದಲ್ಲಿ ನಿದ್ರೆಗೆ ಜಾರಬಹುದು. ನಂತರ ನರಗಳಲ್ಲಿ ಚಟುವಟಿಕೆಯನ್ನು ಕಡಿಮೆ ಮಾಡುತ್ತಾ ಬಂದಂತೆ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಬಹುದು. ಇದರಿಂದ ಚೈತನ್ಯ ಲಭಿಸುತ್ತದೆ.

ಎಷ್ಟೊತ್ತು ಶವಾನಸ ಅಭ್ಯಾಸ
ಶವಾಸನವನ್ನು ಐದು- ಆರು ನಿಮಿಷದಿಂದ 10 ನಿಮಿಷದವರೆಗೆ ಕ್ರಮಬದ್ಧವಾಗಿ ಆಚರಿಸಬೇಕು. ಹೆಚ್ಚ ಸಮಯ ಅದರಲ್ಲೇ ಮುಂದುವರೆಯುತ್ತಾ ನಿದ್ರೆಗೆ ಜಾರದಂತೆ ಎಚ್ಚರ ಅಥವಾ ಜಾಗೃತರಾಗಿರಬೇಕು. ಪ್ರಾವಿಣ್ಯತೆ ಗಳಿಸುವವರಗೆ ಗುರುಮುಖೇನ ಅಭ್ಯಾಸ ನಡೆಸಿ. 

ಪ್ರಯೋಜನಗಳು
* ‘ಶವಾಸನವು ಉಳಿದ ಆಸನಗಳ ಅಭ್ಯಾಸದಿಂದುಂಟಾದ ದೇಹ ಶ್ರಮವನ್ನು ಕಳೆಯುವುದು. ಮಾತ್ರವಲ್ಲದೇ ಮನಸ್ಸಿಗೂ ತುಂಬಾ ಶಾಂತ ಸ್ಥಿತಿಯನ್ನು ಒದಗಿಸಿಕೊಡುತ್ತದೆ’ -ಹಟಯೋಗ ಪ್ರದೀಪಿಕೆಯಲ್ಲಿ ಉಲ್ಲೇಖಿಸಲಾಗಿದೆ.

* ‘ಶವದಂತೆ ಒರಗಿರುವ ಭಂಗಿಗೆ ‘ಮೃತಾಸನ’ವೆಂದು; ಈ ಭಂಗಿಯು ಶ್ರಮವನ್ನು ಕಳೆದು ಮನಸ್ಸಿನ ಚಾಂಚಲ್ಯವನ್ನು ಹುದುಗಿಸುತ್ತದೆ’ - ಘೇರಂಡ ಸಂಹಿತೆಯಲ್ಲಿ ಹೇಳಲಾಗಿದೆ. 

* ಯಾವುದೇ ಬಗೆಯ ದುಡಿಮೆಯಿಂದ ದಣಿವಾದಾಗ ಮೈನಸ್ಸಿಗೆ ವಿಶ್ರಾಂತಿ ಮತ್ತು ಲವಲವಿಕೆಯನ್ನುಂಟು ಮಾಡುತ್ತದೆ.

* ಶವಾಸನದಿಂದ ದೊರೆಯುವ ವಿಶ್ರಾಂತಿಯು ಉಸಲ್ಲಾಯುಕ್ತ ಹಾಗೂ ಅವರ್ಣನೀಯವಾದುದು.

* ಕೆಲಸದ ಹೊರೆಯನ್ನು ಕಡಿಮೆ ಮಾಡಿ ಹುರುಪಿನಿಂದಿರಲು ಸಹಕಾರಿ.

* ರಕ್ತದೊತ್ತಡ ನಿವಾರಣೆಗೆ ಪೂರಕ.

* ಒತ್ತಡ ಮುಕ್ತ ಜೀವನ ನಿರ್ವಹಣೆಗೆ ಸಹಕಾರಿ.

* ಪ್ರಾಣ ಮತ್ತು ಮನಸ್ಸುಗಳ ಲಯವೇ ಮುಕ್ತಿಸ್ಥಿತಿ. ಇಂಥ ಪ್ರಾಣವನ್ನು ಪಳಗಿಸಿಲು ಅದಕ್ಕೆ ಆಶ್ರಯ ನೀಡಿರುವ ನರಗಳನ್ನು ಹತೋಟಿಗೆ ತರಬೇಕು. ಇದಕ್ಕಾಗಿ ಸಮ ಹಾಗೂ ನಿರಾಳವಾದ, ಆನಂದ ಪೂರಕ ಮತ್ತು ಆಳವಾದ ಶ್ವಾಸ ಪ್ರಕ್ರಿಯೆ ನಡೆಸಿ; ದೇಹದ ಯಾವ ಭಾಗವೂ ಚಲಿಸದಂತೆ ನೋಡಿಕೊಳ್ಳಬೇಕು. ನರಗಳ ಮೇಲೆ ಹಿಡಿತ ಸಾಧಿಸಿದರೆ ಮನಸ್ಸಿನ ಮೇಲೆ ಹಿಡಿತ ಸಾಧಿಸಿದಂತೆಯೇ. ಮನಶಾಂತಿಯೇ ಆನಂದಾನುಭವ. ಇದೇ ಮುಕ್ತಿಸ್ಥಿತಿ.   

* ಆನಂದದ ಸುಖಾನುಭವ ಪಡೆಯಲು ಶವಾಸನ ‘ಸಿದ್ಧೌಷಧ’ ಎಂದೇ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT