ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗಕಾಮಿಗಳು ತೃತೀಯ ಲಿಂಗಿಗಳಲ್ಲ: ‘ಸುಪ್ರೀಂ’ತೀರ್ಪು

2014ರ ಆದೇಶಕ್ಕೆ ಸ್ಪಷ್ಟನೆ ನೀಡಿದ ನ್ಯಾಯಾಲಯ
Last Updated 30 ಜೂನ್ 2016, 22:30 IST
ಅಕ್ಷರ ಗಾತ್ರ

ನವದೆಹಲಿ: ಸಲಿಂಗಕಾಮಿಗಳು ಮತ್ತು ಉಭಯಲಿಂಗ ಕಾಮಿಗಳನ್ನು ತೃತೀಯ ಲಿಂಗಿಗಳೆಂದು ಪರಿಗಣಿಸುವುದಕ್ಕೆ ಅವಕಾಶ ಇಲ್ಲ. ಹಿಜಡಾಗಳೆಂದು ಕರೆಯಲಾಗುವ ಗುಂಪಿಗೆ ಸೇರಿದವರನ್ನು ಮಾತ್ರ ತೃತೀಯ ಲಿಂಗಿಗಳೆಂದು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟನೆ ನೀಡಿದೆ.

‘ಲೈಂಗಿಕ ಅಲ್ಪಸಂಖ್ಯಾತ’ರನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಬೇಕು ಎಂದು 2014ರಲ್ಲಿ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. 2014ರ ಸೆಪ್ಟೆಂಬರ್‌ನಲ್ಲಿ ಈ ತೀರ್ಪಿಗೆ ಸ್ಪಷ್ಟೀಕರಣ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ಸಲಿಂಗಕಾಮಿಗಳು ಮತ್ತು ಉಭಯಲಿಂಗ ಕಾಮಿಗಳನ್ನು ತೃತೀಯ ಲಿಂಗಿಗಳು ಎಂದು ಪರಿಗಣಿಸುವುದು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಎನ್‌.ವಿ. ರಮಣ ಅವರನ್ನೊಳಗೊಂಡ ಪೀಠವು, 2014ರ ತೀರ್ಪು ಸ್ಪಷ್ಟವಾಗಿದೆ.  ಸಲಿಂಗಕಾಮಿಗಳು ಮತ್ತು ಉಭಯ ಲಿಂಗ ಕಾಮಿಗಳು ತೃತೀಯ ಲಿಂಗಿಗಳಲ್ಲ. ಇದಕ್ಕೆ ಯಾವುದೇ ಸ್ಪಷ್ಟನೆಯ ಅಗತ್ಯ ಇಲ್ಲ ಎಂದು ಗುರುವಾರ ಹೇಳಿದೆ.

ತೀರ್ಪು ಸ್ಪಷ್ಟವಾಗಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ 2014ರ ತೀರ್ಪನ್ನು ಅನುಷ್ಠಾನಗೊಳಿಸಿಲ್ಲ ಎಂದು ತೃತೀಯ ಲಿಂಗಿಗಳ ಸಂಘಟನೆ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಆನಂದ್ ಗ್ರೋವರ್‌ ಹೇಳಿದರು.

2014ರ ತೀರ್ಪಿನಲ್ಲಿ ಹಲವು ಕಡೆಗಳಲ್ಲಿ ಹಿಜಡಾಗಳೆಂದರೆ ಯಾರು ಎಂಬುದನ್ನು ವಿವರಿಸಲಾಗಿದೆ. ಸಲಿಂಗಕಾಮಿಗಳು ಮತ್ತು ಉಭಯ ಲಿಂಗ ಕಾಮಿಗಳು ಅದರಲ್ಲಿ ಸೇರುವುದಿಲ್ಲ ಎಂದು ಹೇಳಲಾಗಿದೆ ಎಂದ ಪೀಠ, ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿತು. ಅನಗತ್ಯವಾಗಿ ಅರ್ಜಿ ಸಲ್ಲಿಸಿರುವುದಕ್ಕೆ ಯಾಕೆ ದಂಡ ವಿಧಿಸಬಾರದು ಎಂದೂ ಪ್ರಶ್ನಿಸಿತು.

ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ಮತ್ತು ಇತರ ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಬೇಕು. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗ ಎಂದು ಅವರನ್ನು ಗುರುತಿಸಬೇಕು ಎಂದು 2014ರಲ್ಲಿ ನೀಡಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌  ಹೇಳಿತ್ತು. ಭೀತಿ, ಅವಮಾನ, ಸಾಮಾಜಿಕ ಒತ್ತಡ, ಹತಾಶೆ ಮತ್ತು ಕಳಂಕದಿಂದ ಅವರು  ಮುಕ್ತರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.

ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌  ದುರುಪಯೋಗ ಮಾಡಿಕೊಂಡು ಈ ಸಮುದಾಯದ ಜನರಿಗೆ ಕಿರುಕುಳ ನೀಡಲಾಗುತ್ತಿದೆ. ಈ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಹೀನಾಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಹಿಜಡಾ ಸಮುದಾಯಕ್ಕೆ ನೀಡುವ ಸವಲತ್ತುಗಳನ್ನು ಸಲಿಂಗಕಾಮಿಗಳು ಮತ್ತು ಉಭಯಲಿಂಗ ಕಾಮಿಗಳಿಗೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟೀಕರಣ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಹೇಳಿತ್ತು. ಎಲ್ಲ ತೃತೀಯ ಲಿಂಗಿಗಳನ್ನು ಇತರ ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸುವುದು ಸಾಧ್ಯವಿಲ್ಲ. ಯಾಕೆಂದರೆ ಅವರಲ್ಲಿ ಹಲವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರಿದ್ದಾರೆ ಎಂದೂ ಅರ್ಜಿಯಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT