ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್‌ಗೆ 5 ವರ್ಷ ಜೈಲು

ಕಾರು ಗುದ್ದಿಸಿ ಪರಾರಿ ಪ್ರಕರಣ: 2 ದಿನ ಮಧ್ಯಂತರ ಜಾಮೀನು
Last Updated 6 ಮೇ 2015, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): 12 ವರ್ಷಗಳಷ್ಟು ಹಳೆಯದಾದ ‘ಕಾರು ಗುದ್ದಿಸಿ ಪರಾರಿ’ಯಾದ (ಹಿಟ್‌ ಆ್ಯಂಡ್‌ ರನ್‌) ಪ್ರಕರಣದಲ್ಲಿ ಬಾಲಿವುಡ್‌ನ ಖ್ಯಾತ  ನಟ ಸಲ್ಮಾನ್‌ ಖಾನ್‌ಗೆ  ಮುಂಬೈ ಸೆಷನ್ಸ್‌ ಕೋರ್ಟ್ ಐದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಆದರೆ, ಆದೇಶ ಹೊರಬಿದ್ದ ಬೆನ್ನಲ್ಲೇ  ಬಾಂಬೆ ಹೈಕೋರ್ಟ್‌ನಿಂದ ಎರಡು ದಿನ (ಮೇ 8ರವರೆಗೆ) ಮಧ್ಯಂತರ ಜಾಮೀನು ಪಡೆದ ಅವರು ತಾತ್ಕಾಲಿಕವಾಗಿ ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. 

ಹೈಕೋರ್ಟ್‌ನಲ್ಲಿ ಶುಕ್ರವಾರ ಸಲ್ಮಾನ್‌ ಅರ್ಜಿ ವಿಚಾರಣೆ ನಡೆಯಲಿದ್ದು, ಅಂದು ಅವರ ಭವಿಷ್ಯ ನಿರ್ಧಾರವಾಗಲಿದೆ. 
2002ರ ಸೆಪ್ಟೆಂಬರ್‌ 8ರಂದು ರಾತ್ರಿ  ಮುಂಬೈನ ಬಾಂದ್ರಾದ ಪಾದಚಾರಿ ರಸ್ತೆಯಲ್ಲಿ ಮಲಗಿದವರ ಮೇಲೆ ಕಾರು ಹರಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಲ್ಮಾನ್‌ ವಿರುದ್ಧದ ಎಲ್ಲ ಆರೋಪಗಳು ಸಾಬೀತಾಗಿವೆ. ಈ ಪ್ರಕರಣದಲ್ಲಿ ಆತ ತಪ್ಪಿತಸ್ಥ ಎಂದು  ನ್ಯಾಯಾಲಯ ಹೇಳಿದೆ.

ಇದಕ್ಕೂ ಮೊದಲು ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಡಿ. ಡಬ್ಲ್ಯೂ. ದೇಶಪಾಂಡೆ, ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ  ಕಾರು ಚಾಲನೆ ಮಾಡುವ ವೇಳೆ ಸಲ್ಮಾನ್‌ ಮದ್ಯ ಸೇವಿಸಿದ್ದರು ಎನ್ನುವ ಆರೋಪ ದೃಢಪಟ್ಟಿದೆ. ಅಲ್ಲದೇ  ಆ ವೇಳೆ  ಅವರ ಬಳಿ ಚಾಲನಾ ಪರವಾನಗಿ (ಲೈಸನ್ಸ್‌) ಕೂಡ ಇರಲಿಲ್ಲ ಎಂದರು.

ಕೊಲೆಯ ಉದ್ದೇಶವಲ್ಲದ ಹತ್ಯೆ, ಮದ್ಯಪಾನ ಮಾಡಿ ಕಾರು ಚಾಲನೆ, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಹಾಗೂ ಪರವಾನಗಿ ಇಲ್ಲದೆ ಕಾರು ಓಡಿಸಿದ ಆರೋಪಗಳನ್ನು ಸಲ್ಮಾನ್‌ ವಿರುದ್ಧ ಹೊರಿಸಲಾಗಿತ್ತು. ಈ ಎಲ್ಲ ನಾಲ್ಕು ಆರೋಪಗಳು ಸಾಬೀತಾಗಿವೆ.

ಆದರೆ, ತಮ್ಮ ವಿರುದ್ಧ ಮಾಡಲಾದ ಎಲ್ಲ ಆರೋಪತಳ್ಳಿ ಹಾಕಿದರು. ಅಲ್ಲದೇ ತಾವು ನಿರ್ದೋಷಿ ಎಂದು ಸಮರ್ಥಿಸಿಕೊಂಡರು.

ಕರಾಳ ರಾತ್ರಿ
2002ರಲ್ಲಿ ಸೆ. 8ರಂದು ಸಲ್ಮಾನ್‌ ಕಾರು ಬಾಂದ್ರಾದ ಪಾದಚಾರಿ ರಸ್ತೆಗೆ ನುಗ್ಗಿದ ನಂತರ ಬೇಕರಿ ಹೊಕ್ಕಿತ್ತು. ಈ ಅಪಘಾತದಲ್ಲಿ ಪಾದಚಾರಿ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿ, ನಾಲ್ವರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT