ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿಗೆ ಸಜ್ಜುಗೊಳ್ಳುತ್ತಿದೆ ಯುವಪಡೆ

Last Updated 20 ಜುಲೈ 2014, 19:30 IST
ಅಕ್ಷರ ಗಾತ್ರ

ಆರು ತಿಂಗಳು ಕಳೆದರೆ ಸಾಕು ಐಸಿಸಿ ಏಕದಿನ ವಿಶ್ವಕಪ್ ಆರಂಭ. ಮೂರು ವರ್ಷಗಳ ಹಿಂದೆ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯಲ್ಲಿ ದೋನಿ ಬಳಗ ವಿಶ್ವ ಚಾಂಪಿಯನ್ ಆಗಿ ಮೆರೆದಾಡಿತ್ತು. ಆ ಪಟ್ಟವನ್ನು ತನ್ನಲ್ಲಿಯೇ ಉಳಿಸಿಕೊಳ್ಳಬೇಕು ಎನ್ನುವ ಛಲ ಭಾರತದ್ದು. ಅದಕ್ಕಾಗಿ 2015ರ ವಿಶ್ವಕಪ್‌ಗೆ ಹೆಚ್ಚಿನ ಮಹತ್ವ ನೀಡಿದೆ.

ಅನುಭವಿ ಆಟಗಾರರ ಜೊತೆ ಬಲಿಷ್ಠ ಯುವಪಡೆಯನ್ನು ಕಟ್ಟಬೇಕೆಂಬುದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿಯ ಅಪೇಕ್ಷೆ. ಅದಕ್ಕಾಗಿ ಕಾಂಗರೂ ನಾಡಿನಲ್ಲಿ ಭಾರತ ‘ಎ’ ತಂಡಕ್ಕೆ ಆಸ್ಟ್ರೇಲಿಯ ‘ಎ’ ಎದುರು ನಾಲ್ಕು ದಿನಗಳ ಕ್ರಿಕೆಟ್‌ ಪಂದ್ಯ ಆಯೋಜಿಸಿತ್ತು. ಈಗ ತ್ರಿಕೋನ ಸರಣಿಯೂ ಆರಂಭಗೊಂಡಿದೆ.

ಈ ಹಿಂದೆ ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ಗೌತಮ್‌ ಗಂಭೀರ್‌ ಸೇರಿದಂತೆ ಬಹುತೇಕ ಆಟಗಾರರು ‘ಎ’ ತಂಡಗಳ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರಿದವರು. ಜೊತೆಗೆ ವಿವಿಧ ವಯೋಮಾನಗಳ ಟೂರ್ನಿಗಳಲ್ಲಿಯೂ ಮಿಂಚಿದವರು. ವಿಶ್ವಕಪ್‌ ಆಸ್ಟ್ರೇಲಿಯದಲ್ಲಿಯೇ ನಡೆಯುವ ಕಾರಣ ಅಲ್ಲಿನ ವಾತಾವರಣ ಹಾಗೂ ಪಿಚ್‌ಗೆ ಹೊಂದಿಕೊಳ್ಳಲು ಸಾಧ್ಯವಾಗಲಿ ಎನ್ನುವ ಕಾರಣಕ್ಕಾಗಿ ಸರಣಿ ಆಯೋಜಿಸಲಾಗಿದೆ. ಆದರೆ, ಹೋದ ವಾರ ಮುಕ್ತಾಯಗೊಂಡ ನಾಲ್ಕು ದಿನಗಳ ಎರಡು ‘ಟೆಸ್ಟ್‌’ ಪಂದ್ಯಗಳು ಡ್ರಾ ಆಗಿವೆ. ಆದರೆ, ನೆಚ್ಚಿನ ತಾರೆಯರು ಎನಿಸಿದ್ದ ಆಟಗಾರರು ವಿಫಲರಾಗಿದ್ದಾರೆ. ಅದೇನೇ ಇರಲಿ, ಕಾಂಗರೂ ನಾಡಿನಲ್ಲಿ ಭಾರತ ತಂಡ ವಿಶ್ವ ಕ್ರಿಕೆಟ್‌ನ ಅಧಿಪತ್ಯ ಉಳಿಸಿಕೊಳ್ಳಬೇಕಾದರೆ ಅಲ್ಲಿ ಹೆಚ್ಚು ಪಂದ್ಯಗಳನ್ನು ಆಡುವ ಅಗತ್ಯವಿದೆ.

ಇದೇ ಲೆಕ್ಕಾಚಾರ ಹೊಂದಿರುವ ಬಿಸಿಸಿಐ ಭಾರತ ‘ಎ’ ತಂಡಕ್ಕೆ ಪಂದ್ಯಗಳನ್ನು ಆಯೋಜಿಸಿದೆ. ಭಾನುವಾರ ಆರಂಭವಾದ ಭಾರತ ‘ಎ’, ದಕ್ಷಿಣ ಆಫ್ರಿಕಾ ‘ಎ’ ಮತ್ತು ಆಸ್ಟ್ರೇಲಿಯ ‘ಎ’ ತಂಡಗಳ ನಡುವೆ ತ್ರಿಕೋನ ಸರಣಿ ಬಲಿಷ್ಠ ತಂಡವನ್ನು  ಕಟ್ಟಬೇಕೆನ್ನುವ ಆಶಯಕ್ಕೆ ನೆರವಾಗಲಿದೆ. ಹೋದ ವರ್ಷ ಭಾರತ ‘ಎ’ ಮತ್ತು ವೆಸ್ಟ್‌ ಇಂಡೀಸ್‌ ‘ಎ’ ತಂಡಗಳ ನಡುವೆ ಸರಣಿ ನಡೆದಿತ್ತು. ಲಯ ಕಳೆದುಕೊಂಡು ರಾಷ್ಟ್ರೀಯ ತಂಡದಿಂದ ಹೊರಗಿದ್ದ ಪಂಜಾಬ್‌ನ ಯುವರಾಜ್‌ ಸಿಂಗ್‌ಗೆ ಆ ಸರಣಿ ಕ್ರಿಕೆಟ್‌ ಬದುಕಿಗೆ ‘ಜೀವದಾನ’ ನೀಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಬ್ಬರಿಸಿದ್ದ ‘ಯುವಿ’ ರಾಷ್ಟ್ರೀಯ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದರು.

ಮುಂದಿದೆ ಸವಾಲಿನ ಹಾದಿ
ಭಾರತ ‘ಎ’ ತಂಡದಲ್ಲಿರುವ ಬಲಿಷ್ಠ ಆಟಗಾರರನ್ನು ಆಯ್ಕೆ ಮಾಡುವ ಉದ್ದೇಶದೊಂದಿಗೆ ಬಿಸಿಸಿಐ ಮೇಲಿಂದ ಮೇಲೆ ‘ಎ’ ತಂಡಕ್ಕೆ ವಿದೇಶ ಪ್ರವಾಸಗಳನ್ನು ಆಯೋಜಿಸುತ್ತಿದೆ. ‘ಎ’ ತಂಡ ಹೋದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಅಲ್ಲಿ ನಾಲ್ಕು ದಿನಗಳ ‘ಟೆಸ್ಟ್‌’ ಆಡಿತ್ತು. 2013ರ ಸೆಪ್ಟೆಂಬರ್‌ನಲ್ಲಿ ಭಾರತ, ಆಸ್ಟ್ರೇಲಿಯ, ನ್ಯೂಜಿಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ‘ಎ’ ತಂಡಗಳ ನಡುವೆ ನಿಗದಿತ ಓವರ್‌ಗಳ ಸರಣಿ ಜರುಗಿತ್ತು. ‘ಎ’ ತಂಡಗಳಿಗೆ ಆಯೋಜನೆಯಾಗಿದ್ದ ದೊಡ್ಡ ಸರಣಿ ಅದಾಗಿತ್ತು. ಹೀಗೆ ‘ಎ’ ತಂಡಗಳಿಗೆ ಮೇಲಿಂದ ಮೇಲೆ ಸರಣಿ ಆಯೋಜನೆಯಾಗುತ್ತಿರುವ ಕಾರಣ ಆಟಗಾರರು ಕೈಕಟ್ಟಿಕೊಂಡು ಸುಮ್ಮನೆ ಕೂಡುವಂತಿಲ್ಲ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ಪ್ರಬಲ ಪೈಪೋಟಿ ಇರುವ ಕಾರಣ ಸವಾಲಿಗೆ ಎದೆಯೊಡ್ಡಿ ಗುರಿ ಸೇರುವುದು ಅನಿವಾರ್ಯ. ಆದ್ದರಿಂದ ಪ್ರತಿ ಪಂದ್ಯದಲ್ಲಿಯೂ ಸಾಮರ್ಥ್ಯ ಸಾಬೀತು ಮಾಡಬೇಕಿದೆ.

ಪ್ರಮುಖ ಆಟಗಾರರ ವೈಫಲ್ಯ
ರಣಜಿ, ಇರಾನಿ ಕಪ್‌ ಮತ್ತು ವಿಜಯ್‌ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡ ಯಶಸ್ಸು ಕಾಣಲು ಕಾರಣರಾಗಿದ್ದ ರಾಬಿನ್‌ ಉತ್ತಪ್ಪ, ಕೆ.ಎಲ್‌.ರಾಹುಲ್‌ ಮತ್ತು ಕರುಣ್‌ ನಾಯರ್ ಆಸೀಸ್‌ ಎದುರಿನ ನಾಲ್ಕು ದಿನಗಳ ಕ್ರಿಕೆಟ್‌ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರು.
ದೇಶಿಯ ಕ್ರಿಕೆಟ್‌ನಲ್ಲಿ ತೋರಿದ ಪ್ರದರ್ಶನವನ್ನೇ ಆಧಾರವಾಗಿಟ್ಟುಕೊಂಡು ಬಿಸಿಸಿಐ ಇವರನ್ನು ಕಾಂಗರೂ ನಾಡಿನ ಪ್ರವಾಸಕ್ಕೆ ಕಳುಹಿಸಿತ್ತು. ಆದರೆ, ರಾಹುಲ್‌ ಎರಡು ಪಂದ್ಯಗಳಿಂದ ಒಂದು ಅರ್ಧಶತಕ ಮಾತ್ರ ಗಳಿಸಿದರು. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ನಮನ್‌ ಓಜಾ ಎರಡೂ ಪಂದ್ಯಗಳಲ್ಲಿ ಮಿಂಚಿದರು. ದ್ವಿಶತಕ, ಶತಕ ಮತ್ತು ಅರ್ಧಶತಕ ಬಾರಿಸಿದರು. ‘ಬಾಲಂಗೋಚಿ’ ಉಮೇಶ್‌ ಯಾದವ್‌ ಬ್ಯಾಟಿಂಗ್‌ ಮೂಲಕ ಗಮನ ಸೆಳೆದರು. ಆದರೆ, ರಾಹುಲ್‌, ಬಾಬಾ ಅಪರಾಜಿತ್‌, ಕರುಣ್‌ ನಾಯರ್ ಅವರಿಗೆ ವೈಫಲ್ಯದಿಂದ ಹೊರಬರಲು ಸಾಧ್ಯವಾಗಲಿಲ್ಲ.

ಇಂಗ್ಲೆಂಡ್‌ನಲ್ಲಿಯೂ ಇದೆ ಅವಕಾಶ
ಇಂಗ್ಲೆಂಡ್‌ ಎದುರು ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡುತ್ತಿರುವ ಭಾರತ ಹಿರಿಯರ ತಂಡ ಆಂಗ್ಲರ ನಾಡಿನಲ್ಲಿ ಐದು ಏಕದಿನ ಪಂದ್ಯಗಳ ಸರಣಿಯನ್ನೂ ಆಡಲಿದೆ. ಅದಕ್ಕಾಗಿ ಭಾರತ ತಂಡವನ್ನು ಇನ್ನು ಆಯ್ಕೆ ಮಾಡಿಲ್ಲ. ಆದ್ದರಿಂದ ‘ಎ’ ತಂಡಗಳ ಪಂದ್ಯ ಭಾರತದ ಯುವ ಆಟಗಾರರಿಗೆ ಮುಖ್ಯವೆನಿಸಿದೆ. ‘ಎ’ ತಂಡದಲ್ಲಿ ಆಟಗಾರರು ತೋರುವ ಪ್ರದರ್ಶನವನ್ನು ಆಧಾರವಾಗಿಟ್ಟುಕೊಂಡು ಅವರನ್ನು ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯೂ ಇದೆ.

ಹಿರಿಯರ ಪಾಲಿಗೆ ಅಭ್ಯಾಸ
ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಡ್ರಾ ಸಾಧಿಸಿರುವ ಭಾರತ ಹಿರಿಯರ ತಂಡಕ್ಕೂ ಈಗ ಹೆಚ್ಚು ಸಮಯವಿಲ್ಲ. ಆಂಗ್ಲರ ನಾಡಿನ ಸರಣಿ ಮುಗಿಸಿಕೊಂಡ ಬೆನ್ನಲ್ಲೇ ಆಸ್ಟ್ರೇಲಿಯ ಪ್ರವಾಸ ಶುರುವಾಗಲಿದೆ. ಇದೇ ವರ್ಷದ ಡಿಸೆಂಬರ್‌ನಲ್ಲಿ ದೋನಿ ಪಡೆ ಕಾಂಗರೂ ನಾಡಿಗೆ ತೆರಳಲಿದೆ. ಅಲ್ಲಿ ನಾಲ್ಕು ಟೆಸ್ಟ್‌ ಆಡಲಿದೆ. ನಂತರ, ಇಂಗ್ಲೆಂಡ್‌ ಮತ್ತು ಆತಿಥೇಯರ ಜೊತೆ ತ್ರಿಕೋನ ಸರಣಿಯಲ್ಲಿಯೂ ಪಾಲ್ಗೊಳ್ಳಲಿದೆ. ಈ ಸರಣಿ ಮುಗಿದ ಬಳಿಕ ಕ್ರಿಕೆಟ್‌ ಪ್ರೇಮಿಗಳು ಕುತೂಹಲದಿಂದ ಎದುರು ನೋಡುತ್ತಿರುವ ವಿಶ್ವಕಪ್‌ ಆರಂಭ. ಆದ್ದರಿಂದ ಆಸ್ಟ್ರೇಲಿಯ ಪ್ರವಾಸ ‘ಮಹಿ’ ಬಳಗಕ್ಕೆ ವಿಶ್ವಕಪ್‌ ಟೂರ್ನಿಯ ‘ಅಭ್ಯಾಸ’ದ ಸರಣಿ ಎನಿಸಿದೆ.

ಉತ್ತಪ್ಪ, ಮನೀಷ್‌ಗೆ ಉತ್ತಮ ಅವಕಾಶ
ರಾಷ್ಟ್ರೀಯ ತಂಡಕ್ಕೆ ಮರಳುವ ಆಸೆ ಹೊಂದಿರುವ ಕರ್ನಾಟಕದ ರಾಬಿನ್ ಉತ್ತಪ್ಪ ತ್ರಿಕೋನ ಸರಣಿಗೆ ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ. ಜೊತೆಗೆ, ರಾಜ್ಯದ ಮನೀಷ್‌ ಪಾಂಡೆಗೂ ಸ್ಥಾನ ಲಭಿಸಿದೆ. ಎರಡೂ ಅಭ್ಯಾಸ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಅನುಭವಿ ಬ್ಯಾಟ್ಸ್‌ಮನ್‌ ಉತ್ತಪ್ಪ ತ್ರಿಕೋನ ಸರಣಿಯಲ್ಲಿ ತಮ್ಮ ನಾಯಕತ್ವದ ಸಾಮರ್ಥ್ಯ ಸಾಬೀತು ಮಾಡಬೇಕಿದೆ. ಸ್ಫೋಟಕ ಬ್ಯಾಟಿಂಗ್‌ ಮೂಲಕ ಹೆಸರು ಮಾಡಿರುವ ಮನೀಷ್‌ ರಾಷ್ಟ್ರೀಯ ತಂಡದಲ್ಲಿ ಆಡಬೇಕು ಎನ್ನುವ ಕನಸು ಹೊತ್ತು ಕಾಯುತ್ತಿದ್ದಾರೆ. ಅವರ ಆಸೆ ಈಡೇರಲು ಇದು ಅತ್ಯುತ್ತಮ ಅವಕಾಶ. ಸಿಕ್ಕಿರುವ ಅವಕಾಶ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT