ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿನ ಹಾದಿಯಲ್ಲಿ ಮಹಿಳಾ ಹಾಕಿ...

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

‘ನಾಳೆ ಪಂದ್ಯವಿದೆ ಎಂದರೆ ಅದರ ಹಿಂದಿನ ದಿನ ಭಾರತ ತಂಡದ ಆಟಗಾರ್ತಿಯರು ಅಭ್ಯಾಸ ನಡೆಸಲು ಒಂದು ಕಡೆ ಸೇರುತ್ತಾರೆ. ಈ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದರೆ ಅದು ಹೇಗೆ ಸಾಧ್ಯ? ವ್ಯವಸ್ಥೆಯೇ ಸರಿ ಇಲ್ಲವೆಂದ ಮೇಲೆ ಗೆಲುವು ಒಲಿಯುವುದಾದರೂ ಹೇಗೆ?’

–ಹೀಗೆಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದು ಭಾರತ ಹಾಕಿ ತಂಡದ ಮಾಜಿ ನಾಯಕಿ ಅಲ್ವಿರೊ ಬ್ರಿಟ್ಟೊ.

ಅವರ ಮಾತಿನಲ್ಲಿ ಸದ್ಯದ ವ್ಯವಸ್ಥೆ, ತರಬೇತುದಾರರು ಹಾಗೂ ಆಡಳಿತದ ಬಗ್ಗೆ ಆಕ್ರೋಶವಿತ್ತು. ಬೆಲ್ಜಿಯಂನಲ್ಲಿ ನಡೆದ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್ಸ್‌ನಲ್ಲಿ 23ನೇ ರ‍್ಯಾಂಕ್‌ ನ ಪೋಲೆಂಡ್‌ ಎದುರು ಗೆಲ್ಲಲು ಭಾರತದ ವನಿತೆಯರು ಪರದಾಡಿದ್ದು ಅವರ ಬೇಸರವನ್ನು ಮತ್ತಷ್ಟು ಹೆಚ್ಚಿಸಿದೆ.

‘ಈಗಿನ ಕೋಚ್‌ಗಳಿಗೆ ಕೊಂಚವೂ ಅನುಭವ ಇಲ್ಲ. ತಾಂತ್ರಿಕ ಜ್ಞಾನವೂ ಇಲ್ಲ. ತಂಡದ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಂಥವರಿಂದ ಏನು ನಿರೀಕ್ಷಿಸಲು ಸಾಧ್ಯ’ ಎಂಬುದು ಅವರ ಪ್ರಶ್ನೆ.

ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ನಡೆದ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನ ಅಷ್ಟಕಷ್ಟೆ. ಲೀಗ್‌ನಲ್ಲಿ ಒಲಿದಿದ್ದು ಒಂದೇ ಗೆಲುವು. ‘ಬಿ’ ಗುಂಪಿನಲ್ಲಿ ಭಾರತವಲ್ಲದೆ, ನ್ಯೂಜಿಲೆಂಡ್‌, ಬೆಲ್ಜಿಯಂ, ಪೋಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳಿದ್ದವು. ತನಗಿಂತ ಕೆಳಗಿನ ರ‍್ಯಾಂಕ್‌ ಹೊಂದಿರುವ ಇಟಲಿ ಎದುರು ಪ್ಲೇ ಆಫ್‌ ಹಂತದಲ್ಲಿ ಗೆಲ್ಲಲು ಹರಸಾಹಸ ಪಡಬೇಕಾಯಿತು.

ಭಾರತ ಮಹಿಳಾ ತಂಡ ಕೊನೆಯ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಿದ್ದು 1980ರಲ್ಲಿ! ಆ ಬಳಿಕ ಬರೀ ನಿರಾಸೆ. ಮುಂದಿನ ವರ್ಷ ರಿಯೊ ಡಿಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಲು ಪರದಾಡುತ್ತಿದೆ. ಒಲಿಂಪಿಕ್ಸ್‌ ಅರ್ಹತಾ ಪ್ರಕ್ರಿಯೆ ಇನ್ನೂ ಅಂತಿಮವಾಗಿಲ್ಲ. ಹಾಗಾಗಿ ಭಾರತ ತಂಡದ ಅವಕಾಶದ ಬಾಗಿಲು ಇನ್ನೂ ಮುಚ್ಚಿಲ್ಲ.

ರಿತು ರಾಣಿ ಸಾರಥ್ಯದ ಭಾರತ ತಂಡವೀಗ ವಿಶ್ವರ‍್ಯಾಂಕಿಂಗ್ ನಲ್ಲಿ 13ನೇ ಸ್ಥಾನದಲ್ಲಿದೆ. ಕ್ವಾಲಾಲಂಪುರದಲ್ಲಿ ನಡೆದ 2013ರ ಏಷ್ಯಾ ಕಪ್‌ನಲ್ಲಿ ಮೂರನೇ ಸ್ಥಾನ ಹಾಗೂ 2014ರಲ್ಲಿ ಇಂಚೆನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದಷ್ಟೇ ಭಾರತ ಹಾಕಿ ತಂಡದ ಇತ್ತೀಚಿಗಿನ ಸಾಧನೆ.

ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಲು ಈ ಆಟಗಾರ್ತಿಯರಿಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಇವರ ದೈಹಿಕ ಸಾಮರ್ಥ್ಯ ಅಷ್ಟಕಷ್ಟೆ. ಎಲ್ಲಕ್ಕಿಂತ ಮುಖ್ಯವಾಗಿ ಹಾಕಿ ಆಟಕ್ಕೆ ಬೇಕಾದ ‘ವೇಗ’ ಎಂಬುದು ಗಗನ ಕುಸುಮವಾಗಿದೆ. ಗಾಯದ ಕಾರಣ 8 ತಿಂಗಳು ಹೊರಗುಳಿದಿದ್ದ ರಾಣಿ ರಾಂಪಾಲ್‌ ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಈ ತಂಡದ ಮುಖ್ಯ ಕೋಚ್‌ ಆಗಿ ಮಥಿಯಾಸ್‌ ಅರೆನ್ಸ್‌ ಇತ್ತೀಚೆಗಷ್ಟೇ ನೇಮಕವಾಗಿದ್ದಾರೆ.

‘ಒಲಿಂಪಿಯನ್‌ ಎಂ. ಕೌಶಿಕ್‌ ಅವರು ಮುಖ್ಯ ಕೋಚ್‌ ಆಗಿದ್ದಾಗ ಮಹಿಳಾ ತಂಡ ಉತ್ತುಂಗದಲ್ಲಿತ್ತು. ಅಷ್ಟೇ ಅಲ್ಲ. ಎಲ್ಲಾ ವಿಭಾಗಗಳಲ್ಲಿ ಸುಧಾರಣೆ ಕಂಡಿತ್ತು’ ಎಂಬುದು ಬ್ರಿಟ್ಟೊ ಅವರ ಅಭಿಪ್ರಾಯ. ಒಂದಿಷ್ಟು ದಿನ ಭಾರತದ ಹಾಕಿಗೆ ವಿವಾದಗಳ ಕಾರ್ಮೋಡ ಕವಿದಿತ್ತು. ಆ ವಿವಾದಗಳಿಂದ ಸದ್ಯ ಮುಕ್ತವಾಗಿದೆ. ಆದರೆ, ಪ್ರದರ್ಶನ ಮಟ್ಟ ಮಾತ್ರ ಆರಕ್ಕೇರುತ್ತಿಲ್ಲ.

ರಾಜ್ಯದ ಆಟಗಾರ್ತಿಯರೇ ಇಲ್ಲ
‘ಈಗಿನ ಭಾರತ ತಂಡವನ್ನೇ ಗಮನಿಸಿ. ಅದು ಜಾರ್ಖಂಡ್, ಒಡಿಶಾ, ಪಂಜಾಬ್ ಹಾಗೂ ಹರಿಯಾಣ ಆಟಗಾರ್ತಿಯರ ತಂಡವಾಗಿದೆ. ಕಳೆದ ಐದಾರು ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದೆ. ತಂಡ ಸೋಲಲಿ, ಗೆಲ್ಲಲಿ ಇವರನ್ನೇ ಆಡಿಸಬೇಕು’ ಎನ್ನುತ್ತಾರೆ ಅರ್ಜುನ ಪ್ರಶಸ್ತಿ ಪುರಸ್ಕೃತೆ ಬ್ರಿಟ್ಟೊ.

‘ನಾನು ಆಡುತ್ತಿದ್ದ ವೇಳೆ ಭಾರತ ತಂಡದಲ್ಲಿ ರಾಜ್ಯದ ಆರೇಳು ಆಟಗಾರ್ತಿಯರು ಇರುತ್ತಿದ್ದರು. ಇದು ಕರ್ನಾಟಕ ತಂಡ ಎಂದು ಕೆಲವರು ಲೇವಡಿ ಮಾಡುತ್ತಿದ್ದರು. ಆದರೆ, ಈಗ ನೋಡಿ ಒಬ್ಬರೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಕೊಡಗಿನ ಎಂ.ಎನ್‌. ಪೊನ್ನಮ್ಮ ಮಾತ್ರ ರಾಷ್ಟ್ರೀಯ ತಂಡದ ಸಂಭವನೀಯರ ಪಟ್ಟಿಯಲ್ಲಿದ್ದಾರೆ. ‘ನಗರದ ಹುಡುಗಿಯರು ಹಾಕಿ ಕ್ರೀಡೆಯತ್ತ ಆಸಕ್ತಿ ತೋರಿಸುತ್ತಿಲ್ಲ, ಈಗಿನ ರಾಜ್ಯ ತಂಡ ಗಮನಿಸಿದರೆ ಎಲ್ಲರೂ ಜಿಲ್ಲಾ ಕೇಂದ್ರಗಳಿಂದ ಅಧಿಕ. ಅವರ ದೈಹಿಕ ಸಾಮರ್ಥ್ಯ ಪರವಾಗಿಲ್ಲ. ಆದರೆ, ಕೌಶಲ ಹಾಗೂ ವೇಗದ ಆಟದ ಕೊರತೆ ಇದೆ’ ಎಂದು ವಿಶ್ಲೇಷಿಸುತ್ತಾರೆ.  

ಒಲಿಂಪಿಕ್ಸ್‌ ಅರ್ಹತೆ ಹೇಗೆ...?
ಮಹಿಳೆಯರ  ವಿಶ್ವ ಹಾಕಿ ಲೀಗ್‌ ಸೆಮಿಫೈನಲ್ಸ್‌ ಎರಡು ಹಂತಗಳಲ್ಲಿ ನಡೆಯುತ್ತದೆ. ಇದರಲ್ಲಿ ಗೆಲ್ಲುವ ತಲಾ ನಾಲ್ಕು ತಂಡಗಳು ಡಿಸೆಂಬರ್‌ನಲ್ಲಿ ಅರ್ಜೆಂಟೀನಾದಲ್ಲಿ ನಡೆಯಲಿರುವ ವಿಶ್ವ ಹಾಕಿ ಲೀಗ್‌ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸುತ್ತವೆ.

ಸ್ಪೇನ್‌ನಲ್ಲಿ ಜೂನ್ 10ರಿಂದ 21ರವರೆಗೆ ಮೊದಲ ಹಂತದ ಸೆಮಿಫೈನಲ್ಸ್‌ ಟೂರ್ನಿ ನಡೆದಿದೆ. ಈ ಹಂತದಿಂದ ಬ್ರಿಟನ್‌, ಚೀನಾ, ಜರ್ಮನಿ ಹಾಗೂ ಅರ್ಜೆಂಟೀನಾ ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ. ಈಗ ಬೆಲ್ಜಿಯಂನಲ್ಲಿ ನಡೆದಿದ್ದು ಎರಡನೇ ಹಂತದ ಟೂರ್ನಿ. ಇದರಲ್ಲಿ ಭಾರತ ಸೇರಿದಂತೆ 10 ತಂಡಗಳಿದ್ದು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಈ ಹಂತದಿಂದ ಹಾಲೆಂಡ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳ ಒಲಿಂಪಿಕ್ಸ್‌ ಹಾದಿ ಸುಗಮವಾಗಿದೆ. ಇಂಚೆನ್‌ ಏಷ್ಯನ್ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಆಗಿದ್ದ ದಕ್ಷಿಣ ಕೊರಿಯಾ ಈಗಾಗಲೇ ಅರ್ಹತೆ ಗಿಟ್ಟಿಸಿದೆ.

ವಿಶ್ವ ಹಾಕಿ ಲೀಗ್‌ನ ಎರಡು ಹಂತಗಳಿಂದ ಸೇರಿ ಮೊದಲ ಏಳು ಸ್ಥಾನ ಪಡೆಯುವ ತಂಡಗಳು ಹಾಗೂ ಕಾಂಟಿನೆಂಟಲ್‌ ಮಟ್ಟದಲ್ಲಿ (ಆಫ್ರಿಕಾ, ಅಮೆರಿಕ, ಏಷ್ಯಾ, ಯೂರೋಪ್, ಒಸಿನಿಯಾ) ಚಾಂಪಿಯನ್‌ ಆಗುವ ಐದು ತಂಡಗಳು ಸೇರಿ ಒಟ್ಟು 12 ತಂಡಗಳು ಒಲಿಂಪಿಕ್ಸ್‌ನಲ್ಲಿ ಪೈಪೋಟಿ ನಡೆಸಲಿವೆ. ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವ ಬ್ರೆಜಿಲ್‌ಗೂ ಅವಕಾಶ ಸಿಕ್ಕಿಲ್ಲ. ಈ ತಂಡ ನಿಗದಿಪಡಿಸಿದ ಅರ್ಹತೆ ಪಡೆದಿಲ್ಲ.

ಸ್ಪಷ್ಟ ವೇಳಾಪಟ್ಟಿಯೇ ಇಲ್ಲ...
‘ಹಾಕಿ ಕರ್ನಾಟಕ ಅಥವಾ ಹಾಕಿ ಇಂಡಿಯಾವನ್ನೇ ತೆಗೆದುಕೊಳ್ಳಿ. ವಿವಿಧ ವಯೋಮಿತಿಯ ಟೂರ್ನಿ ಆಯೋಜಿಸುವ ಬಗ್ಗೆ ಸ್ಪಷ್ಟ ವೇಳಾಪಟ್ಟಿಯನ್ನೇ ಹೊಂದಿಲ್ಲ. ತಮಗೆ ಬೇಕೆಂದಾಗ ಟೂರ್ನಿ ಆಯೋಜಿಸುತ್ತಾರೆ. ಆ ಸಂದರ್ಭದಲ್ಲಿ ಸಿಗುವ ಆಟಗಾರ್ತಿಯರನ್ನು ಕರೆತಂದು ಆಡಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಮಾಜಿ ನಾಯಕಿ ಅಲ್ವಿರೊ ಬ್ರಿಟ್ಟೊ.

‘ಸಬ್‌ ಜೂನಿಯರ್‌, ಜೂನಿಯರ್‌ ಹಾಗೂ ಸೀನಿಯರ್‌ ಮಟ್ಟದಲ್ಲಿ ಸೇರಿ ಮೂರು ತಂಡಗಳನ್ನು ಹೊಂದಿರಬೇಕು. ಆದರೆ, ಇವರು ಸರಿಯಾಗಿ ರಾಷ್ಟ್ರೀಯ ಟೂರ್ನಿ ಆಯೋಜಿಸುತ್ತಿಲ್ಲ. ತಳಹಂತದಿಂದ ಆಟಗಾರ್ತಿಯರನ್ನು ಸಿದ್ಧಪಡಿಸುವ ಕೆಲಸಕ್ಕೂ ಮುಂದಾಗಿಲ್ಲ’ ಎಂದು ನುಡಿಯುತ್ತಾರೆ. ‘ಚಿಕ್ಕ ವಯಸ್ಸಿನಿಂದಲೇ ಉತ್ತಮ ತರಬೇತಿ ನೀಡಬೇಕು. ನನ್ನ ತಂಗಿ ರೀಟಾ ಬ್ರಿಟ್ಟೊ ರಾಜ್ಯಮಟ್ಟದ ಟೂರ್ನಿಯಲ್ಲಿ ಆಡಿದಾಗ ಆಕೆಗೆ 11 ವರ್ಷ. ಕೆಲವೇ ವರ್ಷಗಳಲ್ಲಿ ಆಕೆ ರಾಷ್ಟ್ರ ತಂಡಕ್ಕೆ ಆಯ್ಕೆಯಾದಳು’ ಎಂದು ಅವರು ಉದಾಹರಣೆ ಸಮೇತ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT