ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವ್ಯಸಾಚಿ ‘ಸ್ವರಮೂರ್ತಿ’

Last Updated 1 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವೀಣೆ ಶೇಷಣ್ಣ ಹಾಗೂ ವೀಣೆ ಸುಬ್ಬಣ್ಣ ಮೈಸೂರು ವೀಣಾ ಪರಂಪರೆಯ ಯಮಳರೆಂದೇ ಪ್ರಸಿದ್ಧರು. ಇವರಿಗೂ ಮೈಸೂರು ಅರಮನೆಗೂ ನಿಕಟ ಸಂಪರ್ಕ. ಮೈಸೂರು ಅರಮನೆಯ ವೀಣಾ ಭಕ್ಷಿಗಳಾಗಿದ್ದವರು ಶೇಷಣ್ಣನವರು. ಶೇಷಣ್ಣನವರ ದತ್ತು ಮಕ್ಕಳೇ ರಾಮಣ್ಣನವರು. ಈ ರಾಮಣ್ಣ – ವೆಂಕಟಲಕ್ಷ್ಮಮ್ಮನವರ ಮಗನೇ ಸ್ವರಮೂರ್ತಿ. ಅಂದರೆ ಶೇಷಣ್ಣನವರ ಮೊಮ್ಮಗ. ರಾಮಣ್ಣನವರೂ ಸಹ ಸಂಗೀತ ವಿದ್ವಾಂಸರೇ. ತಾತ-ತಂದೆಯವರ ಸಂಗೀತ ಈ ಹುಡುಗನಲ್ಲಿ ಆನುವಂಶಿಕವಾಗಿ ಬಂದಿದ್ದು.

ಎಳವೆಯಲ್ಲೇ ಸಂಗೀತದ ಕಡೆ ಗಮನ. ವರ್ಷದ ಮಗುವಾಗಿದ್ದಾಗಲೇ ‘ಸ ಪ ಸ’ ಕೂಗಿ, ಸ್ವರಜ್ಞಾನ ಪಡೆದುಕೊಂಡ ಬಾಲ ಪ್ರತಿಭೆ! ಆಗಿಂದಲೇ ಶೇಷಣ್ಣನವರಿಂದ ಸಂಗೀತ ಶಿಕ್ಷಣ ಆರಂಭ. ಹುಡುಗನಲ್ಲಿದ್ದ ಅಗಾಧ ಪ್ರತಿಭೆ ಕಂಡುಕೊಂಡ ಶೇಷಣ್ಣನವರು ಪ್ರೌಢ ಶಿಕ್ಷಣದಿಂದಲೇ ಪಾಠ ಪ್ರಾರಂಭಿಸಿದರು. ಹೊತ್ತು ಗೊತ್ತಿನ ಕಟ್ಟುಪಾಡೇನೂ ಇರಲಿಲ್ಲ! ಲಹರಿ ಬಂದಾಗಲೆಲ್ಲ ಪಾಠ! ಹೀಗೆ ಶೇಷಣ್ಣನವರು ವೀಣೆ-ಹಾಡುಗಾರಿಕೆಗಳೆರಡರಲ್ಲೂ ತಮ್ಮ ಸಂಗೀತ ಭಂಡಾರವನ್ನೆ ಮೊಮ್ಮಗನಿಗೆ ಧಾರೆ ಎರೆದರು.

ಅರಮನೆಯಲ್ಲಿ ತಮ್ಮ ವಿದ್ವತ್ ಪ್ರದರ್ಶಿಸಲು ಪರಸ್ಥಳಗಳಿಂದ ಬರುತ್ತಿದ್ದ ವಿದ್ವಾಂಸರುಗಳು ಮೊದಲು ಶೇಷಣ್ಣನವರ ಮುಂದೆ ತಮ್ಮ ಪ್ರತಿಭೆ ಪ್ರದರ್ಶಿಸಿ, ಅವರ (ಶೇಷಣ್ಣನವರ) ಶಿಫಾರಸ್ಸಿನ ಮೇಲೆ ಅರಮನೆ ಪ್ರವೇಶಿಸಬೇಕಾಗಿತ್ತು. ಈ ಎಲ್ಲ ಸಂಗೀತಗಾರರ ಗಾಯನ-ವಾದನಗಳ ಕೇಳ್ಮೆ ವೆಂಕಟನಾರಾಯಣನ ಜ್ಞಾನವೃದ್ಧಿಗೆ ಪೂರಕವಾಯಿತು. ಕರ್ನಾಟಕ-ಹಿಂದೂಸ್ತಾನಿ ಶೈಲಿಯ ಸಂಗೀತವನ್ನು ಕೇಳಿ ಕೇಳಿ, ಸ್ವರಮೂರ್ತಿ ತಮ್ಮ ಸಂಗೀತದ ಪ್ರಭೆ ವರ್ಧಿಸಿಕೊಂಡರು. ಕೇಳಿದ್ದನ್ನು ಆಗಿಂದಾಗಲೇ ಮನನ ಮಾಡಿಕೊಳ್ಳುವ, ಅಭಿವ್ಯಕ್ತಿಗೊಳಿಸುವ ಚಾಕಚಕ್ಯತೆ, ಏಕಸಂಧಿಗ್ರಾಹಿ! ಹೀಗಾಗಿ ತೀರಾ ಸಣ್ಣ ವಯಸ್ಸಿನಲ್ಲೇ ಕಛೇರಿ ಮಾಡುವಷ್ಟು ಮಟ್ಟಿಗೆ ಮನೆಮಂದಿಯ ಮುದ್ದಿನ ‘ಪುಟ್ಸಾಮಿ’ ಬೆಳೆದುಬಿಟ್ಟ.

ಸಾಧಕ ‘ಸ್ವರಮೂರ್ತಿ’
ಒಮ್ಮೆ ಗದ್ವಾಲ್ ಸಂಸ್ಥಾನದ ಮಹಾರಾಜರ ಸಮ್ಮುಖದಲ್ಲಿ ಶೇಷಣ್ಣನವರ ಕಛೇರಿ. ಕಲ್ಯಾಣಿ ರಾಗದ ಆಲಾಪನೆ, ತಾನ ಹಾಗೂ ತಾರಕ ಬ್ರಹ್ಮ ಸ್ವರೂಪಿಣಿ ಪಲ್ಲವಿ. ಜೊತೆಯಲ್ಲಿ ಕುಳಿತಿದ್ದ ಮೊಮ್ಮಗ (ವೆಂಕಟನಾರಾಯಣ)ನಿಗೂ ಹಾಡಲು ಆದೇಶ. ಸಿದ್ಧವಾಗಿಯೇ ಕುಳಿತಿದ್ದ ಬಾಲಕನಿಂದ ಪಲ್ಲವಿಯ ಪರಾಕು. ಆ ಪುಟ್ಟ ಪೋರನ ಕಂಠದಿಂದ ಕಲ್ಯಾಣಿಯ ಕಂಪು! ಮಗುವಿನ ಹಾಡಿಕೆಯ ಓಘ, ಮನೋಧರ್ಮ, ನಿರರ್ಗಳ ಕಲ್ಪನಾ ಸ್ವರ ನಿರೂಪಣೆಗೆ ಆಸ್ಥಾನವೇ ಬೆರಗು! ಏಳು ವರ್ಷದ ಬಾಲಕನ ಪ್ರತಿಭೆಗೆ ಮಂತ್ರಮುಗ್ಧರಾದ ಮಹಾರಾಜರು, ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ತಮ್ಮ ಕತ್ತಿನಲ್ಲಿದ್ದ ಕಂಠೀ ಹಾರವನ್ನು ಪುಟ್ಸಾಮಿಯ ಕೊರಳಿಗೆ ತೊಡಿಸಿದರು! ಖಿಲ್ಲತ್ತಿನೊಂದಿಗೆ ‘ಸ್ವರಮೂರ್ತಿ’ ಎಂಬ ಬಿರುದು ಪ್ರದಾನ ಮಾಡಿದರು. ಅಂದಿನಿಂದ ವೆಂಕಟನಾರಾಯಣ (ವಿ.ಎನ್. ರಾವ್) ‘ಸ್ವರಮೂರ್ತಿ’ ಎಂದೇ ಪ್ರಸಿದ್ಧರಾದರು. ಈ ವಿಷಯವನ್ನು ಪತ್ರಿಕೆಯಲ್ಲಿ ಓದಿ ತಿಳಿದ ಮೈಸೂರು ಮಹಾರಾಜರು ತಮ್ಮ ಆಸ್ಥಾನದಲ್ಲೂ ಮಗುವಿನ ಕಛೇರಿ ಏರ್ಪಡಿಸಿದರು. ಮಗುವಿನ ಅಂದಿನ ಗಾಯನಕ್ಕೆ ಸ್ವತಃ ಶೇಷಣ್ಣನವರದೇ ಪಿಟೀಲು, ಖಂಡೇ ದಾಸಪ್ಪನವರ ತಬಲ ಪಕ್ಕವಾದ್ಯ. ನಾಲ್ವಡಿಯವರ ತುಂಬು ಮೆಚ್ಚುಗೆ.

1924ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನ. ಗಾಂಧೀಜಿಯವರ ಅಧ್ಯಕ್ಷತೆ. ಶೇಷಣ್ಣನವರ ವೀಣಾ ವಾದನದ ನಂತರ ಯಥಾ ಪ್ರಕಾರ ಸ್ವರಮೂರ್ತಿಯ ಗಾಯನ. ಗಾಂಧೀಜಿ, ಕಸ್ತೂರಬಾ, ಸರೋಜಿನಿ ನಾಯ್ಡು, ಜವಾಹರಲಾಲ್ ನೆಹರು - ಮುಂತಾದವರಿಂದ ಬಾಲಕ ಸ್ವರಮೂರ್ತಿಯ ಸಂಗೀತಕ್ಕೆ ತೀವ್ರ ಪ್ರಶಂಸೆ.

ಸವ್ಯಸಾಚಿ ಪ್ರತಿಭೆ
ಹನ್ನೊಂದನೇ ವಯಸ್ಸಿನಲ್ಲೇ ಮೈಸೂರು ಆಸ್ಥಾನ ಸಂಗೀತ ವಿದ್ವಾಂಸರಾದ ಸ್ವರಮೂರ್ತಿಗಳು ಪ್ರಭುಗಳ ಹೆಚ್ಚಿನ ವಿಶ್ವಾಸಕ್ಕೆ ಪಾತ್ರರಾದರು. ತಾತ ಶೇಷಣ್ಣ ಹಾಗೂ ಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ ನಿಧನ ವಿ.ಎನ್. ರಾಯರ ಜೀವನದಲ್ಲಿ ಒದಗಿದ ಭಾರಿ ಆಘಾತ! ಆದರೂ ರಾಯರು ಭಕ್ಷಿ ಸುಬ್ಬಣ್ಣನವರಲ್ಲಿ ವೀಣೆ ಹಾಗೂ ಡಾ. ಮುತ್ತಯ್ಯ ಭಾಗವತರಲ್ಲಿ ಹಾಡುಗಾರಿಕೆ ಅಭ್ಯಾಸ ಮುಂದುವರೆಸಿದರು. ಜೊತೆಗೆ ಅಪರೂಪವಾದ ಹಾರ್ಪ್ ವಾದನದಲ್ಲೂ ಪರಿಣಿತರಾದರು. ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನ ಡಿಪ್ಲೊಮ ಪದವಿ ಗಳಿಸಿ, ಪಾಶ್ಚಾತ್ಯ ಸಂಗೀತದಲ್ಲೂ ಪ್ರಾವೀಣ್ಯತೆ ಗಳಿಸಿದರು.

ಬೆಂಗಳೂರಿಗೆ ಬಂದು ನೆಲೆಸಿದ ರಾಯರು ‘ವೀಣಾ ಗಾನ ಮಂದಿರ’ವನ್ನು ಸ್ಥಾಪಿಸಿ, ನೂರಾರು ಜನಗಳಿಗೆ ವಿದ್ಯಾದಾನ ಮಾಡಿದರು. ಸಂಗೀತಗಾರರಿಂದಲೇ ಸ್ಥಾಪನೆಗೊಂಡ ಕರ್ನಾಟಕ ಗಾನಕಲಾ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ, ಮುಂದೆ ತಜ್ಞರ ಸಮಿತಿಯ ಅಧ್ಯಕ್ಷರಾಗಿಯೂ ಬೆಳಗಿದರು. ಗಾಯನ ಸಮಾಜ, ಪರಿಷತ್ತಿನ ಸಂಗೀತ ಸಮ್ಮೇಳನಗಳಲ್ಲಿ ಸಂಗೀತದ ವಿವಿಧ ವಿಷಯಗಳ ಮೇಲೆ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ನೀಡಿದರು. ದೇವರನಾಮ, ವಚನ, ಜಾವಡಿ– ಮುಂತಾದ ಕನ್ನಡ ಕೃತಿಗಳಿಗೆ ಮಧುರ ರಾಗ ಸಂಯೋಜಿಸಿ, ಪ್ರಚುರ ಪಡಿಸಿದರು. ಅವರೇ ರಚಿಸಿರುವ ರಚನೆಗಳಲ್ಲಿ ಸಪ್ತತಾಳೇಶ್ವರಿ ವರ್ಣವು ಅವರ ಮೇಧಾವಿತನಕ್ಕೆ ಸಾಕ್ಷಿಯಾಗಿ ನಿಂತಿದೆ. ಕನ್ನಡನಾಡು-ನುಡಿ ಪರಂಪರೆಯಲ್ಲಿ ವಿ.ಎನ್. ರಾಯರು ಬರೆದ ‘ವೀಣೆ ಶೇಷಣ್ಣ’ ಪುಸ್ತಕಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ಸಂದಿದೆ.

ಗಾನಕಲಾಭೂಷಣ
ಕರ್ನಾಟಕವಲ್ಲದೆ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳಲ್ಲೂ ವಿ.ಎನ್. ರಾಯರ ವೀಣೆ, ಗಾಯನ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುತ್ತಿದ್ದವು. ಸ್ವರಮೂರ್ತಿಗಳ ಸಂಗೀತದಲ್ಲಿ ಮೈಸೂರು ಸಂಗೀತದ ಪರಿಮಳ ಘಮಘಮಿಸುತ್ತಿತ್ತು. ವಿನಿಕೆಯಲ್ಲಿ ವಾದ್ಯತಂತ್ರಕ್ಕೆ ಪ್ರಾಧಾನ್ಯತೆ ಕೊಡದೇ, ಸಂಗೀತವನ್ನೇ ಮುಂದುಗಾಣಿಸುತ್ತಿದ್ದರು. ‘ತಾಳಬ್ರಹ್ಮ’ರಾದರೂ ಲೆಕ್ಕಾಚಾರವನ್ನು ಮುಂದು ಮಾಡದೆ, ರಾಗಭಾವಕ್ಕೇ ಹೆಚ್ಚಿನ ಸ್ಥಾನ ನೀಡುತ್ತಿದ್ದರು. ಶಾಸ್ತ್ರೀಯ ಸಂಗೀತ ಚೌಕಟ್ಟಿನ ಗಂಭೀರ ಗಾಯನ-ವಾದನ ಅವರದಾಗಿತ್ತು. ಅವರ ವಿದ್ವತ್ತು, ಪ್ರತಿಭೆ, ಅನುಭವಗಳನ್ನು ಮನ್ನಿಸಿ, ಸಹಜವಾಗೇ ಅನೇಕ ಬಿರುದು-ಗೌರವಗಳು ಅವರಿಗೆ ಸಂದಾಯವಾದವು. ಗಾನಕಲಾ ಪರಿಷತ್ತಿನ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಗಾನಕಲಾಭೂಷಣ ಹಾಗೂ ವ್ಯಾಸರಾಜ ಮಠಾಧೀಶರಿಂದ ಮಧುರಗಾನ ಪ್ರವೀಣ ಬಿರುದುಗಳು ಸ್ವರಮೂರ್ತಿಗಳ ಕೊರಳನ್ನು ಅಲಂಕರಿಸಿದ್ದವು.

1980ರಲ್ಲಿ ವಾಹನ ಅಪಘಾತದಲ್ಲಿ ನಿಧನರಾದ ಸ್ವರಮೂರ್ತಿಗಳಿಗೆ ಸಂಗೀತವೇ ಉಸಿರಾಗಿತ್ತು. ಬೇರೊಂದೂ ತಿಳಿಯದು ಹಾಗೂ ಬೇಕೂ ಇರಲಿಲ್ಲ ಎನ್ನುವಂತಿತ್ತು ಅವರ ಬದುಕು. ಸಾಧಕರಿಗೆ ‘ಸ್ವರಮೂರ್ತಿ’ಗಳು ಎಂದೂ ಸ್ಫೂರ್ತಿದಾತರು. ಅವರ ಹೆಸರಿನಲ್ಲಿ ಒಂದು ಟ್ರಸ್ಟ್ ಸ್ಥಾಪನೆಯಾಗಿದೆ ಹಾಗೂ ಆ ಟ್ರಸ್ಟ್‌ನಿಂದ ಪ್ರತಿವರ್ಷ ಓರ್ವ ಹಿರಿಯ ಗಾಯಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಮೂಲಕ ‘ಸ್ವರಮೂರ್ತಿ’ಗಳ ನೆನಪು ಹೊಸ ತಲೆಮಾರಿಗೂ ದಾಟುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT