ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸ್ಥಿತಿಯತ್ತ ಯಳ್ಳೂರ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಯಳ್ಳೂರಿನಲ್ಲಿ ‘ಮಹಾ­ರಾಷ್ಟ್ರ ರಾಜ್ಯ’ ನಾಮಫಲಕ ತೆರವು­ಗೊಳಿಸಿದ ಬಳಿಕ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಕಾರ್ಯ­­ಕರ್ತರ ಪುಂಡಾಟಿಕೆಯಿಂದ ಉದ್ವಿಗ್ನಗೊಂಡಿದ್ದ ಗ್ರಾಮವು ಸೋಮ­ವಾರ ಸಹಜ ಸ್ಥಿತಿಯತ್ತ ಮರಳಿತು.

ಗ್ರಾಮದಲ್ಲಿ ಭಾನುವಾರ ರಾತ್ರಿಯ­ವರೆಗೂ ಅಘೋಷಿತ ಬಂದ್‌ ವಾತಾವರ­ಣವಿತ್ತು. ಸೋಮವಾರ ಸಹಜ ಸ್ಥಿತಿ ಇದ್ದರೂ ಬಹುತೇಕ ಅಂಗಡಿ ಮುಂಗಟ್ಟು­ಗಳು ಮುಚ್ಚಿದ್ದವು. ಕೆಲವು ಅಂಗಡಿಗಳು ಅರ್ಧ ಬಾಗಿಲು ತೆರೆದು ವಹಿವಾಟು ನಡೆಸಿದವು. ರೈತರು ಹೊಲಗಳಿಗೆ ತೆರಳಿ ಸೈಕಲ್‌– ಮೋಟರ್‌ ಬೈಕ್‌ಗಳ ಮೇಲೆ ಜಾನುವಾರುಗಳಿಗೆ ಮೇವು ತರುತ್ತಿ­ದ್ದುದು ಸಾಮಾನ್ಯವಾಗಿತ್ತು.

ಯಳ್ಳೂರ ರಸ್ತೆಯಲ್ಲಿ ನಾಕಾ ಬಂದಿ ವಿಧಿಸಿದ್ದ ಪೊಲೀಸರು, ಪ್ರಯಾಣಿಕರ ಮಾಹಿತಿ ಹಾಗೂ ವಾಹನಗಳ ಸಂಖ್ಯೆ­ಯನ್ನು ದಾಖಲಿಸಿಕೊಂಡು ಓಡಾಟಕ್ಕೆ ಸೋಮವಾರ ಅವಕಾಶ ನೀಡಿದರು.

ಗ್ರಾಮದ ಹೊರವಲಯದಲ್ಲಿ ನಾಮ­ಫಲಕವಿದ್ದ ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು, 400ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸ­ಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿ ಡಾ. ಚಂದ್ರಗುಪ್ತ, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಪ್ರೀತಂ ನಸಲಾಪುರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಸಂಭಾಜಿ ಪಾಟೀಲ, ಮಾಜಿ ಶಾಸಕ ಮನೋಹರ ಕಿಣೇಕರ ಗ್ರಾಮಕ್ಕೆ ಬಂದು ಮುಖಂಡರೊಂದಿಗೆ ಮಾತುಕತೆ ನಡೆಸಿದರು.

ನಾಮಫಲಕಗಳ ತೆರವು
ಖಾನಾಪುರ: ತಾಲ್ಲೂಕಿನ ಗರ್ಲಗುಂಜಿ, ನಿಡಗಲ್‌, ಹಲಶಿವಾಡಿ ಹಾಗೂ ಸಣ್ಣ ಹೊಸೂರು ಗ್ರಾಮಗಳಲ್ಲಿ ಶನಿವಾರ ರಾತ್ರೊ­ರಾತ್ರಿ ನಿರ್ಮಿಸಿದ್ದ ಅನಧಿಕೃತ ನಾಮಫಲಕ­ಗಳನ್ನು ತಹಶೀಲ್ದಾರ್ ಎಂ.ಎನ್‌.ಗೋಟೆ ಹಾಗೂ ಸರ್ಕಲ್‌ ಇನ್ಸ್‌ಪೆಕ್ಟರ್‌ ಶೇಖರಪ್ಪ ನೇತೃತ್ವದಲ್ಲಿ ಭಾನುವಾರ ಸಂಜೆ ತೆರವು­ಗೊಳಿಸಲಾಯಿತು.

ಆದರೆ, ಮಧ್ಯರಾತ್ರಿಯ ಬಳಿಕ ಗರ್ಲ­ಗುಂಜಿ, ಮಂತುರ್ಗಾ ಹಾಗೂ ಕುಪ್ಪಟ­ಗಿರಿ ಗ್ರಾಮಗಳಲ್ಲಿ ಕಿಡಿಗೇಡಿಗಳು ಮತ್ತೆ ನಾಮಫಲಕವನ್ನು ನಿರ್ಮಿಸಿ­ದ್ದರು. ಸೋಮ­ವಾರ ಬೆಳಿಗ್ಗೆ ಕಂದಾಯ ಅಧಿ­ಕಾ­ರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ, ಇವುಗಳನ್ನೂ ತೆರವುಗೊಳಿಸಿದರು.

ಬೆಳಗಾವಿ ತಾಲ್ಲೂಕಿನ ಬಿ.ಕೆ. ಕಂಗ್ರಾಳಿ, ಮನ್ನೂರು, ಅಂಬೇಡಿವಾಡಿ ಹಾಗೂ ಉಚಗಾಂವ ಗ್ರಾಮಗಳಲ್ಲಿ ಭಾನು­ವಾರ ಹಾಕಲಾಗಿದ್ದ ‘ಮಹಾರಾಷ್ಟ್ರ ರಾಜ್ಯ’ ಎಂಬ ನಾಮಫಲಕಗಳನ್ನು ಜಿಲ್ಲಾ­ಡ­ಳಿತವು ಪೊಲೀಸ್‌ ಭದ್ರತೆ­ಯಲ್ಲಿ ಸೋಮವಾರ ತೆರವುಗೊಳಿಸಿದೆ.

ಬ್ಯಾಂಕ್‌ಗೆ ಮುತ್ತಿಗೆ
ಗದಗ: ಬೆಳಗಾವಿ ತಾಲ್ಲೂಕಿನ ಯಳ್ಳೂರ ಗ್ರಾಮದಲ್ಲಿ ಮಹಾರಾಷ್ಟ್ರ ಏಕೀ­ಕರಣ ಸಮಿತಿ (ಎಂಇಎಸ್) ನಡೆಸಿದ ಪುಂಡಾಟಿಕೆ ಖಂಡಿಸಿ ನಗರದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಶಾಖೆಗೆ ಕರ್ನಾಟಕ ಜನಹಿತ ವೇದಿಕೆ ಕಾರ್ಯ­ಕರ್ತರು ಮುತ್ತಿಗೆ ಹಾಕಿದರು.

ಸದಸ್ಯತ್ವ ರದ್ದತಿಗೆ ಒತ್ತಾಯ
ಬೆಳಗಾವಿ: ನಾಮಫಲಕಕ್ಕೆ ಸಂಬಂಧಿ­ಸಿದಂತೆ ಪ್ರಚೋದನಕಾರಿ ಹೇಳಿಕೆಗಳ ಮೂಲಕ ರಾಜ್ಯ ವಿರೋಧಿ ಚಟುವಟಿಕೆ ನಡೆಸುತ್ತಿರುವ ಮಹಾ­ರಾಷ್ಟ್ರ ಏಕೀಕ­ರಣ ಸಮಿತಿ (ಎಂಇಎಸ್‌) ಬೆಂಬಲಿತ ಶಾಸ­ಕರಾದ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀ­ಲರ ಸದ­ಸ್ಯತ್ವ ರದ್ದುಗೊಳಿ­ಸಬೇಕು ಎಂದು ವಿಧಾ­ನ­ಸಭಾ­ಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದ್ದಾರೆ.

ಬಂದ್‌ಗೆ ನೀರಸ ಪ್ರತಿಕ್ರಿಯೆ
ನಿಪ್ಪಾಣಿ: ಯಳ್ಳೂರಿನಲ್ಲಿ ನಾಮಫಲಕ ತೆರವು­ಗೊಳಿಸಿರುವುದನ್ನು ಖಂಡಿಸಿ ಎಂಇಎಸ್‌ ಹಾಗೂ ಶಿವಸೇನೆ ಸೋಮವಾರ ಕರೆ ನೀಡಿದ್ದ ನಿಪ್ಪಾಣಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸ್‌, ಆಟೊ ಸಂಚಾರ  ಮಾಮೂಲಿ­ನಂತಿತ್ತು. ಶಾಲಾ– ಕಾಲೇಜು, ಸರ್ಕಾರಿ ಕಚೇರಿಗಳೂ  ಕಾರ್ಯನಿರ್ವಹಿಸಿದವು. ಕೆಲವೆಡೆ ಸ್ವಯಂ ಪ್ರೇರಣೆಯಿಂದ ಅಂಗಡಿ– ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT