ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಮತ ಮೂಡಿಸಿ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸಂಸತ್ತಿನ ಚಳಿ­ಗಾಲದ ಅಧಿವೇಶ­ನದಲ್ಲಿ ಹಲವಾರು ಮಹತ್ವದ ಮಸೂ­ದೆ­ಗಳಿಗೆ ಅಂಗೀಕಾರ ಪಡೆಯಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಉದ್ದೇಶಿಸಿದೆ. ಆರ್ಥಿಕ ಸುಧಾರಣಾ ಕ್ರಮಗಳ ಜಾರಿಗೆ ಇದು ಅಗತ್ಯವಾದುದು. ಆರು ತಿಂಗಳ ಅಧಿಕಾರಾವಧಿಯಲ್ಲಿ ಅರ್ಥ ವ್ಯವ­ಸ್ಥೆಯ ಪುನಶ್ಚೇತನದ ಬಗ್ಗೆ ಸರ್ಕಾರ ಸಾಕಷ್ಟು ಮಾತುಗಳನ್ನಾಡಿದೆ. ಬಂಡ­ವಾಳ ಹೂಡಿಕೆಗೆ ಉತ್ತೇಜನ, ಉದ್ದಿಮೆ ವಹಿವಾಟು ಆರಂಭಗೊಳಿ­ಸುವು­ದನ್ನು ಇನ್ನಷ್ಟು ಸರಳಗೊಳಿಸುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾನೂನು ಜಾರಿ ಸೇರಿದಂತೆ  ಕಲ್ಲಿದ್ದಲು, ಔಷಧಿ, ಪಿಂಚಣಿ ಮತ್ತಿತರ ರಂಗ­ಗಳಲ್ಲಿ ಕಾಯಕಲ್ಪ ನೀಡುವ ಅನೇಕ ಮಸೂದೆಗಳಿಗೆ ಅಂಗೀಕಾರ ಪಡೆಯ­ಬೇಕಾಗಿದೆ.

ವಿದೇಶಿ ನೇರ ಬಂಡ­ವಾಳ ಹೂಡಿಕೆಯ (ಎಫ್‌ಡಿಐ) ಮಿತಿ­ಯನ್ನು ಸದ್ಯದ ಶೇ 26ರಿಂದ ಶೇ 49ಕ್ಕೆ ಹೆಚ್ಚಿಸುವ ವಿಮಾ ಮಸೂದೆ 2008­ರಿಂದಲೂ ಬಾಕಿ ಇದೆ. ಆದರೆ ಈ ಆರ್ಥಿಕ ಸುಧಾರಣೆ ಮಸೂದೆಗಳಿಗೆ ಜನ­ವಿರೋಧಿ ಎಂದು ಪ್ರತಿಪಕ್ಷಗಳು ತಡೆ ಒಡ್ಡುವ ಸಂಭವವೂ ಇದೆ. ಅಧಿವೇಶನದ ಮುನ್ನಾದಿನ ನಡೆದ ಸರ್ವಪಕ್ಷಗಳ ಸಭೆಗೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಸಮಾಜ­ವಾದಿ ಪಕ್ಷ (ಎಸ್‌ಪಿ) ಗೈರುಹಾಜರಾಗಿರುವುದು ಇದಕ್ಕೆ ಮುನ್ಸೂಚನೆಯಂತಿದೆ.

ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಕಾನೂನಿಗೆ ಹಿಂದಿನ ಯುಪಿಎ–2 ಸರ್ಕಾರವೇ ಶ್ರೀಕಾರ ಹಾಕಿತ್ತು. ಆಗ ಈ ಕಾನೂನಿಗೆ ತಡೆ ಒಡ್ಡಿದ್ದು ಬಿಜೆಪಿ ಸರ್ಕಾರವಿದ್ದ ರಾಜ್ಯಗಳು. ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ಸರಕು ಮತ್ತು ಸೇವೆಗಳ ಮೇಲೆ ಏಕರೂಪ ತೆರಿಗೆಯನ್ನು ವಿಧಿಸುವಂತಹ ಕಾನೂನಿನ ಜಾರಿ ಸಾಧ್ಯವಾಗಿಲ್ಲ.ಗುಜರಾತ್‌ನಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಂತಹ ಅವಧಿಯಲ್ಲಿ ಸ್ವತಃ ನರೇಂದ್ರ ಮೋದಿಯವರೂ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ.

ಆದರೆ ಜಿಎಸ್‌ಟಿ ತೆರಿಗೆ ನೆಲೆಯನ್ನು ವಿಸ್ತೃತಗೊಳಿಸುವಂತಹದ್ದು. ವ್ಯಾಪಾರಕ್ಕೆ ಅಂತರ­ರಾಜ್ಯ ಗಡಿಗಳಿಲ್ಲದೆ ರಾಷ್ಟ್ರೀಯ ಮಾರುಕಟ್ಟೆಗೆ ದಾರಿ ಮಾಡಿ­ಕೊಡ­ಲಿದೆ ಎಂಬುದನ್ನು ಮರೆಯಲಾಗದು. ವ್ಯಾಪಾರ–ವಹಿವಾಟು ನಡೆಸುವುದು ಸುಲಭವಾದಷ್ಟೂ ರಾಷ್ಟ್ರೀಯ ವರಮಾನ ಹೆಚ್ಚಾಗುತ್ತದೆ ಎಂಬುದು ನಿರೀಕ್ಷೆ. ತೆರಿಗೆ ಆಡಳಿತವನ್ನು ಹಳಿಗೆ ತರಲು ಜಿಎಸ್‌ಟಿ ಕಾನೂನು ಜಾರಿ ಅಗತ್ಯ. ಸೋರಿಕೆ ತಡೆಗೂ ಅನುಕೂಲ. ‘ಕಾಂಗ್ರೆಸ್ ಪಕ್ಷವು ಕಲಾಪಕ್ಕೆ ಅಡ್ಡಿ­ಪಡಿಸುವ ಸಾಧ್ಯತೆ ಇದೆ’ ಎಂದು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಬರೆದುಕೊಂಡಿದ್ದಾರೆ.  ಆದರೆ ಹಿಂದೆ ಬಿಜೆಪಿ ಸಹ ಮಾದರಿ ವರ್ತನೆ ತೋರಿರಲಿಲ್ಲ. ಇಂತಹ ವಿಚಾರಗಳಲ್ಲಿ ರಾಜಕೀಯ ಕೂಡದು. ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಆಡಳಿತ ಪಕ್ಷ ಮಾಡಬೇಕಾದದ್ದು ಮುಖ್ಯ. ಪ್ರತಿಪಕ್ಷಗಳ ಆಕ್ಷೇಪಗಳಿಗೆ, ಭಿನ್ನಾ­ಭಿ­ಪ್ರಾಯಗಳಿಗೆ ಉತ್ತರ ಹೇಳುವ ತಾಳ್ಮೆ, ಔದಾರ್ಯವನ್ನು ಬಿಜೆಪಿ ಪ್ರದರ್ಶಿಸ­ಬೇಕಾಗುತ್ತದೆ.

ಭಾರತೀಯ ಹಣಹೂಡಿಕೆದಾರರಿಗೆ ಹೆಚ್ಚಿನ ರಕ್ಷಣೆ ಅಗತ್ಯ ಎಂಬಂಥ ವಾದಗಳಿದ್ದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಬೇಕಾದುದು ಸರ್ಕಾರದ ಕರ್ತವ್ಯ. ಮನವೊಲಿಕೆ ಮೂಲಕ ಮುನ್ನಡೆದರೆ ಮಾತ್ರ ಮಹ­ತ್ವದ ಮಸೂದೆಗಳಿಗೆ ಮುಕ್ತಿ ದೊರೆತು, ಅರ್ಥ ವ್ಯವಸ್ಥೆಯು ಇನ್ನಷ್ಟು ಪ್ರಗತಿ­ಪಥದಲ್ಲಿ ಮುನ್ನಡೆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT