ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯ ಕೇಳುವುದು ದೌರ್ಬಲ್ಯವಲ್ಲ

ಬೆಳಕು– ಅರಿವೇ ಗುರು
Last Updated 20 ನವೆಂಬರ್ 2015, 19:48 IST
ಅಕ್ಷರ ಗಾತ್ರ

‘ಸಂತೋಷವಾಗಿರುವುದು ಮತ್ತು ಒತ್ತಡ ರಹಿತವಾಗಿರುವುದು’, ‘ಭಾವನೆಗಳ ನಿರ್ವಹಣೆ’ ಮತ್ತು ‘ಬದುಕಿನ ಸವಾಲುಗಳ ಕುರಿತು ಜ್ಞಾನ’ ಎಂದು ಕಾಲೇಜಿಗೆ ಹೋಗುವ ಯುವಕರನ್ನು ಮಾನಸಿಕ ಆರೋಗ್ಯದ ಕುರಿತು ವೈಯಕ್ತಿಕ ಅಭಿಪ್ರಾಯ ಕೇಳಿದಾಗ ಅವರ ಸಮೀಕ್ಷೆಯಿಂದ ಬಂದ ಪ್ರತಿಕ್ರಿಯೆಗಳಿವು. ನಾವಿಲ್ಲಿ ಯುವಕರಿಂದ ಪಡೆದ ಉತ್ತರ ಒಂದರ್ಥದಲ್ಲಿ ಮಾನಸಿಕ ಆರೋಗ್ಯದ ವೈಜ್ಞಾನಿಕ ಪರಿಕಲ್ಪನೆಗೆ ಸರಿಸಮಾನವಾಗಿದೆ.

ಭಾರತದ ಜನಸಂಖ್ಯೆಯಲ್ಲಿ ಯುವಕರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಹೀಗಾಗಿ ಯುವಕರಲ್ಲಿ ಮಾನಸಿಕ ಆರೋಗ್ಯದ ಕಾಳಜಿ ಹಲವಾರು ಕಾರಣಗಳಿಂದ ಗಮನ ಸೆಳೆಯುತ್ತದೆ. ಅವರು ಬದುಕಿನಲ್ಲಿ ಅತ್ಯಧಿಕ ಸಾಮರ್ಥ್ಯ ಹೊಂದಿರುವ ಘಟ್ಟದಲ್ಲಿದ್ದು, ಅದು ಹಲವು ವೇಳೆ ನಕಾರಾತ್ಮಕವಾಗಿ, ಸಮಸ್ಯೆಗಳಿಂದ ಕೂಡಿರುತ್ತದೆ.

ಸಾಮಾನ್ಯವಾಗಿ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುವುದು 24 ವರ್ಷಕ್ಕಿಂತ ಮೊದಲು. ದುರಂತವೆಂದರೆ ಸ್ವಲ್ಪ ಜನ ಮಾತ್ರ ಇದಕ್ಕೆ ವೃತ್ತಿಪರರ ಸಹಾಯ ಎದುರು ನೋಡುತ್ತಾರೆ ಮತ್ತು ಸ್ವೀಕರಿಸುತ್ತಾರೆ. ಜಾಗೃತಿಯ ಕೊರತೆ, ಗೊಂದಲ, ಕಳಂಕ ಮತ್ತು ವೃತ್ತಿಪರರ ಸೇವೆ ಸುಲಭವಾಗಿ ಸಿಗದಿರುವುದು ಈ ದುರಂತಕ್ಕೆ ಕಾರಣ.

ನಾವು ಪದವಿ ಓದುತ್ತಿರುವ ವಿದ್ಯಾರ್ಥಿಗಳ ಜೊತೆ ಈ ವಿಷಯವಾಗಿ ಹಲವಾರು ಸರಣಿ ಚರ್ಚೆಗಳನ್ನು ನಡೆಸಿದ್ದೇವೆ. ಒತ್ತಡ, ಶೈಕ್ಷಣಿಕ ಸ್ಪರ್ಧೆ, ಭವಿಷ್ಯದ ಚಿಂತೆ ಮತ್ತು ಸಾಮಾಜಿಕ ಕ್ಷೇತ್ರ ಎದುರಿಸಲು ಆತಂಕ ಸೇರಿದಂತೆ ಒತ್ತಡಕ್ಕೆ ಕಾರಣವಾದ ಹಲವು ಅಂಶಗಳು ಈ ಚರ್ಚೆಯಿಂದ ಬೆಳಕಿಗೆ ಬಂದಿವೆ.
‘ಎಲ್ಲ ವೇಳೆ ಒತ್ತಡದಿಂದ ಮುಕ್ತವಾಗುವ’ ಬಗ್ಗೆ ಅತಿಯಾದ ನಿರೀಕ್ಷೆಯೆ ಒತ್ತಡಕ್ಕೆ ಮೂಲ ಕಾರಣ. ಈ ನಿರೀಕ್ಷೆ ದಿನನಿತ್ಯದ ಬದುಕಿನ ಅನಿವಾರ್ಯವಾದ ನಿರಾಸೆಗಳಿಗೆ ತಾಳೆಯಾಗುವುದಿಲ್ಲ. ಏಕೆಂದರೆ ಜೀವನದಲ್ಲಾಗುವ ಅನಿವಾರ್ಯ ಘಟನೆಗಳ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ ಹಾಗು ತಡೆಯಲಾಗುವುದಿಲ್ಲ.

ಹಲವು ಯುವಕರು ತಮ್ಮ ಸಾಮಾಜಿಕ ಬದುಕಿನಲ್ಲಿ ಪಾಲಕರು ಮತ್ತು ಶಿಕ್ಷಕರೊಂದಿಗೆ ಭಾವನಾತ್ಮಕವಾಗಿ ಬಾಂಧವ್ಯ ಬೆಳೆಸಿಕೊಳ್ಳುವುದು ಕಷ್ಟ ಎಂಬುದಾಗಿ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಂದು ಸಮಸ್ಯೆಯೆಂದರೆ ಯುವಕರು ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಬಂದಾಗ ಆರಂಭದಲ್ಲಿ ಅವರಿಗೆ ಒಂದು ಬಗೆಯ ಏಕಾಂತ/ಪ್ರತ್ಯೇಕ ಭಾವನೆ ಕಾಡುತ್ತದೆ. ನಂತರ ಅವರು ಬದಲಾವಣೆಯನ್ನು ಸ್ವೀಕರಿಸಿ ನಗರದ ವಾತಾವರಣಕ್ಕೆ ಹೊಂದಿಕೊಳ್ಳಲು ಕಲಿಯುತ್ತಾರೆ. ಈ ಎಲ್ಲ ಸಮಸ್ಯೆಗಳಿದ್ದರು ಸಹ, ಯುವಕರಲ್ಲಿ ಉತ್ಸಾಹ, ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವಂತ ಹಾಗೂ ಆಶಾವಾದ ಪ್ರವೃತ್ತಿ ಕಂಡುಬಂದಿದೆ.

ಯುವಕರು ತಮ್ಮ ಮಾನಸಿಕ ಆರೋಗ್ಯದ ಕುರಿತು ಹೆಚ್ಚಾಗಿ ಮಾತನಾಡಿದರೆ, ಅದು ಅವರ ದೌರ್ಬಲ್ಯ ಅಥವಾ ಅವರು ಗಂಭೀರವಾದ ಮಾನಸಿಕ ಕಾಯಿಲೆ ಅನುಭವಿಸುತ್ತಿದ್ದಾರೆ ಎಂದಲ್ಲ. ನಾವು ಗಮನಿಸಿದಂತೆ ನಗರ ಪ್ರದೇಶದಲ್ಲಿನ ಯುವಕರು ‘ತಮ್ಮಲ್ಲಿ ತಲೆದೋರಿರುವ ಖಿನ್ನತೆ', ‘ಹತ್ತಿರದ ಸಂಬಂಧಗಳಲ್ಲಿನ ಗದ್ದಲಗಳಿಗೆ’, ‘ಭವಿಷ್ಯದ ಗುರಿಯ ಗೊಂದಲಕ್ಕೆ’ ಮತ್ತು ‘ಸಾಮಾಜಿಕ ಸ್ಥಿತಿಗಳ ಬಗ್ಗೆ ಇರುವ ಆತಂಕಕ್ಕೆ’ ವೃತ್ತಿಪರರ ಸಹಾಯ ಎದುರು ನೋಡುತ್ತಾರೆ.

ಯುವಕರು ಮೊದಲು ಸ್ನೇಹಿತರ ಸಹಾಯ ಬಯಸುತ್ತಾರೆ. ಮೊದಲಿಗೆ ಯುವಕರು ಮಾನಸಿಕ ಅನಾರೋಗ್ಯ ಗುರುತಿಸುವ ಕೌಶಲವನ್ನು ಕಲಿಯಬೇಕಿದೆ. ಈ ತಿಳುವಳಿಕೆಯಿಂದ ತಮ್ಮ ಸ್ನೇಹಿತರಿಗೆ ಸಹಾಯ ಮಾಡಬಹುದು. ಸ್ನೇಹಿತರ ಜೊತೆಗೆ ಪಾಲಕರ ಅಥವಾ ಪೋಷಕರ ಮತ್ತು ವೃತ್ತಿಪರರ ಸಹಾಯವನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಅಂತಿಮವಾಗಿ ಯುವಕರು ನಮ್ಮ ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಇರುವ ಮೂಢನಂಬಿಕೆ, ತಪ್ಪು ಕಲ್ಪನೆ, ಭಯ, ಹೋಗಲಾಡಿಸುವಲ್ಲಿ ಅತ್ಯಂತ ಪ್ರಬಲವಾಗಿ ಪಾತ್ರವಹಿಸಬಹುದು. ನಾವು ಯುವಕರ ಆಸಕ್ತಿಯನ್ನು ಕಡೆಗಣಿಸಿದಾಗ ಅವರು ಮಾನಸಿಕ ಆರೋಗ್ಯದ ಬಗ್ಗೆ ತಮಗಿರುವ ಉತ್ಸಾಹ ಮತ್ತು ಕಾಳಜಿಯನ್ನು ಕಳೆದುಕೊಳ್ಳುತ್ತಾರೆ. ಆದ ಕಾರಣ ನಾವು ಯುವಕರಿಗೆ ಆದ್ಯತೆ ಮತ್ತು ಅವಕಾಶ ನೀಡಿದಾಗ ಅವರು ಸಾಮಾಜಿಕ ಬದಲಾವಣೆಯನ್ನು ತರಲು ಸಹಯೋಗ ನೀಡುತ್ತಾರೆ.

ಯುವಕರು ಆರಂಭಿಕ ಹಂತದಲ್ಲಿ ಮಾನಸಿಕ ಅನಾರೋಗ್ಯ ಗುರುತಿಸಿ ಅದನ್ನು ತಡೆಗಟ್ಟುವ ಕೌಶಲ ವೃದ್ಧಿಸಿಕೊಳ್ಳಲು, ಆ ನಿಟ್ಟಿನಲ್ಲಿ ತಮ್ಮನ್ನು ತಾವು ಸ್ವಾವಲಂಬಿಯನ್ನಾಗಿಸಿಕೊಳ್ಳಲು ಅತ್ಯುತ್ತಮ ಸಾಮರ್ಥ್ಯ ಹೊಂದಿದ್ದಾರೆ. ಯುವಕರು ಮಾನಸಿಕ ಆರೋಗ್ಯದ ಕ್ಷೇತ್ರದಲ್ಲಿ ಪ್ರಾಮಾಣಿಕವಾದ ಪ್ರಬಲವಾಗಿ ಬದಲಾವಣೆ ತರಬಹುದು ಎಂಬ ದೃಢ ನಂಬಿಕೆಯಿಂದ ನಿಮ್ಹಾನ್ಸ್‌ನ ಕ್ಲಿನಿಕಲ್ ಸೈಕಾಲಜಿ ವಿಭಾಗ ಯೂತ್ಪ್ರೊ (YouthPro) ಎಂಬ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿರುತ್ತಾರೆ.

ಮಾಹಿತಿಗಾಗಿ http://kannada.whiteswanfoundation.org ಲಾಗಿನ್‌ ಆಗಬಹುದು.
(ಲೇಖಕರು ಹೆಚ್ಚುವರಿ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಾಲಜಿ ವಿಭಾಗ, ನಿಮ್ಹಾನ್ಸ್. ವೈಟ್‌ ಸ್ವಾನ್‌ ಫೌಂಡೇಶನ್‌ ಸಹಯೋಗದಿಂದ ಮಾನಸಿಕ ಸ್ವಾಸ್ಥ್ಯ ಸಂಬಂಧಿತ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT