ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿಸೋದು ಸಾಧ್ಯವೇ ?

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಬೀದಿ ನಾಯಿಗಳ ಸಮಸ್ಯೆ ಇಂದು ನಿನ್ನೆಯದಲ್ಲ. ‘ನಾಯಿಕಾಟ’ ಹೆಚ್ಚಾಯಿತು ಎಂಬ ಮಾತು ತೇಲಿ ಬರುತ್ತಿದ್ದಂತೆ, ನಾಯಿಗಳನ್ನು ಹಿಡಿದು ಕೊಲ್ಲುವುದು ಸರಳ ಪರಿಹಾರ ಎನ್ನುವ ವಾದವನ್ನೂ ಹಲವರು ಹೂಡುತ್ತಾರೆ. ಇಂಥ ವಾದ– ವಿವಾದ, ಚರ್ಚೆಗಳಲ್ಲಿಯೇ ಮೂಲ ಸಮಸ್ಯೆ ಮಸುಕಾಗಿ, ಶಾಶ್ವತ ಪರಿಹಾರ ಮರೀಚಿಕೆಯಾಗಿಯೇ ಉಳಿಯುತ್ತಿದೆ.

ನಗರದಲ್ಲಿ ನಾಯಿ ಕಚ್ಚಿ ಯಾರಿಗೇ ತೊಂದರೆಯಾದರೂ ಮೊದಲು ಪಾಲಿಕೆಯ ಮೇಲೆ ದೋಷಾರೋಪಣೆ ಮಾಡಲಾಗುತ್ತದೆ. ಪಾಲಿಕೆ ಕಚೇರಿಗೆ ಕರೆ ಮಾಡಿ ನಮ್ಮ ಪ್ರದೇಶದಲ್ಲಿರುವ ನಾಯಿಗಳನ್ನು ಹಿಡಿದುಕೊಂಡು ಹೋಗಿ ಎಂದು ಜನರು ಒತ್ತಡ ಹೇರುತ್ತಾರೆ. ಆದರೆ ಅದಕ್ಕೂ ಮುನ್ನ ನಾವು ಯೋಚಿಸಬೇಕಾದ ವಿಷಯಗಳೂ ಕೆಲವಿವೆ.

ನಾಯಿಗಳೇಕೆ ಹೀಗಾದವು? ಅವೇಕೆ ಮನುಷ್ಯರ ಮೇಲೆ ತಿರುಗಿ ಬಿದ್ದಿವೆ? ಮಾಧ್ಯಮಗಳಲ್ಲಿ ವರದಿಯಾಗುವಷ್ಟು ರೋಚಕವಾಗಿ ನಿಜಕ್ಕೂ ನಾಯಿಗಳು ವರ್ತಿಸುತ್ತವೆಯೇ?
ಇದಕ್ಕೆ ಉತ್ತರ ಸರಳ. ಜೀವಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾದಾಗ ಸಹಜವಾಗಿಯೇ ಪ್ರಾಣಿ ಜಗತ್ತು ಆತ್ಮರಕ್ಷಣೆಗೆ ಮುಂದಾಗುತ್ತದೆ. ಪ್ರಾಣಿಗಳಿಗೆ ಕಾರ್ಯ–ಕಾರಣ ಯೋಚಿಸುವ ಸಾಮರ್ಥ್ಯ ಮನುಷ್ಯನಷ್ಟು ಇಲ್ಲ. ಹೀಗಾಗಿ ಅವುಗಳ ಪ್ರತಿಕ್ರಿಯೆ ತೀವ್ರವಾಗಿರುತ್ತವೆ.

ಬೇರೆಯವರಿಂದ ತೊಂದರೆಯಾದಾಗ ಅಥವಾ ಅಪರಿಚಿತರು ತಮ್ಮ ಪ್ರದೇಶದೊಳಗೆ ಬಂದಾಗ ಮಾತ್ರ ಪ್ರಾಣಿಗಳು ಸಿಟ್ಟಿಗೇಳುತ್ತವೆ. ಮಕ್ಕಳಿಗೆ ನಾಯಿ ಕಚ್ಚುವ ಪ್ರಕರಣಗಳು  ನಗರಗಳಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ನಗರದಲ್ಲಿರುವ ಮಕ್ಕಳಿಗೆ ಪ್ರಾಣಿಗಳೊಂದಿಗೆ ಬೆರೆಯುವ ಅವಕಾಶ ಇಲ್ಲದಂತಾಗಿರುವುದೂ ಇದಕ್ಕೆ ಕಾರಣ.

ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳನ್ನು ಮುಕ್ತವಾಗಿ ಮನುಷ್ಯರೊಂದಿಗೆ ಬೆರೆಯಲೂ ಪೋಷಕರು ಬಿಡುತ್ತಿಲ್ಲ. ಇನ್ನು ಪ್ರಾಣಿಗಳೊಂದಿಗೆ ಒಡನಾಟಕ್ಕೆ ಎಲ್ಲಿ ಅವಕಾಶ ಸಿಗಬೇಕು?
ಪ್ರಾಣಿಗಳ ವರ್ತನೆ ಬಗ್ಗೆ ಕೊಂಚವೂ ಮಾಹಿತಿಯೇ ಇಲ್ಲದ ಮಕ್ಕಳು ಬೀದಿಯಲ್ಲಿ ನಾಯಿ, ಬೆಕ್ಕು, ಹಸು ಕಂಡರೂ ಕಲ್ಲೆಸೆಯುತ್ತಾರೆ ಅಥವಾ ಹೆದರಿ ಓಡುತ್ತಾರೆ.

ಬಹುತೇಕ ನಾಯಿ ಕಡಿತ ಪ್ರಕರಣಗಳು ಇಂಥದ್ದೇ ಸಂದರ್ಭದಲ್ಲಿ ಸಂಭವಿಸುತ್ತವೆ. ಇದರ ಹೊರತಾಗಿ ಮಕ್ಕಳು ನಾಯಿಗಳಿಗೆ ಆಹಾರ ಹಾಕುವಾಗ ಕಡಿತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

ದೊಡ್ಡವರೆನಿಸಿಕೊಂಡವರು ಮಕ್ಕಳಿಗೆ ಬೀದಿಯಲ್ಲಿ ನಾಯಿ, ಕೋತಿ, ಹಸು, ಬೆಕ್ಕುಗಳನ್ನು ಕಂಡ ಕೂಡಲೇ ಕಲ್ಲೆಸೆಯದಂತೆ ತಿಳಿ ಹೇಳಬೇಕು. ಅವುಗಳು ಹಿಂದೆ ಬಂದಾಗ ಗಾಬರಿಗೊಂಡ ಓಡಬಾರದು ಎಂದು ಬುದ್ಧಿ ಹೇಳಬೇಕು. ರಸ್ತೆಯಲ್ಲಿ ಸಂಚರಿಸುವಾಗ ಕೈಲಿ ತಿನ್ನುವ ಪದಾರ್ಥಗಳನ್ನು ಇಟ್ಟುಕೊಂಡು ಹೋಗದಂತೆ ತಿಳಿಸಿಕೊಡಬೇಕು.

ಅಂಬೆಗಾಲಿಡುವ ಮಕ್ಕಳು ಕೈಯಲ್ಲಿ ತಿಂಡಿ ಹಿಡಿದು ಮನೆಯಿಂದ ಹೊರ ಹೋಗದಂತೆ ನೋಡಿಕೊಳ್ಳಬೇಕು. ರಾತ್ರಿವೇಳೆ ರಸ್ತೆಗಳಲ್ಲಿ ನಾಯಿಗಳು ಹಿಂದೆ ಬಿದ್ದಾಗ ವಾಹನವನ್ನು ನಿಲ್ಲಿಸಿ ಸುಮ್ಮನೆ ಕೆಲ ಸಮಯ ನಿಂತರೆ ನಾಯಿಗಳ ಕೋಪ ಕಡಿಮೆಯಾಗುತ್ತದೆ. ಅವು ಬೆನ್ನಟ್ಟುವುದು ಬಿಡುತ್ತವೆ. ಇಷ್ಟು ಜಾಗೃತಿ ಮೂಡಿದರೆ ಬಹುತೇಕ ನಾಯಿ ಕಡಿತದ ಪ್ರಕರಣಗಳು ಕಡಿಮೆಯಾಗುತ್ತವೆ.

ಕಸ ಮತ್ತು ನಾಯಿ: ಕಸದ ಅಸಮರ್ಪಕ ನಿರ್ವಹಣೆಯೂ ಬೀದಿನಾಯಿ ಕಾಟಕ್ಕೆ ದೊಡ್ಡ ಕಾರಣ. ದೊಡ್ಡವರು ತಮ್ಮ ಮನೆಯ ಕಸವನ್ನು (ಆಹಾರ ಪದಾರ್ಥಗಳು) ಬೀದಿಗಳಲ್ಲಿ ಹಾಕುವುದನ್ನು ನಿಲ್ಲಿಸಬೇಕು. ಬೀದಿಗೆಸೆದ ಕಸ ತಿನ್ನಲು ಕಾಯುವ ನಾಯಿಗಳು ಆಹಾರಕ್ಕಾಗಿ ಪೈಪೋಟಿ ನಡೆಸುತ್ತವೆ. ಮತ್ತೊಂದು ನಾಯಿಯ ಮೇಲಿದ್ದ ಸಿಟ್ಟು, ಹಾದಿಯಲ್ಲಿ ಹೋಗುವವರ ಮೇಲೆ ತಿರುಗಿ ಕಡಿತ ಅನುಭವಿಸಬೇಕಾಗುತ್ತದೆ.

ನಾಯಿಗಳೇಕೆ ಮೇಲೆರಗುತ್ತವೆ
ನಾಯಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡಲು ಇರುವ ಮುಖ್ಯ ಕಾರಣಗಳು ಇವು.

ಮರಿಗಳ ರಕ್ಷಣೆ: ಮರಿಗಳನ್ನು ಯಾರೇ ಮುಟ್ಟಲು ಹೋದರೂ, ಅವುಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ನಾಯಿಗಳು ದಾಳಿ ಮಾಡುತ್ತವೆ.

ಭಯ: ಮಲಗಿರುವ ನಾಯಿಯನ್ನು ಮುಟ್ಟುವುದು, ಬಾಲ ಎಳೆಯುವುದು, ಕಾಲು ತುಳಿಯುವುದು ಮಾಡಿದಾಗ ಏನಾಗುತ್ತಿದೆ, ಯಾರು ಮಾಡುತ್ತಿದ್ದಾರೆ ಎಂಬುದನ್ನೂ ಗಮನಿಸದೇ ಅವು ಬಾಯಿ ಹಾಕುತ್ತವೆ.

ಆಹಾರ ಸೇವನೆ: ಮನುಷ್ಯನ ಆಹಾರ ಸೇವನೆ ಕ್ರಮಕ್ಕೂ ನಾಯಿಗಳ ಆಹಾರ ಸೇವನೆ ಕ್ರಮಕ್ಕೂ ವ್ಯತ್ಯಾಸವಿದೆ. ನಾಯಿಗಳು ಆಹಾರ ಸೇವಿಸುವಾಗ ಹಸ್ತಕ್ಷೇಪ ಸಹಿಸುವುದಿಲ್ಲ. ಇದು ಸಾಕಿದ ನಾಯಿಗಳಲ್ಲೂ ಇರುವ ಸಾಮಾನ್ಯ ಗುಣ.

ತನ್ನ ಸುಪರ್ದಿಯ ಪ್ರದೇಶ: ನಾಯಿಗಳು ಸಹ ಸಂಘ ಜೀವಿಗಳೇ. ಅವುಗಳು ತಾವು ವಾಸಿಸುವ ಪ್ರದೇಶದಲ್ಲಿ ಅಪರಿಚಿತರು ಹಾಗೂ ಅನುಮಾನಾಸ್ಪದವಾಗಿ ಯಾರೇ ಬಂದರೂ ಸಹಿಸುವುದಿಲ್ಲ. ಮನುಷ್ಯರಾಗಲಿ ಅಥವಾ ಪ್ರಾಣಿಗಳಾಗಲಿ ಗಡಿ ದಾಟುವವರೆಗೂ ಬೊಗಳುತ್ತಾ ಹಿಂಬಾಲಿಸುತ್ತವೆ. ಇರುಗಿ ಬಿದ್ದರೆ, ಸಿಟ್ಟಿನಿಂದ ಕಚ್ಚಲು ಬರುತ್ತವೆ.

ಪ್ರಚೋದನೆ: ಮಲಗಿರುವ ನಾಯಿಗೆ ಹೊಡೆದರೆ, ಅದು ಯಾರು ಹೊಡೆದರು ಎಂಬುದನ್ನೂ ಗಮನಿಸದೆ ಸಮೀಪದಲ್ಲಿರುವವರ ಮೇಲೆ ಎರಗುತ್ತದೆ. ನಾಯಿಗಳು ಜಗಳವಾಡುವಾಗ ಪಕ್ಕದಲ್ಲಿ ಯಾರೇ ಇದ್ದರೂ ಅಪಾಯ.

ರೇಬಿಸ್‌: ರೇಬಿಸ್ ಸೋಂಕಿತ ನಾಯಿಗಳಿಗೆ ಈ ಮೇಲಿನ ಯಾವ ಕಾರಣಗಳೂ ಅನ್ವಯಿಸುವುದಿಲ್ಲ. ಅವುಗಳಿಗೆ ಏನಾಗುತ್ತಿದೆ ಎಂದಬುದರ ಪರಿವೆಯೇ ಇರುವುದಿಲ್ಲ. ಅವುಗಳು ಯಾರ ಮೇಲೆ ಬೇಕಾದರೂ ದಾಳಿ ಮಾಡಬಹುದು.  

ನಾಲ್ಕು ತಿಂಗಳು ಹೆಚ್ಚು
ನಾಯಿ ಕಡಿತ ಪ್ರಕರಣಗಳು ಪ್ರತಿ ವರ್ಷ ಮಾರ್ಚ್‌–ಏಪ್ರಿಲ್ ಮತ್ತು ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ಹೆಚ್ಚಾಗಿ ವರದಿಯಾಗುತ್ತವೆ. ನಾಯಿಗಳು ಈ ಅವಧಿಯಲ್ಲಿ ಮರಿಗಳೊಂದಿಗೆ ಇರುವುದರಿಂದ ಅವುಗಳ ವರ್ತನೆ ಹೆಚ್ಚು ಸೂಕ್ಷ್ಮವಾಗಿರುವುದೇ ಇದಕ್ಕೆ ಕಾರಣ.

ಅಪಾರ್ಟ್‌ಮೆಂಟ್‌ ಜೊತೆಗೆ ಹಸಿವೆಯೂ ಬಂತು...
ನಗರದಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚಾದಂತೆ ನಾಯಿಗಳಿಗೆ ಆಹಾರದ ಸಮಸ್ಯೆಯೂ ಉಲ್ಬಣಿಸಿದೆ. ಧರೆಗಿಳಿದು, ಗೇಟ್ ದಾಟಿ ಬೀದಿ ನಾಯಿಗೆ ಆಹಾರ ಹಾಕುವ ವ್ಯವಧಾನ ಇರುವ ಅಪಾರ್ಟ್‌ಮೆಂಟ್‌ ವಾಸಿಗಳ ಸಂಖ್ಯೆ ವಿರಳಾತಿವಿರಳ. ಹೀಗಾಗಿ ನಾಯಿಗಳಿಗೆ ಆಹಾರ ಹುಡುಕಿಕೊಳ್ಳುವುದೇ ಸವಾಲಾಗಿದೆ. ಹೀಗಾಗಿಯೇ ನಾಯಿಗಳು ಮಾಂಸ, ಕೊಳೆತ ಕಸದ ರಾಶಿ ಹುಡುಕಿ ಅಲೆಯುತ್ತವೆ.

ಜನರು ಉಳಿಕೆ ಆಹಾರವನ್ನು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಸುತ್ತಿ ಎಸೆಯುವ ಬದಲು ಬೀದಿನಾಯಿಗಳಿಗೆ ಆಹಾರ ನೀಡುವುದನ್ನು ರೂಢಿಸಿಕೊಳ್ಳಬೇಕು. ನಾಯಿಗೆ ಸ್ವಲ್ಪ ಆಹಾರ ಕೊಟ್ಟರೂ ಅದು ಆ ಪ್ರದೇಶದ ಜನರೊಂದಿಗೆ ಸ್ನೇಹ ಹಾಗೂ ಪ್ರೀತಿಯಿಂದ ಇರುತ್ತದೆ. ನಿಯತ್ತಿನಿಂದ ಮನೆಯನ್ನೂ ಕಾಯುತ್ತದೆ.

ಬಹುತೇಕ ನಾಯಿ ಕಡಿತ ಪ್ರಕರಣಗಳಲ್ಲಿ ತಪ್ಪು ಮನುಷ್ಯರ ನಿರ್ಲಕ್ಷ್ಯದಿಂದಲೇ ಆಗಿದೆ. ಸತ್ಯ ಗೊತ್ತಿದ್ದರೂ ನಾಯಿಗಳು ಮಾತನಾಡಲಾರವು. ಇದರಿಂದ ದೋಷಾರೋಪ ಮಾತ್ರ ನಾಯಿಗಳ ಮೇಲೆ ಇರುತ್ತವೆ. ಜನರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು.
– ಡಾ. ಶಿವಪ್ರಕಾಶ್‌, ಪಶುವೈದ್ಯ

ನೆಪ ಹೇಳುವ ಎನ್‌ಜಿಒಗಳು
‘ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ಆಫ್‌ ಇಂಡಿಯಾ’ ರೂಪಿಸಿರುವ ಮಾರ್ಗದರ್ಶಿ ಸೂತ್ರದ ಪ್ರಕಾರ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ ದಿನವೇ ಬೀದಿ ನಾಯಿಗಳನ್ನು ರಸ್ತೆಗೆ ಬಿಡಬಾರದು. ನಾಯಿಗಳನ್ನು ಹಿಡಿದ ಮೊದಲ ದಿನ ಆರೋಗ್ಯ ಪರಿಶೀಲನೆ ನಡೆಸಿ, ಮರುದಿನ ಖಾಲಿ ಹೊಟ್ಟೆಯಲ್ಲಿ ಅದಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕು.

ಮುಂದಿನ ಮೂರು ದಿನ ನಿಗಾವಹಿಸಿ, ಅದು ಆಹಾರ ಸೇವಿಸುವಂತಾದ ಮೇಲೆ ಅದನ್ನು ರಸ್ತೆಗೆ ಬಿಡಬೇಕು. ಆದರೆ ನಗರದಲ್ಲಿರುವ ಕೆಲವು ಸ್ವಯಂಸೇವಾ ಸಂಸ್ಥೆಗಳು ನಾಯಿಗಳನ್ನು ಹಿಡಿದ ದಿನವೇ ಶಸ್ತ್ರ ಚಿಕಿತ್ಸೆ ಮಾಡಿ, ಅಂದೇ ಅವುಗಳನ್ನು ರಸ್ತೆಗೆ ಬಿಡುತ್ತಾರೆ. ಈ ಪ್ರಕ್ರಿಯೆಗೆ ಸಿಎನ್‌ವಿಆರ್‌ (ಕ್ಯಾಚ್‌ ನ್ಯೂಟರ್‌ ವ್ಯಾಕ್ಸಿನ್‌ ಅಂಡ್‌ ರಿಲೀಸ್‌) ಎನ್ನಲಾಗುತ್ತದೆ. ಇತ್ತೀಚೆಗೆ ಗಿರಿನಗರದಲ್ಲಿ ನಾಯಿವೊಂದಕ್ಕೆ ಸಿಎನ್‌ವಿಆರ್‌ ಮಾಡಲಾಗಿತ್ತು.

ರಸ್ತೆಗೆ ಬಂದ ಕೆಲವೇ ಗಂಟೆಗಳಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದ ಜಾಗದಲ್ಲಿ ಹಾಕಿದ್ದ ಹೊಲಿಗೆ ಬಿಚ್ಚಿಕೊಂಡು ನಾಯಿಯ ಅಂಗಗಳು ಹೊರ ಬಂದಿತ್ತು. ನಾಯಿ ಮೃತಪಟ್ಟ ಕಾರಣ ಶಸ್ತ್ರಚಿತ್ಸೆ ಮಾಡಿದ್ದ ವೈದ್ಯರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈ ಘಟನೆ ನಂತರವೂ ಸ್ವಯಂಸೇವಾ ಸಂಸ್ಥೆಗಳು ಸಿಎನ್‌ವಿಆರ್‌ ಪದ್ಧತಿಯಲ್ಲೇ ಶಸ್ತ್ರಚಿಕಿತ್ಸೆ ಮುಂದುರೆಸಿದ್ದವು.

ಹಿರಿಯ ಕೇಂದ್ರ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಗಮನ ಸೆಳೆದ ಕಾರಣ ಬಿಬಿಎಂಪಿ ಅಧಿಕಾರಿಗಳು ಸಿಎನ್‌ವಿಆರ್‌ ಪದ್ಧತಿ ಮಾಡದಂತೆ ಆದೇಶ ಹೊರಡಿಸಿದರು. ಈ ಆದೇಶ ಹೊರಬೀಳುತ್ತಿದ್ದಂತೆಯೇ ಸ್ವಯಂಸೇವಾ ಸಂಸ್ಥೆಗಳು ತಮ್ಮ ಬಳಿ ನಾಯಿಗಳನ್ನು ಇಟ್ಟುಕೊಳ್ಳಲು ಸ್ಥಳವಿಲ್ಲವೆಂಬ ಹೊಸ ರಾಗ ಹಾಡುತ್ತಿದ್ದಾರೆ. ಇದಕ್ಕೆ ಬಿಬಿಎಂಪಿ ಸಹ ಸಹಮತ ಸೂಚಿಸಿರುವುದು ವಿಷಾದದ ಸಂಗತಿ.

ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳು ಆಯಾ ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲೇ ಕ್ಯಾಂಪ್‌ ಮಾಡುವ ಮೂಲಕ ಶಸ್ತ್ರಚಿಕಿತ್ಸೆ ಮುಂದುವರೆಸಬಹುದು. ವಾರ್ಡ್‌ಗಳಲ್ಲಿ ಖಾಲಿ ಇರುವ ಕಟ್ಟಡಗಳನ್ನು ಗುರುತಿಸಿ, ಅವುಗಳನ್ನು ಬಾಡಿಗೆಗೆ ಪಡೆದು ಬಳಸಬಹುದು. ಆರೋಗ್ಯವಾಗಿರುವ ನಾಯಿಗಳು ವರ್ಷಕ್ಕೆ ಎರಡು ಬಾರಿ ಮರಿ ಹಾಕುವ ಸಾಧ್ಯತೆ ಇರುತ್ತದೆ. ಹೀಗಾಗಿ ನಗರದಲ್ಲಿ ನಾಯಿಗಳ ಸಂಖ್ಯೆ ನಿಯಂತ್ರಣದಲ್ಲಿಡಲು ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಿಲ್ಲಿಸಬಾರದು.
– ನವೀನಾ ಕಾಮತ್‌, ಪ್ರಾಣಿ ಪ್ರಿಯೆ

ನಾಯಿ ಕಚ್ಚೋಕೆ ಕಸವೇ ಕಾರಣ...
ನಗರದ ಎಲ್ಲೆಡೆ ನಾಯಿಗಳು ಗುಂಪುಗುಂಪಾಗಿ ಕಾಣುವುದಿಲ್ಲ. ಎಲ್ಲಿ ಕಸದ ರಾಶಿ, ಮಾಂಸ ಮಾರುವ ಅಂಗಡಿಗಳು ಇರುತ್ತವೆಯೋ ಅಲ್ಲಿ ಮಾತ್ರ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಸ ವಿಲೇವಾರಿಯ ಸಮಸ್ಯೆಯೇ ಮುಖ್ಯ ಕಾರಣ. ಮಾಂಸದ ಅಂಗಡಿಗಳ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾದರೆ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ.

ಮಾಂಸದ ಅಂಗಡಿಗಳವರು ತ್ಯಾಜ್ಯವನ್ನು ಕೆರೆಗಳ ಅಂಚು, ರಸ್ತೆ ಬದಿ, ಖಾಲಿ ನಿವೇಶನ ಹಾಗೂ ಪೊದೆಗಳಿರುವ ಸ್ಥಳಗಳಲ್ಲಿ ಚೀಲ ಕಟ್ಟಿ ಬಿಸಾಡುತ್ತಿದ್ದಾರೆ. ಮಾಂಸದ ಆಸೆಗೆ ವಾಸನೆ ಹಿಡಿದು ಬರುವ ನಾಯಿಗಳು ಗುಂಪುಗೂಡುತ್ತವೆ.

ಹೀಗಾಗಿಯೇ ಇಂಥ ಸ್ಥಳಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತದೆ. ವಿಭಿನ್ನ ಪ್ರದೇಶದ ನಾಯಿಗಳು ಒಂದೆಡೆ ಸೇರುವುದು ಅವುಗಳ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ. ಅವುಗಳ ನಡುವೆ ಆಹಾರಕ್ಕೆ ಸ್ಪರ್ಧೆ– ಕಿತ್ತಾಟ ಸಾಮಾನ್ಯ. ಇದು ಪಕ್ಕದಲ್ಲಿ ಹಾದು ಹೋಗುವ ಮಕ್ಕಳಿಗೆ ಪ್ರಾಣ ಕಂಟಕವೂ ಆಗಬಲ್ಲದು.

ಕಸ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು ಮತ್ತು ಮಾಂಸದ ಅಂಗಡಿಗಳ ಮೇಲೆ ಪಾಲಿಕೆ ಅಧಿಕಾರಿಗಳು ನಿಗಾ ವಹಿಸಬೇಕು. ಆಗ ಮಾತ್ರ ನಾಯಿ ಕಾಟ ನಿಯಂತ್ರಣಕ್ಕೆ ಬರಲು ಸಾಧ್ಯ.
– ಅಜಯ್‌, ಸ್ವಯಂ ಸೇವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT