ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೃದಯಿ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು

ವ್ಯಕ್ತಿ
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದಶಕದ ಹಿಂದಿನ ಮಾತು. ಅಪ್ಪ- ಅಮ್ಮಂದಿರನ್ನು ಕಳೆದುಕೊಂಡ ತಮ್ಮ ಮೊಮ್ಮಗಳಿಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಲು ಬ್ಯಾಂಕೊಂದಕ್ಕೆ ಆದೇಶಿಸುವಂತೆ ಕೋರಿ ವೃದ್ಧೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿತ್ತು. ನೌಕರಿಗೆ ಅರ್ಜಿ ಸಲ್ಲಿಸಲು ನಿಯಮದಲ್ಲಿ ಉಲ್ಲೇಖಿಸಿರುವ ಅವಧಿ ಮೀರಿದ್ದರಿಂದ ನೌಕರಿ ನೀಡಲು ಬ್ಯಾಂಕ್‌ ನಿರಾಕರಿಸಿತ್ತು. ಕಾನೂನಿನ ಪ್ರಕಾರ ಬ್ಯಾಂಕ್‌ ವಾದ ಸರಿಯಾಗಿಯೇ ಇತ್ತು. ಆದರೆ, ಹೈಕೋರ್ಟ್‌ ತೀರ್ಪು ಮಾತ್ರ ಅಜ್ಜಿಯ ಪರವಾಯಿತು! ಏಕೆಂದರೆ ಅಲ್ಲಿ ಕಾನೂನಿಗಿಂತ ಮಿಗಿಲಾಗಿ ಮಾನವೀಯತೆ ಮೆರೆದಿತ್ತು.

‘ಒಬ್ಬ ಅನಕ್ಷರಸ್ಥೆ, ಮೊಮ್ಮಕ್ಕಳನ್ನು ಕಷ್ಟಪಟ್ಟು ಸಾಕಿ, ವಿದ್ಯಾವಂತರನ್ನಾಗಿ ಮಾಡಿ ಅನುಕಂಪದ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಕಾನೂನು, ನಿಯಮಗಳೆಲ್ಲ ಅವರಿಗೆ ತಿಳಿದಿಲ್ಲ. ಇಂತಹ ಸಮಯದಲ್ಲೂ ನಿಯಮ ಅದೂ ಇದೂ ಅಂತೆಲ್ಲ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಬೇಡಿ. ಇದನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಆ ಯುವತಿಗೆ ಉದ್ಯೋಗ ನೀಡಿ’ ಎಂದು ಕೋರ್ಟ್‌ ಆದೇಶಿಸಿತ್ತು. ಮೊಮ್ಮಗಳಿಗೆ ನೌಕರಿಯೇ ಸಿಗುವುದಿಲ್ಲ ಎಂದುಕೊಂಡಿದ್ದ ಆ ವೃದ್ಧೆಗೆ ಮರುಜೀವ ಬಂದಿತ್ತು.

ಇಂಥದ್ದೊಂದು ಅಪರೂಪದ ತೀರ್ಪು ನೀಡಿ ಅಂದು ಮಾನವೀಯತೆ ಮೆರೆದಿದ್ದವರು ನ್ಯಾಯಮೂರ್ತಿಗಳಾಗಿದ್ದ ಎಚ್‌.ಎಲ್‌.ದತ್ತು.
ಇದೊಂದೇ ಪ್ರಕರಣವಲ್ಲ. ಇಂಥ ಹತ್ತು ಹಲವಾರು ಮಾನವೀಯ ನೆಲೆಗಟ್ಟಿನ ತೀರ್ಪನ್ನು ಅವರು 1995ರಿಂದ 2007ರವರೆಗೆ ರಾಜ್ಯ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನೀಡಿದ್ದಾರೆ. 2007ರಲ್ಲಿ ಛತ್ತೀಸ್‌ಗಡಕ್ಕೆ ಅವರಿಗೆ ವರ್ಗಾವಣೆಯಾಯಿತು. ಅಲ್ಲಿ ಅವರು ಕೆಲಸ ನಿರ್ವಹಿಸಿದ್ದು ಕೇವಲ 80 ದಿನ. ಆದರೆ ಈ ಚಿಕ್ಕ ಅವಧಿ, ಹೈಕೋರ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಹಲವಾರು ನೌಕರರ ಪಾಲಿಗೆ ಮರೆಯಲಾಗದ ದಿನಗಳು. ಏಕೆಂದರೆ ಅನೇಕ ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತ, ಕಾಯಮಾತಿಗೆ ಹೋರಾಟ ನಡೆಸುತ್ತಿದ್ದ ಈ ಎಲ್ಲ ನೌಕರ ರನ್ನು ಕಾಯಂ ಮಾಡಿ ಆದೇಶ ಹೊರಡಿಸಿದರು ನ್ಯಾ. ದತ್ತು.

ಅಲ್ಲಿಂದ ಅವರು 2007ರಲ್ಲಿಯೇ ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದು, ಅಲ್ಲಿಯೂ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಅಲ್ಲಿಂದ ಅವರ ಪಯಣ ಸುಪ್ರೀಂಕೋರ್ಟ್‌ನತ್ತ. 2008ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡು, ಇದೀಗ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದು ಈ ಉನ್ನತ ಸ್ಥಾನ ಏರಿದ ನಾಲ್ಕನೇ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೊದಲಿನಿಂದಲೂ ಮಾನವೀಯ ಗುಣಗಳಿಗೆ ಹೆಸರಾಗಿರುವ ನ್ಯಾ.ದತ್ತು ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನಕ್ಕೆ  ಕಾಶ್ಮೀರಕ್ಕೆ ತೆರಳಿ ಅಲ್ಲಿಯ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿಕೊಂಡು ಬಂದದ್ದು ಅವರ ಹತ್ತಿರ ಇರುವ ಅನೇಕರಿಗೇ ತಿಳಿದಿಲ್ಲ. ಎಲ್ಲಿಯೂ ಪ್ರಚಾರ ಮಾಡಿಕೊಳ್ಳದೇ, ಗೋಪ್ಯವಾಗಿ ಕಾಶ್ಮೀರಕ್ಕೆ ಹೋಗಿ ಅಲ್ಲಿ ಒಂದೆರಡು ದಿನ ಇದ್ದು ಸಮಸ್ಯೆ ಆಲಿಸಿ, ಅದಕ್ಕೊಂದಿಷ್ಟು ಪರಿಹಾರ ಒದಗಿಸಿ ಬಂದಿದ್ದಾರೆ.

ಮಾನವೀಯ ವಿಷಯ ಬಂದಾಗ ಎಷ್ಟು ಸೂಕ್ಷ್ಮವೋ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಷ್ಟೇ ಕಟ್ಟುನಿಟ್ಟು. ಭ್ರಷ್ಟಾಚಾರದ ಆರೋಪ ಹೊತ್ತವರ ಪರ ವಕೀಲರು ವಾದಿಸುವಾಗ, ಆ ವಾದದಲ್ಲಿ ಹುರುಳಿಲ್ಲ ಎಂದು ತಿಳಿದರೆ ಸಾಕು, ಅವರು ಹಿರಿಯ ವಕೀಲರೋ,  ಸುಪ್ರೀಂಕೋರ್ಟ್‌ ವಕೀಲರೋ ಎಂದೆಲ್ಲ ನೋಡುವುದೇ ಇಲ್ಲ. ‘ನೀವು ವಾದ ಮುಂದುವರಿಸಿ ನಿಮ್ಮ ಕರ್ತವ್ಯ ಮಾಡಿ, ನಾನು ಅಡ್ಡಿ ಪಡಿಸಲಾರೆ. ಆದರೆ ನಾನು ಏನು ತೀರ್ಪು ನೀಡಬೇಕೋ ಅದನ್ನೇ ನೀಡುವುದು’ ಎಂದು ಹೇಳಿ ವಕೀಲರ ಬಾಯಿ ಮುಚ್ಚಿಸುತ್ತಿದ್ದರು!

ಸಿವಿಲ್, ಕ್ರಿಮಿನಲ್, ತೆರಿಗೆ ವಿಷಯಗಳಲ್ಲಿ ಹೆಚ್ಚಿನ ಪಾಂಡಿತ್ಯ ಹೊಂದಿರುವ ನ್ಯಾ. ದತ್ತು ಅವರು 1975ರಿಂದ 1990ರವರೆಗೆ ಹೈಕೋರ್ಟ್‌ನಲ್ಲಿ  ವಕೀಲರಾಗಿದ್ದಾಗ ಹೆಚ್ಚಾಗಿ ಅದೇ ಪ್ರಕರಣಗಳಲ್ಲಿ ವಾದಿಸುತ್ತಿದ್ದರು. ಸರ್ಕಾರಿ ಪ್ಲೀಡರ್‌ ಆಗಿ, ನಂತರ ಸರ್ಕಾರಿ ವಕೀಲರಾಗಿ ನೇಮಕಗೊಂಡಾಗಲೂ ಆದಾಯ ತೆರಿಗೆ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಾಗಿ ಇವರ ಬಳಿ ಬಂದಿದ್ದವು.

ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡ ನಂತರವೂ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ತೀರ್ಪು ನೀಡಿದ್ದಾರೆ.
‘ಒಂದು ಕಪ್‌ ಫಿಲ್ಟರ್‌ ಕಾಫಿ ಮತ್ತು  ಒಂದೈದು ನಿಮಿಷದ ಕರ್ನಾಟಕ ಸಂಗೀತ ಇಷ್ಟಿದ್ದರೆ ಮನಸ್ಸು ಯಾವಾಗಲೂ ಪ್ರಫುಲ್ಲವಾಗಿರುತ್ತದೆ’ ಎನ್ನುವ ನ್ಯಾ. ದತ್ತು ಅವರಿಗೆ ಗಿಡ ಮರಗಳೆಂದರೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ಸಾಕ್ಷಿಯಾಗಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಇರುವ ಅವರ ತೋಟ. ಸುಮಾರು ಐದಾರು ವರ್ಷಗಳ ಹಿಂದೆ ಮಳೆ ಸರಿಯಾಗಿ ಬಾರದೇ  ಅಂತರ್ಜಲ ಕುಸಿದು ಇವರ ತೋಟದ ಗಿಡ ಮರಗಳೂ ಒಣಗಿ ಹೋಗಿದ್ದವು. ಗಿಡಗಳ ಈ ಪರಿಸ್ಥಿತಿ ನೋಡಿ ದತ್ತು ಅವರು ಊಟ, ನಿದ್ದೆಯನ್ನೇ ಬಿಟ್ಟಿದ್ದರು. ನಂತರ ಬೋರ್‌ವೆಲ್‌ ಕೊರೆಸಿ ನೀರು ಬರುವವರೆಗೂ ಕಾದು, ಗಿಡ ಮರಗಳಿಗೆ ನೀರು ಉಣಿಸಿದ ಬಳಿಕವೇ ತಾವು ಆಹಾರ ಸೇವಿಸಿದ್ದರು. ಅರಣ್ಯ , ತೋಟಗಾರಿಕೆ ಇಲಾಖೆಗಳಿಗೆ ಆಗಾಗ್ಗೆ ಭೇಟಿ ನೀಡಿ, ಹೊಸ ಹೊಸ ಬಗೆಯ ಸಸಿಗಳನ್ನು ತಂದು ತೋಟದಲ್ಲಿ ನೆಡುವುದು ಅವರ ಆಸಕ್ತಿಗಳಲ್ಲಿ ಒಂದು.

ಕುಟುಂಬದ ಬಗ್ಗೆ ಒಂದಿಷ್ಟು
ಇವರು ಹುಟ್ಟಿದ್ದು ಬಳ್ಳಾರಿಯ ಹಂದ್ಯಾಲ ಗ್ರಾಮದಲ್ಲಿ ೧೯೫೦ರ ಡಿಸೆಂಬರ್ ೩ರಂದು. ಅಪ್ಪ ಶಿಕ್ಷಕ ಲಕ್ಷ್ಮೀನಾರಾಯಣ ಮತ್ತು ಅಮ್ಮ ಶಾಕುಂತಲಮ್ಮ. ಇವರಿಗೆ ಮಕ್ಕಳಾಗದಿದ್ದ ಹಿನ್ನೆಲೆಯಲ್ಲಿ ಗುರು ದತ್ತಾತ್ರೇಯನ ಮೊರೆ ಹೋಗಿದ್ದರು. ನಂತರ ಅವರಿಗೆ ಗಂಡು ಮಗುವಾದ ಕಾರಣ, ಇವರಿಗೆ ‘ದತ್ತು’ ಎಂದು ಹೆಸರಿಟ್ಟರು. ದತ್ತು ಅವರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆಯಿತು. ನಂತರ ಬೆಂಗಳೂರಿನಲ್ಲಿ ಬಿ.ಎಸ್ಸಿ, ಎಲ್‌ಎಲ್‌ಬಿ ಪದವಿ ಪಡೆದರು.

ಇವರದ್ದು ಚಿಕ್ಕ- ಚೊಕ್ಕ ಕುಟುಂಬ. ಇವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ. ಮಗಳು ಹಾಗೂ ಅಳಿಯ ಇಬ್ಬರೂ ಬೆಂಗಳೂರಿನಲ್ಲಿ ವೈದ್ಯರಾಗಿದ್ದರೆ, ಮಗ ಹಾಗೂ ಸೊಸೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಇಬ್ಬರು ಮಕ್ಕಳಿಗೂ ಇಬ್ಬಿಬ್ಬರು ಗಂಡು ಮಕ್ಕಳು. ನ್ಯಾ. ದತ್ತು ಅವರ ಪತ್ನಿ ಗಾಯತ್ರಿ ಅವರು ಬಡ ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಚಾರಿಟಬಲ್‌ ಟ್ರಸ್ಟ್‌ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT