ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕೇತಿಕ ಇಂಗಿತದಿಂದ ಬಿಕ್ಕಟ್ಟು ಬಗೆಹರಿಯದು

ಭಾರತ– ಪಾಕಿಸ್ತಾನ ಸಂಬಂಧ ವೃದ್ಧಿಗೆ ನೀತಿ ಅಗತ್ಯ: ಹಖಾನಿ ಅಭಿಮತ
Last Updated 26 ಜುಲೈ 2016, 20:08 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಜತೆಗಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಇಂಗಿತವನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದ ಮಾತ್ರಕ್ಕೆ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಬಗೆಹರಿಯದು.  ಇದಕ್ಕಾಗಿ ಬಲವಾದ ನೀತಿ ರೂಪಿಸಬೇಕಾದ ಅಗತ್ಯ ಇದೆ’ ಎಂದು ಅಮೆರಿಕದ  ಹಡ್ಸನ್‌ ಇನ್‌ಸ್ಟಿಟ್ಯೂಟ್‌ನ ದಕ್ಷಿಣ ಮತ್ತು ಕೇಂದ್ರೀಯ ಏಷ್ಯಾ ವಿಭಾಗದ ನಿರ್ದೇಶಕ  ಹುಸೇನ್‌ ಹಖಾನಿ ಅಭಿಪ್ರಾಯಪಟ್ಟರು.

ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ಹಾಗೂ ಜಗ್ಗರ್‌ನಾಟ್‌ ಬುಕ್ಸ್‌ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ  ‘ಭಾರತ–ಪಾಕಿಸ್ತಾನ: ನಾವಿಬ್ಬರು ಸ್ನೇಹಿತರಂತಿರಲು ಸಾಧ್ಯವಿಲ್ಲವೇ?’ ಎಂಬ ಸಂವಾದದಲ್ಲಿ ಮಾತನಾಡಿದರು.

‘ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ತೋರಿಸಿದ್ದು ಸಾಂಕೇತಿಕ ಇಂಗಿತವನ್ನು ಮಾತ್ರ. ಅದಕ್ಕೆ ಅವರು ಪೂರ್ವಸಿದ್ಧತೆ ಮಾಡಿಕೊಂಡಿರ ಲಿಲ್ಲ. ಪಠಾಣ್‌ಕೋಟ್‌ ಘಟನೆ  ಬಳಿಕ ಎರಡೂ ದೇಶಗಳ ನಡುವಿನ ಮಾತುಕತೆ  ಸಂಪೂರ್ಣ ಸ್ಥಗಿತಗೊಂಡಿದೆ.  69 ವರ್ಷ ಗಳಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು  69 ದಿನಗಳಲ್ಲಿ ಸಾಧಿಸುತ್ತೇವೆ ಎಂದು ಭಾವಿಸುವುದೇ ಮೂರ್ಖತನ’ ಎಂದು ಅಮೆರಿಕದಲ್ಲಿ ಪಾಕಿಸ್ತಾನದ ರಾಯಭಾರಿ ಯಾಗಿದ್ದ ಹಖಾನಿ ಹೇಳಿದರು.

‘ಎರಡು ದೇಶಗಳೂ ತಮ್ಮ ಇತಿಮಿತಿಗಳನ್ನು ಹಾಗೂ ದೌರ್ಬಲ್ಯಗಳನ್ನು ಅರಿತುಕೊಂಡು ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಬಗ್ಗೆ ಗಮನ ಹರಿಸಬೇಕು’ ಎಂದು ಅವರು ಸಲಹೆ ನೀಡಿದರು.

ಕಾಶ್ಮೀರದ ಅಶಾಂತಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಸಮಸ್ಯೆಗೆ ಪಾಕಿಸ್ತಾನದ ಕುಮ್ಮಕ್ಕು ಕಾರಣ ಎಂಬ ಸಂಕುಚಿತ ದೃಷ್ಟಿಯಿಂದ ನೋಡುವುದು ಸರಿಯಲ್ಲ.  ಅಲ್ಲಿ ಶಾಂತಿ ನೆಲೆಸುವಂತೆ ಮಾಡಬಹುದಾದ ಎಲ್ಲಾ ಸಾಧ್ಯತೆಗಳನ್ನು ಭಾರತ ಮೊದಲು ಕಂಡುಕೊಳ್ಳಬೇಕು. ಭಯೋತ್ಪಾದನೆ ಹಾಗೂ ಸೇನಾ ಕಾರ್ಯಾಚರಣೆ ನಡುವೆ ಕಾಶ್ಮೀರದ ಜನತೆ ನಲುಗಿ ಹೋಗಿದ್ದಾರೆ. ಅವರು ಬಯಸುವುದು ಶಾಂತಿಯನ್ನು’ ಎಂದರು.

‘ಪಾಕಿಸ್ತಾನವನ್ನು ಅವಿಭಕ್ತ ಕುಟುಂಬದಿಂದ ಹೊರಗೆ ಬಂದು ಸ್ವತಂತ್ರವಾಗಿ ಬದುಕುವ ಪುಟ್ಟ ಕುಟುಂಬ ಎಂದು ಭಾವಿಸಿ ನಂಟನ್ನು ಮುಂದು ವರಿಸಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಭಾರತದಲ್ಲಿ ಗಾಂಧೀಜಿಯ ಸ್ಮಾರಕಗಳಿವೆ. ರಸ್ತೆಗಳಿಗೆ ಅವರ ಹೆಸರು ಇಡಲಾಗಿದೆ. ಆದರೆ ಅವರ ಆದರ್ಶಗಳನ್ನು ಪಾಲಿಸುವವರು ಕಾಣಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಇಸ್ಲಾಮಾಬಾದ್‌ನಲ್ಲಿರುವ  ಹೈಕಮಿ ಷನ್‌ ಸಿಬ್ಬಂದಿ  ಪಾಕಿಸ್ತಾನದ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂದು  ಭಾರತ ಸರ್ಕಾರ ಸೂಚನೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಇಂತಹ ಆಯ್ದ ಸುದ್ದಿಯನ್ನು  ಆಗಾಗ ಸೋರಿಕೆ ಮಾಡಲಾಗುತ್ತದೆ.  ಅಲ್ಲಿನ ಶಾಲೆಗೆ ಮಕ್ಕಳನ್ನು ಸೇರಿಸಬಾರದು ಎಂಬ ನಿರ್ಧಾರವನ್ನು ಮೊದಲು ಕೈಗೊಂಡಿದ್ದು ಅಮೆರಿಕ. ನಂತರ ಇಂಗ್ಲೆಂಡ್‌  ಈ ನೀತಿಯನ್ನು ಅನುಸರಿಸಿತು. ಈಗ ಭಾರತವೂ ಇಂತಹ ಧೋರಣೆ ತಳೆದಿದೆ ಅಷ್ಟೇ’ ಎಂದರು.

‘ಪಾಕಿಸ್ತಾನದಲ್ಲಿ ಈಗಲು ಮೂರನೇ ಒಂದರಷ್ಟು ಮಕ್ಕಳು ಶಾಲೆಯ ಮೆಟ್ಟಿ ಲನ್ನೇ ಕಂಡಿಲ್ಲ. ವಾಸ್ತವವನ್ನು ಬೋಧಿ ಸುವ ಬದಲು ಪೂರ್ವಾಗ್ರಹ ಪೀಡಿತ ಶಿಕ್ಷಣ ನೀಡಲಾಗುತ್ತಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಗೆ ತೆರೆದುಕೊಳ್ಳದ ಹೊರತು ಪಾಕಿಸ್ತಾನದ ಏಳಿಗೆ ಸಾಧ್ಯವಿಲ್ಲ’ ಎಂದರು.

ನಿವೃತ್ತ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್‌ ಮಾತನಾಡಿ, ‘70 ವರ್ಷಗಳಲ್ಲಿ ನಡೆದಿರುವುದೆಲ್ಲವೂ ಇತಿಹಾಸ. ಅವುಗಳನ್ನು ಮತ್ತೆ ಬದಲಿ ಸಲು ಸಾಧ್ಯವಿಲ್ಲ. ಈ ವಾಸ್ತವವನ್ನು ಮನಸ್ಸಿನಲ್ಲಿಟ್ಟುಕೊಂಡು ಉಭಯ ರಾಷ್ಟ್ರ ಗಳು ಸಂಬಂಧ ಸುಧಾರಣೆಗೆ  ಪ್ರಯತ್ನ ಮುಂದುವರಿಸಬೇಕು. ಮಾತುಕತೆಯನ್ನೇ  ಸ್ಥಗಿತಗೊಳಿಸುವುದು ಸರಿಯಲ್ಲ’ ಎಂದರು.

‘ಸಂಬಂಧ ಸುಧಾರಿಸಲು  ನಡೆಯುವ ಸಣ್ಣ ಪುಟ್ಟ ಪ್ರಯತ್ನಗಳನ್ನು ಮಾಧ್ಯಮಗಳು ವೈಭವೀಕರಿಸುತ್ತವೆ. ಇದೂ ಸರಿಯಲ್ಲ. ಇದೊಂದು ಸಹಜ ಪ್ರಕ್ರಿಯೆ ಆಗಬೇಕು. ಭಾವನಾತ್ಮಕವಾಗಿ ವಿಚಾರ ಮಾಡುವುದಕ್ಕಿಂತ ವಾಸ್ತವದ ನೆಲೆಯಲ್ಲಿ ಪ್ರಯತ್ನಗಳು ನಡೆಯಬೇಕು’ ಎಂದರು.  ಲೇಖಕ ಆಕಾರ್‌ ಪಟೇಲ್‌ ಸಂವಾದ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT