ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಗತ್ಯದ ಸಂತೃಪ್ತಿಗೆ...

ಅಂಕುರ, -8 , ಸೃಷ್ಟಿಕ್ರಿಯೆಯ ಗತಿವಿಧಿ ವಿವರಿಸಲಿದ್ದಾರೆ ಆ್ಯಂಡ್ರೊಲಜಿಸ್ಟ್‌
Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪುರುಷರ ಲೈಂಗಿಕ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ತೊಂದರೆ ಎಂದರೆ ಶೀಘ್ರ ಸ್ಖಲನ. ಇದು ನೆಗಡಿಯಷ್ಟೇ ಸಹಜವಾಗಿ, ನೆಗಡಿಗಿಂತ ಹೆಚ್ಚಾಗಿ ಕಾಡುತ್ತದೆ. ಶೀಘ್ರ ಸ್ಖಲನಕ್ಕೆ ಕಾರಣ ಹುಡುಕಿ, ಚಿಕಿತ್ಸೆ ನೀಡಿದರೆ ಪರಿಹಾರವಂತೂ ಖಂಡಿತ ಸಾಧ್ಯವಿದೆ.

ನಿಮ್ಮ ಸಂಗಾತಿಯನ್ನು ಪ್ರವೇಶಿಸುವ ಮುನ್ನ ಅಥವಾ ಪ್ರವೇಶಿಸಿದೊಡನೆಯೇ ಸುಖದ ಪರಾಕಾಷ್ಠೆಯನ್ನು ತಲುಪುವ ಮುನ್ನವೇ ಸ್ಖಲಿಸುವುದಕ್ಕೆ ಶೀಘ್ರ ಸ್ಖಲನವೆಂದು ವ್ಯಾಖ್ಯಾನಿಸಲಾಗಿದೆ. ಸ್ಖಲನದ ಮೇಲೆ ನಿಯಂತ್ರಣವಿರದೇ ಇರುವುದು, ಅದನ್ನು ತಡೆಯಲಾಗದೇ ಪುರುಷರಲ್ಲಿ ಹುಟ್ಟುವ ಕೀಳರಿಮೆಯು ಶೀಘ್ರ ಸ್ಖಲನದ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತವೆ.

ಸ್ಖಲನ ನಿಯಂತ್ರಣವೆಂದರೆ, ಲೈಂಗಿಕತೆಯ ಕೊನೆಯ ಹಂತದಲ್ಲಿಯೂ ಸ್ವಯಂ ನಿಯಂತ್ರಿಸಿಕೊಳ್ಳುವುದು. ಲೈಂಗಿಕ ಪ್ರಕ್ರಿಯೆ ಪೂರ್ಣಗೊಳ್ಳಲಿ ಎಂದು ಸಂಗಾತಿಗೂ ಎನಿಸುವವರೆಗೂ ಮುಂದುವರಿಸುವುದಕ್ಕೆ ಸ್ಖಲನ ನಿಯಂತ್ರಣವೆನ್ನಲಾಗುತ್ತದೆ. ಕೆಲವು ಪುರುಷರು ತಮ್ಮ ಸಂಗಾತಿಯನ್ನು ತೃಪ್ತಿ ಪಡಿಸಲು 3–7 ನಿಮಿಷಗಳವರೆಗೂ ತಮ್ಮನ್ನೇ ತಾವು ನಿಯಂತ್ರಿಸಬಲ್ಲರು.

ಶೀಘ್ರಸ್ಖಲನ ಆಗುವವರಿಗೆ ಇಂಥ ನಿಯಂತ್ರಣ ಅಸಾಧ್ಯವೆಂದೇ ಹೇಳಬಹುದು. ಉದ್ರೇಕದ ಪರಮಹಂತವನ್ನು ತಲುಪಿದೊಡನೆಯೇ ಅವರಿಗಿಷ್ಟ ಇರಲಿ ಬಿಡಲಿ, ಸ್ಖಲಿಸುವುದು ಅವರ ಅನಿವಾರ್ಯವಾಗಿರುತ್ತದೆ. ಬಹುತೇಕ ಪುರುಷರು ತಮ್ಮ ಹಸ್ತಮೈಥುನ ಬಗ್ಗೆ ಹೊಂದಿರುವ ಕೀಳರಿಮೆಯಿಂದಾಗಿ ಬಲುಬೇಗ ಇಂಥ ಸ್ಖಲನಕ್ಕೆ ಒಳಗಾಗುತ್ತಾರೆ. ಮೊದಲ ವಿಫಲ ಯತ್ನವು ಅವರಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆಯೇ ಆತಂಕ ಮೂಡಿಸುತ್ತದೆ. ಕ್ರಮೇಣ ಈ ಆತಂಕ ಒತ್ತಡವಾಗಿ ಪರಿವರ್ತನೆ ಆಗುತ್ತದೆ.

ಆತಂಕ ಮತ್ತು ಒತ್ತಡಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೂ ವೈಫಲ್ಯದ ಭಯದಿಂದಾಗಿ ಸ್ಖಲನದ ಮೇಲೆ ನಿಯಂತ್ರಣವೇ ಇರದಂತಾಗುತ್ತದೆ. ಈ ಆತಂಕದ ಸಮಯದಲ್ಲಿ ಪುರುಷರ ದೇಹವು ಲೈಂಗಿಕವಾಗಿ ಸ್ಪಂದಿಸುವುದಿಲ್ಲ. ಅಡ್ರನಲಿನ್‌ ಹಾರ್ಮೋನು ಸ್ರವಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಸ್ರವಿಸುವ ಈ ಹಾರ್ಮೋನ್‌ನಿಂದಾಗಿ ಶಿಶ್ನದೊಳಗ ರಕ್ತ ಸರಬರಾಜು ಕಡಿಮೆಯಾಗುತ್ತದೆ. ಜನನಾಂಗಕ್ಕೆ ರಕ್ತ ಸರಬರಾಜು ಮಾಡುವುದರಲ್ಲಿ ಏರುಪೇರು ಆದೊಡನೆ ಉದ್ರೇಕ ಕಳೆದುಕೊಳ್ಳುವಂತಾಗುತ್ತದೆ. ಇದರಿಂದಾಗಿ ಲೈಂಗಿಕ ವಿಶ್ವಾಸವನ್ನೇ ಪುರುಷರು ಕಳೆದುಕೊಳ್ಳುವಂತಾಗುತ್ತದೆ.

ನಿಮ್ಮ ಸಂಗಾತಿಯೊಡನೆ ಸೇರುವ ಮುನ್ನವೇ ಅಥವಾ ಸೇರುವ ಅವಧಿಯಲ್ಲಿಯೇ, ಸೇರಿದೊಡನೆಯೇ ಒಂದೇ ನಿಮಿಷದಲ್ಲಿ ಸ್ಖಲನ ಕಂಡು ಬಂದರೆ ಸುದೀರ್ಘ ಕಾಲದ ಶೀಘ್ರ ಸ್ಖಲನ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಸಂಗಾತಿಯಲ್ಲಿ ಅತೃಪ್ತಿ ಮನೆಮಾಡುತ್ತದೆ. ಪುರುಷರಲ್ಲಿ ಕಂಡು ಬರುವ ಈ ಸಮಸ್ಯೆಗೆ ಎರಡು ಮುಖ್ಯ ಆಯಾಮಗಳಿವೆ. ಸಾಮಾನ್ಯವಾಗಿ ಕಂಡು ಬರುವುದು ಮನೋಸಂಬಂಧಿ ಕಾರಣ. ಇದಕ್ಕೆ ಲೈಂಗಿಕ ಕ್ರಿಯೆಯಲ್ಲಿ ಅನುಭವ ಇರದಿರುವುದು, ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿರುವಾಗ ಕಾಡುವ ಆತಂಕ, ತಾನು ನಿಭಾಯಿಸಬಲ್ಲೆನೆ ಎಂಬ ಒತ್ತಡಗಳು, ಅತಿವಿರಳವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಇದಕ್ಕೆಲ್ಲ ಕಾರಣವಾಗಿರುತ್ತವೆ. ಇದಷ್ಟೇ ಅಲ್ಲದೇ ಪುರುಷ ಆಂತರಿಕ ಸಮಸ್ಯೆಗಳೂ ಸ್ಖಲನ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತವೆ.

ಇನ್ನೊಂದು ಮುಖ್ಯ ಕಾರಣವೆಂದರೆ ಭೌತಿಕ ಕಾರಣ. ಮಧುಮೇಹ, ಪ್ರೊಸ್ಟೇಟ್‌ ಸಮಸ್ಯೆ, ಮೂತ್ರನಾಳ ಸಂಬಂಧಿ ಸಮಸ್ಯೆ, ಜನನಾಂಗದಲ್ಲಿರುವ ಅತಿಸೂಕ್ಷ್ಮ ಗ್ರಂಥಿಗಳು, ಆ ಕ್ಷಣದ ಉದ್ರೇಕದಲ್ಲಿ ಅತೀವ ವೇಗದಲ್ಲಿ ಸ್ಪಂದಿಸುವುದು ಇವೆಲ್ಲವೂ ಕಾರಣಗಳಾಗುತ್ತವೆ.

ಶೀಘ್ರ ಸ್ಖಲನಕ್ಕೂ ನಮ್ಮ ನರವ್ಯೂಹದ ಕಾರ್ಯವೈಖರಿಗೂ ನಿಕಟ ಸಂಬಂಧವಿದೆ ಎಂದು ಸಂಶೋಧಕರು ಹೇಳುತ್ತಾರೆ. ದೈಹಿಕ

ಕಾರ್ಯ ನಿರ್ವಹಿಸಲು ನರವ್ಯೂಹಕ್ಕೆ ಸಂದೇಶ ಕಳುಹಿಸುವ ಹಲವಾರು ಸಂದೇಶವಾಹಕಗಳ ಮಟ್ಟದಲ್ಲಿ ಆಗುವ ಬದಲಾವಣೆಗಳೂ ಸ್ಖಲನಕ್ಕೆ ಸಣ್ಣ ಪ್ರಮಾಣದಲ್ಲಿಯಾದರೂ  ಕಾರಣವಾಗಿರುತ್ತವೆ.

ನಮ್ಮ ಸಮಾಜದಲ್ಲಿ ಪುರುಷರು ತಮ್ಮ ಪೌರುಷವನ್ನು ಸಾಮಾನ್ಯವಾಗಿ ತಮ್ಮ ಉದ್ರೇಕದಿಂದಲೇ ಮೌಲ್ಯಮಾಪನ ಮಾಡಿಕೊಳ್ಳುತ್ತಾರೆ. ಉದ್ರೇಕ ಮತ್ತು ತಮ್ಮ ದೀರ್ಘಾವಧಿಯ ದಿಟ್ಟತನ (ಸ್ಟೇಯಿಂಗ್‌ ಪವರ್‌)ಅನ್ನೇ ಗಮನದಲ್ಲಿಟ್ಟುಕೊಂಡು ಪೌರುಷವನ್ನು ಅಳೆಯುತ್ತಾರೆ. ನಿಯಂತ್ರಣ ಶಕ್ತಿಯ ಬಗ್ಗೆ ಆತ್ಮವಿಶ್ವಾಸವಿಲ್ಲದವರು, ತಮ್ಮ ಬಗ್ಗೆಯೇ ತಮಗೆ ವಿಶ್ವಾಸವಿಲ್ಲದವರು ತಮ್ಮಲ್ಲಿ ಕೊರತೆಯಿದೆ ಎಂದೇ ಭಾವಿಸುತ್ತಾರೆ. ಈ ಭಾವನೆ ಅವರ ಲೈಂಗಿಕ ಕ್ರಿಯೆಗಳ ಮೇಲೆ ಖಂಡಿತ ಪರಿಣಾಮ ಬೀರಬಲ್ಲದು.

ಪ್ರಣಯದ ಸಂಬಂಧಗಳಲ್ಲಿ ಶೀಘ್ರ ಸ್ಖಲನವಿದ್ದರೆ ಅದು ಒಳ್ಳೆಯದಲ್ಲ. ಕೇವಲ ಮಹಿಳೆ ಅವರನ್ನು ತಿರಸ್ಕರಿಸಬಹುದು ಎನ್ನುವ ದೃಷ್ಟಿಯಿಂದಲ್ಲ. ಆದರೆ ಶೀಘ್ರ ಸ್ಖಲನದಿಂದಾಗಿ ಪುರುಷರಲ್ಲಿಯೇ ಹಲವಾರು ಸಂಕೀರ್ಣ ಭಾವಗಳು ಹುಟ್ಟಿರುತ್ತವೆ.

ಆದರೆ ಅವರಲ್ಲಿಯೇ ಕೆಲವೊಮ್ಮೆ ಅವರಿಗೆ ಅರಿವಿಲ್ಲದೇ ಲೈಂಗಿಕಕ್ರಿಯೆಯಲ್ಲಿ ತಮ್ಮನ್ನೇ ತಾವು ತಡೆಯಲರಾಂಭಿಸುತ್ತಾರೆ.
ನಂತರ ಅಂಥವರು ಅತೃಪ್ತಿಯ, ಕಹಿಯಾದ ಜೀವನ ನಡೆಸುತ್ತಾರೆ. 
ಶೀಘ್ರ ಸ್ಖಲನಕ್ಕೆ ಒಳಗಾಗುವ ಪುರುಷರ ಸಂಗಾತಿಗಳು ಹೆಚ್ಚಾಗಿ ದೂರುವುದು ಅವರ ಸ್ಖಲನದ ಬಗ್ಗೆ ಅಲ್ಲ. ಆದರೆ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಗಂಡಸರ ಬಗ್ಗೆ ಕಾಳಜಿಯನ್ನೇ ವ್ಯಕ್ತಪಡಿಸುತ್ತಾರೆ.   

ಸಹಜವಾಗಿಯೇ ಇಂಥ ಅಸಂತುಷ್ಟಿಯೊಂದಿಗೆ ಅವರ ಸಂಗಾತಿ ನಿರ್ಮಿಸುವ ಒತ್ತಡಗಳಿಂದಾಗಿ ಅವರಿಬ್ಬರ ನಡುವಿನ ಸಂಬಂಧ ಕೆಡುತ್ತಲೇ ಹೋಗುತ್ತದೆ. ಇಂಥ ಅಸಂತುಷ್ಟಿಯ ಆತಂಕದಿಂದಾಗಿ ಅವರಿಬ್ಬರೂ ಲೈಂಗಿಕಕ್ರಿಯೆಯಿಂದಲೇ ದೂರವುಳಿಯಲಾರಂಭಿಸುತ್ತಾರೆ. 
ವ್ಯಕ್ತಿಗೆ ತನ್ನ ಸಾಮರ್ಥ್ಯದ ಬಗ್ಗೆ ತನಗೇ ಸಂಶಯ ವ್ಯಕ್ತವಾದಾಗ ಅಥವಾ ಸಂಗಾತಿಯು ಆ ಬಗ್ಗೆ ಕಾಳಜಿ ವ್ಯಕ್ತ ಪಡಿಸಿದಾಗ ತಜ್ಞರನ್ನು ಕಾಣುವುದು ಒಳಿತು. ಶೀಘ್ರಸ್ಖಲನ ಸಮಸ್ಯೆಯೇ ಎಂದು ಅರಿಯಲು ಇರುವ ಏಕೈಕ ಮಾರ್ಗ ಇದು.

ಮಾಹಿತಿಗೆ: info@manipalankur.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT