ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ರಾಷ್ಟ್ರೀಯತೆಯೊಂದಿಗೆ ಮುಖಾಮುಖಿ

ಗೋವು ಕುರ್ಚಿಗಳನ್ನು ಅಲ್ಲಾಡಿಸುತ್ತಿದೆ, ಅದು ಮಾದರಿಗಳನ್ನು ಕೂಡ ಅಲ್ಲಾಡಿಸಬಹುದು
Last Updated 21 ಆಗಸ್ಟ್ 2016, 19:58 IST
ಅಕ್ಷರ ಗಾತ್ರ

ಈ ತಿಂಗಳ 15ರಂದು ಗುಜರಾತಿನ ಊನಾದಲ್ಲಿ ದಲಿತರು ತೆಗೆದುಕೊಂಡ ನಿರ್ಣಯಗಳು  ಒಂದು  ಸಾಂಸ್ಕೃತಿಕ ರಾಷ್ಟ್ರೀಯತೆಗೆ ಬಂದ ಪ್ರತಿರೋಧವೇ ಎಂಬ ಪ್ರಶ್ನೆಯೊಂದಿಗೆ ಈ ಲೇಖನವನ್ನು ಆರಂಭಿಸುತ್ತೇನೆ. ‘ದನದ ಬಾಲ ನಿಮಗಿರಲಿ, ನಮ್ಮ  ಭೂಮಿ ನಮಗೆ  ನೀಡಿ’ ಎನ್ನುವಲ್ಲಿ ಈ ಪ್ರತಿರೋಧ ವ್ಯಕ್ತವಾಗುತ್ತಿದೆಯೆ?  ಊನಾ  ಘಟನೆ ಮೇಲ್ನೋಟಕ್ಕೆ ದಲಿತರ ಮೇಲಿನ ದೌರ್ಜನ್ಯವನ್ನು ಪ್ರತಿಬಿಂಬಿಸುತ್ತದೆ.

ವಾಸ್ತವ ಅದರಾಚೆ ಇದೆ. ಸತ್ತ ದನವನ್ನು ಸುಲಿದ ಕಾರಣಕ್ಕಾಗಿ ನಾಲ್ವರು ದಲಿತರನ್ನು  ಥಳಿಸಿದಾಗ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಾರದು ಎಂಬ ನಂಬಿಕೆ ಇದರ ಹಿಂದೆ  ಕೆಲಸ ಮಾಡುತ್ತಿತ್ತು. ಯಾವಾಗ ತೀವ್ರ ಪ್ರತಿರೋಧಗಳು ಬರಲು ಆರಂಭವಾಯಿತೋ, ಸರ್ಕಾರ ಎಚ್ಚೆತ್ತುಕೊಂಡಿತು. ಗುಜರಾತಿನ ಮುಖ್ಯಮಂತ್ರಿಯನ್ನೇ ಬದಲಾಯಿಸಲಾಯಿತು.

ವಾಸ್ತವವಾಗಿ ಗೋವು ಸರ್ಕಾರದ ಕುರ್ಚಿಯನ್ನು ಅಲ್ಲಾಡಿಸಿತ್ತು. ಅದು ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ, ಗುಜರಾತ್, ಪಂಜಾಬ್‌ಗಳ ಕುರ್ಚಿಯನ್ನು ಅಲ್ಲಾಡಿಸಬಹುದೆಂಬ ಹೆದರಿಕೆ ಇಲ್ಲಿ ಕಾಡುತ್ತಿತ್ತು. ಮುಂದೆ ಅದು ಇಡೀ ಭಾರತವನ್ನೇ ಅಲ್ಲಾಡಿಸಬಹುದೆಂಬ ಹೆದರಿಕೆ ಇಲ್ಲಿತ್ತು. ಆದಕಾರಣ ದಲಿತರ ಪ್ರತಿರೋಧ ಸಾಮಾನ್ಯವೇನಲ್ಲ. ಇಲ್ಲಿ ಎರಡು ವಿಚಿತ್ರ ಸನ್ನಿವೇಶಗಳು ಎದುರು ಬದುರಾಗುತ್ತವೆ. ದಲಿತ ಪ್ರತಿರೋಧ ಕುರ್ಚಿಯನ್ನು ಅಲ್ಲಾಡಿಸುತ್ತದೆ, ಅಲ್ವಸಂಖ್ಯಾತರ ಪ್ರತಿರೋಧ ಕುರ್ಚಿಯನ್ನು ಗಟ್ಟಿಗೊಳಿಸುತ್ತದೆ.

ಬಲಪಂಥೀಯ ಪಕ್ಷವನ್ನು ಅಧಿಕಾರಕ್ಕೆ ತರುತ್ತದೆ. ಗೋಧ್ರಾ ಇದಕ್ಕೆ ಉತ್ತಮ ಉದಾಹರಣೆ. ವಾಸ್ತವವಾಗಿ ಇದು ಹಿಂದುತ್ವದ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಬಂದ ಪ್ರತಿರೋಧ. ಯಾಕೆಂದರೆ ಅದು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಭೂಮಿ ಸಂಬಂಧಿ ವಿಷಯಗಳನ್ನು, ಐತಿಹಾಸಿಕ ಸಾಮಾಜಿಕ ಸಂಬಂಧಗಳನ್ನು ಪ್ರಶ್ನಿಸುತ್ತಿದೆ. 

ಗೋವು, ಆಹಾರ, ಜ್ಞಾನ, ಭಾಷೆ ಇತ್ಯಾದಿಗಳ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯತೆ  ತರಲು ಯತ್ನಿಸಿದಾಗ ಅದಕ್ಕೆ ಪ್ರತಿರೋಧಗಳು ಬರುವುದು ಸಹಜ. ಈ ರಾಜಕಾರಣದಲ್ಲಿ  ಗೋವು ಒಂದು ನೆಪವಷ್ಟೆ. ಅದರ ಅಂತಿಮ ಯೋಜನೆ  ಬೇರೆ: ಎಲ್ಲರನ್ನೂ ಈ ಸಾಂಸ್ಕೃತಿಕ ರಾಷ್ಟ್ರೀಯತೆಯೊಳಗೆ ಸೇರಿಸಿ ರಾಷ್ಟ್ರವನ್ನು ನಿರ್ಮಿಸುವುದು ಇದರ ಮಹತ್ತರವಾದ ಯೋಜನೆ. ದಲಿತರ ಪ್ರತಿರೋಧ ಈ ಯೋಜನೆಗೆ ಅಡ್ಡಗಾಲು. ಅದರರ್ಥ ಈ ಯೋಜನೆ ಪೂರ್ಣ ನೆಲಕಚ್ಚಿದೆ ಎಂದರ್ಥವಲ್ಲ.

ಸಾಂಸ್ಕೃತಿಕ ರಾಜಕಾರಣದಲ್ಲಿ ಬರೇ ಸಂಸ್ಕೃತಿ ಮಾತ್ರ ಇದೆ ಅಂದರೆ ಅದು ಮಿಥ್ಯೆ, ಅದರಲ್ಲಿ ಚುನಾವಣಾ ರಾಜಕಾರಣವೂ ಇದೆ. ಆದರೆ ಅದಕ್ಕೆ ಚುನಾವಣಾ ಸೋಲು ಮಹತ್ವದ ವಿಷಯವಲ್ಲ. ರಾಷ್ಟ್ರದ ಅಧಿಕಾರವನ್ನು ಸಾಂಸ್ಕೃತಿಕ ರಾಷ್ಟ್ರೀಯತೆಯಡಿಯಲ್ಲಿ  ಹಿಡಿಯಲು ಹತ್ತು ವರ್ಷ, ಇಪ್ಪತ್ತು ವರ್ಷ ಅಥವಾ ಒಂದು ಶತಮಾನವೇ  ಕಾಯಬೇಕಾಗಬಹುದು.  ಅದಕ್ಕೆ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಒಪ್ಪಿಕೊಂಡ ವ್ಯಕ್ತಿಗಳು, ಸಮುದಾಯಗಳು ಬೇಕಾಗಿವೆ. ಇದನ್ನು ಒಪ್ಪಿಕೊಳ್ಳದ ಸಮುದಾಯಗಳು ಮತ್ತೆ ಮತ್ತೆ ದೌರ್ಜನ್ಯಕ್ಕೆ ಒಳಗಾಗುತ್ತವೆ. ದಲಿತರು ಇದೇ ಸಾಲಿನಲ್ಲಿ ನಿಲ್ಲುತ್ತಾರೆ.

ಸಾಂಸ್ಕೃತಿಕ ರಾಷ್ಟ್ರೀಯತೆಯ ಚರ್ಚೆಯ ಸಂದರ್ಭದಲ್ಲಿ  ರಾಷ್ಟ್ರೀಯ ಹೋರಾಟ ನೆನಪಾಗುವುದು ಸಹಜ. ಸಾಂಸ್ಕೃತಿಕ ವಿಷಯಗಳು ರಾಷ್ಟ್ರೀಯ ಹೋರಾಟದ ಭಾಗವಾದಾಗ ಒಂದೋ ಅದಕ್ಕೆ ಜಾತ್ಯತೀತತೆಯ ನೆಲೆಗಟ್ಟುಗಳು ಸಿಕ್ಕಿದವು, ಇಲ್ಲವೇ ಅದು ವೈಚಾರಿಕವಾಗಿ ಮತ(ಧರ್ಮ)ಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಯಿತು.

ದುರಂತವೆಂದರೆ ಅದು ರಾಷ್ಟ್ರೀಯ ಹೋರಾಟಕ್ಕೆ ಕೋಮುವಾದದ ಆಯಾಮ ನೀಡಿತ್ತು.  ಅಂದಿನ ಸಂದರ್ಭದಲ್ಲಿ ನಾಲ್ಕು ಕಥನಗಳು, ನಾಲ್ಕು ಸಾಂಸ್ಕೃತಿಕ ರಾಷ್ಟ್ರೀಯತೆಯ ಧಾರೆಗಳು  ಇದ್ದವು. ಬಾಲಗಂಗಾಧರ ತಿಲಕ್, ಅರವಿಂದ ಘೋಷ್, ಲಾಲಾ ಲಜಪತರಾಯ್, ಬಿಪಿನ್ ಚಂದ್ರಪಾಲ್  ಮೊದಲಾದವರು ರಾಷ್ಷ್ರೀಯ ಹೋರಾಟಗಾರರೆಂದು ಗುರುತಿಸಿಕೊಂಡರೂ, ಅವರ ಕೊಡುಗೆ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಪುಷ್ಟಿ ನೀಡಿದ್ದು ಸಹಜ.

ವಿಚಿತ್ರವೆಂದರೆ  ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕತೆಯನ್ನು ಅವರು ಜೊತೆ ಜೊತೆಯಾಗಿ ಕೊಂಡು ಹೋದರು. ಇಲ್ಲಿ ಮುಖ್ಯವೆನಿಸುವುದು ತಿಲಕ್‌ರ ಕೊಡುಗೆಗಳಾದ ಸಾರ್ವಜನಿಕ ಗಣೇಶ, ಶಿವಾಜಿಯ ಹುಟ್ಟುಹಬ್ಬ. ಘೋಷ್‌ರ ಗೀತಾ ಮತ್ತು ಸನಾತನ ಧರ್ಮದ ಕುರಿತಾದ ವ್ಯಾಖ್ಯಾನ, ದಯಾನಂದ ಸರಸ್ವತಿಯವರ ‘ಶುದ್ಧಿ’ ಚಳವಳಿ, ವಿವೇಕಾನಂದರ ಇತಿಹಾಸದ ಹಾಗೂ ಸಂಸ್ಕೃತದ ಪ್ರೇಮ.

ಇಲ್ಲಿ ಕಾಂಗ್ರೆಸ್ಸಿಗರಾದ ಕೆ.ಎಂ. ಮುನ್ಶಿಯವರ ಸಂಸ್ಕೃತದ ಕುರಿತಾದ ಪ್ರೀತಿ ಹಾಗೂ ಇತಿಹಾಸ ಪುನರ್‌ರಚನೆಗಾಗಿ ಸ್ಥಾಪಿಸಿದ   ಭಾರತೀಯ ಇತಿಹಾಸ ಸಮಿತಿ ಬಹಳ ಮುಖ್ಯ. ಈ ಯೋಜನೆಯನ್ನು ಬೆಂಬಲಿಸುವ ಒಂದು ಚಿಂತಕರ ಗುಂಪೇ ಇತ್ತು. ರಾಧಾಕುಮುದ್ ಮುಖರ್ಜಿ, ಆರ್.ಸಿ. ಮಜುಮ್ದಾರ್ ಇದರಲ್ಲಿ ಪ್ರಮುಖರು. ಅವರು ರಾಷ್ಟ್ರೀಯ ಪರಿಕಲ್ಪನೆಯನ್ನು ಋಗ್ವೇದದಲ್ಲಿ, ಸಂಸ್ಕೃತ ಭಾಷೆಯಲ್ಲಿ, ಪುಣ್ಯಕ್ಷೇತ್ರದಲ್ಲಿ, ಬ್ರಹ್ಮವರ್ತದಲ್ಲಿ, ಸರಸ್ವತಿ ನದಿಯ ಮೂಲದಲ್ಲಿ ಹುಡುಕಿದರು, ಆ ಸಾಂಸ್ಕೃತಿಕ ರಾಷ್ಟ್ರೀಯತೆಯಲ್ಲಿ ಪ್ರಾಚೀನ ಇತಿಹಾಸದ ಹುಡುಕಾಟವಿತ್ತು, ಸಂಸ್ಕೃತ ಭಾಷೆಯ ಪ್ರೀತಿ ಇತ್ತು, ವೈದಿಕ ನಾಗರಿಕತೆಯ ನಿರ್ಮಿತಿ ಇತ್ತು,  ಕಳೆದು ಹೋದ ಗತವೈಭವದ ನೆನಪುಗಳಿದ್ದವು.

ವಿಚಿತ್ರವೆಂದರೆ ಇದೇ ರಾಷ್ಟ್ರೀಯವಾದಿ ತಜ್ಞರು ಬ್ರಿಟಿಷ್ ಚಿಂತಕ ಜೆ.ಎಸ್. ಮಿಲ್ ಬರೆದ ಇತಿಹಾಸದ ಕ್ರಮವನ್ನು ಅಳವಡಿಸುತ್ತಾ ಹೋದರು. ಅದು ಕೋಮುವಾದಿ ಇತಿಹಾಸ ಕ್ರಮವೂ ಆಗಿತ್ತು.  ಇತಿಹಾಸವನ್ನು ಮೂರು ಭಾಗಗಳಾಗಿ ಮಿಲ್ ಗುರುತಿಸುತ್ತಾನೆ. ಮೊದಲನೆಯದು ಹಿಂದೂ ಇತಿಹಾಸ, ಎರಡನೆಯದು ಮುಸ್ಲಿಂ ಇತಿಹಾಸ ಹಾಗೂ ಕೊನೆಯದು ಬ್ರಿಟಿಷ್ ಇತಿಹಾಸ.

ಈ ರೀತಿಯ ಇತಿಹಾಸ ಓದುವ ಕ್ರಮ ಕಳೆದ ಕೆಲವು ದಶಕಗಳ ಕಾಲ ಜಾರಿಯಲ್ಲಿತ್ತು. ಈ ಸಂದರ್ಭದಲ್ಲಿ ಸರ್ದಾರ್ ಪಟೇಲರನ್ನು ಎಲ್ಲಿ ಗುರುತಿಸಬೇಕೆಂಬ ಜಿಜ್ಞಾಸೆ ಬರುವುದು ಸಹಜ. ಅವರು ಕೂಡ ಈ ಎಲ್ಲರೂ ಕಲ್ಪಿಸಿದ  ರಾಷ್ಟ್ರೀಯತೆಯಿಂದ ವಿಭಿನ್ನರಾಗಿರಲಿಲ್ಲವೆಂದೇ ಹೇಳಬೇಕು. ಜಿನ್ನಾ ಕೂಡ ಇದೇ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ದ್ವಿರಾಷ್ಟ್ರ ಸಿದ್ಧಾಂತ ಸಾಂಸ್ಕೃತಿಕತೆಯ ವಿಭಿನ್ನತೆ ಮೇಲೆ ನಿಂತಿತ್ತು.

ರಾಷ್ಟ್ರೀಯತೆಯಲ್ಲಿ ಬಹು ಸಂಸ್ಕೃತಿಯನ್ನು ಹುಡುಕಿದವರು ಮತ್ತು ಅಳವಡಿಸಿದವರು ಆನಂದಕುಮಾರ ಸ್ವಾಮಿ, ಗಾಂಧಿ, ನೆಹರೂ, ಆಜಾದ್, ಎಂ.ಎನ್. ರಾಯ್ ಮೊದಲಾದವರು. ಮೊಘಲರ ಕಾಣಿಕೆಗಳಾದ ತಾಜ್ ಮಹಲ್, ಕಲೆ, ಇತ್ಯಾದಿಗಳಿಲ್ಲದ ಭಾರತವನ್ನು ಕಲ್ಪಿಸಿಕೊಳ್ಳಲೇ  ಆನಂದಕುಮಾರ ಸ್ವಾಮಿಯವರಿಗೆ  ಅಸಾಧ್ಯವಾಗಿತ್ತು.

ರಾಯ್‌ಗೆ ಪ್ರಾಚೀನ ಭಾರತ ಒಂದು  ಬಹುಸಂಸ್ಕೃತಿಯ ದೇಶ. ನೆಹರೂಗೆ ಭಾರತದ ರಾಷ್ಟ್ರೀಯತೆ ನಿಂತಿರುವುದೇ ಬಹು ಸಂಸ್ಕೃತಿಯಲ್ಲಿ. ಇದೇ ಕಲ್ಪನೆ ಆಜಾದ್‌ಗೆ ಇತ್ತು.ಅಂಬೇಡ್ಕರ್, ಪೆರಿಯಾರ್ ಮೊದಲಾದವರಿಗೆ ಪರ್ಯಾಯ ಸಂಸ್ಕೃತಿಯೇ ರಾಷ್ಟ್ರೀಯತೆಯ ಕಥನವಾಯಿತು. ಇದನ್ನು ರಾಷ್ಟ್ರೀಯತೆಯ ಮೂರನೇ ಆಯಾಮ ಅನ್ನಬಹುದು. ಈ ಕಥನ ಮನು ಸ್ಮೃತಿಯನ್ನು, ಜಾತಿ ವ್ಯವಸ್ಥೆಯನ್ನು, ರಾಮಾಯಣದ ಕಥನಗಳನ್ನು, ಕೊನೆಯದಾಗಿ ಹಿಂದೂ ಧರ್ಮವನ್ನು ಸಾರಾಸಗಟಾಗಿ ವಿರೋಧಿಸಿತ್ತು.

ಈ ಸಾಂಸ್ಕೃತಿಕ ರಾಷ್ಟ್ರೀಯತೆಗೆ ನಿರ್ದಿಷ್ಟ ಚೌಕಟ್ಟು ನೀಡಿದ್ದು ಸಾವರ್ಕರ್. ಅದನ್ನು ಅವರು ಹಿಂದುತ್ವದಲ್ಲಿ ಪ್ರತಿಪಾದಿಸಿದರು. ವಿಚಿತ್ರವೆಂದರೆ ಅವರಿಗೆ ರಾಷ್ಟ್ರೀಯತೆಯ ಪರಿಕಲ್ಪನೆ ಸಿಕ್ಕಿದ್ದೇ ಪಾಶ್ಚಾತ್ಯ ದೇಶಗಳ ಅನುಭವದಿಂದ. ಅದನ್ನು ದೇಶೀಕರಣಗೊಳಿಸಲು ಹೋದಾಗ ಅವರಿಗೆ ಗಾಢವಾಗಿ  ಪ್ರಭಾವ ಬೀರಿದ್ದು ಬಂಟ್ಲಿ ಎಂಬ ರಾಜ್ಯಶಾಸ್ತ್ರಜ್ಞ.

ನಾಸ್ತಿಕವಾದಿ ಹಾಗೂ ಒಂದು ಕಾಲದಲ್ಲಿ ಜಾತ್ಯತೀತವಾಗಿ ಚಿಂತಿಸುತ್ತಿದ್ದ ಸಾವರ್ಕರ್ ವರ್ಷ ಕಳೆದಂತೆಲ್ಲಾ ಹಿಂದುತ್ವದ ಪ್ರತಿಪಾದಕರಾದರು. ಅವರ  ಹಿಂದುತ್ವ ನಿಂತಿರುವುದೇ ಮೂರು ಚೌಕಟ್ಟಿನ ಮೇಲೆ: ಭೌಗೋಳಿಕತೆ, ಜನಾಂಗೀಯತೆ ಹಾಗೂ ಸಂಸ್ಕೃತಿ. ಅವರ ಪ್ರಕಾರ ಭಾರತವನ್ನು ಯಾರೆಲ್ಲ ಪುಣ್ಯ ಭೂಮಿಯೆಂದು ಒಪ್ಪಿಕೊಳ್ಳುತ್ತಾರೆಯೋ ಅವರು ಈ ದೇಶದ ಪ್ರಜೆಗಳು. ಮುಸ್ಲಿಮರು ಹಾಗೂ ಕ್ರೈಸ್ತರು ಹಿಂದುತ್ವದ ಗುಣಗಳನ್ನು ಹೊಂದಿದರೂ, ಅವರು ಈ ದೇಶದ ಪ್ರಜೆಗಳಲ್ಲ. 

ಗೋಲ್ವಾಲ್ಕರ್ ಹಿಂದುತ್ವವಾದವನ್ನು ಮುಂದುವರಿಸಿದರು. ವಿಚಿತ್ರವೆಂದರೆ ಗೋಲ್ವಾಲ್ಕರ್‌ಗೆ ಭೌಗೋಳಿಕತೆಗಿಂತಲೂ ಜನಾಂಗೀಯತೆ ಬಹಳ ಮುಖ್ಯವಾಗಿತ್ತು. ಅವರ ವಾದ ಕೆಲವೊಮ್ಮೆ ಸಾವರ್ಕರ್‌ಗಿಂತ ವಿಭಿನ್ನವಾಗಿತ್ತು. ಅವರ ಪ್ರಕಾರ ಹಿಂದೂಗಳು ಹೊರಗಿನವರಲ್ಲ, ದೇಶದ ಮೂಲ ನಿವಾಸಿಗಳು.  ‘ವಿದೇಶಿ ಜನಾಂಗಗಳು ಹಿಂದೂ ಸಂಸ್ಕೃತಿ ಮತ್ತು ಭಾಷೆಯನ್ನು ಒಪ್ಪಿಕೊಳ್ಳಬೇಕು, ಹಿಂದೂ ಧರ್ಮವನ್ನು ಆರಾಧಿಸಬೇಕು, ಹಿಂದೂ ಜನಾಂಗೀಯತೆಯನ್ನು ವೈಭವೀಕರಿಸಬೇಕು. ಹಿಂದೂ ರಾಷ್ಟ್ರದ ಅಡಿಯಾಳುಗಳಾಗಿ ಜೀವಿಸಬೇಕು, ಯಾವುದೇ ಹಕ್ಕುಗಳನ್ನು ಪ್ರತಿಪಾದಿಸಬಾರದು, ಅದರಲ್ಲೂ ಪೌರತ್ವದ   ಹಕ್ಕು ಇರಕೂಡದು’ ಎಂಬುದು ಅವರ ವಾದವಾಗಿತ್ತು.

ಇವತ್ತು ಈ ನಾಲ್ಕು ಕಥನಗಳಲ್ಲಿ ಮತ್ತು ರಾಜಕಾರಣದಲ್ಲಿ ಮೂರು ಕಥನಗಳು ಮಾತ್ರ ಉಳಿದುಕೊಂಡಿವೆ. ತಿಲಕ್, ದಯಾನಂದ ಸರಸ್ವತಿ ಮೊದಲಾದವರ ಕಥನ ಇವತ್ತಿನ ಸಂದರ್ಭದಲ್ಲಿ ಹಿಂದುತ್ವದ ಒಂದೋ ಭಾಗವಾಗಿದೆ ಇಲ್ಲವೇ ಅದನ್ನು ಗಟ್ಟಿಗೊಳಿಸಲು ಅವಕಾಶವನ್ನು  ಮಾಡಿಕೊಟ್ಟಿದೆ. ಅದು ಸ್ವತಂತ್ರವಾದ ಕಥನವಾಗಿ ಉಳಿದಿಲ್ಲ. ಇದೇ ಸಂದರ್ಭದಲ್ಲಿ  ಸಾವರ್ಕರ್ ಹಿಂದುತ್ವದ ಏಕಮೇವ ವಾರಸುದಾರರು ಎಂದರೆ ಅದು ಅರ್ಧಸತ್ಯವಾಗುತ್ತದೆ. ಅದರಲ್ಲಿ ತಿಲಕರು ಇದ್ದಾರೆ, ಮುನ್ಶಿಯವರು ಇದ್ದಾರೆ, ದಯಾನಂದ ಸರಸ್ವತಿ, ಲಾಲಾ ಲಜಪತರಾಯ್, ವಿವೇಕಾನಂದ ಮೊದಲಾದವರು  ಕೂಡ ಇದ್ದಾರೆ. 

ಉಳಿದ ಎರಡು ಕಥನಗಳು- ನೆಹರೂ- ಗಾಂಧಿ  ಪ್ರೇರಿತ ಕಥನ, ಅಂಬೇಡ್ಕರ್ ಪ್ರೇರಿತ ಕಥನ- ಇದಕ್ಕೆ ಮುಖಾಮುಖಿಯಾಗುತ್ತಾ ಹೋಗುತ್ತವೆ. ಇದರರ್ಥ ಇಂದು ಮೂರು ರಾಷ್ಟ್ರೀಯತೆಯ ಕಥನಗಳು ಮುಖಾಮುಖಿಯಾಗಿವೆ: ಒಂದನೆಯದು, ಜಾತ್ಯತೀತ; ಎರಡನೆಯದು ಪರ್ಯಾಯ; ಮೂರನೆಯದು, ಹಿಂದುತ್ವ. ಊನಾ ಘಟನೆ ಈ ಮೂರು ಕಥನಗಳ ಸಂಘರ್ಷವೂ ಹೌದು.

ಈ ಕಥನಗಳಲ್ಲಿ ಮುಖಾಮುಖಿಯಾಗುವ ವಿಷಯಗಳು ಅಪಾರ: ಇತಿಹಾಸ, ಜಾತ್ಯತೀತತೆ, ಆಹಾರ ಸಂಸ್ಕೃತಿ, ರಾಷ್ಟ್ರಗೀತೆ, ಗೋವು ಮಾಂಸ, ರಾಷ್ಟ್ರಪ್ರೇಮ, ಆಜಾದಿ, ಭಾಷೆ, ಅಸ್ಮಿತೆ, ಘರ್ ವಾಪಸಿ, ಯೋಗ   ಇತ್ಯಾದಿ.  ಇತಿಹಾಸಕಾರರಾದ ರೊಮಿಲಾ ಥಾಪರ್, ಬಿಪನ್‌ ಚಂದ್ರ ಮೊದಲಾದವರ ಪುಸ್ತಕಗಳನ್ನು  ಸುಟ್ಟುಹಾಕಲು ವಾದಿಸುತ್ತಿರುವ ಅಂಶ ಇದೇ ರಾಜಕಾರಣದ ಒಂದು ಭಾಗ.

ದೆಹಲಿಯ ಔರಂಗಜೇಬ್‌ ರಸ್ತೆಯನ್ನು ಎ.ಪಿ.ಜೆ. ಅಬ್ಬುಲ್‌ ಕಲಾಂ ಹೆಸರಿನಿಂದ ಪುನರ್ ನಾಮಕರಣ ಮಾಡಿದ್ದು ಇದರ ಇನ್ನೊಂದು ರೂಪ. ರಾಜಸ್ತಾನದಲ್ಲಿ ಉರ್ದು ಲೇಖಕರ ಪಠ್ಯಗಳನ್ನು ತೆಗೆದು ಹಾಕಿದ್ದು, ಮಧ್ಯಪ್ರದೇಶದಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ನಿರಾಕರಿಸಿದ್ದು, ಎಲ್ಲಾ ಸರ್ಕಾರಿ ಸುತ್ತೋಲೆಗಳನ್ನು ಹಿಂದಿಯಲ್ಲಿ ಜಾರಿಗೊಳಿಸಿದ್ದು ಈ ರಾಜಕಾರಣದ ಭಾಗಗಳು.

ಈ ಸಂದರ್ಭದಲ್ಲಿ ಇನ್ನೊಂದು ರಾಜಕಾರಣವನ್ನು ಗಮನಿಸಬೇಕು. ಅದು ಪರ್ಯಾಯ ಪುಸ್ತಕ, ಇತಿಹಾಸದ ರಚನೆ ಹಾಗೂ ಶಾಲಾ ಶಿಕ್ಷಣ ಸಂಸ್ಥೆಗಳ ಸ್ಥಾಪನೆ. ವಿದ್ಯಾಭಾರತಿ ಸಂಸ್ಥೆ ನಡೆಸುವ ಶಿಕ್ಷಣ ಸಂಸ್ಥೆಗಳು 17,000ಕ್ಕೂ ಹೆಚ್ಚಿವೆ. ಸರಸ್ವತಿ ಶಿಶು ಮಂದಿರಗಳು ಕೂಡ ಇದರ ಕಾಣಿಕೆಗಳು. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಾಂಸ್ಕೃತಿಕ ರಾಷ್ಟ್ರೀಯತೆಯ ಭಾಗವಾಗುವುದು ಸಹಜ.
 
ವಿಚಿತ್ರವೆಂದರೆ  ಸಾಂಸ್ಕೃತಿಕ ರಾಷ್ಟ್ರೀಯತೆ ಗಾಂಧಿ ಅವರನ್ನು ವಿರೋಧಿಸುತ್ತಾ ಅವರನ್ನು  ತನ್ನ ಕಥನದ ಭಾಗವನ್ನಾಗಿಸುತ್ತದೆ. ಅಂಬೇಡ್ಕರ್‌ರವರನ್ನು, ಫುಲೆಯವರನ್ನು ತನ್ನ ರಾಷ್ಟ್ರೀಯತೆಯ ಭಾಗವನ್ನಾಗಿಸಲು ಯತ್ನಿಸುತ್ತದೆ. ಆದರೆ ಸಮಸ್ಯೆಯೆಂದರೆ ಪರ್ಯಾಯ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದ ಅಂಬೇಡ್ಕರ್‌ರವರನ್ನು ಸುಲಭವಾಗಿ ತನ್ನದಾಗಿಸಿಕೊಳ್ಳಲು ಇರುವ ತೊಂದರೆ. ಗೋವು ಈ ತೊಂದರೆಯ ಭಾಗ. ದಲಿತರಿಗೆ ಗೋವು ಬರೇ ಆಹಾರ ಸಂಸ್ಕೃತಿಯಲ್ಲ, ಅದು ಬದುಕಿನ ಅಸ್ಮಿತೆಯ ಒಂದು  ಭಾಗ,  ಉದ್ಯೋಗ ಸಂಸ್ಕೃತಿಯ  ಇನ್ನೊಂದು ಭಾಗ.

ಗುಜರಾತಿನ ಊನಾದಿಂದ ಹುಟ್ಟಿದ ಪ್ರತಿರೋಧ ಈ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಪ್ರತಿರೋಧವೆಂದೇ ಹೇಳಬೇಕು. ಯಾಕೆಂದರೆ ದಲಿತರಿಗೆ ಸಾಂಸ್ಕೃತಿಕ ರಾಷ್ಟ್ರೀಯತೆಯಲ್ಲಿ ಇದ್ದ ಸ್ಥಾನಮಾನ ಸೀಮಿತ; ಹೊಲಸು ತೆಗೆಯುವುದು, ಸತ್ತ ದನಗಳ ಚರ್ಮಗಳನ್ನು ಸುಲಿಯುವುದು, ಗದ್ದೆಗಳಲ್ಲಿ ಕೂಲಿಯಾಳಾಗಿರುವುದು ಇತ್ಯಾದಿ.

ಊನಾದ ಪ್ರತಿರೋಧ ಇವುಗಳನ್ನು ಪ್ರಶ್ನಿಸುತ್ತಿದೆ. ಇದು ಇತಿಹಾಸದಲ್ಲಿ ನಡೆದ ಮಹಾಡ್ ಪ್ರತಿಭಟನೆಗಿಂತಲೂ ದೊಡ್ಡದು. ಪ್ರಥಮ ಬಾರಿಗೆ ಸಾಂಸ್ಕೃತಿಕ ರಾಷ್ಟ್ರೀಯತೆಯ ಮಾದರಿ ಅಂಬೇಡ್ಕರ್ ಮಾದರಿಯೊಂದಿಗೆ ಮುಖಾಮುಖಿಯಾಗುತ್ತಿರುವುದು ಸ್ಪಷ್ಟ. ನೆಹರೂ-ಗಾಂಧಿ ಮಾದರಿ ಜಾತ್ಯತೀತತೆಯನ್ನು ಉಳಿಸಿಕೊಳ್ಳಲು  ಮುಖಾಮುಖಿಯಾಗುತ್ತಿದೆ. ಬಡಪಾಯಿ ಗೋವು ಈ ಮಾದರಿಗಳ ಮುಖಾಮುಖಿಗೆ ಮೂಕ ಸಾಕ್ಷಿಯಾಗುತ್ತಿದೆ. ಆದರೆ ಒಂದಂತೂ ಸ್ಪಷ್ಟ: ಗೋವು ಕುರ್ಚಿಗಳನ್ನು ಅಲ್ಲಾಡಿಸುತ್ತಿದೆ, ಅದು ಮಾದರಿಗಳನ್ನು ಕೂಡ ಅಲ್ಲಾಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT