ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕು ತಾಯಿ ಕೊಲೆ ಆರೋಪಿ ಖುಲಾಸೆ

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಉಡುಪಿಯಲ್ಲಿ ಎಂಟು ವರ್ಷದ ಹಿಂದೆ ಸಾಕು ತಾಯಿಯನ್ನು ಕೊಲೆ ಮಾಡಿದ ಆರೋಪಕ್ಕಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿ ಯೊಬ್ಬರನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದೆ.

ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕರ್ನಾಟಕ ಹೈಕೋರ್ಟ್‌ ಹಾಗೂ ಕೆಳ ನ್ಯಾಯಾಲಯದ ತೀರ್ಪನ್ನು ನ್ಯಾ. ಜೆ. ಚಲಮೇಶ್ವರ್‌ ಮತ್ತು ನ್ಯಾ. ಎ.ಕೆ. ಸಿಕ್ರಿ ಅವರಿದ್ದ  ಸುಪ್ರೀಂ ಕೋರ್ಟ್‌ ಪೀಠ ಬದಿಗೊತ್ತಿದೆ. ಆರೋಪಿ ಅಮಾಯಕ­ನಾಗಿದ್ದು, ಸಾಕು ತಾಯಿಯಿಂದ ಅವರಿಗೆ ಬಂದಿರುವ ಆಸ್ತಿ ಕಬಳಿಸಲು ಸುಳ್ಳು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

ಉಡುಪಿಯಲ್ಲಿ 2006ರಲ್ಲಿ ನಡೆದ ನಿವೃತ್ತ ಶಿಕ್ಷಕಿ ಡೊರೋತಿ ಕುಟಿನ್ಹೊ ಅವರ ಕೊಲೆ ಪ್ರಕರಣದಲ್ಲಿ ಆನಂದ ಪೂಜಾರಿ ಅವರನ್ನು ಕೆಳ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ನೀಡಿತ್ತು. ರಾಜ್ಯ ಹೈಕೋರ್ಟ್‌ ಶಿಕ್ಷೆ ಕಾಯಂಗೊಳಿಸಿತ್ತು.

ಡೊರೋತಿ ತಮ್ಮ ವಿದ್ಯಾರ್ಥಿ ಆನಂದ ಪೂಜಾರಿ ಅವರನ್ನು ಉಡುಪಿಯ ಕೆಳಾರ್ಕಳ ಬೆಟ್ಟು ವಿನಲ್ಲಿರುವ ತಮ್ಮ ಮನೆಗೆ ತಂದು ಸಾಕಿಕೊಂಡಿದ್ದರು.  ಅವರಿಗೆ ಇಬ್ಬರು ಸಾಕು ಸೋದರರಿದ್ದರೂ ಬೇರೆ ವಾಸವಾಗಿ­ದ್ದಾರೆ. ಮಾನಸಿಕವಾಗಿ ಅಸ್ವಸ್ಥರಾಗಿದ್ದ ಸೋದರ ರುಡೋಲ್ಫ್‌ ಕುಟಿನ್ಹೋ ಅವರ ಜತೆ ಮಹಿಳೆ ವಾಸವಾಗಿದ್ದರು. ಮುಪ್ಪಿನ ಕಾಲಕ್ಕೆ ನೆರವಾಗಲಿ ಎಂದು ಅವರು ಪೂಜಾರಿ ಅವರನ್ನು ತಂದು ಸಾಕಿದ್ದರು.

ಪೂಜಾರಿ ಅವರ ಸ್ವಾರ್ಥರಹಿತ ಸೇವೆ ಕಂಡು ಡೊರೋತಿ  ತಮ್ಮ ಸ್ಥಿರಾಸ್ತಿ ಮತ್ತು  ಚರಾಸ್ತಿಯನ್ನು ಆನಂದ್‌ ಪೂಜಾರಿ ಹೆಸರಿಗೆ ವಿಲ್‌ ಮಾಡಿದ್ದರು. ಆದರೆ, ಅವರು ಕ್ರೈಸ್ತ ಮಹಿಳೆಯನ್ನು ಮದುವೆಯಾಗಬೇಕು ಎನ್ನುವ ಷರತ್ತು ಹಾಕಿದ್ದರು. ಮಹಿಳೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು, ಹಣಕಾಸು, ಆಭರಣ, ಬ್ಯಾಂಕ್‌ ಠೇವಣಿ ಹಾಗೂ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿದ್ದರು.

2006ರಂದು ಮಾರ್ಚಿ 1ರಂದು ಡೊರೋತಿ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರನ್ನು ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆ ತಲುಪುವ ವೇಳೆಗೆ ಅವರು ಮೃತಪಟ್ಟಿದ್ದರು. ದೇಹ ಪರಿಶೀಲಿಸಿದ ವೈದ್ಯರು ಹೃದಯಾಘಾತದಿಂದ ಸತ್ತಿರುವುದಾಗಿ ಪ್ರಕಟಿಸಿದ್ದರು. ಕೆಲವು ದಿನಗಳ ಬಳಿಕ ನಡೆದ ಮರಣೋತ್ತರ ಪರೀಕ್ಷೆ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಿಳಿಸಿತು.

ಮೃತ ಮಹಿಳೆ ಸಾಕು ಸಹೋದರರು ನೀಡಿದ ದೂರಿನ ಮೇಲೆ ಪೂಜಾರಿ ಅವರನ್ನು ಬಂಧಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ಕೆಳ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಹೈಕೋರ್ಟ್‌ ಅದನ್ನು ಕಾಯಂ­ಗೊಳಿಸಿತು. ಆರೋಪಿ ಸಲ್ಲಿಸಿದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಸಾಕ್ಷಿಗಳ ಹೇಳಿಕೆ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಅವರನ್ನು ಖುಲಾಸೆಗೊಳಿಸಿತು.

ಡೊರೋತಿ ಹಾಗೂ ಪೂಜಾರಿ ಅವರ ನಡುವಣ ಸಂಬಂಧ  ಸೌಹಾರ್ದ ದಿಂದ ಕೂಡಿತ್ತು. ಅವರಿಬ್ಬರ ನಡುವೆ ತಾಯಿ– ಮಗನ ಪ್ರೀತಿ ಇತ್ತು. ಆದರೆ, ರಕ್ತದೊತ್ತಡ, ಮಾನಸಿಕ ಒತ್ತಡ ಮತ್ತಿತರ ಕಾಯಿಲೆಗಳಿಂದ ಅವರು ನರಳುತ್ತಿದ್ದರು. ಅಲ್ಲದೆ, ಮದ್ಯ ವ್ಯಸನಿಯಾಗಿದ್ದರು. ಈ ಪ್ರಕರಣದ ವಿಚಾರಣೆ ಮುಗಿದು ತೀರ್ಪು ಹೊರಬೀಳುವ ಮೊದಲೇ ಅವರ ಇಬ್ಬರು ಸಾಕು ಸಹೋದರರು ಎಲ್ಲ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.  ಇದೊಂದೇ ಪ್ರಸಂಗ ಬೇಕಾದಷ್ಟು ಕಥೆ ಹೇಳುತ್ತದೆ. ಈ ಕಾರಣದಿಂದಾಗಿ ಆನಂದ ಪೂಜಾರಿ ಅಮಾಯಕ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಮಹಿಳೆ ಸತ್ತ ಕೆಲವೇ ದಿನಗಳಲ್ಲಿ ಮಾನಸಿಕವಾಗಿ ಅಸ್ವಸ್ಥರಾಗಿದ್ದ ಅವರ ಸಹೋದರ ಕೂಡಾ ಮೃತಪಟ್ಟಿದ್ದಾರೆ ಎಂಬ ಅಂಶವನ್ನು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT