ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕೇತ್‌ ಉಪಾಸನೆ

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಟೇಬಲ್ ಮೇಲೆ ಜೋಡಿಸಿಟ್ಟ ವಿವಿಧ ನಮೂನೆಯ ಹಾರ್ಮೋನಿಕಾ (ಮೌತ್ ಆರ್ಗನ್) ಬಂದವರೆಲ್ಲರ ಗಮನ ಸೆಳೆಯುತ್ತಿತ್ತು. ಅಲ್ಲಿದ್ದ ಹಾರ್ಮೊನಿಕಾಗಳ ಕುರಿತು ಅಷ್ಟೇ ಪ್ರೀತಿಯಿಂದ ಮಾಹಿತಿ ನೀಡುತ್ತಿದ್ದರು ಸಾಕೇತ್ ಜಲನ್.

ಸಾಕೇತ್ ತಮ್ಮ ಚಿಕ್ಕವಯಸ್ಸಿನಲ್ಲಿ ಸಂಗೀತ ಉಪಕರಣಗಳತ್ತ ಆಕರ್ಷಿತರಾದವರಂತೆ. ಸಂಗೀತಕ್ಕಿಂತ ಹೆಚ್ಚು ಅಲ್ಲಿ ಬಳಸುವ ಉಪಕರಣಗಳು ಇವರಿಗೆ ಪ್ರಿಯವಂತೆ. ಆ ಉಪಕರಣಗಳಲ್ಲಿ ಅವರನ್ನು ಹೆಚ್ಚು ಸೆಳೆದಿದ್ದು ಹಾರ್ಮೋನಿಕಾ. ಸಾಕೇತ್‌ ಅವರ ಬಳಿ 350ಕ್ಕೂ ಹೆಚ್ಚು ಹಾರ್ಮೊನಿಕಾಗಳ ಸಂಗ್ರಹವಿದೆ. ಇದನ್ನು ಅವರು ಬೇರೆ ಬೇರೆ ದೇಶಗಳಿಂದ ಸಂಗ್ರಹಿಸಿದಂತೆ.

ಯುವಜನತೆಯಲ್ಲಿ ಸಂಗೀತ ಪ್ರೀತಿ ಬೆಳೆಸುವ ಸಲುವಾಗಿ ಇವರು ನಗರದಲ್ಲಿ ಹಾರ್ಮೋನಿಕಾ ಕ್ಲಬ್‌ ಕೂಡ ಆರಂಭಿಸಿದ್ದಾರೆ. ಸಂಗೀತದ ಉಪಕರಣದಲ್ಲಿ ಆಸಕ್ತಿ ಇರುವವರಿಗಾಗಿಯೇ ಕಾರ್ಯಾಗಾರ ಹಮ್ಮಿಕೊಳ್ಳುತ್ತಾರೆ. ಈ ಮೂಲಕ ಸಾಕೇತ್‌ ಸಂಗೀತದ ಉಪಕರಣಗಳ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಈ ಕ್ಲಬ್ ಆಸಕ್ತ ಮಕ್ಕಳಿಗೆ ಸಂಗೀತ ತರಗತಿಗಳನ್ನು ಸಹ ನಡೆಸುತ್ತಿದೆ. ಜತೆಗೆ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅವರಿಗೆ ಸ್ಟೇಜ್ ಷೋ ನೀಡಲು ಸಹ ಅವಕಾಶ ಕಲ್ಪಿಸಿಕೊಡುತ್ತಿದೆ.

ಅಪರೂಪದ ಹಾರ್ಮೋನಿಕಾಗಳನ್ನು ಸಂಗ್ರಹಿಸುವ ಸಲುವಾಗಿ ಸಾಕೇತ್ ಅವರು ತಮ್ಮ ಸಾಕಷ್ಟು ಸಮಯವನ್ನು ಕಳೆದಿದ್ದಾರಂತೆ. ಜರ್ಮನಿಯ ಎಕೋ ಎಲೈಟ್, ಹಾರ್ಮೋನಿಕಾ ಬೆಲ್ ಕಾನ್, 1890ರ ಆ್ಯಂಟಿಕ್ ಹಾರ್ಮೋಫೋನ್, ಪ್ರಿ ಡಬ್ಲ್ಯುಡಬ್ಲ್ಯು 2 ಹಾನರ್ ಎಕೋ ಹಾರ್ಪ್, ಎಂ ಹಾನರ್ ಎಕೋಬೆಲ್ ಮರಿನ್ ಬ್ಯಾಂಡ್ ಸಂಗ್ರಹ ಸಾಕೇತ್ ಬಳಿ ಇದೆ.

‘ನನ್ನ ಬಳಿ 200ಕ್ಕೂ ಹೆಚ್ಚು ವಿಂಟೇಜ್ ಸಂಗ್ರಹವಿದೆ. ಪ್ರತಿಯೊಂದು ಹಾರ್ಮೋನಿಕಾಕ್ಕೂ ಒಂದು ಆಸಕ್ತಿಕರವಾದ ಇತಿಹಾಸವಿದೆ. ಈ ಹಾರ್ಮೋನಿಕಾಗಳು ನನಗೆ ಹೆಚ್ಚು ಆಪ್ತವಾಗಿದೆ’ ಎನ್ನುತ್ತಾರೆ ಸಾಕೇತ್. ಇವರ ಬಳಿ ಇರುವ ‘ಹಾನರ್ ಸೆಕ್ಸ್‌ಟೆಟ್ ಟ್ರಿಮೋಲೋ ಹಾರ್ಮೋನಿಕಾ’ ತುಂಬಾ ವಿಶೇಷವಾದದ್ದಂತೆ. ಇದು ನೋಡುವುದಕ್ಕೂ ತುಂಬಾ ಸುಂದರವಾಗಿದೆಯಂತೆ. ಹೊಸ ಹಾರ್ಮೋನಿಕಾ ಜತೆಗೆ ಹಳೆಯ ಕಾಲದ ಹಾರ್ಮೋನಿಕಾಗಳು ಇವರ ಸಂಗ್ರಹದಲ್ಲಿವೆ ಎಂಬ ಹೆಮ್ಮೆ ಸಾಕೇತ್ ಅವರದು.

‘ವಿಂಟೇಜ್ ಹಾರ್ಮೋನಿಕಾ ವಿನ್ಯಾಸದಿಂದ ಹೆಚ್ಚು ಸೆಳೆಯುತ್ತದೆ. ಇದು ಈಗ ಎಲ್ಲಿಯೂ ಸಿಗುವುದಿಲ್ಲ. ಚಿಕ್ಕ ಹಾರ್ಮೋನಿಕಾದ ಬೆಲೆ ₨ 300 ಇದ್ದರೆ ಇನ್ನು ಕೆಲವೊಂದಕ್ಕೆ ಐವತ್ತರೆಡು ಸಾವಿರದಷ್ಟು ಇರುತ್ತದೆ’ ಎನ್ನುತ್ತಾರೆ ಸಾಕೇತ್. ಸಾಕೇತ್ ಅವರಿಗೆ ಬಾಳಸಂಗಾತಿ ಸಿಗಲು ಅವರ ಈ ಹವ್ಯಾಸವೇ ಕಾರಣವಂತೆ.

‘ನಾನು ಸಂಗೀತ ಸಾಧನಗಳನ್ನು ನುಡಿಸುತ್ತೇನೆ ಎಂಬ ವಿಷಯ ಗೊತ್ತಾಗಿ ನನ್ನ ಹೆಂಡತಿಗೆ ನನ್ನ ಮೇಲೆ ಪ್ರೀತಿ ಮೂಡಿತು’ ಎಂದು ನಗುತ್ತಾರೆ ಸಾಕೇತ್.
ಸಾಕೇತ್ ಅವರ ಹೆಂಡತಿ ಮತ್ತು ಸಂಬಂಧಿಕರು, ಸ್ನೇಹಿತರು ಎಲ್ಲಿಯಾದರು ಹೊಸ ಹಾರ್ಮೋನಿಕಾ ಸಿಕ್ಕರೆ ತೆಗೆದುಕೊಂಡು ಬಂದು ಸಾಕೇತ್‌ ಅವರಿಗೆ ಕೊಡುತ್ತಾರಂತೆ.

ಇನ್ನು ಈ ಹಾರ್ಮೋನಿಕಾಗಳನ್ನು ಮೊದಲು ಸಂಗೀತ ತಂಡಗಳು ನೈಟ್‌ಕ್ಲಬ್‌ನಲ್ಲಿ, ಲಾಂಜ್‌ಗಳಲ್ಲಿ ಹಾಡುವಾಗ ಬಳಸಿಕೊಳ್ಳುತ್ತಿದ್ದರು. ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಈ ಹಾರ್ಮೋನಿಕಾಗಳನ್ನು ಬಳಕೆ ಇದೆ. ಇತ್ತೀಚೆಗೆ ಶಾಲೆಗಳಲ್ಲಿ ಇದನ್ನು ಕಲಿಸಲು ಶುರುಮಾಡಿದ್ದಾರೆ ಎಂದು ಹಾರ್ಮೋನಿಕಾದ ಬಗ್ಗೆ ವಿವರಣೆ ನೀಡುತ್ತಾರೆ ಸಾಕೇತ್.

‘ನಮ್ಮ ಸಮಯವನ್ನು ನಮಗಾಗಿ ಮಾತ್ರವಲ್ಲ; ಹವ್ಯಾಸಕ್ಕೂ ವಿನಿಯೋಗಿಸಬೇಕು. ನಾನು ಎಲ್ಲಿಯೇ ಹೋದರು ನನ್ನ ಕಣ್ಣು ಹಾರ್ಮೋನಿಕಾದ ಮೇಲೆ ಇರುತ್ತದೆ. ಹಾಗಾಗಿ ಹೊಸ ಉಪಕರಣಗಳು ಸಿಕ್ಕರೆ ಅದನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ’ ಎಂಬುದು ಸಾಕೇತ್ ಅವರ ಅಭಿಪ್ರಾಯ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT