ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಶಿಖರವೇರಿ...

Last Updated 18 ಮೇ 2016, 19:30 IST
ಅಕ್ಷರ ಗಾತ್ರ

2015ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‌ಸಿ) ಫಲಿತಾಂಶ ಹೊರ ಬಿದ್ದಿದ್ದು, ಬಡತನ, ಕಷ್ಟ–ಕೋಟಲೆಗಳ ನಡುವೆಯೂ ಯಶಸ್ವಿಯಾಗಿ ಉತ್ತೀರ್ಣರಾಗಿ, ಇಂದಿನ ಯುವ ಪೀಳಿಗೆಗೆ ಮಾದರಿಯಾಗಿರುವ ಸಾಧಕರ ಕಿರುಪರಿಚಯ ಈ ಬಾರಿ... ಅನ್ಸಾರ್ ಅಹ್ಮದ್ ಶೇಖ್

ಪುಣೆಯಲ್ಲಿ ಎರಡು ವರ್ಷಗಳ ಹಿಂದೆ ಕೆಲವು ಪೇಯಿಂಗ್ ಗೆಸ್ಟ್ ಹಾಸ್ಟೆಲ್‌ಗಳು ಶಾಹಿಕ್ ಅನ್ಸಾರ್ ಅಹ್ಮದ್ ಅವರಿಗೆ ಜಾಗ ಕೊಟ್ಟಿರಲಿಲ್ಲ.  ಶಾಹಿಕ್‌ಗೆ ಕಾಲೇಜು ಪಕ್ಕದಲ್ಲೇ ಇರುವ ಹಾಸ್ಟೆಲ್‌ನ ಅಗತ್ಯವಿತ್ತು. ಮುಸ್ಲಿಂ ಸಮುದಾಯದವರು ಎಂಬ ಕಾರಣಕ್ಕಾಗಿಯೇ ಹಾಸ್ಟೆಲ್‌ನಲ್ಲಿ ಸೀಟು ಕೊಡಲು ಹಿಂದೆ ಮುಂದೆ ನೋಡುತ್ತಿದ್ದರು.

ಶೇಖ್‌ಗೆ ಆತ್ಮೀಯರಾಗಿದ್ದ ಕೆಲ ಹಿಂದೂ ಗೆಳೆಯರು ಹೆಸರನ್ನು ಬದಲಿಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದರು. ಅದರಂತೆ ಹಾಸ್ಟೆಲ್‌ಗೆ ಸೇರುವಾಗ ಶೇಖ್‌ ತನ್ನ ಹೆಸರು ಶುಭಂ ಎಂದು ಹೇಳಿ ಸೇರಿಕೊಂಡಿದ್ದರಂತೆ! ಹೀಗೆ ಹೆಸರು ಬದಲಿಸಿಕೊಂಡು ನಾನಾ ಸಂಕಷ್ಟಗಳನ್ನು ಎದುರಿಸಿ ಅತಿ ಕಿರಿಯ ವಯಸ್ಸಿಗೆ ಐಎಎಸ್ ಅಧಿಕಾರಿಯಾದ ಅನ್ಸಾರ್ ಅಹ್ಮದ್ ಶೇಖ್ ಅವರ ಯಶಸ್ವಿ ಸಾಧನೆ ಕಥೆ ಇದು.

ಕಬ್ಬಿಣದ ಕಡಲೆ ಎನ್ನುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗುವ ಮೂಲಕ 21ನೇ ವಯಸ್ಸಿಗೆ ಶೇಖ್‌ ಐಎಎಸ್ ಅಧಿಕಾರಿಯಾಗಿದ್ದಾರೆ. ಶೇಖ್‌ ಮೂಲತಃ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯವರು. ತಂದೆ ಆಟೊರಿಕ್ಷಾ ಚಾಲನೆ ಮಾಡಿ ಕುಟುಂಬವನ್ನು ಸಲಹುತ್ತಿದ್ದಾರೆ.

ಶೇಖ್‌ ತಂದೆಗೆ ಮೂವರು ಪತ್ನಿಯರು. ಶೇಖ್‌ ಎರಡನೇ ಪತ್ನಿಯ ಮಗ. ಇಬ್ಬರು ಅಕ್ಕಂದಿರನ್ನು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರು. ಶೇಖ್ ಅಣ್ಣ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೇಖ್ ಕೂಡ ಗ್ಯಾರೇಜ್‌ ಒಂದರಲ್ಲಿ ಕೆಲಸ ಮಾಡಬೇಕು ಎಂಬುದು ಅವರ ತಂದೆಯ ಅಪೇಕ್ಷೆಯಾಗಿತ್ತು! ಆದರೆ ಶೇಖ್‌ಗೆ ಓದುವ ಹಂಬಲ. ಉನ್ನತ ವ್ಯಾಸಂಗಕ್ಕೆ ತಾಯಿ ಕೂಡ ಸಾಥ್‌ ನೀಡಿದ್ದರಿಂದ ಶೇಖ್ ಕಾಲೇಜು ಮೆಟ್ಟಿಲು ಹತ್ತಲು ಸಾಧ್ಯವಾಯಿತು.

ಶೇಖ್ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ ಪದವಿಗೆ ಸೇರಿದರು. ಅಲ್ಲಿನ ಐಎಎಸ್ ಅಕಾಡೆಮಿ ಕೋಚಿಂಗ್ ಸೆಂಟರ್‌ನಲ್ಲಿ ಮೂರು ವರ್ಷ ತರಬೇತಿ ಪಡೆದರು.

ಓದು ಮತ್ತು ವಸತಿ ಖರ್ಚಿಗಾಗಿ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ಶೇಖ್ ಅಣ್ಣ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದರು. 2015ರಲ್ಲಿ ಪರೀಕ್ಷೆಗೆ ಕುಳಿತು ಮೊದಲ ಯತ್ನದಲ್ಲೇ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ ಎನ್ನುತ್ತಾರೆ ಶೇಖ್.

*
ಬಿಹಾರದ ಯುವಕ ಅಂಜನಿ ಅಂಜನ್ ಸಾಧನೆಯ ಕಥೆ ಇದು.  ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ದುರ್ಬಲರ ಸೇವೆ ಮಾಡುವುದು ಮತ್ತು ಬಡವರಿಗೆ ಸಕಾಲದಲ್ಲಿ ಸರ್ಕಾರಿ ಸವಲತ್ತುಗಳನ್ನು ತಲುಪಿಸಬೇಕು ಎಂಬ ಕನಸು ಕಟ್ಟಿಕೊಂಡಿದ್ದರು ಇವರು.

ಅದಕ್ಕಾಗಿಯೇ ಮೂರು ವರ್ಷಗಳಿಂದ ಕಷ್ಟಪಟ್ಟು ಓದುತ್ತಿದ್ದರು. ಮುಖ್ಯ ಪರೀಕ್ಷೆ ಬರೆಯುವ ಸಂದರ್ಭ ತಂದೆ ತಾಯಿಯನ್ನು ಕಳೆದುಕೊಂಡರೂ ಎದೆಗುಂದದೆ ಪರೀಕ್ಷೆ ಎದುರಿಸಿ 143ನೇ ರ್‍್ಯಾಂಕ್ ಪಡೆಯುವ ಮೂಲಕ ಅನನ್ಯ ಸಾಧನೆ ಮಾಡಿದ್ದಾರೆ.

ಅಂಜನಿ ಅಂಜನ್ ಮೂಲತಃ ಬಿಹಾರದ ಪಟ್ನಾದವರು.  ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಅಂಜನ್ ಕೆಲಸಕ್ಕೆ ಸೇರದೆ ಐಎಎಸ್ ಪರೀಕ್ಷೆಗಾಗಿ ಓದುತ್ತಿದ್ದರು. ಎರಡು ಸಲ ಪರೀಕ್ಷೆಗೆ ಕುಳಿತಿದ್ದರೂ ಯಶಸ್ವಿಯಾಗಿರಲಿಲ್ಲ.

2015ರಲ್ಲಿ ಪರೀಕ್ಷೆಗೆ ಕುಳಿತಿದ್ದ ಅಂಜನ್  ಈ ಬಾರಿ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸದಲ್ಲಿದ್ದರು. ಮುಖ್ಯ ಪರೀಕ್ಷೆ ಸಮಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಕಳೆದುಕೊಂಡರು.

ತಂದೆ ಸಾವನ್ನಪ್ಪಿದ ಎರಡೇ ವಾರದಲ್ಲಿ ತಾಯಿಯನ್ನೂ ಕಳೆದುಕೊಂಡರು. ಆಗಿನ್ನು  ಮುಖ್ಯ ಪರೀಕ್ಷೆಗಳು ಮುಗಿದಿರಲಿಲ್ಲ. ಈ ಹಂತದಲ್ಲಿ ಅಂಜನ್ ಅವರ ಸಹೋದರಿ ಮತ್ತು ಗೆಳೆಯರು ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಹುರಿದುಂಬಿಸಿದ್ದರು. ತಂದೆಯನ್ನು ಕಳೆದುಕೊಂಡಾಗ ಪರೀಕ್ಷೆ ಬರೆಯದಿರಲು ಅಂಜನ್ ನಿರ್ಧರಿಸಿದ್ದರಂತೆ. ಆದರೂ ಧೈರ್ಯ ತಂದುಕೊಂಡು ಪರೀಕ್ಷೆಗೆ ಹಾಜರಾಗಿದ್ದರು.

ನಂತರ ಮುಖ್ಯ ಪರೀಕ್ಷೆಯ ಎರಡು ಪತ್ರಿಕೆಗಳು ಬಾಕಿ ಇರುವಾಗಲೇ ತಾಯಿ ಕೊನೆಯುಸಿರೆಳೆದರು. ಆಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಂಜನ್ ಪರೀಕ್ಷೆ ಬರೆಯುವುದಿಲ್ಲ ಎಂದು ಹಟಕ್ಕೆ ಬಿದ್ದರು. ನಂತರ ಗೆಳೆಯರು ಮತ್ತು ಅಕ್ಕ ತುಂಬಿದ ಆತ್ಮವಿಶ್ವಾಸದ ಬಲದಿಂದ ಪರೀಕ್ಷೆ ಎದುರಿಸಿ ಯಶಸ್ವಿಯಾದೆ ಎನ್ನುತ್ತಾರೆ ಅಂಜನ್.

ತಂದೆ ತಾಯಿ ಕಳೆದುಕೊಂಡ ನೋವಿನಲ್ಲಿ ಮುಖ್ಯ ಪರೀಕ್ಷೆಯನ್ನು ಎದುರಿಸಿದ್ದ ಅಂಜನ್, ಸಂದರ್ಶನವನ್ನು ಕೂಡ ಮತ್ತೊಂದು ಸಾವಿನ ವಾರ್ತೆ ಕೇಳಿ ಎದುರಿಸಬೇಕಾಯಿತು ಎಂದು ಕಂಬನಿ ಮಿಡಿಯುತ್ತಾರೆ. ಸಂದರ್ಶನದ ಸಮಯದಲ್ಲಿ ಅಂಜನ್ ತಾತ ತೀರಿಕೊಂಡಿದ್ದರು. ಸಾವಿನ ಸರಮಾಲೆಗಳ ಸುದ್ದಿಯಲ್ಲೇ ಧೈರ್ಯ ತಂದುಕೊಂಡು ಪರೀಕ್ಷೆ ಎದುರಿಸುವ ಮೂಲಕ ಅಂಜನ್ ಯಶಸ್ವಿಯಾಗಿದ್ದಾರೆ. ತಮ್ಮ ಈ ಯಶಸ್ಸನ್ನು ಪೋಷಕರಿಗೆ ಅರ್ಪಿಸಿದ್ದಾರೆ.

*
ಅತ್ರಾ ಅಮೀರ್ ಉಲ್ ಶಫಿ ಖಾನ್ಸ
ದಾ ಮದ್ದು ಗುಂಡಿನ ಸದ್ದು, ಪ್ರತಿಭಟನೆ, ಹರತಾಳಗಳ ಸುದ್ದಿಯಲ್ಲೇ ಮುಳುಗಿ ಹೋಗಿರುವ ಕಾಶ್ಮೀರ ಕಣಿವೆಯಲ್ಲಿ ದೇಶ ಹೆಮ್ಮೆ ಪಡುವಂತಹ ಪ್ರತಿಭೆಯೊಂದು ಅರಳಿದೆ. ಅತ್ರಾ ಅಮೀರ್ ಉಲ್ ಶಫಿ ಖಾನ್ ಎಂಬ 23 ವರ್ಷದ ಯುವಕ ನಾಗರಿಕ ಸೇವಾ ಪರೀಕ್ಷೆಯಲ್ಲಿ ಎರಡನೇ ರ್‍್ಯಾಂಕ್ ಪಡೆಯುವ ಮೂಲಕ ಕಣಿವೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಖಾನ್ ಹುಟ್ಟಿದ್ದು ಅನಂತನಾಗ್ ಜಿಲ್ಲೆಯಲ್ಲಿ. ತಂದೆ ಶಾಲಾ ಶಿಕ್ಷಕರು. ಪ್ರೌಢಶಿಕ್ಷಣ ಮತ್ತು ಪಿಯುಸಿಯನ್ನು ಅನಂತನಾಗ್ ಜಿಲ್ಲೆಯಲ್ಲಿ ಪೂರೈಸಿದರು. ಸದಾ ಬಂದ್ ಮತ್ತು ಗಲಭೆಯಿಂದಾಗಿ ದ್ವಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಹೋಗಿದ್ದು ಒಂದು ತಿಂಗಳು ಮಾತ್ರ ಎನ್ನುತ್ತಾರೆ ಖಾನ್.

ಪಿಯುಸಿ ಬಳಿಕ ಶ್ರೀನಗರದಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರಿಕೊಂಡರು. ಪದವಿ ಓದುತ್ತಿರುವಾಗ ಆಕಸ್ಮಿಕವಾಗಿ 2009ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ್‍್ಯಾಂಕ್ ಬಂದಿದ್ದ  ಶ್ರೀನಗರದ  ‘ಷಾ ಫಾಸಿಲ್’  ಅವರ ಸಂದರ್ಶನದ ಲೇಖನ ಓದಿದ್ದ ಖಾನ್ ತಾನು ಸಹ ಅವರಂತೆ ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸು ಕಂಡರು. ಷಾ ಅವರನ್ನು ಭೇಟಿ ಮಾಡಿ ಐಎಎಸ್ ಪರೀಕ್ಷೆ ಕುರಿತಂತೆ ಮಾರ್ಗದರ್ಶನ ಪಡೆದರು.

ನಂತರ ಫಿಲಾಸಫಿ ವಿಷಯವನ್ನು ಆಯ್ದುಕೊಂಡು ಕಷ್ಟಪಟ್ಟು ಓದ ತೊಡಗಿದರು. ದಿನಕ್ಕೆ 15 ಗಂಟೆ ಕಾಲ ಸತತ ಅಭ್ಯಾಸ ಮಾಡುವ ಮೂಲಕ 2014ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 560ನೇ ರ್‍್ಯಾಂಕ್‌  ಪಡೆದರು.

ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರಾದರೂ 560ನೇ ರ್‍್ಯಾಂಕ್‌ ಖಾನ್‌ಗೆ ತೃಪ್ತಿಕೊಡಲಿಲ್ಲ. ಮತ್ತೆ 2015ರಲ್ಲಿ ಪರೀಕ್ಷೆಗೆ ಕುಳಿತರು. ಕಠಿಣ ಪರಿಶ್ರಮ ಮತ್ತು ಸತತ ಅಭ್ಯಾಸದ ಫಲವಾಗಿ ಈ ಬಾರಿ ಎರಡನೇ ರ್‍್ಯಾಂಕ್‌ ಪಡೆದಿದ್ದಾರೆ.

ಕಾಶ್ಮೀರ ಜನರ ಸಂಕಷ್ಟಗಳಿಗೆ ಮಿಡಿಯುವುದೇ ನನ್ನ ಗುರಿ ಎನ್ನುತ್ತಾರೆ ಖಾನ್. ಕಣಿವೆ ರಾಜ್ಯದ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡಿದರೆ ಮಾತ್ರ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಖಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT