ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾನಿಯಾ ನಡೆದದ್ದೇ ದಾರಿ!

Last Updated 30 ಜುಲೈ 2016, 19:30 IST
ಅಕ್ಷರ ಗಾತ್ರ

‘‘2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ ಗ್ರಾಮವನ್ನು ಮೊದಲ ಬಾರಿ ಪ್ರವೇಶಿಸಿದ್ದೆ. ಆಗ ನನ್ನನ್ನು ನಾನೇ ಜಿಗುಟಿಕೊಂಡು, ಒಲಿಂಪಿಕ್ಸ್‌ನಲ್ಲಿ ಆಡಲು ಬಂದಿರುವುದು ಕನಸಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದೆ. ಒಲಿಂಪಿಕ್ಸ್‌ನ ಟೆನಿಸ್‌ ಸಿಂಗಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮೊಟ್ಟಮೊದಲ ಆಟಗಾರ್ತಿಯಾಗಿ ಕ್ರೀಡಾಗ್ರಾಮಕ್ಕೆ ಹೆಜ್ಜೆ ಇಟ್ಟ ಕ್ಷಣ ಅದಾಗಿತ್ತು’’.

ಎಂಟು ವರ್ಷಗಳ ಹಿಂದೆ ಚೀನಾದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಆಡಿದ್ದನ್ನು, ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಆಡುವ ತಮ್ಮ ಕನಸನ್ನು ನನಸು ಮಾಡಿಕೊಂಡ ಘಟನೆಯನ್ನು ಸಾನಿಯಾ ಮಿರ್ಜಾ ಅವರು ನೆನಪಿಸಿಕೊಂಡಿರುವುದು ಹೀಗೆ. ಅವರು ತಮ್ಮ ಆತ್ಮಚರಿತ್ರೆ ‘ಏಸ್ ಅಗೆನಸ್ಟ್ ದಿ ಆಡ್ಸ್‌’ (Ace against the Odds) ಪುಸ್ತಕದಲ್ಲಿ ತಮ್ಮ ಮೊದಲ ಒಲಿಂಪಿಕ್ಸ್‌ ಅನುಭವವನ್ನು ದಾಖಲಿಸಿದ್ದಾರೆ.

ಭುವನದ ಬೆಡಗು ಎಂದೇ ‘ಒಲಿಂಪಿಕ್ಸ್’ ಪ್ರಸಿದ್ಧ. ವಿಶ್ವದ ಬಹುತೇಕ ಎಲ್ಲ ಕ್ರೀಡಾಪಟುಗಳಿಗೂ ಈ ಮಹಾಮೇಳದಲ್ಲಿ ಸ್ಪರ್ಧಿಸುವ ಕನಸು ಇರುವುದು ಸಹಜ. ಆದರೆ, ಕೆಲವರಷ್ಟೇ ಆ ಹಂತ ತಲುಪಿ ಮಿಂಚುತ್ತಾರೆ. ಬಹುತೇಕರಿಗೆ ಅದು ಕನಸಾಗಿಯೇ ಉಳಿದುಬಿಡುತ್ತದೆ. 

ಭಾರತದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯವುದು ದೊಡ್ಡ ಸಾಹಸ. ಪದಕ ಗೆಲ್ಲುವುದಂತೂ ಮಹಾಸಾಹಸ. ಅದರಲ್ಲೂ ಮಹಿಳೆಯರಿಗೆ ಪುರುಷರಿಗಿಂತಲೂ ಹೆಚ್ಚು ತೊಂದರೆಗಳು ಎದುರಾಗುತ್ತವೆ. ಸಾನಿಯಾ ಮಿರ್ಜಾ ಅವರೂ ಅದಕ್ಕೆ ಹೊರತಲ್ಲ. ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಅವರ ಇಡೀ ಜೀವನ – ಪ್ರವಾಹದ ವಿರುದ್ಧದ ಈಜು.

ಕೌಟುಂಬಿಕ ಹಿನ್ನೆಲೆ, ಧರ್ಮ – ಇವೆಲ್ಲಕ್ಕಿಂತಲೂ ಮಹಿಳೆ ಎನ್ನುವ ಕಾರಣಕ್ಕೆ ಅವರಿಗೆ ಹೆಚ್ಚು ಹೆಚ್ಚು ಸವಾಲು ಎದುರಾಗಿದ್ದವು. ಸಾನಿಯಾ ಇಟ್ಟ ಪ್ರತಿ ಹೆಜ್ಜೆ, ಸ್ವತಂತ್ರ ನಿರ್ಧಾರಗಳು, ಧರಿಸಿದ ವಸ್ತ್ರಗಳು, ಹೇಳಿಕೆಗಳು – ಪ್ರತಿಯೊಂದೂ ವಿವಾದದ ಸ್ವರೂಪ ಪಡೆದಿದ್ದವು.

ಮುಸ್ಲಿಮ್ ಧರ್ಮದ  ಕೆಂಗಣ್ಣಿಗೆ ಗುರಿಯಾಗುವುದರ ಜೊತೆಗೆ ಬೇರೆ ಧರ್ಮಗಳ ಜನರ ಅಸಮಾಧಾನಕ್ಕೂ ಅವರು ಒಳಗಾದ ಪ್ರಸಂಗಗಳೂ ಇವೆ. ಅಂಕಣದಲ್ಲಿ ತಮ್ಮೆದುರಿಗೆ ಪುಟಿದೆದ್ದು ನುಗ್ಗಿ ಬರುವ ಟೆನಿಸ್ ಚೆಂಡನ್ನು ಬಲಶಾಲಿ ಫೋರ್‌ಹ್ಯಾಂಡ್ (ಮುಂಗೈ) ಹೊಡೆತದ ಮೂಲಕ ರಿಟರ್ನ್ ಮಾಡುವ ಮಾದರಿಯಲ್ಲಿಯೇ ಸವಾಲುಗಳಿಗೂ ದಿಟ್ಟ ಉತ್ತರ ಕೊಡುತ್ತಲೇ ಬೆಳೆದವರು ಸಾನಿಯಾ.

ಮಣಿಕಟ್ಟಿನ ಮೋಡಿ
ಹೈದರಾಬಾದಿನ ಬಹಳಷ್ಟು ಕ್ರೀಡಾಪಟುಗಳು ತಮ್ಮ ಮಣಿಕಟ್ಟಿನ ಚಲನೆಯ ಮೋಡಿಯಿಂದ ಜನಪ್ರಿಯರಾದವರು. ಕ್ರಿಕೆಟ್‌ನಲ್ಲಿ ಮೊಹಮ್ಮದ್ ಅಜರುದ್ದೀನ್, ವಿವಿಎಸ್ ಲಕ್ಷ್ಮಣ್ ಅವರ ಬ್ಯಾಟಿಂಗ್ ನೆನಪಿಸಿಕೊಳ್ಳಿ. ಅವರ ಮಣಿಕಟ್ಟಿನ ಮೋಡಿಯ ಬ್ಯಾಟಿಂಗ್ ಕಣ್ಣು ಕಟ್ಟುತ್ತದೆ. ಅದೇ ರೀತಿ ‘ಮುತ್ತಿನ ನಗರಿ’ಯ ಹುಡುಗಿ ಸಾನಿಯಾ ಅವರ ಮಣಿಕಟ್ಟಿನ ಚಲನೆಯ ಮೋಡಿ ಗಮನ ಸೆಳೆಯುತ್ತದೆ. ಅವರ ಬಲಶಾಲಿ ಫೋರ್‌ಹ್ಯಾಂಡ್ ಸ್ಟ್ರೋಕ್‌ಗಳು ಈ ಮಾತಿಗೆ ಸಾಕ್ಷಿ.

‘ಸಾನಿಯಾ ಅವರ ಮನೋದಾರ್ಢ್ಯಕ್ಕೆ  ಮನಸೋತಿದ್ದೆ. ನಾವಿಬ್ಬರೂ ಜೊತೆಯಾಗಿ ಆಡಿದ್ದ ಮೊದಲ ಪಂದ್ಯದಲ್ಲಿ ಅವರು ಮಣಿಕಟ್ಟಿನ ಚಲನೆಯಲ್ಲಿ ಫ್ಲಿಕ್ ಮಾಡಿದ್ದ ಹೊಡೆತಗಳನ್ನು ನೋಡಿ ಬೆರಗಾಗಿದ್ದೆ. ಏಕಾಗ್ರತೆ, ನಿಖರತೆ ಮತ್ತು ಶಕ್ತಿ ಮೇಳೈಸಿದ್ದ ಹೊಡೆತಗಳು ಅವು’ ಎಂದು ಸಾನಿಯಾ ಡಬಲ್ಸ್ ಜೊತೆಗಾತಿ ಮಾರ್ಟಿನಾ ಹಿಂಗಿಸ್ ಅವರು ಸಾನಿಯಾ ಆತ್ಮಚರಿತ್ರೆಯ ಮುನ್ನುಡಿಯಲ್ಲಿ ಬರೆದಿದ್ದಾರೆ.

ಆರನೇ ವರ್ಷಕ್ಕೆ ಟೆನಿಸ್ ಅಂಗಳಕ್ಕೆ ಕಾಲಿಟ್ಟ ಸಾನಿಯಾಗೆ ಅಪ್ಪ ಇಮ್ರಾನ್ ಮಿರ್ಜಾ ಅವರೇ ಕೋಚ್. ಕ್ರೀಡಾ ಬರಹಗಾರರೂ ಆಗಿದ್ದ ಇಮ್ರಾನ್ ಮುದ್ರಣ ಕ್ಷೇತ್ರದ ಉದ್ಯಮಿಯೂ ಆಗಿದ್ದರು. ಟೆನಿಸ್ ಅಂಕಣದಲ್ಲಿ ಪಾದರಸದಂತೆ ಚಲಿಸುತ್ತಿದ್ದ ಮಗಳ ಪ್ರತಿಭೆಯನ್ನು ಪೋಷಿಸಲು ಅವರು ಟೊಂಕ ಕಟ್ಟಿ ನಿಂತರು. ತಾಯಿ ನಸೀಮಾ ಅವರ ಬೆಂಬಲವೂ ಮಗಳಿಗಿತ್ತು.

ಶಕ್ತಿಶಾಲಿಯಾದ ಮತ್ತು ನಿಖರವಾದ ಸರ್ವ್‌ (ಏಸ್‌)ಗಳನ್ನು ಸಿಡಿಸುವ ಕಲೆಯನ್ನು ಕರಗತ ಮಾಡಿಕೊಂಡರು. ಇದರಿಂದಾಗಿ 2003ರಲ್ಲಿ ವೃತ್ತಿಪರ ಟೆನಿಸ್‌ ಆರಂಭಿಸಲು ಸಾಧ್ಯವಾಯಿತು. ಇದಕ್ಕೂ ಮುನ್ನ ‘ಬೂಸಾನ್ ಏಷ್ಯನ್ ಗೇಮ್ಸ್’ ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೊತೆಗೆ ಕಂಚಿನ ಪದಕ ಗಳಿಸಿದ್ದರು. ಜೂನಿಯರ್ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಪಾರಮ್ಯ ಮೆರೆದರು.

ಹೈದರಾಬಾದಿನಲ್ಲಿ 2003ರಲ್ಲಿ ನಡೆದ ಆಫ್ರೋ ಏಷ್ಯನ್ ಗೇಮ್ಸ್‌ ಸಿಂಗಲ್ಸ್‌, ಡಬಲ್ಸ್‌ನಲ್ಲಿ  ರುಷ್ಮಿ ಚಕ್ರವರ್ತಿ ಜೊತೆಗೂಡಿ  ಮತ್ತು ಮಿಶ್ರ ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಚಿನ್ನದ ಪದಕಗಳನ್ನು ಗೆದ್ದರು.

ಆದರೆ 2005ರಲ್ಲಿ ಅವರ ಹೆಸರು ಆಟದ ಯಶಸ್ಸಿಗಿಂತಲೂ ವಿವಾದಗಳಿಂದಲೇ ಹೆಚ್ಚು ಪ್ರಚಲಿತದಲ್ಲಿತ್ತು. ಟೆನಿಸ್ ಆಡುವಾಗ ಅವರು ಧರಿಸುವ ಟೀ ಶರ್ಟ್ ಮತ್ತು ಸ್ಕರ್ಟ್‌ಗಳನ್ನು ಧರಿಸುವುದು ಇಸ್ಲಾಂ ನೀತಿಗೆ ವಿರುದ್ಧ ಎಂದು ಕೆಲವು ಮುಸ್ಲಿಂ ಸಂಘಟನೆಗಳು ಟೀಕಿಸಿದವು. ಅವರು ಆಡುವ ಪಂದ್ಯಗಳಿಗೆ ತಡೆಯೊಡ್ಡುವ ಬೆದರಿಕೆಯೂ ಇತ್ತು. ಆದರೆ ಅವರು ಜಗ್ಗಲಿಲ್ಲ.

ತಮ್ಮ ಆಟ ಮುಂದುವರಿಸಿದರು. ಅದೇ ವರ್ಷದ ನವೆಂಬರ್‌ನಲ್ಲಿ ಮುಕ್ತ ಲೈಂಗಿಕತೆ ಬಗ್ಗೆ ಅವರು ನೀಡಿದ್ದ ಹೇಳಿಯೂ ದೇಶಾದ್ಯಂತ ಟೀಕೆಗಳಿಗೆ   ಗ್ರಾಸವಾಗಿತ್ತು.‘ವಿವಾಹಪೂರ್ವ ಲೈಂಗಿಕ ಸಂಬಂಧ’ವನ್ನು ತಾವು ವಿರೋಧಿಸುವುದಾಗಿ ಹೇಳುವ ಮೂಲಕ ಅವರು ವಿವಾದಕ್ಕೆ ತೆರೆ ಎಳೆದರು.

2006ರಲ್ಲಿ ಇಸ್ರೇಲ್‌ನ ಆಟಗಾರ್ತಿ ಶಹರ್ ಪಿಯರ್ ಜೊತೆಗೂಡಿ ಸಾನಿಯಾ ಆಡುವುದನ್ನು ಮುಸ್ಲಿಂ ಸಂಘಟನೆಗಳು ವಿರೋಧಿಸಿದ್ದವು. ಆದರೆ ಇವರಿಬ್ಬರ ಜೋಡಿಯು 2007ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಡಬ್ಲ್ಯುಟಿಎ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಯಿತು. 

ಬೀಜಿಂಗ್ ಒಲಿಂಪಿಕ್ಸ್‌ಗೆ ಕೆಲವೇ ತಿಂಗಳುಗಳು ಬಾಕಿಯಿದ್ದವು. ‘ಇಂಡಿಯನ್ ವೇಲ್ಸ್’ ಟೂರ್ನಿಯಲ್ಲಿ ಮಣಿಕಟ್ಟಿನ ನೋವು ಅನುಭವಿಸಿದರು. ಆ ನೋವಿನಲ್ಲಿಯೇ ಇಡೀ ಪಂದ್ಯ ಆಡಿದರು. ಅದರಿಂದಾಗಿ ಗಾಯ ಉಲ್ಬಣವಾಯಿತು. ಮುಂಬೈನ ವೈದ್ಯರ ಸಲಹೆಯ ಮೇರೆಗೆ ಅಮೆರಿಕಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಆರು ತಿಂಗಳ ವಿಶ್ರಾಂತಿಯ ಆಗತ್ಯವಿತ್ತು. ಆದರೆ, ಅವರ ಬಳಿ ಅಷ್ಟು ಸಮಯ ಇರಲಿಲ್ಲ. ಅಲ್ಪಕಾಲದ ವಿಶ್ರಾಂತಿಯ ನಂತರ ಅಭ್ಯಾಸಕ್ಕೆ ಮರಳಿದ್ದರು. ವಿಂಬಲ್ಡನ್ ಟೂರ್ನಿಯ ಪಂದ್ಯಗಳಲ್ಲಿ ಅವರ ಆಟ ಕಳೆಗುಂದಿತ್ತು. ಗ್ರೌಂಡ್ ಸ್ಟ್ರೋಕ್ಸ್‌ ವೇಗ ಕಳೆದುಕೊಂಡಿದ್ದವು. ಮಣಿಕಟ್ಟು ಅವರ ಮಾತು ಕೇಳುತ್ತಿರಲಿಲ್ಲ. ಕಣ್ಣೀರು ಕೆನ್ನೆಗಳನ್ನು ತೋಯಿಸಿತ್ತು!

ನೋವು–ವಿವಾದಗಳ ಜುಗಲ್‌ಬಂದಿ
‘ನೋವು ತಡೆಯಲಾರೆ. ನನಗೆ ಆಡಲು ಸಾಧ್ಯವಾಗದು. ಒಲಿಂಪಿಕ್ಸ್‌ಗೆ ಹೋಗುವುದಿಲ್ಲ’ ಎಂದು ನಿರಾಶರಾಗಿದ್ದ ಸಾನಿಯಾಗೆ ಇಮ್ರಾನ್ ಮಿರ್ಜಾ ಆತ್ಮವಿಶ್ವಾಸ ತುಂಬಿದರು.

ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ಎಷ್ಟು ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಆ ಸಂದರ್ಭದಲ್ಲಿ ಸಾನಿಯಾ ಅವರು ಸಿಂಗಲ್ಸ್‌ನಲ್ಲಿ 99ನೇ ಶ್ರೇಯಾಂಕದಲ್ಲಿದ್ದರು. ಡಬಲ್ಸ್‌ನಲ್ಲಿ 65ನೇ ಶ್ರೇಯಾಂಕ ಪಡೆದಿದ್ದರು. ಸಿಂಗಲ್ಸ್‌ನಲ್ಲಿ ಮೊದಲ ಹಂತದಲ್ಲಿಯೇ ಎಡವಿದರು. ಡಬಲ್ಸ್‌ನಲ್ಲಿ ಸುನಿತಾ ರಾವ್ ಜೊತೆಗೂಡಿ ಪ್ರೀಕ್ವಾರ್ಟರ್‌ ಫೈನಲ್ ಹಂತದವರೆಗೂ ಸಾಗಿದ್ದರು. ಆದರೆ, ಕ್ವಾರ್ಟರ್‌ಫೈನಲ್ ತಲುಪಲು ಸಾಧ್ಯವಾಗಿರಲಿಲ್ಲ. 

ವಿವಾದಗಳಿಂದ ಬೇಸತ್ತಿದ್ದ ಅವರು 2008ರಲ್ಲಿ ಭಾರತದಲ್ಲಿ ನಡೆಯುವ ಟೆನಿಸ್ ಟೂರ್ನಿಗಳಲ್ಲಿ ಆಡುವುದಿಲ್ಲ ಎಂದು ಘೋಷಿಸಿದ್ದರು. ಆದರೆ 2010ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಣಕ್ಕಿಳಿದಿದ್ದರು. ಪದಕದ ಸಾಧನೆಯನ್ನೂ ಮಾಡಿದ್ದರು.

ಅದೇ ವರ್ಷ ಪಾಕಿಸ್ತಾನ ಕ್ರಿಕೆಟಿಗ ಶೋಯಬ್ ಮಲಿಕ್ ಅವರೊಂದಿಗೆ ನಡೆದ ಸಾನಿಯಾ ವಿವಾಹವು ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು. ಅವರನ್ನು ‘ಭಾರತ ವಿರೋಧಿ’ ಎಂಬ ಟೀಕೆಗಳು ಕೇಳಿ ಬಂದವು. ಮದುವೆಯ ನಂತರ ಅವರು ಆಟದಿಂದ ಹಿಂದೆ ಸರಿಯುವ ಕುರಿತ ಮಾತುಗಳೂ ಕೇಳಿಬಂದವು.

‘ನನ್ನ ಮದುವೆಯ ವಿಷಯದಲ್ಲಿ ಮಾಧ್ಯಮಗಳು ಅತಿರೇಕದಿಂದ ನಡೆದುಕೊಂಡವು. ಅವು ನನ್ನ ಜೀವನವನ್ನು ಅಸಹನೀಯಗೊಳಿಸಿದ್ದವು’ ಎಂದು ಸಾನಿಯಾ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ವಿವಾಹದ ನಂತರ ಸಾನಿಯಾ ಮತ್ತಷ್ಟು ಎತ್ತರಕ್ಕೆ ಬೆಳೆದರು. 2012ರಲ್ಲಿ ಅವರು ಮಣಿಕಟ್ಟಿನ ಗಾಯದಿಂದಾಗಿ ಸಿಂಗಲ್ಸ್‌ಗೆ ವಿದಾಯ ಹೇಳುವವರೆಗೂ ಭಾರತದ ಅಗ್ರಶ್ರೇಯಾಂಕದ ಆಟಗಾರ್ತಿಯಾಗಿದ್ದರು.

ಲಂಡನ್ ಒಲಿಂಪಿಕ್ಸ್‌ನ  ಉದ್ಘಾಟನೆಯ ಸಂದರ್ಭದಲ್ಲಿಯೂ ಅವರು ಭಾರತದ ಧ್ವಜ ಬಿಟ್ಟು ಭಾಗವಹಿಸಿದ್ದರು ಎಂದು ವಿವಾದವಾಗಿತ್ತು. ಆದರೆ ಎಂದಿನಂತೆ ಮುಗುಳ್ನಗತ್ತಲೇ ಅವರು ತಮ್ಮ ಆಟದತ್ತ ಗಮನ ನೀಡಿದ್ದರು. ವನಿತೆಯರ ಡಬಲ್ಸ್‌ನಲ್ಲಿ ರುಷ್ಮಿ ಚಕ್ರವರ್ತಿ ಜೊತೆಗೂಡಿ 32ರ ಘಟ್ಟ ತಲುಪಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೊತೆಗೆ ಕ್ವಾರ್ಟರ್‌ ಫೈನಲ್ ತಲುಪಿ ದಾಖಲೆ ಬರೆದರು.

ಮೂರನೇ ಒಲಿಂಪಿಕ್ಸ್‌!
ಕಳೆದ ನಾಲ್ಕು ವರ್ಷಗಳಲ್ಲಿ ಸಾನಿಯಾ ಜೀವನದಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿವೆ. ತಮ್ಮ ಜೊತೆಗಾತಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಹತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 29 ವರ್ಷದ ಸಾನಿಯಾ ಅವರ ಆಟದಲ್ಲಿ ಮತ್ತಷ್ಟು ಪರಿಪಕ್ವತೆ ಕಾಣುತ್ತಿದೆ. ಡಬಲ್ಸ್‌ನಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿಯಾಗಿ ಪ್ರಸಕ್ತ ‘ರಿಯೊ ಒಲಿಂಪಿಕ್ಸ್‌’ನಲ್ಲಿ ಕಣಕ್ಕಿಳಿಯಲಿದ್ದಾರೆ.

ಮೂರನೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಸಾನಿಯಾ ಅವರನ್ನು ಗೌರವಿಸಲು ಇತ್ತೀಚೆಗೆ ತೆಲಂಗಾಣದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಯಿತು. ಆ ಸಂದರ್ಭದಲ್ಲಿ ಕೆಲವರು ‘ಆಕೆ ಪಾಕಿಸ್ತಾನದ ಸೊಸೆ’ ಎಂದು ವ್ಯಂಗ್ಯವಾಡಿದರು. ಅದಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ‘ಸಾನಿಯಾ ಹೈದರಾಬಾದಿನ ಮಗಳು’ ಎಂದು ತಿರುಗೇಟು ನೀಡಿದರು. 

ಎಷ್ಟೆಲ್ಲ ಸಾಧನೆಗಳ ನಂತರವು ಅವರ ಐಬುಗಳನ್ನು ಹುಡುಕಿ ಕಾಲೆಳೆಯುವ ಹುನ್ನಾರಗಳು ನಡೆಯುತ್ತಲೇ ಇವೆ. ಆದರೆ, ಪ್ರತಿಯೊಂದು ವಿವಾದ ಎದುರಾದಗಲೂ ಸಾನಿಯಾ ಮತ್ತಷ್ಟು ಬೆಳೆದು ನಿಂತಿದ್ದಾರೆ. ಯಾವುದೋ ಒಂದು ಟೀಕೆಗೆ ಸೋತು ಅವರು ಟೆನಿಸ್ ಅಂಗಳದಿಂದ ಹಿಂದೆ ಸರಿದಿದ್ದರೆ ಅಥವಾ ಸೌಂದರ್ಯವತಿಯೂ ಆಗಿರುವ ಅವರು ಬಾಲಿವುಡ್ ಅವಕಾಶವನ್ನು ಸ್ವೀಕರಿಸಿದ್ದರೆ ದೇಶಕ್ಕೆ ನಷ್ಟವಾಗುತ್ತಿತ್ತು. ‘ರಿಯೊ ಒಲಿಂಪಿಕ್ಸ್‌’ನಲ್ಲಿ ಪದಕ ತಂದುಕೊಡುವ ಭರವಸೆಯ ಆಟಗಾರ್ತಿಯ ಕೊರತೆಯಾಗುತ್ತಿತ್ತು.ಎಲ್ಲಕ್ಕಿಂತ ಮಿಗಿಲಾಗಿ ಬಾಲಕಿಯರನ್ನು ಕ್ರೀಡಾಂಗಣದತ್ತ ಸೆಳೆಯಲು ಸಾನಿಯಾ ಸಾಧನೆಗಳ ಕಥೆಗಳು ನಮ್ಮ ಪಾಲಿಗೆ ಇರುತ್ತಿರಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT