ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣ: ಇತಿ ಮಿತಿ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಒಂದೇ ನಾಣ್ಯದ ಎರಡು ಮುಖಗಳು 
ಈ ಜಗತ್ತಿನ ಪ್ರತಿ ಸೃಷ್ಟಿಗೂ ಎರಡು ಮುಖಗಳು. ಒಂದು ಒಳ್ಳೆಯದು ಮತ್ತೊಂದು ಕೆಟ್ಟದ್ದು. ಯಾವುದೇ ಒಂದು ವಸ್ತು ಖ್ಯಾತಿ ಪಡೆದರೂ, ಕುಖ್ಯಾತಿ ಪಡೆದರೂ ಅದಕ್ಕೆ ಕಾರಣ ಅದು ಎಲ್ಲಿ, ಎಂಥವರಿಂದ ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದಾಗಿರುತ್ತದೆ. ಇತ್ತೀಚೆಗೆ, ಕಾರುಗಳ ಒಳಗೆ ಬಿಸಿಲಿನಿಂದ ರಕ್ಷಣೆ ಪಡೆಯಲು ಕಿಟಕಿಯ ಗಾಜುಗಳಿಗೆ ಹಾಕುತ್ತಿದ್ದ ಕಪ್ಪು ಫಿಲ್ಮ್‌ಗಳನ್ನು ನಿಷೇಧಿಸಲಾಯಿತು. ಕಾರಣ ಕಾರಿನ ಒಳಗಿನ ದೃಶ್ಯಗಳು ಪಾರದರ್ಶಕವಾಗುವುದರಿಂದ ಅಪರಾಧಗಳನ್ನು ತಡೆಯಬಹುದೆಂಬ ಉದ್ದೇಶ. ಆದರೆ ಒಳಗೆ ಯಾರಿದ್ದಾರೆ, ಏನಿಟ್ಟಿದ್ದಾರೆ, ಎಷ್ಟು ಒಡವೆ ಧರಿಸಿದ್ದಾರೆ ಎಂದು ಸುಲಭವಾಗಿ ತಿಳಿಯುವುದರಿಂದಲೂ ಅಪರಾಧಗಳು ಹೆಚ್ಚಾಗಬಹುದಲ್ಲವೇ?.

ಅದೇ ರೀತಿ ಜಾಲತಾಣಗಳು ತಮ್ಮಲ್ಲಿ ಒಳ್ಳೆಯದನ್ನು, ಕೆಟ್ಟದ್ದನ್ನೂ ಅಡಗಿಸಿಕೊಂಡಿವೆ, ಆದರೆ ಅದು ಬಳಸುವವರ ಮೇಲೆ ನಿರ್ಧರಿತ. ಈಗೀಗ ಇನ್ನೂ ಸರಿಯಾಗಿ ಪೆನ್ಸಿಲ್ ಹಿಡಿಯಲು ಬಾರದ ಮಕ್ಕಳ ಕೈಗಳಲ್ಲೂ ಮೊಬೈಲ್‌ಗಳು, ಟ್ಯಾಬ್‌ಗಳು ಓಡಾಡುತ್ತಿವೆ. ಕೆಲವು ಶಾಲೆಗಳಲ್ಲಿ ಹೋಂವರ್ಕ್‌ಗಳನ್ನು ಆನ್‌ಲೈನ್ ಮೂಲಕ ತಿಳಿಸುವ ವ್ಯವಸ್ಥೆ ಇದೆ. ಅಷ್ಟೊಂದು ಸಣ್ಣ ವಯಸ್ಸಿಗೆ ಈ ಸಾಧನಗಳನ್ನು ಬಳಸುವ ಅನಿವಾರ್ಯತೆ ಇದೆಯೇ ಎನ್ನುವುದು ಮೊದಲ ಪ್ರಶ್ನೆ. ಅಕಸ್ಮಾತ್ ಅನಿವಾರ್ಯವೇ ಆಗಿದ್ದಲ್ಲಿ ಈ ಸಾಧನಗಳನ್ನು ಬಳಸುವಾಗ ಮಕ್ಕಳು ತಮ್ಮ ವಯೋಸಹಜತೆಗೆ ಮೀರಿದ ತಾಣಗಳಿಗೆ ಹೋಗದಂತೆ ಎಚ್ಚರವಹಿಸುವ ಜವಾಬ್ದಾರಿ ಪೋಷಕರದ್ದು, ಶಿಕ್ಷಕರದ್ದು ಹಾಗು ಇಡೀ ಸಮಾಜದ್ದು. ಜಾಲತಾಣಗಳನ್ನು ಇತಿಮಿತಿಯಲ್ಲಿ ಬಳಸಿದರೆ, ಸರಿ-ತಪ್ಪುಗಳ ವಿವೇಚನೆಯಿದ್ದರೆ, ಸಮಾಜಮುಖಿ ಉದ್ದೇಶಗಳನ್ನು ಅಭಿವ್ಯಕ್ತಗೊಳಿಸಲು, ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗು ಭಾಷಾಭಿವೃದ್ದಿಗೂ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿರು ವುದರಲ್ಲಿ ಅನುಮಾನವಿಲ್ಲ.                                                  
–ಲತಾ ಕೃಷ್ಣ, ಬೆಂಗಳೂರು

ಎಲ್ಲಿಗೋ ಪಯಣ, ಅದ್ಯಾವುದೋ ದಾರಿ
ಹೌದು, ನಾವು ಬೇರೆಯೇ ಭಾವಿಸಿದ್ದೆವು. ಸಾಮಾಜಿಕ ಜಾಲತಾಣ ಎಂದರೆ ಪರಸ್ಪರ ಚರ್ಚೆ, ಸಂವಾದ, ವಿಚಾರ ವಿನಿಮಯ, ಮಾಹಿತಿ ಕೊಡುಕೊಳ್ಳುವಿಕೆ ಇತ್ಯಾದಿ ಎಂದು. ಜ್ಞಾನಾರ್ಜನೆಗೆ ಅವಕಾಶದೊಂದಿಗೆ ನಮ್ಮನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದೆಂಬ ಆಶಯವೂ ಸೇರಿತ್ತು. ಇಂಥ ಕಾರಣಗಳ ಹಿನ್ನೆಲೆಯಲ್ಲಿಯೇ ನಾವೇಕೆ ಜಾಲತಾಣದ ಒಂದು ಗುಂಪನ್ನು ಮಾಡಿಕೊಳ್ಳಬಾರದು ಎಂಬ ಯೋಚನೆ ಮೂಡಿತು. ಒಂದು ಗುಂಪನ್ನು ರೂಪಿಸಿಕೊಂಡೆವು. ಈ ಗುಂಪಿನ ಬಹುಪಾಲು ಸದಸ್ಯರು ಪರಿಚಿತರೇ ಇರಬೇಕೆಂದು ನಮ್ಮ ನಮ್ಮಲ್ಲೇ ಸದಸ್ಯರನ್ನೂ ಮಾಡಿಕೊಂಡೆವು. ಸರಿ, ಶುರುವಾಯಿತು: ಮಾತುಕತೆ, ಸಂದೇಶ ರವಾನೆ; ‘ಗುಡ್‌ನೈಟ್’, ‘ಗುಡ್ ಮಾರ್ನಿಂಗ್.’ ಇದು ಇಷ್ಟಕ್ಕೇ ನಿಲ್ಲಲಿಲ್ಲ, ಎಲ್ಲೆಲ್ಲಿಗೋ ಪಯಣ. ಮಾತುಗಳೂ ಚೌಕಟ್ಟನ್ನು ಮೀರತೊಡಗಿದವು. ಒಂದು ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರುತ್ತದೆಂದು ನಂಬಿದ್ದ ನಮ್ಮ ಭಾವನೆ ತಪ್ಪಾಯಿತು. ಕಾಡುಹರಟೆಯ ಗೊಂಡಾರಣ್ಯವಾಯಿತು. ಇಷ್ಟಾದರೆ ಪರವಾಗಿಲ್ಲ. ಸಂದೇಶಗಳು ರೂಪ ಬದಲಿಸಿದವು. ರೂಪ, ವಿರೂಪ, ಕುರೂಪ ಎಲ್ಲ ಮುಖಗಳೂ ಅನಾವರಣಗೊಂಡವು.

ದ್ವಂದ್ವಾರ್ಥಗಳ, ಅಸಹ್ಯ, ಅಶ್ಲೀಲ ಮಾತುಗಳು. ಇದೆಂಥ ಜಾಲತಾಣ, ಇದೆಂಥ ವೇದಿಕೆ ಎಂದು ಬೇಸರಹುಟ್ಟಿತು. ಇಂಥ ಮಾತುಗಳಿಗೆ ಕಡಿವಾಣ ಹಾಕಬೇಕೆಂದರೆ ಆರೋಪಗಳು ನಮ್ಮನ್ನೇ ಸುತ್ತಿಕೊಂಡವು. ‘ನೀವು ಶಿಲಾಯುಗದ ಜನ’, ‘ನೀವು ಆಧುನಿಕರಲ್ಲ’, ‘ನೀವು ಮಡಿವಂತರು, ಉದಾರ ಭಾವನೆಯೇ ಇಲ್ಲ’ ಇತ್ಯಾದಿ ಇತ್ಯಾದಿ. ನಾವು ಓದುವುದನ್ನು ನಮ್ಮ ಮಕ್ಕಳೂ ಓದುತ್ತಾರೆ; ನಮ್ಮ ಪರಿಸರದಲ್ಲಿಯೇ ಇರುವ ಮಕ್ಕಳೂ ಓದುತ್ತಾರೆ. ಅದರ ಪರಿಣಾಮ ಏನಾಗಬಹುದು? ಈ ಯಾವುದರ ಪರಿವೆಯೂ ಇಲ್ಲದಂತೆ ಸಂದೇಶಗಳನ್ನು ಕಳುಹಿಸುವವರು ವರ್ತಿಸಿದರು. ಜಾಲತಾಣದ ಬಲೆ ನಮ್ಮನ್ನೆಲ್ಲ ಸುತ್ತಿಕೊಳ್ಳತೊಡಗಿತು. ಇದರಿಂದ ಹೊರಬಂದು ಮುಕ್ತವಾಗಿ ಉಸಿರಾಡಿದರೆ ಸಾಕು ಎಂಬ ಪರಿಸ್ಥಿತಿ ಉಂಟಾಯಿತು. ಹಾಗೋ ಹೀಗೋ ಅದರಿಂದ ಹೊರಬಂದಾಗ ಕೆಟ್ಟ ಪ್ರಪಂಚವನ್ನು ತೊರೆದು ನಿಟ್ಟುಸಿರು ಬಿಟ್ಟ ಭಾವ ನನ್ನದಾಗಿತ್ತು.
–ತನ್ಮಯಿ ಪ್ರವೀಣ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT