ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಕ್ಕಿ ಕಾರ್ಮೋಡದಲ್ಲೂ ವಹಿವಾಟಿನ ಮಿಂಚು

Last Updated 28 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಎನ್‌ಹೆಚ್ 209ರಲ್ಲಿರುವ ಒಂದು ಉಪನಗರ, ಇನ್ನೂ ಹಸಿರನ್ನು ಉಳಿಸಿಕೊಂಡಿರುವ ವಿಶಿಷ್ಟ ಹೊರವಲಯ ಕನಕಪುರ ರಸ್ತೆ ಇದೀಗ ರಿಯಾಲ್ಟಿ ವ್ಯವಹಾರದ ಒಂದು ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ.

ಬನ್ನೇರುಘಟ್ಟ ರಸ್ತೆಗೆ ಸಮಾನಾಂತರವಾಗಿರವ ಕನಕಪುರ ರಸ್ತೆ, ಜೆ.ಪಿ. ನಗರ, ಜಯನಗರ, ಬನಶಂಕರಿ ಬಡಾವಣೆಗೆ ಹತ್ತಿರದಲ್ಲಿರುವ ಕಾರಣ ಹಾಗೂ ನೈಸ್ ರಸ್ತೆಯ ಮೂಲಕ ಎಲ್ಲಾ ಪ್ರಮುಖ ಹೆದ್ದಾರಿಗಳಿಗೆ (ತುಮಕೂರು ರಸ್ತೆ, ಮೈಸೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಮತ್ತು ಸರ್ಜಾಪುರ) ಸಂಪರ್ಕವಿರುವ ಕಾರಣ ಹೆಚ್ಚಿನ ಜನರನ್ನು ತನ್ನತ್ತ ಸೆಳೆದುಕೊಂಡಿದೆ. ಅಂತೆಯೇ ಕಾಂಕಾರ್ಡ್, ಶೋಭಾ ಡೆವೆಲಪರ್ಸ್, ಮಂತ್ರಿ, ಬ್ರಿಗೇಡ್‌, ಸೆಂಚುರಿ, ನಿಟೇಶ್ ಸೇರಿದಂತೆ ಅನೇಕ ರಿಯಾಲ್ಟಿ ಸಂಸ್ಥೆಗಳು ಕನಕಪುರ ರಸ್ತೆಯತ್ತ ದಾಪುಗಾಲು ಹಾಕುತ್ತಿವೆ.

ನೈಸ್ ರಸ್ತೆ ತಂದ ಶುಕ್ರದೆಸೆ
ಕಳೆದ ಐದಾರು ವರ್ಷಗಳ ಹಿಂದೆ ಸತ್ತ ಹೆಬ್ಬಾವಿನಂತೆ ಮಲಗಿಕೊಂಡಿದ್ದ ಕನಕಪುರ ರಸ್ತೆ, ನೈಸ್‌ ರಸ್ತೆಯ ಕಾಮಗಾರಿ ಮುಗಿಯುತ್ತಿದ್ದಂತೆ ಮೈಕೊಡವಿಕೊಂಡು ಎದ್ದು ಕುಳಿತಿತ್ತು. ಕೇವಲ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರಿನ ಇತರೆ ದಿಕ್ಕುಗಳು ಸಾಧಿಸಿದ ಬೆಳವಣಿಗೆಯನ್ನು ತಾನು ಕೆಲವೇ ವರ್ಷಗಳಲ್ಲಿ ಮುಗಿಸಿಬಿಡುವ ಧಾವಂತದಲ್ಲಿ ಮುನ್ನುಗ್ಗಲು ಆರಂಭಿಸಿತ್ತು.

ಈ ಭಾಗದಲ್ಲಿ ಮುಖ್ಯವಾಗಿ ವಸತಿ ಯೋಜನೆಗಳಿಗೇ ಹೆಚ್ಚು ಆದ್ಯತೆ. ನೈಸ್ ರಸ್ತೆಯು ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಿದ ಪರಿಣಾಮ ಈ ರಸ್ತೆಗೆ ಶುಕ್ರದೆಸೆ ಆರಂಭವಾಯಿತೆಂದು ಹೇಳಬಹುದು. ಇದರ ಪರಿಣಾಮ ಕಳೆದ 2–3 ವರ್ಷಗಳಿಂದ ಈಚೆಗೆ ನಿವೇಶನಗಳ ಬೆಲೆಯಲ್ಲಿ ಶೇ 30ರಿಂದ 60ರಷ್ಟು ಹೆಚ್ಚಳ ಉಂಟಾಗಿದೆ. ಆದಾಗ್ಯೂ ಈ ರಸ್ತೆಯುದ್ದಕ್ಕೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಬೆಲೆ ಇದೆ. ಆ ಬೆಲೆಯಲ್ಲಿ ಸಾಕಷ್ಟು ಅಂತರವಿದೆ.

ಪ್ರಸ್ತುತ ಪ್ರತಿ ಚದರ ಅಡಿ ಭೂಮಿ ಬೆಲೆ  ₹3,500 ಸಾವಿರದಿಂದ ಆರಂಭವಾಗಿ ₹25 ಸಾವಿರ ದರದಲ್ಲಿ ನಿಲ್ಲುತ್ತದೆ. ಆದರೆ ಆರು ಪಥದ ರಸ್ತೆ ಪೂರ್ಣಗೊಳ್ಳುವ ವೇಳೆಗೆ ಈ ಬೆಲೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ರಿಯಾಲ್ಟಿ ಉದ್ಯಮಿಗಳು.

ಶಿಕ್ಷಣ ಸಂಸ್ಥೆಗಳ ಬೀಡು
ಈ ರಸ್ತೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿರುವುದರಿಂದಲೂ ಈ ಭಾಗದ ವಸತಿ ಸಮುಚ್ಚಯಗಳಿಗೆ ಬೇಡಿಕೆ ಹೆಚ್ಚಿದೆ. ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ (IIAEM), ಸೆಂಟರ್ ಫಾರ್ ರಿಸರ್ಚ್, ಎಜುಕೇಶನ್, ಸಾಧನಾ ಅಂಡ್ ಟ್ರೇನಿಂಗ್ (CREST), ಅನೇಕ ಅಂತರರಾಷ್ಟ್ರೀಯ ಶಾಲೆಗಳು (ದೆಹಲಿ ಪಬ್ಲಿಕ್ ಸ್ಕೂಲ್, ಆಲ್ಪೈನ್ ಪಬ್ಲಿಕ್ ಸ್ಕೂಲ್, ಜ್ಯೋತಿ ಕೇಂದ್ರಿಯ ವಿದ್ಯಾಲಯ, ಎಪಿಎಸ್ ಇನ್‌ಸ್ಟಿಟ್ಯೂಷನ್ಸ್ ಹಾಗೂ ಪ್ರತಿಷ್ಠಿತ ಖಾಸಗಿ ಕಾಲೇಜುಗಳು (ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು, ಯಲ್ಲಮ್ಮ ದಾಸಪ್ಪ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,  ನಂದಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸೇರಿದಂತೆ ಅನೇಕ ಸಂಸ್ಥೆಗಳು ಇಲ್ಲಿವೆ.

‘ಸರ್ಜಾಪುರ ಹೊರವರ್ತುಲ ರಸ್ತೆ, ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿಗೆ ಹೋಲಿಸಿದರೆ ಈ ಭಾಗದಲ್ಲಿ ಇನ್ನೂ ಹಸಿರು ಉಳಿದುಕೊಂಡಿದೆ. ನೀರಿನ ಕೊರತೆ ಇಲ್ಲ ಹಾಗೂ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಇಲ್ಲಿ ತಲೆ ಎತ್ತಿವೆ ಎನ್ನುವುದೇ ಸಾಕಷ್ಟು ವಸತಿ ಯೋಜನೆಗಳು ಇತ್ತ ಹರಿದು ಬರಲು ಕಾರಣ ಹಾಗೂ ಮುಖ್ಯ ಆಕರ್ಷಣೆ’ ಎನ್ನುತ್ತಾರೆ ಕಾಂಕಾರ್ಡ್‌ ಗ್ರೂಪ್‌ನ ಅಧ್ಯಕ್ಷರಾದ ಬಿ.ಎಸ್. ಶಿವರಾಮ.

‘ಎಲೆಕ್ಟ್ರಾನಿಕ್ ಸಿಟಿ ಹಾಗೂ ಬನ್ನೇರುಘಟ್ಟ ರಸ್ತೆಯ ಕಡೆ ಉದ್ಯೋಗದಲ್ಲಿರುವವರಿಗೂ ಕನಕಪುರ ರಸ್ತೆಯಲ್ಲಿ ಮನೆ ಮಾಡುವುದು ಮೊದಲ ಆದ್ಯತೆಯಾಗುತ್ತಿದೆ. ಜಯನಗರ, ಜೆ.ಪಿ.ನಗರ, ಬನಶಂಕರಿಯಂತಹ ಪ್ರತಿಷ್ಠಿತ ಬಡಾವಣೆಗಳಲ್ಲಿ ಗಗನಕ್ಕೇರಿದ ಭೂಮಿ ಬೆಲೆ ಸಾಮಾನ್ಯರಿಗೆ ಕೈಗೆಟುಕುತ್ತಿಲ್ಲ. ಹೀಗಾಗಿ ಸಾರಕ್ಕಿ ವೃತ್ತದಿಂದ ಮುಂದೆ ಕನಕಪುರ ರಸ್ತೆಯಲ್ಲಿನ ಭೂಮಿಗೆ ಬೇಡಿಕೆ ಸೃಷ್ಟಿಯಾಗಿದೆ’ ಎನ್ನುತ್ತಾರೆ ಅವರು.

ಅಪಾರ್ಟ್‌ಮೆಂಟ್ ಆಸಕ್ತಿ ಕಡಿಮೆ
ಅಪಾರ್ಟ್‌ಮೆಂಟ್ ಸಂಸ್ಕೃತಿ ಈ ಭಾಗದಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಆದರೆ ಸ್ವತಂತ್ರ ಮನೆಗಳು ಹಾಗೂ ನಿವೇಶನಗಳ ಬೇಡಿಕೆ ಹೆಚ್ಚಿದೆ. ತೀರಾ ಸಾಮಾನ್ಯ ವರ್ಗದವರನ್ನು ಹಾಗೂ ಉಳ್ಳವರನ್ನೂ ಗಮನದಲ್ಲಿಟ್ಟುಕೊಂಡು ಎರಡೂ ವರ್ಗದ ಆಸಕ್ತಿ–ಅಭಿರುಚಿಗೆ ತಕ್ಕಂತೆ ಹಾಗೂ ಅವರ ದರಕ್ಕೆ ಹೊಂದುವಂತೆ ವಸತಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.

₹ 30ರಿಂದ 40 ಲಕ್ಷ ಒಳಗಿನ ಬೆಲೆಯ ಫ್ಲ್ಯಾಟ್‌ಗೆ ಬೇಡಿಕೆ ಇದೆಯಾದರೂ, ಬೇಡಿಕೆಗಿಂತ ಪೂರೈಕೆಯೇ ಹೆಚ್ಚಿರುವುದನ್ನು ಗಮನಿಸಬಹುದು. ಪ್ರಸಕ್ತ ಬೇಡಿಕೆಯ ಪ್ರಮಾಣ ಶೇ 22ರಷ್ಟಿದ್ದರೆ, ಪೂರೈಕೆಯ ಪ್ರಮಾಣ ಶೇ 35ರಷ್ಟಿದೆ. ಅಂದರೆ ಶೇ 10ರಿಂದ 15ರಷ್ಟು ಫ್ಲ್ಯಾಟ್‌ಗಳು ಖಾಲಿ ಇವೆ. ಕಳೆದ ಐದಾರು ವರ್ಷಗಳ ಹಿಂದೆ ಇಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲ್ಯಾಟ್‌ಗಳ ಬೆಲೆ ₹ 25ರಿಂದ 30 ಸಾವಿರದಷ್ಟಿತ್ತು. ಇದೀಗ ಅದು ₹30ರಿಂದ 40 ಸಾವಿರ ತಲುಪಿದೆ. ಮುಂದೆ ಈ ಬೆಲೆ ಇನ್ನೂ ಹೆಚ್ಚಲಿದೆ.

ಆದಾಗ್ಯೂ, ಬೆಂಗಳೂರಿನಲ್ಲಿ ಒಂದು ಮನೆ ಬೇಕು ಎನ್ನುವವರು ಕನಕಪುರ ರಸ್ತೆಯತ್ತ ನೋಡಬಹುದು. ಏಕೆಂದರೆ ಇಲ್ಲಿನ ಪರಿಸರದಲ್ಲಿ ಇನ್ನೂ ಕಲ್ಮಶ ಸೇರಿಕೊಂಡಿಲ್ಲ. ನಗರ ಬದುಕಿನ ಜಂಜಡ ಇನ್ನೂ ಸಂಪೂರ್ಣವಾಗಿ ಆವರಿಸಿಕೊಂಡಿಲ್ಲ. ಈಗಂತೂ ಅವಸರವಿಲ್ಲದ, ನೆಮ್ಮದಿಯ ಬದುಕು ಇಲ್ಲಿ ಸಾಧ್ಯ. ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ಇಲ್ಲಿನ ಬೆಲೆಯೂ ದ್ವಿಗುಣಗೊಳ್ಳಲಿದೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೊಂದು ನೆಲೆಯನ್ನು ಕಂಡುಕೊಳ್ಳುವುದು ಉತ್ತಮ ಆಯ್ಕೆ.

ಎಲ್ಲೆಲ್ಲಿ ಎಷ್ಟು ಬೆಲೆ
‘ಕನಕಪುರ ರಸ್ತೆ ಎನ್ನುವುದೊಂದು ಬಹು ದೊಡ್ಡ ಪ್ರದೇಶ. ಇಲ್ಲಿನ ಬೆಲೆಯ ಬಗ್ಗೆ ಮಾತನಾಡುವಾಗ ಬಹಳಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಒಂದೊಂದು ಬಡಾವಣೆಗಳಲ್ಲಿ ಒಂದೊಂದು ಬೆಲೆ ಇದೆ. ಒಂದೇ ಬಡಾವಣೆಯ ಬೇರೆ ಬೇರೆ ಭಾಗಗಳ ಬೆಲೆಯಲ್ಲಿ ವ್ಯತ್ಯಾಸವಿದೆ. ಜಯನಗರ–ಜೆ.ಪಿ.ನಗರದಲ್ಲಿ ಸಾಮಾನ್ಯರು ಮುಖವೆತ್ತಿ ನೋಡುವಂತೆಯೂ ಇಲ್ಲ. ಪ್ರತಿ ಅಡಿಗೆ 20ರಿಂದ 25 ಸಾವಿರ ರೂಪಾಯಿ ಬೆಲೆ ಇದೆ. ಆದರೆ ಅಲ್ಲಿಂದ ತುಸು ಮುಂದಕ್ಕೆ ಹೋದರೆ ಮಾರನಹಳ್ಳಿ, ಸಾರಕ್ಕಿಯಲ್ಲಿ ಬೆಲೆ ಕಡಿಮೆ ಇದೆ. ಪ್ರತಿ ಅಡಿ ಬೆಲೆ ₹ 6ರಿಂದ ₹ 8.5 ಸಾವಿರವರೆಗೂ ಇದೆ. ಆದರೆ ಸಾರಕ್ಕಿ ಕೆರೆಯ ಭಾಗದಲ್ಲಿರುವ ಮನೆಗಳನ್ನು ಸರ್ಕಾರ ಕೆಡವಿದ ನಂತರ ಮತ್ತಷ್ಟು ಬೆಲೆ ಇಳಿದಿದೆ’ ಎನ್ನುತ್ತಾರೆ ಬ್ರೋಕರ್ ಶಿವರಾಜು.

ಕೋಣನಕುಂಟೆಗೆ ಬಂದರೆ ಮುಖ್ಯ ರಸ್ತೆಗಳಲ್ಲಿ ದೊಡ್ಡ ದೊಡ್ಡ ನಿವೇಶನಗಳೇ ಇದ್ದು, ಬೆಲೆ ಹೆಚ್ಚಿದೆ. ಆದರೆ ಒಳಪ್ರದೇಶಗಳಿಗೆ ಹೋದರೆ ಬೆಲೆ ತುಸು ಇಳಿಯುತ್ತ ಹೋಗುತ್ತದೆ. ಆಯಾ ರಸ್ತೆಗಳ ಮೇಲೆ ನಿವೇಶನಗಳ ಬೆಲೆ ₹ 5.5ರಿಂದ ₹ 7 ಸಾವಿರದ (ಪ್ರತಿ ಅಡಿಗೆ)ವರೆಗೆ ಇದೆ.

ತಲಘಟ್ಟದಲ್ಲಿ ಕಡಿಮೆ ಬೆಲೆಗಿದೆ. ಬಾಲಾಜಿ ಬಡಾವಣೆ, ನಾರಾಯಣ ನಗರದಲ್ಲೆಲ್ಲ ₹4 ಸಾವಿರದಿಂದ ₹ 6 ಸಾವಿರದ ವರೆಗೂ ಇದೆ. ಇಲ್ಲಿ ಈಸ್ಟ್ ಹಾಗೂ ನಾರ್ಥ್ ಫೇಸಿಂಗ್ ನಿವೇಶನಗಳ ಬಲೆ ಹೆಚ್ಚಿದೆ. ಹಾಗೆಯೇ ಒಳಭಾಗದಲ್ಲಿರುವ ನಿವೇಶನಗಳ ಬೆಲೆ ಇಳಿಯುತ್ತ ಹೋಗುತ್ತದೆ ಎನ್ನುವ ವಿವರಣೆ ಅವರದು.

ಹೆಚ್ಚಿದೆ ವಿಲ್ಲಾ ಆಕರ್ಷಣೆ
ನೈಸ್‌ ರಸ್ತೆಯ ನಂತರವೇ ಕನಕಪುರ ರಸ್ತೆಗೆ ಒಂದು ಪ್ರತಿಷ್ಠಿತ ಐಡೆಂಟಿಟಿ ಸಿಕ್ಕಿದ್ದು. ಮುಂದೆ ಆರು ಪಥದ ರಸ್ತೆ ಹಾಗೂ ಮೆಟ್ರೊ ಸಂಪರ್ಕ ಸಿದ್ಧಗೊಂಡ ನಂತರ ಈ ರಸ್ತೆಯ ಮುಖಚರ್ಯವೇ ಬದಲಾಗಲಿದೆ. 

ಈಗಿನ ಟ್ರೆಂಡ್‌ ಪ್ರಕಾರ ಈ ಭಾಗದಲ್ಲಿ ವಿಲ್ಲಾ ಮನೆಗಳಿಗೆ ಬೇಡಿಕೆ ಹೆಚ್ಚಿದೆ. ಮುಂದಿನ ದಿನಮಾನಗಳಲ್ಲಿ ಬೆಂಗಳೂರಿನ ಸುತ್ತ ಮುತ್ತ 50 ಕೀ.ಮೀ. ದೂರದವರೆಗೆ ಯಾರಿಗೂ ಮನೆ, ನಿವೇಶನಗಳನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೇ ಮುಂದಿನ ಪೀಳಿಗೆಗೆ ಬೇಕು ಎನ್ನುವ ಉದ್ದೇಶದಿಂದ ಈ ಭಾಗದಲ್ಲಿ ವಿಲ್ಲಾ ಕೊಳ್ಳುವತ್ತ ಜನ ಉತ್ಸುಕರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಇಲ್ಲಿನ ಐಟಿ ಕ್ಷೇತ್ರದಲ್ಲಿ  ಉದ್ಯೋಗ ಅರಸಿಕೊಂಡು ಬಂದ ಉತ್ತರ ಭಾರತದ ಜನರಿಗೆ ಕನಕಪುರ ರಸ್ತೆಯ ವಿಲ್ಲಾ ಪ್ರಾಜೆಕ್ಟ್ ಹೆಚ್ಚು ಆಕರ್ಷಿಸುತ್ತಿದೆ.
ಬಿ.ಎಸ್. ಶಿವರಾಮ, ಕಾಂಕಾರ್ಡ್‌ ಗ್ರೂಪ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT