ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಗ್ರಾಹಿಗೆ ನಾದನಮನ

ಟಿ.ಬಿ. ನರಸಿಂಹಾಚಾರ್‌ ಜನ್ಮ ಶತಾಬ್ದಿ ಇಂದು
Last Updated 24 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸಂಗೀತ ವಿಮರ್ಶಕರಾಗಿ, ಸಂಗೀತಜ್ಞ ಹಾಗೂ ವ್ಯವಸ್ಥಾಪಕರಾಗಿ ಮಹತ್ವದ ಸೇವೆ ಸಲ್ಲಿಸಿದವರು ನರಸಿಂಹಾಚಾರ್‌. ಅವರ ಮುತ್ತಾತ ಭಾಷ್ಯಂ ತಿರುಮಲಾಚಾರ್ಯರು 19ನೇ ಶತಮಾನದಲ್ಲೇ ಕನ್ನಡದಲ್ಲಿ ಪತ್ರಿಕೆಗಳನ್ನು ತಂದವರು. ತಂದೆ ಭಾಷ್ಯಂ ರಾಮಾಚಾರ್ಯರು ಬಹು ಭಾಷಾ ಪಂಡಿತರು. ಹೀಗಾಗಿ ಬಾಲ್ಯದಿಂದಲೂ ಬಂದಿದ್ದ ಸಂಗೀತಾಭಿರುಚಿಯನ್ನು ಅವರು ಅಧ್ಯಯನ ಹಾಗೂ ಕೇಳ್ಮೆಗಳಿಂದ ಊರ್ಜಿತಗೊಳಿಸಿಕೊಳ್ಳುತ್ತ ಸಾಗಿದರು.

1954ರಲ್ಲಿ ತಾಯಿನಾಡು ಪತ್ರಿಕೆಯಲ್ಲಿ ಪ್ರಾರಂಭವಾದ ನರಸಿಂಹಾಚಾರ್‌ ಅವರ ಸಂಗೀತ ವಿಮರ್ಶೆ, ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಮುಂದುವರಿಯಿತು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಸಾರಗ್ರಾಹಿ ಅಂಕಿತದಿಂದ ಅನೇಕ ದಶಕಗಳ ಕಾಲ ಸಂಗೀತ ವಿಮರ್ಶೆ ಮಾಡಿದರು. ಅವರ ವಿಮರ್ಶೆ ಬರಹಗಳಲ್ಲಿ, ನೇರ ಹಾಗೂ ಸರಳ ನಿರೂಪಣೆಗಳನ್ನು ಕಾಣಬಹುದಿತ್ತು. ವಿಮರ್ಶೆಗಳಲ್ಲದೆ ಕಲೆ-ಕಲಾವಿದರನ್ನು ಕುರಿತು ಹತ್ತಾರು ಲೇಖನಗಳನ್ನೂ ಅವರು ಬರೆದಿದ್ದಾರೆ.

ನರಸಿಂಹಾಚಾರ್ ಅವರು ಮಾಡಿರುವ ಇನ್ನೊಂದು ಪ್ರಮುಖ ಕಾರ್ಯವೆಂದರೆ ಕಲಾವಿದರನ್ನು ಕುರಿತ ಕೈಪಿಡಿ ಹೊರತಂದಿರುವುದು. 250 ಕಲಾವಿದರ ಕಿರು ಪರಿಚಯ, ವಿಳಾಸ, ಟೆಲಿಫೋನ್  ಮುಂತಾದ ವಿವರಗಳನ್ನುಳ್ಳ  ‘ನಮ್ಮ ಸಂಗೀತ ಕಲಾವಿದರು’ ಪುಸ್ತಕವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗಾಗಿ ಸಂಪಾದಿಸಿ ಕೊಟ್ಟರು. ಕಲಾವಿದರು, ಕಲಾಭಿಮಾನಿಗಳು ಹಾಗೂ ಸಂಸ್ಥೆಗಳಿಗೆ ಇದೊಂದು ಬಹು ಉಪಯೋಗಿ ಆಕರವಾಯಿತು. ಮುಂದೆ ಅಕಾಡೆಮಿಗಾಗಿ ಸುಗಮ ಸಂಗೀತ, ನೃತ್ಯ ಕಲಾವಿದರ ಪರಿಚಯಾತ್ಮಕ (ಹೂ ಈಸ್ ಹೂ) ಕೈಪಿಡಿಗಳನ್ನೂ ಸಂಗ್ರಹಿಸಿ ಕೊಟ್ಟರು. ಆ ಮೊದಲು ಕರ್ನಾಟಕ ಸಂಗೀತ ಕಲಾವಿದರು (ಪುರಂದರ ಸೇವಾ ಸಮಿತಿ) ಮತ್ತು ಮಧುರೆ ಮಣಿ ಅಯ್ಯರ್  ಮುಂತಾದ ಪುಸ್ತಕಗಳನ್ನು ಬರೆದು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದರು.

ಮಲ್ಲೇಶ್ವರ ಸಂಗೀತ ಸಭೆಯ ಸಂಸ್ಥಾಪಕರಲ್ಲಿ ಒಬ್ಬರಾಗಿ, ಕಾರ್ಯದರ್ಶಿಗಳಾಗಿ ಅನೇಕ ದಶಕಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಸಭೆಯ ತಿಂಗಳ ಪತ್ರಿಕೆ ‘ನಾದೋಪಾಸನಾ’ದ ಸ್ಥಾಪಕ ಸಂಪಾದಕರಾಗಿಯೂ ಮಾರ್ಗದರ್ಶನ ಮಾಡಿದರು. ಅವರ ಧರ್ಮಪತ್ನಿ ಟಿ.ಬಿ. ರುಕ್ಮಿಣಿ ಅಮ್ಮಾಳ್ ಅವರು ಉತ್ತಮ ವೈಣಿಕರಾಗಿದ್ದರು.

ಸರಳ ಜೀವಿ
ಯಾವ ಆಡಂಬರಕ್ಕೂ ಕೈ ಹಾಕದ ಸರಳ ದಿನಚರಿ ಅವರದ್ದು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಅವರಿಗೆ ಸಂದುದಲ್ಲದೆ, ತ್ಯಾಗರಾಜ ಗಾನ ಸಭೆಯ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಕಲಾಭೂಷಣ ಬಿರುದಿಗೂ ಪಾತ್ರರಾಗಿದ್ದರು. ಮಲ್ಲೇಶ್ವರ ಸಂಗೀತ ಸಭೆ, ಬೆಂಗಳೂರು ಗಾಯನ ಸಮಾಜಗಳಿಂದಲೂ ಸನ್ಮಾನಿತರಾಗಿದ್ದ ಟಿ.ಬಿ.ಎನ್. 1988ರ ನವೆಂಬರ್ 22ರಂದು ನಿಧನರಾದರು. ತಮ್ಮ ಕೊನೆಯ ಪುಸ್ತಕದ ಕೊನೆಯ ವಾಕ್ಯದ ಕೊನೆಯ ಪದ ಬರೆದು, ಲೇಖನಿಯನ್ನು ಹಾಗೇ ಹಿಡಿದುಕೊಂಡೇ ಸರಸ್ವತಿಯ ಪಾದಾರವಿಂದ ಸೇರಿದ್ದರು!

ಮಲ್ಲೇಶ್ವರ ಸಂಗೀತ ಸಭೆಯ ಆಶ್ರಯದಲ್ಲಿ ನಡೆಯಲಿರುವ ಟಿ.ಬಿ. ನರಸಿಂಹಾಚಾರ್ ಅವರ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ 6ಕ್ಕೆ ಹಿರಿಯ ವೈಣಿಕ ಡಿ. ಬಾಲಕೃಷ್ಣ ಅವರಿಂದ  ವೀಣಾವಾದನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT