ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆ ನಷ್ಟ: ಸಿ.ಎಂ ಅಸಮಾಧಾನ

Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಇರುವುದು ಲಾಭ  ಗಳಿಸಲು ಅಲ್ಲ. ಹಾಗೆಂದ ಮಾತ್ರಕ್ಕೆ ನಷ್ಟ ಗಳಿಸಬೇಕು ಎಂದರ್ಥವಲ್ಲ. ಆದರೆ, ನಮ್ಮ ಸಾರಿಗೆ ಸಂಸ್ಥೆಗಳು ನಷ್ಟದಲ್ಲೇ ನಡೆಯುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ‘ಚತುರ ಸಾರಿಗೆ ವ್ಯವಸ್ಥೆ’ಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ‘ಶೇ 42ರಷ್ಟು  ಬಸ್‌ಗಳು ನಷ್ಟದಲ್ಲಿವೆ. ಶೇ 40 ರಷ್ಟು ಬಸ್‌ಗಳಿಂದ ಲಾಭವೂ ಇಲ್ಲ ನಷ್ಟವೂ ಇಲ್ಲ’ ಎಂದು ಚೀಟಿ ಕೊಟ್ಟರು.

ಇದನ್ನು ಓದಿದ ಸಿದ್ದರಾಮಯ್ಯ, ‘ಇದು ನಷ್ಟವಲ್ಲವೇ’ ಎಂದು ಪ್ರಶ್ನಿಸಿದರು. ‘ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಹೊಣೆ ನಮ್ಮ ಮೇಲಿದೆ’ ಎಂದು ರಾಮಲಿಂಗಾ ರೆಡ್ಡಿ ಪ್ರತಿ ಕ್ರಿಯಿಸಿದರು.

‘ಇದು ನಿಜ. ಲಾಭ ಗಳಿಕೆ ಸಾರಿಗೆ ಸಂಸ್ಥೆಗಳ ಏಕೈಕ ಉದ್ದೇಶ. ವರಮಾನ ಬರುವ ಮಾರ್ಗಗಳಲ್ಲಿ ಮಾತ್ರ ಖಾಸಗಿ ಬಸ್‌ಗಳು ಸಂಚಾರ ಮಾಡುತ್ತವೆ. ನಮ್ಮದು ಹಾಗಲ್ಲ. ಒಂದಿಬ್ಬರು ಪ್ರಯಾಣಿಕರು ಇದ್ದರೂ ಸೇವೆ ವ್ಯತ್ಯಯ ಆಗಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಬೆಂಗಳೂರು ಅಭಿವೃದ್ಧಿಗೆ ಈ ವರ್ಷ ₹6 ಸಾವಿರ ಕೋಟಿ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದರು. ಆಗ ನೌಕರರ ಸಂಘದ ಪದಾಧಿಕಾರಿಯೊಬ್ಬರು ಎದ್ದು ನಿಂತು, ‘ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಅಭಿವೃದ್ಧಿಗೆ ₹1 ಸಾವಿರ ಕೋಟಿ ಕೊಡಬೇಕು’ ಎಂದು ಒತ್ತಾಯಿಸಿದರು.

‘ಕೆಎಸ್‌ಆರ್‌ಟಿಸಿ ಸಂಸ್ಥೆಯನ್ನು ಉಳಿಸಿದ್ದೇ ನಾನು. ಪಿ.ಜಿ.ಆರ್‌. ಸಿಂಧ್ಯಾ ಸಾರಿಗೆ ಸಚಿವರಾಗಿದ್ದಾಗ ತೆರಿಗೆ ಕಡಿಮೆ ಮಾಡಿದ್ದೆ’ ಎಂದು ಸಿದ್ದರಾಮಯ್ಯ ಉತ್ತರಿಸಿದರು. ‘ಬಿಎಂಟಿಸಿ ಅಭಿವೃದ್ಧಿಗೆ  ಹೆಚ್ಚಿನ ಅನುದಾನವನ್ನೂ ಕೊಡುತ್ತೇವೆ; ಎಂದರು.

‘ಬೈಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆ ನಡುವೆ ಮೆಟ್ರೊ ಸಂಚಾರ ಆರಂಭವಾಗಿರುವುದರಿಂದ ಬಿಎಂಟಿಸಿ ಮೇಲೆ ಪರಿಣಾಮ ಉಂಟಾಗಿಲ್ಲ. ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಆಗಿಲ್ಲ. ದ್ವಿಚಕ್ರ ವಾಹನ, ಕಾರು ಹಾಗೂ ಆಟೊ ಬಳಸುವವರು ಮೆಟ್ರೊ ಮೊರೆ ಹೋಗಿದ್ದಾರೆ’ ಎಂದರು.

‘ಮೆಟ್ರೊ ವ್ಯವಸ್ಥೆ ಪ್ರಯಾಣಿಕ ಸ್ನೇಹಿಯಾಗಿದೆ. ನಿಲ್ದಾಣಕ್ಕೆ ಹೋಗುವಾಗ ಕಾಯಿನ್‌ ಬಳಸಿದರೆ ಸಾಕು. ಬಿಎಂಟಿಸಿಯಲ್ಲೂ ಅಂತಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು’ ಎಂದು ಸೂಚಿಸಿದರು. ಆಗ ರಾಮಲಿಂಗಾ ರೆಡ್ಡಿ, ‘ಜುಲೈ ತಿಂಗಳಿಂದ ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದರು.

‘ಉನ್ನತ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಿಗೆ ಉತ್ತಮ ಸೇವೆ  ಒದಗಿಸಿ’ ಎಂದರು. ‘ಮೂರು ವರ್ಷಗಳಲ್ಲಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಗೆ 79 ಪ್ರಶಸ್ತಿಗಳು ಬಂದಿವೆ. ಇದು ಉತ್ತಮ ಕೆಲಸಕ್ಕೆ ಸಿಕ್ಕ ಮನ್ನಣೆ’ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮಲಿಂಗಾ ರೆಡ್ಡಿ ಮಾತನಾಡಿ, ‘ಮೆಜೆಸ್ಟಿಕ್‌, ಶಿವಾಜಿನಗರ, ಶಾಂತಿನಗರ, ವಿಜಯನಗರ, ಜಯನಗರ, ಯಶವಂತಪುರ, ಕೆಂಗೇರಿ, ಐಟಿಪಿಎಲ್‌, ಮೈಸೂರು ರಸ್ತೆ ಹಾಗೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಅಳವಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT