ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ಕ್‌ ಶೃಂಗಕ್ಕೆ ಸರ್ಪಗಾವಲು

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): 12 ವರ್ಷಗಳ ಬಳಿಕ ಸಾರ್ಕ್‌ ಶೃಂಗದ ಆತಿಥ್ಯ ವಹಿಸಿಕೊಳ್ಳುತ್ತಿರುವ ನೇಪಾಳ, ರಾಜಧಾನಿ ಕಠ್ಮಂಡುವಿನಲ್ಲಿ ಭಾರಿ ಬಿಗಿ ಭದ್ರತೆ ಆಯೋಜಿಸಿದೆ. 18ನೇ ಸಾರ್ಕ್‌ ಶೃಂಗಸಭೆ  ನಡೆಯ­ಲಿರುವ ಭೃಕುಟಿ­ಮಂಟಪ ಎದುರಿನ ಮೈದಾನದಲ್ಲಿ ಸೇನಾ ಪಡೆಗಳು ಸೋಮ­ವಾರ ಮೋಟಾರ್‌ಬೈಕ್‌ ಕವಾಯತು ತಾಲೀಮು ನಡೆಸಿದವು.

ನೇಪಾಳಕ್ಕೆ ಕೊಡುಗೆ: ಮಂಗಳವಾರ ಕಠ್ಮಂಡು ತಲುಪಲಿ­ರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಹಯೋಗದೊಂದಿಗೆ ನಿರ್ಮಾಣವಾದ ತುರ್ತು ಚಿಕಿತ್ಸಾ ಆಸ್ಪತ್ರೆ ಉದ್ಘಾಟಿಸುವರು. ಅಲ್ಲದೆ, ಹೆಲಿಕಾಪ್ಟರ್‌ ಒಂದನ್ನು ನೇಪಾಳಕ್ಕೆ ಹಸ್ತಾಂತರಿಸಲಿದ್ದಾರೆ.

₨150 ಕೋಟಿ ವೆಚ್ಚದ 200 ಹಾಸಿಗೆಗಳುಳ್ಳ ಆಸ್ಪತ್ರೆ­ಯನ್ನು ಮೋದಿ ಉದ್ಘಾಟಿಸಲಿದ್ದಾರೆ.  ನಂತರ ಎಚ್‌ಎಎಲ್‌ ತಯಾರಿಸಿರುವ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್‌ ಅನ್ನು ಮೋದಿ ಅವರು ನೇಪಾಳ ಪ್ರಧಾನಿ ಸುಶೀಲ್‌ ಕೊಯಿರಾಲ ಅವರಿಗೆ ಹಸ್ತಾಂತರಿಸಲಿದ್ದು, ಬಳಿಕ ಅದನ್ನು ಸೇನೆಗೆ ನೀಡಲಾಗುತ್ತದೆ.

ಮೋದಿ- ಷರೀಫ್‌ ಮಾತುಕತೆ?: ಸಾರ್ಕ್‌ ಸಮ್ಮೇಳನದ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ನಡೆಸುವಂತೆ ಪ್ರಯತ್ನಿಸುವುದಾಗಿ ನೇಪಾಳದ ವಿದೇಶಾಂಗ ಸಚಿವ ಮಹೇಂದ್ರ ಬಹದ್ದೂರ್‌ ಪಾಂಡೆ ಸೋಮವಾರ ತಿಳಿಸಿದರು.

‘ಎರಡು ದೇಶಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು. ಈ ಬಗ್ಗೆ ಕಠ್ಮಂಡುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಬುಧವಾರದವರೆಗೂ ಕಾದು ನೋಡಿ ಎಂದಿದ್ದಾರೆ.

ಮೋದಿ ಮತ್ತು ಷರೀಫ್ ಅವರ ಭೇಟಿಯ ಯೋಜನೆ ಸದ್ಯಕ್ಕಿಲ್ಲ ಎಂದು ಪಾಕ್ ಪ್ರಧಾನಿ ಅವರ ವಿದೇಶಾಂಗ ವ್ಯವ­ಹಾ­ರ­ಗಳ ಸಲಹೆಗಾರ ಸರ್ತಾಜ್ ಎಜಾಜ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT