ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ಕ್‌ ಶೃಂಗಸಭೆ: ಮೋದಿ, ಷರೀಫ್‌ ಮುನಿಸು

ಭಯೋತ್ಪಾದನೆ ನಿಗ್ರಹಕ್ಕೆ ಮೋದಿ ಕರೆ
Last Updated 9 ಡಿಸೆಂಬರ್ 2015, 9:30 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ/ಐಎಎನ್‌ಎಸ್‌): ಇಲ್ಲಿ ನಡೆಯುತ್ತಿರುವ ಸಾರ್ಕ್‌ ಶೃಂಗ­ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರು ವೇದಿಕೆ ಹಂಚಿಕೊಂಡರೂ ಪರಸ್ಪರರು ಮುಖ­ಕೊಟ್ಟು ಮಾತನಾಡಲಿಲ್ಲ.
ವೇದಿಕೆ ಏರಿದ ಷರೀಫ್‌ ಅವರು  ಮೋದಿ ಅವರತ್ತ ನೋಡದೇ ತಮ್ಮ ಆಸನದತ್ತ ತೆರಳಿದರು. 

ಭಾಷಣ ಮಾಡಲು ಷರೀಫ್‌ ಅವರ ಹೆಸರನ್ನು ಕರೆದಾಗ ಮೋದಿ ಅವರು ಸಾರ್ಕ್‌ ಶೃಂಗಸಭೆಗೆ ಸಂಬಂಧಿಸಿದ ಪತ್ರಿಕೆಯ ಪುರವಣಿ ಓದತೊಡ­ಗಿದರು. ಇತರ ನಾಯಕರಂತೆ ಔಪಚಾರಿಕವಾಗಿ ಚಪ್ಪಾಳೆ­ಯನ್ನೂ ತಟ್ಟಲಿಲ್ಲ.

ಷರೀಫ್‌ ಅವರು ಮೋದಿ ಮುಂದೆ ಹಾದು ಹೋದಾಗಲೂ ಉಭಯ ನಾಯ­ಕರು ಪರಸ್ಪರ ನೋಡಿಕೊ­ಳ್ಳ­ಲಿಲ್ಲ. ಇವರಿಬ್ಬರ ಮಧ್ಯೆ ಮಾಲ್ಡೀವ್ಸ್‌ ಹಾಗೂ ನೇಪಾಳದ ಮುಖಂಡರು ಕುಳಿತಿದ್ದರು.

ಮೋದಿ ಅವರು ಮುಂಬೈ ದಾಳಿಯ ಕರಾಳ ನೆನಪುಗಳನ್ನು ಪ್ರಸ್ತಾಪಿಸಿ­ದಾಗಲೂ ಷರೀಫ್‌ ಪ್ರತಿಕ್ರಿಯಿಸಲಿಲ್ಲ. ಸಭೆಯ ನಂತರ ಶೃಂಗಸಭೆ ನಡೆಯು­ತ್ತಿರುವ ಸಂಭಾಗಣದ ಹಜಾರದಲ್ಲಿ ಎಲ್ಲ ನಾಯಕರು ಸೇರಬೇಕು ಎಂದು ಸಂಘಟಕರು ಘೋಷಣೆ ಮಾಡಿದ್ದರು.

ಎಲ್ಲ ನಾಯಕರು ಆಸನದಿಂದ ಎದ್ದರೂ ಮೋದಿ ಅವರು ಸಭಾಂಗಣದ ಹೊರಗೆ ಹೋಗದೇ ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಜತೆ ಮಾತನಾಡುತ್ತ ನಿಂತರು.

ಕೆಲ ನಿಮಿಷಗಳ ನಂತರ ಅವರು ಹೊರಗೆ ತೆರಳಿದಾಗ ಪಾಕ್‌ ಪ್ರಧಾನಿ ಜತೆ ಮಾತ­ನಾಡುವ ಸಂದರ್ಭ ಎದುರಾಗಲಿಲ್ಲ. 
ಇಬ್ಬರೂ ನಾಯಕರು ಒಂದೇ ಹೋಟೆಲ್‌­ನಲ್ಲಿ ಉಳಿದುಕೊಂಡಿದ್ದರೂ ಪರಸ್ಪರರನ್ನು ಭೇಟಿಯಾಗಿಲ್ಲ. ಆದರೆ, ಇತರೆಲ್ಲ ಸಾರ್ಕ್‌ ದೇಶಗಳ ನಾಯಕ­ರನ್ನು ಭೇಟಿಯಾಗಿದ್ದಾರೆ.

ಕೇವಲ ಆರು ತಿಂಗಳ ಹಿಂದೆ ಮೇ 26ರಂದು ಮೋದಿ ಅವರು ಪ್ರಧಾನಿ­ಯಾಗಿ ಪ್ರಮಾಣ ವಚನ ಸ್ವೀಕರಿಸು­ವಾಗ ನವಾಜ್‌ ಷರೀಫ್‌ ಸೇರಿದಂತೆ ಎಲ್ಲ ಸಾರ್ಕ್‌ ನಾಯಕರನ್ನು ಆಹ್ವಾನಿ­ಸಿ­ದ್ದರು. ಮೋದಿ ಅವರ ಈ ನಡೆ ದ್ವಿಪಕ್ಷೀಯ ಬಾಂಧವ್ಯದಲ್ಲಿ ಹೊಸ ಯುಗಕ್ಕೆ ಕಾರಣವಾಗಲಿದೆ ಎಂಬ ನಿರೀಕ್ಷೆ ಮೂಡಿತ್ತು.

ಆದರೆ, ಕೆಲ ತಿಂಗಳ ಹಿಂದೆ ಭಾರತ– ಪಾಕ್‌ ವಿದೇಶಾಂಗ ಕಾರ್ಯ­ದರ್ಶಿ­ಗಳ ಮಟ್ಟದ ಸಭೆಗೂ ಮುನ್ನ ಪಾಕಿಸ್ತಾನವು ಕಾಶ್ಮೀರದ ಪ್ರತ್ಯೇಕತಾ­ವಾದಿಗಳ ಜತೆ ಮಾತನಾಡಿದ್ದು, ಉಭಯ ದೇಶಗಳ ಸಂಬಂಧ ಹಳಸಲು ಕಾರಣವಾಯಿತು.

ಸಂಘಟಿತ ಪ್ರಯತ್ನಕ್ಕೆ ಕರೆ
ವಾಣಿಜ್ಯ ನಗರಿ ಮುಂಬೈನಲ್ಲಿ ೨೦೦೮ರ ನವೆಂಬರ್‌ ೨೬ರಂದು ನಡೆದ ಉಗ್ರರ ದಾಳಿಯಲ್ಲಿ ೧೬೬ ಮಂದಿ ಬಲಿಯಾದ ಕರಾಳ ನೆನಪಿನ ಸಂದರ್ಭದಲ್ಲಿಯೇ, ಮೋದಿ ಅವರು ಭಯೋತ್ಪಾದನೆ ಹಾಗೂ ಗಡಿಯಾ­ಚೆಗಿನ ಅಪರಾಧಗಳ ನಿಯಂತ್ರಣಕ್ಕೆ ಸಂಘಟಿತ ಪ್ರಯತ್ನ ಮಾಡಬೇಕೆಂದು ಕರೆ ನೀಡಿದ್ದಾರೆ.

ಇಲ್ಲಿ ಬುಧವಾರ ಮಾತ­ನಾಡಿದ ಮೋದಿ, ‘ಭಯೋತ್ಪಾದನೆ ವಿರುದ್ಧ ಸಮರ ಸಾರುವುದಕ್ಕೆ ಸಾರ್ಕ್‌ ದೇಶಗಳು ಮಾಡಿರುವ ಶಪಥವನ್ನು ಕಾರ್ಯರೂಪಕ್ಕೆ ತರಬೇಕಾಗಿದೆ’ ಎಂದು ಹೇಳಿದರು.

ಶೃಂಗಸಭೆಯಲ್ಲಿ ಸಾರ್ಕ್‌ ಮುಖಂ­ಡರು ಭಯೋತ್ಪಾದನೆ ನಿಗ್ರಹದ ಬಗ್ಗೆಯೇ ಪ್ರಮುಖವಾಗಿ ಮಾತನಾಡಿ­ದರು. ಆದರೆ, ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಮಾತ್ರ ತಮ್ಮ ೧೫ ನಿಮಿಷಗಳ ಭಾಷಣದಲ್ಲಿ ಅಪ್ಪಿತಪ್ಪಿ ಕೂಡ ಈ ವಿಷಯ ಪ್ರಸ್ತಾಪಿಸಲಿಲ್ಲ.

ಭಯೋತ್ಪಾದನೆಯ ಪಿಡುಗು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂಲಭೂತ ಸವಾಲಾ­ಗಿದೆ ಎಂದು ಆಫ್ಘಾನಿಸ್ತಾನ ಮತ್ತು ಶ್ರೀಲಂಕಾ ಅಧ್ಯಕ್ಷರ ಅಭಿಪ್ರಾಯಕ್ಕೆ ಮೋದಿ ದನಿಗೂಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT