ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರ ವಿಶ್ವಾಸ ಮುಖ್ಯ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಐಪಿಎಲ್‌ನ ಆರನೇ ಆವೃತ್ತಿಯ ಸ್ಪಾಟ್‌­ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗ­ರಣದ ಕುರಿತು ವಿಚಾರಣೆ ನಡೆಸು­ತ್ತಿರುವ ಸುಪ್ರೀಂಕೋರ್ಟ್‌ ಕೆಲವು ನೈತಿಕ ಪ್ರಶ್ನೆಗಳನ್ನು ಎತ್ತಿರುವುದು ಗಮ­ನಾರ್ಹ. ಐಪಿಎಲ್‌ ಕಳ್ಳಾಟದ ಕುರಿತ ಮುಕುಲ್‌ ಮುದ್ಗಲ್‌ ಸಮಿತಿಯ ತನಿಖಾ ವರ­ದಿಯು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಎನ್‌.­ ಶ್ರೀನಿವಾಸನ್‌ ಅವರನ್ನು ನಿರ್ದೋಷಿ ಎಂದಿದೆ. ಈ ಬಗ್ಗೆ ಪ್ರಸ್ತಾ­ಪಿ­ಸಿ­ರುವ ನ್ಯಾಯ­ಮೂರ್ತಿಗಳಾದ ಕಲೀಫುಲ್ಲಾ ಮತ್ತು ಟಿ.ಎಸ್‌. ಠಾಕೂರ್‌ ಅವರ ಪೀಠ ಸಾರ್ವ­ಜನಿಕರ ವಿಶ್ವಾಸವೂ ಬಲು ಮುಖ್ಯ ಎಂದಿದೆ. ಎಲ್ಲವನ್ನೂ ಕಾನೂನು, ಸಾಕ್ಷ್ಯಾಧಾರ, ಬೈಲಾಗಳಲ್ಲಿರುವ ನಿಯಮಗಳ ಚೌಕಟ್ಟಿ­ನೊ­ಳಗೇ ವಿಶ್ಲೇಷಿ­ಸುವ ಧಾವಂತ­ದಲ್ಲಿ ಸಾರ್ವಜನಿಕರ ವಿಶ್ವಾಸ ಪಡೆಯ­ಬೇಕಾದ ತತ್ವ­ವನ್ನೇ ಮರೆತು ಬಿಡು­ತ್ತೇ­ವಲ್ಲ ಎಂಬ ಆತಂಕದ ಧ್ವನಿ ನ್ಯಾಯ­ಪೀಠದಿಂದ ಕೇಳಿ ಬಂದಿದೆ. ಇದು ನಿಜಕ್ಕೂ ಅರ್ಥಗರ್ಭಿತ ಕಳಕಳಿ.

ಶ್ರೀನಿವಾ­ಸನ್‌ ಸ್ಪಾಟ್‌­ಫಿಕ್ಸಿಂಗ್‌­ನಲ್ಲಿ ಪಾಲ್ಗೊಂಡಿದ್ದಕ್ಕೆ ಸಾಕ್ಷ್ಯಗಳಿಲ್ಲ, ಬೆಟ್ಟಿಂಗ್‌ ನಡೆಸಿ­ದ್ದಕ್ಕೆ ದಾಖಲೆ­ಗಳಿಲ್ಲ, ನಿಜ. ಹೀಗಾಗಿ ಮುದ್ಗಲ್‌ ಸಮಿತಿಯ ಹಿಡಿತಕ್ಕೆ ಇವರ ಜುಟ್ಟು ಸಿಕ್ಕಿಲ್ಲ. ಆದರೆ ಇವರು ಬಿಸಿಸಿಐ ಅಧ್ಯಕ್ಷರಾಗಿದ್ದಾಗಲೇ ಈ ಎಲ್ಲಾ ಹಗ­ರಣಗಳು ನಡೆ­ದಿವೆ. ಇಂಡಿಯಾ ಸಿಮೆಂಟ್ಸ್‌ ಒಡೆತನದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹೆಸರು ಈ ಹಗರಣಗಳಲ್ಲಿ ಎದ್ದು ಕಾಣುತ್ತಿದೆ. ಶ್ರೀನಿವಾಸನ್‌ ಅವರು ಇಂಡಿಯಾ ಸಿಮೆಂಟ್ಸ್‌ ಕಂಪೆನಿಯ ಮಾಲೀಕರು. ಸಾಕ್ಷ್ಯಾಧಾರಗಳ ಕೊರತೆ­ಯಿಂದಾಗಿ ಶ್ರೀನಿವಾಸನ್‌ ಅವರನ್ನು ತಪ್ಪಿತಸ್ಥ ಎನ್ನುವಂತಿಲ್ಲ. ಆದರೆ ಅವರಿಗೆ ಗೊತ್ತಿಲ್ಲದೆಯೇ ಎಲ್ಲವೂ ನಡೆದಿದೆ ಎನ್ನುವಂತೆಯೂ ಇಲ್ಲ. ಹಗ­ರಣದಲ್ಲಿ ಸಿಲುಕಿದ್ದಾರೆ ಎಂದು ಮುದ್ಗಲ್‌ ಸಮಿತಿ ಬೆಟ್ಟು ಮಾಡಿರುವ ಕೆಲ­ವರು ಶ್ರೀನಿ­ವಾಸನ್‌ ನಿಕಟವರ್ತಿಗಳೇ ಆಗಿದ್ದಾರೆ. ಬೆಟ್ಟಿಂಗ್ ಆರೋಪಕ್ಕೆ ಒಳ­ಗಾ­ಗಿ­ರುವ ವ್ಯಕ್ತಿಯ ಸಂಬಂಧಿಯೂ ಆಗಿದ್ದಾರೆ ಅವರು. ಪರಿಸ್ಥಿತಿ ಹೀಗಿರು­ವಾಗ ‘ಮತ್ತೆ ಬಿಸಿ­ಸಿಐ ಅಧ್ಯಕ್ಷ ಪಟ್ಟಕ್ಕೇರಲು ಅನುಮತಿ ನೀಡಿ’ ಎಂದು ಶ್ರೀನಿವಾಸನ್‌ ನ್ಯಾಯಾ­ಲಯದ ಮೊರೆ ಹೋಗಿರುವುದು ಭಂಡತನದ ಪರಮಾವ­ಧಿ­ಯಲ್ಲದೆ ಇನ್ನೇನು?

ಸಭ್ಯರ ಕ್ರೀಡೆ ಎಂದು ಪರಿಗಣಿಸಲಾಗಿರುವ ಕ್ರಿಕೆಟ್‌ ಈ ದೇಶದಲ್ಲಿ ಧರ್ಮ­ವಿದ್ದಂತೆ. ಈ ಕ್ರೀಡೆಯ ಜತೆಗೆ ನಾಡಿನ ಯುವಜನರ ಸಂಬಂಧ ಪದಗಳಿಗೆ ನಿಲುಕುವಂತಹದ್ದಲ್ಲ. ಆದರೆ ಕ್ರೀಡಾ ಆಡಳಿತಗಾರರ ಬೇಜವಾಬ್ದಾರಿ ನಡೆ­ಯಿಂದಾಗಿ ಇಂತಹದ್ದೊಂದು ಆಟ ಇವತ್ತು ಕಲುಷಿತಗೊಳ್ಳುತ್ತಿದೆ ಎಂಬುದು ನ್ಯಾಯಪೀಠದ ಅನಿಸಿಕೆ. ಈ ಮಾತುಗಳೆಲ್ಲಾ ನ್ಯಾಯ­ಮೂರ್ತಿ­ಗಳ ಅಭಿ­ಪ್ರಾಯ­­­ಗಳಷ್ಟೇ ಹೊರತು ಆದೇಶಗಳಲ್ಲ ಎಂದು ಅವಗಣನೆ ಮಾಡುವುದು ಸರಿಯಲ್ಲ.

ಸ್ಪಾಟ್‌ಫಿಕ್ಸಿಂಗ್‌, ಬೆಟ್ಟಿಂಗ್‌ ನಡೆದಿದೆ ಎನ್ನುವುದು ಮೇಲ್ನೋಟಕ್ಕೇ ಸಾರ್ವಜನಿಕರಿಗೆ ಗೊತ್ತಾಗಿದೆ. ಜನ ಕ್ರಿಕೆಟ್‌ ಪಂದ್ಯಗಳನ್ನು ಅನು­ಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಕಾಲಘಟ್ಟ­ದಲ್ಲಿ ಸುಪ್ರೀಂಕೋರ್ಟ್‌ ಸರಿಯಾದ ಮಾತುಗಳನ್ನೇ ಹೇಳಿದೆ. ಕ್ರಿಕೆಟ್‌ ಆಡ­ಳಿತಗಾರರೂ ಇದಕ್ಕೆ ಸ್ಪಂದಿಸಬೇಕಿದೆ. ನಿಷ್ಪಕ್ಷಪಾತ ತನಿಖೆಗೆ ಸಂಪೂರ್ಣ ಸಹ­ಕಾರ ನೀಡಬೇಕಿದೆ. ತಮ್ಮ ಜತೆಗೇ ಇದ್ದ ಕಳಂಕಿತರಿಗೆ ತಾಗಿರುವ ಹಗರಣದ ಕೆಸರು ತಮಗೆ ಅಂಟಿಲ್ಲ ಎನ್ನುತ್ತಿರುವ  ಶ್ರೀನಿವಾಸನ್‌ ಮತ್ತೆ ಅಧ್ಯಕ್ಷ ಪಟ್ಟಕ್ಕೆ ಏರಲು ಕಸರತ್ತು ನಡೆಸುತ್ತಿರುವುದು ಸರಿಯಲ್ಲ. ಈ ದೇಶದಲ್ಲಿ ಕ್ರಿಕೆಟನ್ನು ಉಳಿಸುವ ದಿಸೆಯಲ್ಲಿ ಪ್ರಸಕ್ತ ಎದ್ದಿರುವ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಲೇಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT