ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲುಗಳ ನಡುವಿನ ‘ದರ್ಶನ’

‘ತಲ್ವಾರ್‌’ (ಹಿಂದಿ)
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ತಲ್ವಾರ್‌’ (ಹಿಂದಿ)
ನಿರ್ಮಾಣ: ವಿನೀತ್‌ ಜೈನ್‌, ವಿಶಾಲ್‌ ಭಾರದ್ವಾಜ್‌, ನಿರ್ದೇಶನ: ಮೇಘನಾ ಗುಲ್ಜಾರ್‌, ತಾರಾಗಣ: ಇರ್ಫಾನ್‌ ಖಾನ್‌, ಸೋಹಮ್‌ ಶರ್ಮ, ಕೊಂಕಣಾ ಸೇನ್‌ ಶರ್ಮ, ನೀರಜ್‌ ಕಬಿ, ಪ್ರಕಾಶ್‌ ಬೆಳವಾಡಿ.


ಕೊಲೆ ಪ್ರಕರಣವನ್ನು ಸಿನಿಮಾ ಆಗಿಸುವ ಹಲವು ಬಗೆಗಳಿವೆ. ಒಂದು– ಥ್ರಿಲ್ಲರ್‌. ಎರಡು–ಮಾನವೀಯ ಮೌಲ್ಯವನ್ನೇ ಮುಂದುಮಾಡಿ ಹೃದಯ ಮಿಡಿಯುವಂಥ ಸಿನಿಮಾ. ಮೂರು–ಮೆಲೋಡ್ರಾಮಾಗಳ ರಂಜನೀಯ ಸರಣಿ. ಇವ್ಯಾವ ವರ್ಗಕ್ಕೂ ಸೇರಿಸಲಾಗದ ಸಿನಿಮಾ ಎನ್ನುವುದೇ ‘ತಲ್ವಾರ್‌’ ಅಗ್ಗಳಿಕೆ.

ಏಳು ವರ್ಷಗಳ ಹಿಂದೆ ನಡೆದ ಆರುಷಿ–ಹೇಮರಾಜ್‌ ಜೋಡಿಕೊಲೆ ಪ್ರಕರಣವು ದೊಡ್ಡ ಸುದ್ದಿಯಾಗಿತ್ತು. ಅದರ ಸರಣಿ ತನಿಖೆಗಳ ಕುರಿತು ವರದಿಗಳಷ್ಟೇ ಅಲ್ಲದೆ ಕೃತಿಯೂ ಪ್ರಕಟವಾಗಿದೆ. ಇವೆಲ್ಲವನ್ನೂ ಮೀರಿದ ‘ಸಾಲುಗಳ ನಡುವಿನ ಯಾವುದೋ ಸಂಗತಿ’ಯನ್ನು ಸಿನಿಮಾ ಹೇಳಬೇಕು ಎಂದು ವಿಶಾಲ್‌ ಭಾರದ್ವಾಜ್‌ ನಿಶ್ಚಯಿಸಿ ಚಿತ್ರಕಥೆ ರೂಪಿಸಿದ್ದಾರೆ. ಅವರು ಜೋಡಿಕೊಲೆ ಪ್ರಕರಣವನ್ನು ಥ್ರಿಲ್ಲರ್‌ ಆಗಿಸದೆ, ಅದರ ತನಿಖಾ ಪ್ರಕ್ರಿಯೆಯನ್ನು ಹದವಾದ ವ್ಯಂಗ್ಯ ಬೆರೆತ ಧಾಟಿಯಲ್ಲಿ ತೋರುತ್ತಾ ಹೋಗುವಂಥ ಚಿತ್ರಕಥೆ ರೂಪಿಸಿದ್ದಾರೆ. ನಿಜಕಥೆಯನ್ನೇ ಆಧರಿಸಿದ ಸಿನಿಮಾ ಇದಾಗಿದ್ದರೂ, ಅದು ಚರ್ಚಿಸುವ ಸಂಗತಿಯು ಭಾರತದ ಪ್ರಮುಖ ತನಿಖಾ ಸಂಸ್ಥೆಯ ರಾಜಕೀಯ ಧೋರಣೆಯನ್ನು ತಡವುತ್ತದೆ.

ಮೇಲ್ನೋಟಕ್ಕೆ ‘ರಾಶೋಮನ್‌’ ಸಿನಿಮಾ ಶೈಲಿಯ (ವಿವಿಧ ದೃಷ್ಟಿಕೋನಗಳಲ್ಲಿ ನಿರ್ದಿಷ್ಟ ಪ್ರಕರಣವನ್ನು ನೋಡುವುದು) ನಿರೂಪಣೆ ಈ ಸಿನಿಮಾದಲ್ಲಿ ಕಾಣುತ್ತದೆ. ಆದರೆ, ಆ ತಂತ್ರವನ್ನು ಮೀರಿ ಸಿನಿಮಾ ಜಿಗಿಯುವುದು ಅದರಲ್ಲಿ ಅಡಕವಾದ ತಣ್ಣಗಿನ ಚರ್ಚಾ ಗುಣದಿಂದ. ದೇಶದ ಪ್ರಮುಖ ತನಿಖಾ ಸಂಸ್ಥೆಯಲ್ಲೇ ಇರುವ ಭಿನ್ನಾಭಿಪ್ರಾಯ, ಪೂರ್ವ ನಿರ್ಧಾರಿತ ವರ್ತನೆಯನ್ನು ಸಿನಿಮಾ ನಯವಾಗಿ ಕೆಣಕಿದೆ.

ಅಲ್ಲಲ್ಲಿ ಸಣ್ಣ ಸಣ್ಣ ವ್ಯಂಗ್ಯದ ಧಾಟಿ ಇದ್ದರೂ, ಅದು ಸಿನಿಮಾ ಗಾಂಭೀರ್ಯಕ್ಕೆ ತೊಡಕು ಉಂಟುಮಾಡದಿರುವುದು  ತಂಡದ ಕಸುಬುದಾರಿಕೆಗೆ ಸಾಕ್ಷಿ. ಪಂಕಜ್‌ ಕುಮಾರ್‌ ಕ್ಯಾಮೆರಾ ಕೆಲಸ, ಎ. ಶ್ರೀಕರ್‌ ಪ್ರಸಾದ್‌ ಸಂಕಲನ ಕೂಡ ಔಚಿತ್ಯ ಅರಿತಂತಿವೆ.
ಇರ್ಫಾನ್‌ ಅಭಿನಯ ಇಡೀ ಸಿನಿಮಾವನ್ನು ಆವರಿಸಿಕೊಳ್ಳುತ್ತದೆ. ಅವರ ಪ್ರಭೆಯಲ್ಲಿಯೂ ನೀರಜ್‌ ಕಬಿ, ಕೊಂಕಣಾ ಸೇನ್‌ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕನ್ನಡದ ಪ್ರಕಾಶ್‌ ಬೆಳವಾಡಿ ಅವರಿಗೆ ಪ್ರಮುಖ ಪಾತ್ರ ಸಿಕ್ಕಿದ್ದು, ಹಲವು ಭಾವಗಳನ್ನು ಅವರು ಶ್ರದ್ಧೆಯಿಂದ ದಾಟಿಸಿದ್ದಾರೆ.

ವಿಶಾಲ್‌ ಭಾರದ್ವಾಜ್ ಅವರಿಗೆ ಇರುವ ಕಾವ್ಯ ಪ್ರೀತಿ, ಪ್ರತಿಮಾ ಪ್ರೇಮಕ್ಕೆ ಈ ಸಿನಿಮಾದಲ್ಲೂ ಹಲವು ಉದಾಹರಣೆ ಗಳು ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT